ಫಿಫಾ ವಿಶೇಷ| ರಷ್ಯಾ ಆವೃತ್ತಿಯ ಟಾಪ್ ಟೆನ್ ಪಟ್ಟಿಯಲ್ಲಿ ಮೆಸ್ಸಿಯೇ ಮೋಡಿಗಾರ!

ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಹೇಗೋ ಹಾಗೆಯೇ ಈ ಆವೃತ್ತಿಗಳಲ್ಲಿಯೂ ಪ್ರಮುಖ ಆಟಗಾರರತ್ತ ಎಲ್ಲರ ಚಿತ್ತ ಹರಿದಿದೆ. ಸದ್ಯ, ರಷ್ಯಾ ಆವೃತ್ತಿಯಲ್ಲಿ ಮೋಡಿ ಮಾಡುವ ಭರವಸೆ ಮೂಡಿಸಿರುವವರತ್ತ ಇಲ್ಲಿದೆ ಒಂದು ಇಣುಕು ನೋಟ

ರಷ್ಯಾದಲ್ಲಿ ಜರುಗುತ್ತಿರುವ ಇಪ್ಪತ್ತೊಂದನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶ್ವದ ಮೂವರು ಪ್ರಮುಖ ಆಟಗಾರರು ಟ್ರೋಫಿ ಎತ್ತಿಹಿಡಿಯುವ ಕನಸಿನಲ್ಲಿದ್ದಾರೆ. ಅರ್ಜೆಂಟೀನಾ ಆಟಗಾರ ಲಯೋನೆಲ್ ಮೆಸ್ಸಿ, ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಬ್ರೆಜಿಲ್‌ನ ನೇಮಾರ್ ಮೇಲೆ ಎಲ್ಲರ ಗಮನ ನಾಟಿದೆ.

ರೊನಾಲ್ಡೊ, ನೇಮಾರ್ ಮಧ್ಯೆಯೂ ಅರ್ಜೆಂಟೀನಾ ಆಟಗಾರ ಲಯೋನೆಲ್ ಮೆಸ್ಸಿ ಈ ಬಾರಿ ವಿಶ್ವಕಪ್‌ನಲ್ಲಿನ ಸ್ಟಾರ್ ಆಟಗಾರರಲ್ಲಿಯೇ ಮುಂಚೂಣಿಗರೆಂದು ವಿಶ್ವ ಫುಟ್ಬಾಲ್ ತಜ್ಞರು ಅಭಿಪ್ರಾಯ ಪಡುತ್ತಾರೆ. ಕಳೆದ ಆವೃತ್ತಿಯಲ್ಲಿ ಅರ್ಜೆಂಟೀನಾಗೆ ಕಪ್ ಗೆದ್ದುಕೊಡುವ ವಿಶ್ವಾಸದಲ್ಲಿದ್ದ ಮೆಸ್ಸಿ ಕಡೇ ಘಳಿಗೆಯಲ್ಲಿ ಜರ್ಮನ್ನರ ದಾಳಿಗೆ ಸಿಕ್ಕಿ ನಲುಗಿದ್ದರು.

ಲಯೋನೆಲ್ ಮೆಸ್ಸಿ

ಪ್ರಸ್ತುತ ವಿಶ್ವ ಫುಟ್ಬಾಲ್‌ನ ಅಪ್ರತಿಮ ಆಟಗಾರ ಎಂದೇ ಕರೆಸಿಕೊಳ್ಳುತ್ತಿರುವ ಲಯೋನೆಲ್ ಮೆಸ್ಸಿ ಸ್ಟಾರ್ ಆಟಗಾರರಲ್ಲಿ ಮುಂಚೂಣಿಗ. ೨೦೦೮ರಿಂದ ಐದು ಬಾರಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿರುವ ಮೆಸ್ಸಿ ನಿಸ್ಸಂಶಯವಾಗಿಯೂ ಈ ವಿಶ್ವಕಪ್‌ನ ಜಾದೂಗಾರರಲ್ಲಿ ಒಬ್ಬರು. ೩೦ರ ಹರೆಯದ ಮೆಸ್ಸಿ, ಕೋಟ್ಯಾಂತರ ಅರ್ಜೆಂಟೀನಿಗರ ಕನಸನ್ನು ಹೊತ್ತಿದ್ದು, ಅವರ ಮೇಲೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ೨೦೧೪ರ ವಿಶ್ವಕಪ್ ಆವೃತ್ತಿಯಲ್ಲಿ ಜರ್ಮನಿ ಎದುರು ೦-೧ ಗೋಲಿನಿಂದ ಸೋಲುಂಡ ಅರ್ಜೆಂಟೀನಾ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು. ಒಟ್ಟು ಎರಡು ಬಾರಿ ವಿಶ್ವಕಪ್ ಗೆದ್ದಿರುವ ಅರ್ಜೆಂಟೀನಾಗೆ ಹ್ಯಾಟ್ರಿಕ್ ಕಪ್ ಗೆದ್ದುಕೊಡುವ ಗುರಿ ಹೊತ್ತಿದ್ದಾರೆ ಕ್ರಿಯಾಶೀಲ ಆಕ್ರಮಣಕಾರಿ ಫಾರ್ವರ್ಡ್ ಆಟಗಾರ ಮೆಸ್ಸಿ.

ಜೆರ್ಸಿ ಸಂಖ್ಯೆ: ೧೦ | ವಯಸ್ಸು: ೩೦ | ಪಂದ್ಯ: ೧೨೪ | ಗೋಲು: ೬೪

ಕ್ರಿಶ್ಚಿಯಾನೊ ರೊನಾಲ್ಡೊ

ಪೋರ್ಚುಗಲ್‌ ನಾಯಕ ರೊನಾಲ್ಡೊ ಕೂಡಾ ೨೦೦೦೮ರಿಂದೀಚೆಗೆ ಮೆಸ್ಸಿಯಂತೆಯೇ ಐದು ಬಾರಿ ವಿಶ್ವ ಶ್ರೇಷ್ಠ ಫುಟ್ಬಾಲ್ ಪ್ರಶಸ್ತಿ ಪಡೆದಾತ. ೨೦೧೬ರ ಯೂರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪೋರ್ಚುಗಲ್‌ ಅನ್ನು ವಿಜಯದತ್ತ ಮುನ್ನಡೆಸಿದ ರೊನಾಲ್ಡೊಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರೀ ಸವಾಲು ಎದುರಾಗಿದೆ. ಆರಂಭಿಕ ಸುತ್ತಿನಲ್ಲೇ ಸ್ಪೇನ್‌ನಂಥ ಬಲಾಢ್ಯ ತಂಡದೊಟ್ಟಿಗೆ ಸೆಣಸಬೇಕಿರುವ ರೊನಾಲ್ಡೊ ತಂಡದ ಫೈನಲ್ ಹಾದಿ ಅಷ್ಟೇನೂ ಸುಗಮವಾಗಿಲ್ಲ. ೩೩ರ ಹರೆಯದ ರೊನಾಲ್ಡೊ ಪಾಲಿಗೂ ಇದು ಕೊನೆಯ ವಿಶ್ವಕಪ್ ಆಗಿದ್ದು, ಬೆರಗುಗೊಳಿಸುವ ತಂತ್ರಗಾರಿಕೆ, ಹಾಗೂ ಪಾದರಸದ ಸೂಕ್ಷ್ಮ ಚಲನೆಯಿಂದ ಕೂಡಿರುವ ರೊನಾಲ್ಡೊ ಮೇಲೆ ಬಹುದೊಡ್ಡ ಹೊಣೆಗಾರಿಕೆ ಇದೆ.

ಜೆರ್ಸಿ ಸಂಖ್ಯೆ: ೦೭ | ವಯಸ್ಸು: ೩೩ | ಪಂದ್ಯ: ೧೫೦ | ಗೋಲು: ೮೧

ನೇಮಾರ್

ಕಳೆದ ಆವೃತ್ತಿಯಂತೆ ಈ ಬಾರಿಯೂ ಬ್ರೆಜಿಲ್ ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿದೆ. ಸಾಂಬಾ ನಾಡಿನ ಆರನೇ ವಿಶ್ವಕಪ್ ಧಾವಂತದ ಕೇಂದ್ರಬಿಂದು ನೇಮಾರ್. ೨೬ರ ಹರೆಯದ ಈ ಪ್ರತಿಭಾನ್ವಿತ ಸ್ಟ್ರೈಕರ್, ಮೆಸ್ಸಿ ಮತ್ತು ರೊನಾಲ್ಡೊಗಿಂತಲೂ ಪ್ರಖರ ಆಟಗಾರ ಎಂದೇ ಗುರುತಿಸಿಕೊಂಡಿದ್ದಾರೆ. ಒಂದೊಮ್ಮೆ ನೇಮಾರ್ ನಿರೀಕ್ಷೆಯಂತೆ ಆಡಿದ್ದೇ ಆದರೆ, ಮಿಕ್ಕವರ ವಿಶ್ವಕಪ್ ಕನಸಿಗೆ ಕೊಳ್ಳಿಯಂತೂ ಗ್ಯಾರಂಟಿ. ಅಂದಹಾಗೆ, ತವರಿನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಜರ್ಮನಿ ಎದುರು ಸೆಮಿಫೈನಲ್‌ನಲ್ಲಿ ೧-೭ ಗೋಲುಗಳ ಹೀನಾಯ ಸೋಲನುಭವಿಸಿದ ಬ್ರೆಜಿಲ್‌, ಆ ಸೋಲಿನ ಬೇಗುದಿಯನ್ನು ರಷ್ಯಾ ಆವೃತ್ತಿಯಲ್ಲಿ ತೀರಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದೆ.

ಜೆರ್ಸಿ ಸಂಖ್ಯೆ: ೧೦ | ವಯಸ್ಸು: ೨೬ | ಪಂದ್ಯ: ೮೪ | ಗೋಲು: ೫೪

ಮೊಹಮದ್ ಸಲಾ

ಡ್ರಿಬ್ಲಿಂಗ್ ಕುಶಲತೆ, ವೇಗ ಹಾಗೂ ನಿಖರ ಗೋಲಿನ ಸರದಾರ ಮೊಹಮದ್ ಸಲಾ ಈ ವಿಶ್ವಕಪ್‌ನಲ್ಲಿ ಗಮನಿಸಬಹುದಾದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ. ಕಳೆದೊಂದು ವರ್ಷದಿಂದ ವಿಶ್ವ ಫುಟ್ಬಾಲ್‌ನಲ್ಲಿ ಸದ್ದು ಮಾಡುತ್ತಿರುವ ಮೊಹಮದ್ ಸಲಾ, ೨೮ ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಈಜಿಪ್ಟ್ ಪಾಲ್ಗೊಳ್ಳಲು ನೆರವಾಗಿದ್ದಾರೆ. ಗೋಲು ಪೆಟ್ಟಿಗೆಯ ಸಮೀಪದಲ್ಲಿ ಸಲಾ ತೋರುವ ಅಸ್ವಾಭಾವಿಕ ಪ್ರಶಾಂತತೆ ಅವರನ್ನು ಪಕ್ವ ಆಟಗಾರನನ್ನಾಗಿ ಪಳಗಿಸಿದೆ. ಈ ಆವೃತ್ತಿಯಲ್ಲಿ ಈಜಿಪ್ಟ್ ಏನಾದರೂ ಯಶ ಸಾಧಿಸುವಂತಾದರೆ, ಮೊ ಸಲಾಹ್ ಭುಜ ಪರಾಕ್ರಮದಿಂದಲೇ ಎಂದು ಹೇಳಲಾಗುತ್ತಿದೆ. ದುರದೃಷ್ಟವಶಾತ್ ಕೆಲವು ವಾರಗಳ ಹಿಂದಷ್ಟೇ ಭುಜಕ್ಕೆ ಗಾಯ ಮಾಡಿಕೊಂಡಿರುವ ಅವರು, ಈಜಿಪ್ಟ್ ಪಾಳೆಯದಲ್ಲಿ ಚಿಂತೆಯ ಕಾರ್ಮೋಡ ಎಬ್ಬಿಸಿದ್ದಾರೆ. ಅವರ ಚೇತರಿಕೆಯ ಮೇಲೆ ಈಜಿಪ್ಟ್‌ನ ವಿಶ್ವಕಪ್ ಭವಿಷ್ಯ ನಿರ್ಧರಿತವಾಗಿದೆ.

ಜೆರ್ಸಿ ಸಂಖ್ಯೆ: ೧೧ | ವಯಸ್ಸು: ೨೬ | ಪಂದ್ಯ: ೫೭ | ಗೋಲು: 33

ಕೆವಿನ್ ಡಿ ಬ್ರೂಯ್ನಿ

ಪ್ರತಿಭಾನ್ವಿತ ಆಟಗಾರಿರುವ ಬೆಲ್ಜಿಯಂನ ಸ್ಟಾರ್ ಆಟಗಾರ ಕೆವಿನ್. ಆಕ್ರಮಣಕಾರಿ ಮಿಡ್‌ಫೀಲ್ಡರ್ ಕೆವಿನ್ ಎಲ್ಲರ ಗಮನ ಸೆಳೆದಿರುವ ಮತ್ತೋರ್ವ ಸ್ಟಾರ್ ಆಟಗಾರ. ಚೆಂಡನ್ನು ಪಾಸ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ೨೬ರ ಹರೆಯದ ಕೆವಿನ್, ಗುಂಪು ಹಂತದಾಚೆಗೆ ಸಾಗಲು ತಿಣುಕುತ್ತಿರುವ ಬೆಲ್ಜಿಯಂ ಅನ್ನು ಈ ಬಾರಿ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂದೇ ನಂಬಲಾಗಿದೆ. ಫುಟ್ಬಾಲ್ ಪ್ರೇಮಿಗಳಲ್ಲಿ ಕೆವಿನ್ ಈಗಾಗಲೇ ಹೆಸರು ಮಾಡಿದ್ದು, ವಿಶ್ವಕಪ್‌ನಂಥ ಮಹಾ ಸಂಗ್ರಾಮದಲ್ಲಿ ತನ್ನತನವನ್ನು ನಿರೂಪಿಸಬೇಕಿದೆ. ಅದಕ್ಕಾಗಿ ಅವರು ರಷ್ಯಾದಲ್ಲಿನ ಈ ಆವೃತ್ತಿಯನ್ನು ಗಂಭೀರವಾಗಿ ಪರಿಗಣಮಿಸಿದ್ದಾರೆ.

ಇದನ್ನೂ ಓದಿ : ಅಂದು ಪೊಲೀಸರತ್ತ ಕಲ್ಲು ಬೀಸಿದಾಕೆ, ಇಂದು ಫುಟ್ಬಾಲ್ ತಂಡದ ನಾಯಕಿ!

ಜೆರ್ಸಿ ಸಂಖ್ಯೆ: 17 | ವಯಸ್ಸು: ೨೬ | ಪಂದ್ಯ: 62 | ಗೋಲು: 14

ಜೇಮ್ಸ್ ರಾಡ್ರಿಗಸ್

ಕೊಲಂಬಿಯಾದ ಪ್ರತಿಭಾನ್ವಿತ ಆಟಗಾರ ಜೇಮ್ಸ್ ರಾಡ್ರಿಗಸ್ ಕಳೆದ ಆವೃತ್ತಿಯಲ್ಲಿ ಗೋಲ್ಡನ್ ಬೂಟ್ ಗೌರವಕ್ಕೆ ಭಾಜನರಾದವರು. ಮಿಡ್‌ಫೀಲ್ಡಿಂಗ್‌ನಲ್ಲಿ ಆಡುವ ರಾಡ್ರಿಗಸ್ ಫ್ರೀ ಕಿಕ್ ಹಾಗೂ ಬೈಸಿಕಲ್ ಕಿಕ್‌ಗಳಲ್ಲಿ ಅತ್ಯಂತ ನೈಪುಣ್ಯ ಮೆರೆದಾತ. ಕಳೆದ ಆವೃತ್ತಿಯಲ್ಲಿ ತೋರಿದ ಅದೇ ಅದ್ಭುತ ಆಟವನ್ನು ರಷ್ಯಾದಲ್ಲಿಯೂ ಮುಂದುವರೆಸಿರುವ ಧಾವಂತದಿಂದ ಕೂಡಿದ್ದಾರೆ.

ಜೆರ್ಸಿ ಸಂಖ್ಯೆ: ೧೧ | ವಯಸ್ಸು: ೨6 | ಪಂದ್ಯ: ೬೨ | ಗೋಲು: ೨೧

ಥಾಮಸ್ ಮುಲ್ಲರ್

ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ೧೦ ಗೋಲುಗಳನ್ನು ದಾಖಲಿಸಿರುವ ಥಾಮಸ್ ಮುಲ್ಲರ್ ಹಾಲಿ ಚಾಂಪಿಯನ್ ಜರ್ಮನ್ ತಂಡದ ಪ್ರಮುಖ ಆಟಗಾರ. ಇನ್ನೆರಡು ಗೋಲುಗಳನ್ನು ದಾಖಲಿಸಿದ್ದೇ ಆದಲ್ಲಿ ಮುಲ್ಲರ್, ಬ್ರೆಜಿಲ್‌ನ ದಂತಕತೆ ಪೀಲೆಯ ದಾಖಲೆಯನ್ನು ಸರಿಗಟ್ಟಲಿದ್ದಾರೆ. ೨೦೧೦ ಮತ್ತು ೨೦೧೪ರ ಆವೃತ್ತಿಯಲ್ಲಿ ತಲಾ ಐದು ಗೋಲುಗಳನ್ನು ಬಾರಿಸಿದ್ದರು. ಸಹಜವಾಗಿಯೇ ಗೋಲು ಗಳಿಕೆಯಲ್ಲಿ ಹ್ಯಾಟ್ರಿಕ್ ಬಾರಿಸುವ ಗುರಿ ಹೊತ್ತಿದ್ದಾರೆ. ಶಾಂತವಾಗಿದ್ದುಕೊಂಡೇ ಆಕ್ರಮಣಕಾರಿಯಾಗಿ ರೂಪಾಂತರಿಸುವುದು ಅವರ ಆಟದ ಕಲೆ. ಕಳೆದ ಆವೃತ್ತಿಯಲ್ಲಿ ಜರ್ಮನಿ ೪ನೇ ವಿಶ್ವಕಪ್ ಎತ್ತಿಹಿಡಿಯಲು ಮುಲ್ಲರ್ ನೀಡಿದ ಕೊಡುಗೆ ದೊಡ್ಡದೇ.

ಜೆರ್ಸಿ ಸಂಖ್ಯೆ: ೧೩ | ವಯಸ್ಸು: ೨೬ | ಪಂದ್ಯ: ೮೪ | ಗೋಲು: ೫೪

ಪಾಲ್ ಪೋಗ್ಬಾ

ಫ್ರಾನ್ಸ್‌ನ ಪ್ರಚಂಡ ಆಟಗಾರ ಪಾಲ್ ಪೋಗ್ಬಾ ಅದ್ವಿತೀಯ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರು. ಪಾದರಸದಂಥ ಪಾದಚಲನೆಯಿಂದ ಪ್ರತಿಸ್ಪರ್ಧಿ ಆಟಗಾರರಿಂದ ಚೆಂಡನ್ನು ಕದಿಯುವ ಅವರ ಚಾಣಾಕ್ಷತೆ, ಆಕರ್ಷಕ ಡ್ರಿಬ್ಲಿಂಗ್ ಮತ್ತು ಆಕ್ರಮಣಕಾರಿ ಆಟ ಫ್ರಾನ್ಸ್‌ನ ಬಲ ಹೆಚ್ಚಿಸಿದೆ. ಯಾವುದೇ ತಂಡದ ರಕ್ಷಣಾವ್ಯೂಹದೊಳಗೆ ಧಾವಿಸುವಂಥ ಚಾಲಾಕಿತನ ಹಾಗೂ ಎದೆಗಾರಿಕೆ ಪೋಗ್ಬಾರದ್ದು. ಮತ್ತೊಂದು ವಿಶ್ವಕಪ್‌ನ ಮೇಲೆ ಚಿತ್ತ ಹರಿಸಿರುವ ಫ್ರಾನ್ಸ್‌ ಯಶಸ್ಸು ಪೋಗ್ಬಾ ನೀಡುವ ಪ್ರದರ್ಶನವನ್ನೂ ಅವಲಂಬಿಸಿದೆ.

ಜೆರ್ಸಿ ಸಂಖ್ಯೆ: ೦೬ | ವಯಸ್ಸು: ೨೫ | ಪಂದ್ಯ: ೫೩ | ಗೋಲು: ೦೯

ಲೂಯಿಸ್ ಸ್ವಾರೆಜ್

ಎರಡು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಉರುಗ್ವೆಯ ಸ್ಟಾರ್ ಆಟಗಾರ ಲೂಯಿಸ್ ಸ್ವಾರೆಜ್. ಪ್ರತಿಭಾನ್ವಿತ ಸ್ಟ್ರೈಕರ್ ಆಗಿರುವ ಲೂಯಿಸ್ ಸ್ವಾರೆಜ್, ಕಣ್ಣರೆಪ್ಪೆ ಮಿನುಗಿಸುವಷ್ಟರಲ್ಲಿ ಚೆಂಡನ್ನು ಗುರಿ ಮುಟ್ಟಿಸಬಲ್ಲರು. ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ವಂಚಿಸಿ ಗೋಲು ಗಳಿಸುವ ಚಾಕಚಕ್ಯತೆಯುಳ್ಳ ಸ್ವಾರೆಜ್ ಕೂಡಾ ಈ ವಿಶ್ವಕಪ್ ಪಂದ್ಯಾವಳಿಯ ಟಾಪ್ ಟೆನ್ ಆಟಗಾರರಲ್ಲಿ ಒಬ್ಬರೆಂದು ನಿಸ್ಸಂದೇಹವಾಗಿ ಹೇಳಬಹುದು. ಬಹುತೇಕ ಸ್ವಾರೆಜ್ ಅವರಿಗೂ ಈ ವಿಶ್ವಕಪ್ ಕೊನೆಯದ್ದಾಗಿದ್ದು, ತನ್ನ ನಾಡಿನ ಮತ್ತೊಂದು ಐತಿಹಾಸಿಕ ಗೆಲುವಿನಲ್ಲಿ ಭಾಗಿಯಾಗಲು ಸ್ವಾರೆಜ್ ತಹತಹಿಸುತ್ತಿದ್ದಾರೆ.

ಜೆರ್ಸಿ ಸಂಖ್ಯೆ: ೦೯ | ವಯಸ್ಸು: ೩೧ | ಪಂದ್ಯ: ೯೮ | ಗೋಲು: ೫೧

ಆಂಟನಿ ಗ್ರೀಜ್‌ಮನ್

ಐದಡಿ ೯ ಇಂಚು ಎತ್ತರದ ಗ್ರೀಜ್‌ಮನ್ ೨೦೧೬ರಲ್ಲಿ ವಿಶ್ವದ ಮೂರನೇ ಅತ್ಯುತ್ತಮ ಆಟಗಾರನೆಂದು ಗಮನ ಸೆಳೆದವರು. ಇದೇ ೨೦೧೬ರ ಯೂರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಫ್ರಾನ್ಸ್ ಫೈನಲ್ ತಲುಪಿದ್ದರಲ್ಲಿ ಗ್ರೀಜ್ಮನ್ ತೋರಿದ ಚಾಣಾಕ್ಷ ಆಟ ಮಹತ್ವವಾಗಿತ್ತು. ಕಾಲಿನಲ್ಲಿ ತೋರುವ ಚುರುಕುತನವನ್ನು ಹೆಡ್ ಗೋಲು ಬಾರಿಸುವುದರಲ್ಲೂ ನೈಪುಣ್ಯ ತೋರುವ ಗ್ರೀಜ್‌ಮನ್, ಡ್ರಿಬಲ್‌ನಲ್ಲೂ ಎತ್ತಿದ ಕೈ. ತಿರುವಿನಿಂದ ಗೋಲು ಬಾರಿಸುವ ಅವರ ಶೈಲಿಯೂ ಮನಮೋಹಕವಾದುದು. ಪೋಗ್ಬಾರಂಥ ಪ್ರಚಂಡ ಆಟಗಾರರನ್ನು ಒಳಗೊಂಡಿರುವ ಫ್ರಾನ್ಸ್ ಪ್ರಶಸ್ತಿ ಆಸೆಗೆ ಗ್ರೀಜ್‌ಮನ್ ಕೂಡಾ ಬಲ ತುಂಬಿದ್ದಾರೆ.

ಜೆರ್ಸಿ ಸಂಖ್ಯೆ: 07 | ವಯಸ್ಸು: 27 | ಪಂದ್ಯ: 54 | ಗೋಲು: 20

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More