ಫಿಫಾ ವಿಶ್ವಕಪ್ ಜ್ವರದಲ್ಲಿ ಆತಿಥೇಯ ಭಾರತಕ್ಕೆ ಚೊಚ್ಚಲ ಆಫ್ಘನ್ ‘ಟೆಸ್ಟ್‌’

ಆಫ್ಘಾನಿಸ್ತಾನ ಕ್ರಿಕೆಟ್ ಚರಿತ್ರೆಯಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆಯುವಂಥ ಘಳಿಗೆ ಸನ್ನಿಹಿತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರದಿಂದ (ಜೂನ್ ೧೪) ಶುರುವಾಗುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಆಫ್ಘಾನಿಸ್ತಾನ ಎದುರುಗೊಳ್ಳಲಿದ್ದು, ಚರಿತ್ರಾರ್ಹ ಜಯದ ಮೇಲೆ ಕಣ್ಣಿಟ್ಟಿದೆ

ಇಡೀ ಜಗತ್ತೇ ಫುಟ್ಬಾಲ್ ಜ್ವರದ ತಾಪದಲ್ಲಿ ಬೇಯುತ್ತಿರುವ ಹೊತ್ತಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ನಡುವಣದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯ ಕ್ರಿಕೆಟಿಗರನ್ನು ಎಷ್ಟರಮಟ್ಟಿಗೆ ಸೆಳೆದಿಡುತ್ತದೋ ಗೊತ್ತಿಲ್ಲ. ಆದರೆ, ಆಫ್ಘನ್ನರ ಪಾಲಿಗಂತೂ ಈ ಚಾರಿತ್ರಿಕ ಪಂದ್ಯ ಮಹತ್ವವೆನಿಸಿದೆ. ಕೇವಲ ಆಫ್ಘಾನಿಸ್ತಾನಕ್ಕಷ್ಟೇ ಅಲ್ಲ, ಪ್ರಚಂಡ ಬೌಲಿಂಗ್ ಪಡೆಯನ್ನು ಹೊಂದಿರುವ ಆಫ್ಘಾನಿಸ್ತಾನ, ಭಾರತದ ಬ್ಯಾಟಿಂಗ್ ಕ್ರಮಾಂಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವುದು ಕೂಡಾ ಭಾರತೀಯ ಕ್ರಿಕೆಟ್ ಮಟ್ಟಿಗೆ ಕುತೂಹಲ ಕೆರಳಿಸಿದೆ.

ಮುಖ್ಯವಾಗಿ, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಹನ್ನೊಂದನೇ ಐಪಿಎಲ್ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಸ್ಪಿನ್‌ದ್ವಯರಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಎಷ್ಟರಮಟ್ಟಿಗೆ ಕಾಡಲಿದ್ದಾರೆ ಎಂಬ ಕೌತುಕವೂ ಮನೆಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿದ್ದ ಧವನ್‌ಗೆ ಕೊಂಚ ಮಟ್ಟಿಗೆ ರಶೀದ್ ಅರ್ಥವಾಗಿದ್ದರೂ, ಈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ ಸೇರಿದಂತೆ ಕನ್ನಡಿಗ ಕೆ ಎಲ್ ರಾಹುಲ್‌ರಂಥ ಆಟಗಾರರಿಗೆ ಅವರಿನ್ನೂ ಒಗಟಾಗಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಇಂಡೋ-ಆಫ್ಘನ್ ಟೆಸ್ಟ್ ಪಂದ್ಯವು ಆಸಕ್ತಿ ಕೆರಳಿಸಿದೆ.

ಭಾರತವೇ ಫೇವರಿಟ್!

ಮೊಟ್ಟಮೊದಲ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಆಫ್ಘಾನಿಸ್ತಾನ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದೆ. ಮೇಲಾಗಿ, ತವರಿನಲ್ಲಿ ಭಾರತ ಬಲಿಷ್ಠವಾಗಿರುವುದರಿಂದ ಆಫ್ಘಾನಿಸ್ತಾನ ಆಟಗಾರರು ಭಾರೀ ಸವಾಲನ್ನೇ ಎದುರಿಸುವ ಸಾಧ್ಯತೆ ಇದೆ. ಆದಾಗ್ಯೂ, ರಶೀದ್, ಮುಜೀಬ್ ಮತ್ತು ಶೆಹಜಾದ್‌ರಂಥ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಆಫ್ಘಾನಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸಲುವಾಗಿ ಸಕಲ ವಿಧದಲ್ಲಿಯೂ ಕಾರ್ಯತಂತ್ರ ಹೆಣೆದಿದೆ.

ಇನ್ನೊಂದೆಡೆ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾರ ಅನುಪಸ್ಥಿತಿಯ ಲಾಭ ಪಡೆಯಲೂ ಆಫ್ಘನ್ನರು ತವಕಿಸುತ್ತಿದ್ದಾರೆ. ಆದರೆ, ಆಫ್ಘಾನಿಸ್ತಾನ ಇದುವರೆಗೆ ಯಶ ಕಂಡಿರುವುದು ಸೀಮಿತ ಓವರ್‌ಗಳ ಪಂದ್ಯಗಳಲ್ಲಿಯೇ ಹೊರತು, ಟೆಸ್ಟ್‌ ಪ್ರಕಾರದಂಥ ಸಹನಾಶೀಲ ಹಾಗೂ ತಾಂತ್ರಿಕ ಉತ್ಕೃಷ್ಟತೆಯ ಕ್ರಿಕೆಟ್‌ನಲ್ಲಲ್ಲ. ಹೀಗಾಗಿ, ಭಾರತ ಮೇಲ್ನೋಟಕ್ಕೆ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿದೆ.

ಹಗುರವಾಗಿ ಪರಿಗಣಿಸೆವು

ಇದನ್ನೂ ಓದಿ : ಕೊಹ್ಲಿ ಸಿಕ್ಸರ್‌ಗೇ ಸವಾಲೆಸೆಯುವ ನಾನೇಕೆ ಡಯಟ್ ಮಾಡಲಿ ಎಂದ ಶಹಜಾದ್!

ಪಂದ್ಯದ ಮುನ್ನಾ ದಿನ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ, ಯಾವುದೇ ಕಾರಣಕ್ಕೂ ಆಫ್ಘಾನಿಸ್ತಾನವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.

"ಆಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವ ಮಾತೇ ಇಲ್ಲ. ಒಂದು ತಂಡವಾಗಿ ನಾವು ಯಾವುದೇ ತಂಡವನ್ನು ಹಗುರವಾಗಿಯಾಗಲೀ ಇಲ್ಲವೇ ಅದರ ಸಾಮರ್ಥ್ಯವನ್ನು ಲಘುವಾಗಿಯಾಗಲೀ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರತಿಸ್ಪರ್ಧಿಯಾಗಿರುವ ತಂಡವನ್ನು ನಾವು ಗೌರವಿಸುತ್ತೇವೆ. ಆದರೆ, ಇದೇ ವೇಳೆ ನಾವು ಗೆಲುವು ಸಾಧಿಸಲು ಶೇ. ೧೦೦ರಷ್ಟು ದಿಟ್ಟ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ, ನಾವು ಹೆಚ್ಚು ನಿರ್ದಯಿ ಆಟಕ್ಕೆ ಒತ್ತು ನೀಡಬೇಕಿದೆ'' ಎಂದು ರಹಾನೆ ತಿಳಿಸಿದರು.

ತಂಡಗಳು ಇಂತಿವೆ

ಭಾರತ: ಕೆ ಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್.

ಆಫ್ಘಾನಿಸ್ತಾನ: ಅಶ್ಗರ್ ಸ್ಟಾನಿಕ್‌ಜೈ (ನಾಯಕ), ಮೊಹಮದ್ ಶೆಹಜಾದ್, ಜಾವೆದ್ ಅಹ್ಮದಿ, ರಹಮತ್ ಶಾ, ಇಹ್ಸಾನುಲ್ಲಾಹ್ ಜನತ್, ನಾಸಿರ್ ಜಮಾಲ್, ಹಶ್ಮತುಲ್ಲಾಹ್ ಶಾಹಿದಿ, ಅಫ್ಸರ್ ಜಜಾಯಿ, ಮೊಹಮದ್ ನಬಿ, ರಶೀದ್ ಖಾನ್, ಜಹೀರ್ ಖಾನ್, ಅಮೀರ್ ಹಮ್ಜಾ, ಹೋಟಕ್, ಸೈಯದ್ ಅಹಮದ್, ಯಾಮಿನ್ ಅಹಮದ್‌, ಮುಜೀಬ್ ಉರ್ ರೆಹಮಾನ್.

ಪಂದ್ಯ  ಆರಂಭ: ಬೆಳಿಗ್ಗೆ ೯.೩೦ರಿಂದ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ಜಕಾರ್ತ ಏಷ್ಯಾಡ್: ಮೊದಲ ದಿನವೇ ಪದಕ ಪಟ್ಟಿಗೆ ಅಣಿಯಾದ ಭಾರತ
ಉದ್ಘಾಟನಾ ಬೆರಗಿನಲ್ಲಿ ಏಷ್ಯಾಕೂಟಕ್ಕೆ ಇಂಡೋನೇಷ್ಯಾದ ಸಂಮೋಹಕ ಸ್ಪರ್ಶ
ಸಿನ್ಸಿನ್ನಾಟಿ ಓಪನ್: ವಾವ್ರಿಂಕಾ ಮಣಿಸಿದ ರೋಜರ್ ಫೆಡರರ್ ಸೆಮಿಫೈನಲ್‌ಗೆ
Editor’s Pick More