ಕ್ರೀಡಾಧರ್ಮಕ್ಕಿಂತ ಹಿಜಾಬ್ ದೊಡ್ಡದಲ್ಲ ಎಂದ ಚೆಸ್‌ಪಟು ಸೌಮ್ಯ ಸ್ವಾಮಿನಾಥನ್

ಕರ್ಮಠ ಕಟ್ಟುಪಾಡುಗಳು, ಸಂಕೋಲೆಗಳನ್ನೂ ತುಂಡರಿಸಿ ಅಲ್ಲಿ ಸ್ನೇಹದ ಬೆಸುಗೆ ಬೆಸೆಯುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರವೇ. ಇಷ್ಟಾದರೂ, ಕೆಲವೊಂದು ಸಂದರ್ಭಗಳಲ್ಲಿ ಕ್ರೀಡೆ ಸೋಲಬೇಕಾಗುತ್ತದೆ ಎನ್ನಲು ಹೀನಾ ಸಿಧು, ಸೌಮ್ಯ ಸ್ವಾಮಿನಾಥನ್‌ ವಿಷಯದಲ್ಲಿನ ಪ್ರಕರಣಗಳು ನಿದರ್ಶನಕ್ಕಿವೆ

ಮುಂದಿನ ತಿಂಗಳು ಜುಲೈ ೨೬ರಿಂದ ಆಗಸ್ಟ್ ೪ರವರೆಗೆ ಇರಾನ್‌ನಲ್ಲಿ ನಡೆಯಲಿರುವ ಏಷ್ಯಾ ಟೀಂ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯು ಆರಂಭಕ್ಕೂ ಮುನ್ನವೇ ಸದ್ದು ಮಾಡಿದೆ. ಹೆಣ್ಣುಮಕ್ಕಳು ಕಡ್ಡಾಯವಾಗಿ ಬುರ್ಖಾ ತೊಡಬೇಕೆಂಬ ಇರಾನ್‌ನ ಹಿಜಾಬ್ ನೀತಿಯು ಭಾರತದ ಗ್ರಾಂಡ್‌ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ಅವರ ಸ್ಪರ್ಧೆಯನ್ನು ಕಸಿದುಕೊಂಡಿದೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಇರಾನ್‌ನ ಈ ಹಿಜಾಬ್ ನೀತಿಯನ್ನು ಸೌಮ್ಯ ಟೀಕಿಸಿದ್ದಾರೆ. "ಕಡ್ಡಾಯವಾಗಿ ಬುರ್ಕಾ ಇಲ್ಲವೇ ತಲೆಗವಸನ್ನು ತೊಡಬೇಕೆಂದ ಆ ದೇಶದ ನಿಯಮವು ನನ್ನ ಮೂಲಭೂತ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಆಲೋಚನೆ, ಪ್ರಜ್ಞೆ ಮತ್ತು ಧರ್ಮಕ್ಕೂ ಧಕ್ಕೆ ತರುತ್ತಿದೆ,'' ಎಂದು ಸೌಮ್ಯ ಸ್ವಾಮಿನಾಥನ್ ಬೇಸರ ವ್ಯಕ್ತಪಡಿಸಿ ಈ ಟೂರ್ನಿಯಲ್ಲಿ ಆಡದೆ ಇರಲು ನಿರ್ಧರಿಸಿದ್ದಾರೆ.

"ಪಂದ್ಯಾವಳಿಯ ವೇಳೆ ನಮ್ಮ ರಾಷ್ಟ್ರೀಯ ತಂಡದ ದಿರಿಸುಗಳನ್ನು ಧರಿಸಲು ಇಲ್ಲವೇ ಕ್ರೀಡಾ ಸಲಕರಣೆಗಳೊಂದಿಗೆ ಆಡಲು ಸಂಘಟಕರು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕ್ರೀಡೆಯಲ್ಲಿ ಧಾರ್ಮಿಕ ಉಡುಗೆಗಳನ್ನು ಕಡ್ಡಾಯಗೊಳಿಸುವುದು ಮಾತ್ರ ಅಕ್ಷಮ್ಯ. ಇದನ್ನು ಎಷ್ಟು ಮಾತ್ರಕ್ಕೂ ಸಹಿಸಲಾಗದು,'' ಎಂದು ಕೂಡ ಸ್ವಾಮಿನಾಥನ್ ಇರಾನ್ ನೀತಿಯನ್ನು ಖಂಡಿಸಿದ್ದಾರೆ.

ಸೌಮ್ಯ ಸ್ವಾಮಿನಾಥನ್ ತಮ್ಮ ನಿಲುವನ್ನು ಪ್ರಕಟಿಸುತ್ತಲೇ ಹಲವಾರು ಕಮೆಂಟ್‌ಗಳೂ ಹರಿದುಬಂದಿವೆ. ಈ ಕುರಿತು ಸ್ಪಷ್ಟನೆಯನ್ನೂ ನೀಡಿರುವ ಅವರು, "ಇರಾನ್‌ನ ಕಾನೂನಿನ ಕುರಿತು ನಾನೇನೂ ಪ್ರಶ್ನಿಸುತ್ತಿಲ್ಲ. ನನ್ನ ಮುಖ್ಯ ತಕರಾರೆಂದರೆ, ಇಂಥದ್ದನ್ನೇ ತೊಡಬೇಕೆಂದು ಕಡ್ಡಾಯಗೊಳಿಸುತ್ತಿರುವ ನೀತಿಯನ್ನು. ತಲೆಗವಸು ಹಾಗೂ ಬುರ್ಖಾ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇದರ ಪ್ರಭಾವವಂತೂ ಒಂದೇ.
ನನ್ನಂತೆ ಪ್ರತಿಯೊಬ್ಬರೂ ಇರಾನ್‌ನ ಹಿಜಾಬ್ ನೀತಿಯನ್ನು ಖಂಡಿಸಬೇಕೆಂದು ನಾನು ಬಯಸುತ್ತಿಲ್ಲ. ಅವರ ನಿಲುವು ಬೇರೆಯದ್ದೇ ಇರುತ್ತದೆ,'' ಎಂದು ಸೌಮ್ಯನಾಥನ್ ಹೇಳಿದ್ದಾರೆ.

ಇದನ್ನೂ ಓದಿ : ಫಿಫಾ ವಿಶೇಷ | ದಿಗ್ಗಜರ ಕಾದಾಟಕ್ಕೆ ಸಾಕ್ಷಿಯಾಗಲಿವೆ ಈ ಬೆರಗಿನ ಕ್ರೀಡಾಂಗಣಗಳು

ಸ್ವಾಮಿ ಮೊದಲೇನಲ್ಲ

ಅಂದಹಾಗೆ, ಇರಾನ್‌ನಲ್ಲಿನ ಈ ಹಿಜಾಬ್ ನೀತಿಗೆ ಬೇಸರಿಸಿ ಹೀಗೆ ಪ್ರಮುಖ ಪಂದ್ಯಾವಳಿಗಳಿಗೆ ಹಿಮ್ಮೆಟ್ಟಿದ ಪ್ರಕರಣದಲ್ಲಿ ಸೌಮ್ಯ ಸ್ವಾಮಿನಾಥನ್ ಮೊದಲೇನಲ್ಲ. ವಿಶ್ವದ ಮಾಜಿ ನಂ.೧ ಮಹಿಳಾ ಶೂಟರ್ ಹೀನಾ ಸಿಧು ಕೂಡ ಇರಾನ್ ಸ್ಪರ್ಧಾವಳಿಯನ್ನು ಬಹಿಷ್ಕರಿಸಿದ್ದರು. ಅಂತೆಯೇ, ಗ್ರೆಗೋರಿಯನ್-ಅಮೆರಿಕನ್ ಚೆಸ್ ಚಾಂಪಿಯನ್ ನಜಿ ಪೈಕಿಡ್ಜಿ ಎಂಬಾಕೆ ಕೂಡ ಸ್ಪರ್ಧಾವಳಿಯೊಂದರಿಂದ ಹಿಂದೆ ಸರಿದಿದ್ದರು. ಇನ್ನು, ಇರಾನಿಯನ್ ಚೆಸ್ ಚಾಂಪಿಯನ್ ಡೊರ್ಸಾ ಡೆರಕ್ಶಾನಿ ಹಿಜಾಬ್ ಧರಿಸದೆ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರೆಂದು ಇರಾನ್ ಚೆಸ್ ಒಕ್ಕೂಟ ಆಕೆಯನ್ನು ಬಹಿಷ್ಕರಿಸಿತ್ತು.

ಇರಾನ್‌ನಲ್ಲಿನ ಹಿಜಾಬ್ ನೀತಿಯಿಂದಾಗಿ ಹಲವಾರು ಕ್ರೀಡಾಪಟುಗಳು ಕಿರಿಕಿರಿ ಅನುಭವಿಸಿದ್ದಾರೆ. ೨೦೧೬ರಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಚೆಸ್ ಮಹಿಳಾ ಆಟಗಾರ್ತಿಯರು ಭಾಗವಹಿಸಲು ಕೂಡ ಇದೇ ಹಿಜಾಬ್ ನೀತಿ ಅಡ್ಡಿಯಾಗಿತ್ತು. ಆದರೆ, ಯಾವುದೇ ಆಟಗಾರ್ತಿ ಎಷ್ಟೇ ಪಂದ್ಯಗಳನ್ನು ಬಹಿಷ್ಕರಿಸಿದ್ದರೂ, ಇರಾನ್‌ ಮಹಿಳೆಯರ ಬದುಕಿನಲ್ಲಿ ಯಾವುದೇ ಬದಲಾವಣೆಯಾಗಲೀ, ಪ್ರಗತಿಯಾಗಲೀ ಕಂಡಿಲ್ಲ.

"ಇರಾನ್‌ನಲ್ಲಿ ಆಯೋಜಿಸಲಾಗಿರುವ ಬಹುದೊಡ್ಡ ಚೆಸ್ ಪಂದ್ಯಾವಳಿ ಇದು. ಈ ಹಿಂದೆ ಮಹಿಳೆಯರಿಗಾಗಿ ಇಂಥ ಯಾವುದೇ ಕ್ರೀಡಾಕೂಟವನ್ನು ನಾವು ಆಯೋಜಿಸಿದ್ದಿಲ್ಲ. ಆದರೆ, ಈ ಹಿಜಾಬ್ ನೀತಿಯು ಬಹುಪಾಲು ಮಹಿಳಾ ಸ್ಪರ್ಧಿಗಳನ್ನು ಈ ಸ್ಪರ್ಧಾವಳಿಯಲ್ಲಿ ಆಡಲು ಬಿಡದ ಸಾಧ್ಯತೆಗಳಿವೆ. ಹಾಗೆಂದ ಮಾತ್ರಕ್ಕೆ, ಟೂರ್ನಿಯನ್ನು ಬಹಿಷ್ಕರಿಸುವುದು ಕೂಡ ಸರಿಯಾದ ನಿರ್ಧಾರವಾಗಲಾರದು. ಏಕೆಂದರೆ, ಇರಾನ್ ಮಟ್ಟಿಗೆ ಈ ಪಂದ್ಯಾವಳಿ ಪ್ರತಿಷ್ಠೆಯದ್ದು,'' ಎಂದು ಇರಾನ್ ಚೆಸ್ ಆಟಗಾರ್ತಿ ಮಿತ್ರಾ ಹೆಜಾಜಿಪುರ್ ಪ್ರತಿಕ್ರಿಯಿಸಿದ್ದಾರೆ.

ಖಂಡಿತ ಚಿನ್ನಕ್ಕೆ ಪಟ್ಟು ಹಾಕುವೆ ಎಂದ ಜಗಜಟ್ಟಿ ಬಜರಂಗ್ ಪುನಿಯಾ
ಏಷ್ಯನ್ ಚಾಂಪಿಯನ್ಸ್ | ಹಾಕಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮಿಂಚಿದ ಭಾರತ
ವಿಶ್ವ ಕಿರೀಟ ತೊಡುವ ಹ್ಯಾಮಿಲ್ಟನ್ ತವಕಕ್ಕೆ ಬ್ರೇಕ್ ಹಾಕಿದ ಕಿಮಿ ರೈಕೊನೆನ್
Editor’s Pick More