ಧವನ್-ಮುರಳಿ ಶತಕದ ನಂತರ ಕಡೇ ಹಂತದಲ್ಲಿ ಪುಟಿದೆದ್ದ ಆಫ್ಘನ್ನರು

ಸ್ಪಿನ್‌ದ್ವಯರಾದ ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ ಭಾರತದ ಬ್ಯಾಟಿಂಗ್‌ಗೆ ಸವಾಲಾಗುತ್ತಾರೆ ಎಂಬ ಮಾತು ಧವನ್ ಮತ್ತು ಮುರಳಿ ಶತಕದಾಟದಲ್ಲಿ ಹುಸಿಯಾಯಿತು. ಆದಾಗ್ಯೂ, ದಿನದಾಟದ ಕಡೇ ಭಾಗದಲ್ಲಿ ಆಫ್ಘನ್ನರು ಪುಟಿದೆದ್ದದ್ದು ಹೋರಾಟಕ್ಕೆ ಪುಷ್ಟಿ ನೀಡಿತು

ಆರಂಭಿಕರಾದ ಮುರಳಿ ವಿಜಯ್ (೧೦೫) ಹಾಗೂ ಶಿಖರ್ ಧವನ್ (೧೦೭) ದಾಖಲಿಸಿದ ಶತಕವು ಆತಿಥೇಯ ಭಾರತದ ಭರ್ಜರಿ ಇನ್ನಿಂಗ್ಸ್‌ಗೆ ನೆರವಾಯಿತು. ಈ ಇಬ್ವರ ಆಕರ್ಷಕ ಬ್ಯಾಟಿಂಗ್‌ ಜೊತೆಗೆ ಕನ್ನಡಿಗ ಕೆ ಎಲ್ ರಾಹುಲ್ (೫೪) ಗಳಿಸಿದ ಅರ್ಧಶತಕದಿಂದಾಗಿ ಭಾರತ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೭೮ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೪೭ ರನ್ ಕಲೆಹಾಕಿತು.

ಉದ್ಯಾನ ನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ (ಜೂನ್ ೧೪) ಆರಂಭವಾದ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಯಾಯಿತು. ಎರಡು ಬಾರಿ ಸ್ಥಗಿತಗೊಂಡ ಪಂದ್ಯದಲ್ಲಿ ದಿನದಾಟದ ಕಡೇ ಅವಧಿಯಲ್ಲಿ ಪ್ರವಾಸಿಗರಿಂದ ನಿರೀಕ್ಷಿತ ಬೌಲಿಂಗ್ ವ್ಯಕ್ತವಾಯಿತು. ಆಟ ನಿಂತಾಗ ಹಾರ್ದಿಕ್ ಪಾಂಡ್ಯ (೧೦) ಮತ್ತು ಆರ್ ಅಶ್ವಿನ್ ೭ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ದಿಗ್ಗಜರ ಸಾಲಿಗೆ ಧವನ್

ಬೆಳಗ್ಗೆ ಟಾಸ್ ಗೆದ್ದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಜೊತೆಯಾಟ ಆಫ್ಘನ್ನರನ್ನು ಇನ್ನಿಲ್ಲದಂತೆ ಬಸವಳಿಯುವಂತೆ ಮಾಡಿತು. ಅದರಲ್ಲೂ, ಆಕ್ರಮಣಕಾರಿ ಆಟಗಾರ ಧವನ್ ಅಂತೂ ಆಫ್ಘನ್ ಬೌಲರ್‌ಗಳ ಬೆವರಿಳಿಯುವಂತೆ ಮಾಡಿದರು.

ಇದನ್ನೂ ಓದಿ : ಬರೋಬ್ಬರಿ 8 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ದಿನೇಶ್ ಕಾರ್ತಿಕ್

ಅದಕ್ಕೆ ಫಲವಾಗಿ ಅವರು ಭೋಜನ ವಿರಾಮಕ್ಕೆ ಮುಂಚೆಯೇ ಶತಕ ಪೂರೈಸಿದರು. ಮೊದಲ ಅವಧಿಯಲ್ಲಿ ೧೯ ಬೌಂಡರಿ, ೩ ಸಿಕ್ಸರ್ ಸಿಡಿಸಿದ ಧವನ್, ೯೧ ಎಸೆತಗಳಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಶತಕ ಪೂರೈಸಿದರು. ಆ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೂ ಭಾಜನವಾದರು. ಜೊತೆಗೆ ಭೋಜನ ವಿರಾಮಕ್ಕೂ ಮುನ್ನ ಶತಕ ಬಾರಿಸಿದ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡರು. ವಿಕ್ಟರ್ ಟ್ರಂಪರ್ ೧೯೦೨ರಲ್ಲಿ, ಚಾರ್ಲಿ ಮೆಕಾರ್ಟನಿ ೧೯೨೬ರಲ್ಲಿ ೧೯೩೦ರಲ್ಲಿ ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು. ಇನ್ನುಳಿದಂತೆ ನ್ಯೂಜಿಲೆಂಡ್ ವಿರುದ್ಧ ಮಜೀದ್ ಖಾನ್ ೧೯೭೬ರಲ್ಲಿ ಈ ಸಾಧನೆ ಮಾಡಿದರೆ, ೨೦೧೭ರಲ್ಲಿ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ಭೋಜನ ವಿರಾಮಕ್ಕೂ ಮುನ್ನವೇ ಮೂರಂಕಿ ಸಾಧನೆ ಮಾಡಿದ್ದರು. ಅಂದಹಾಗೆ, ೨೦೦೬ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಸೇಂಟ್ ಲೂಸಿಯಾದಲ್ಲಿ ೯೯ ರನ್ ಗಳಿಸಿದ್ದರು.

ರಹಾನೆ ವೈಫಲ್ಯ

ಧವನ್ ಜೊತೆ ೧೬೮ ರನ್ ಜೊತೆಯಾಟವಾಡಿದ ಮುರಳಿ, ಧವನ್ ವಿಕೆಟ್ ಪತನಾನಂತರ ಕನ್ನಡಿಗ ರಾಹುಲ್‌ರೊಂದಿಗೆ ಹೋರಾಟ ಮುಂದುವರೆಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ೧೧೨ ರನ್ ಕಲೆಹಾಕಿತು. ಭಾರತ ಕಂಡ ಯಶಸ್ವಿ ಜೊತೆಯಾಟಕ್ಕೆ ಈ ಮೂವರಷ್ಟೇ ಕೊಡುಗೆ ನೀಡಿದರು. ಉಳಿದಂತೆ ಉತ್ತಮ ಜೊತೆಯಾಟದ ಕೊರತೆ ಕಂಡುಬಂತು. ಚೇತೇಶ್ವರ ಪೂಜಾರ ೩೫ ರನ್ ಗಳಿಸಿ ಔಟಾದರೆ, ರಹಾನೆ (೧೦) ಮತ್ತು ದಿನೇಶ್ ಕಾರ್ತಿಕ್ ೪ ರನ್‌ಗೆ ವಿಕೆಟ್ ಒಪ್ಪಿಸಿದರು. ಅಂದಹಾಗೆ, ಮುರಳಿ ವಿಜಯ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ೧೨ನೇ ಶತಕ ಪೂರೈಸಿದರು.

ಆಫ್ಘಾನಿಸ್ತಾನ ಪರ ವೇಗಿ ಯಾಮಿನ್ ಅಹಮದ್ಝಾಯ್ ೩೨ಕ್ಕೆ ೨ ವಿಕೆಟ್ ಗಳಿಸಿದರೆ, ವಫಾದರ್ (೫೩ಕ್ಕೆ ೧) ಮುಜೀಬ್ ಉರ್ ರೆಹಮಾನ್ (೬೯ಕ್ಕೆ ೧) ಮತ್ತು ರಶೀದ್ ಖಾನ್ ೧೨೦ಕ್ಕೆ ೧ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: ೭೮ ಓವರ್‌ಗಳಲ್ಲಿ ೩೪೭/೬ (ಮುರಳಿ ವಿಜಯ್ ೧೦೫, ಶಿಖರ್ ಧವನ್ ೧೦೭, ರಾಹುಲ್ ೫೪; ಹಾರ್ದಿಕ್ ಪಾಂಡ್ಯ ೧೦*, ಆರ್ ಅಶ್ವಿನ್ ೭* ಯಾಮಿನ್ ೩೨ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More