ಲುಜ್ನಿಕಿಯಲ್ಲಿ ಇತಿಹಾಸ ಬರೆಯುವ ರಷ್ಯಾ ಧಾವಂತಕ್ಕೆ ಸೌದಿ ಅರೇಬಿಯಾ ಸವಾಲು

ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಐತಿಹಾಸಿಕ ಕ್ಷಣಗಣನೆ ಶುರುವಾಗಿದೆ. ಮುಂದಿನ ಒಂದು ತಿಂಗಳ ಕಾಲ ನಡೆಯಲಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ರಷ್ಯಾದ ಬೃಹತ್ ಫುಟ್ಬಾಲ್ ತಾಣ ಲುಜ್ನಿಕಿ ಸಜ್ಜಾಗಿದೆ. ಜಯದ ಅಭಿಯಾನ ಯಾರಿಂದ ಎಂಬುದೇ ಕೌತುಕ

ವಿಶ್ವದ ಬಹುದೊಡ್ಡ ಕ್ರೀಡೋತ್ಸವಕ್ಕೆ ರಷ್ಯಾ ಅಣಿಯಾಗಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಅದಕ್ಕೆ ಸವಾಲೊಡ್ಡಲು ಸೌದಿ ಅರೇಬಿಯಾ ಅಣಿಯಾಗಿದೆ. ಇದಕ್ಕೂ ಮುನ್ನ ಉದ್ಘಾಟನಾ ಸಮಾರಂಭವು ವಿಶ್ವ ಫುಟ್ಬಾಲ್ ಪ್ರೇಮಿಗಳನ್ನಷ್ಟೇ ಅಲ್ಲದೆ, ಜಗತ್ತಿನ ಕ್ರೀಡಾ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆಯಲಿರುವ ಇಪ್ಪತ್ತೊಂದನೇ ಫಿಫಾ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನೆಯಲ್ಲಿ ಸಹಜವಾಗಿಯೇ ರಷ್ಯಾದ ಸಂಸ್ಕೃತಿ ಹಾಗೂ ಪರಂಪರೆ ಮೇಳೈಸಲಿದೆ. ಖ್ಯಾತ ಗಾಯಕರಾದ ನಿಕ್ಕಿ ಜ್ಯಾಮ್ ಹಾಗೂ ಎರಾ ಇಸ್ಟ್ರೇಫಿ  'ಲಿವ್ ಇಟ್ ಅಪ್' ಎಂಬ ಈ ವಿಶ್ವಕಪ್‌ನ ಅಧಿಕೃತ ಹಾಡಿಗೆ ದನಿಯಾಗಲಿದ್ದಾರೆ. ಇಂಗ್ಲೆಂಡ್‌ನ ಖ್ಯಾತ ಪಾಪ್ ತಾರೆ ರಾಬಿ ವಿಲಿಯಮ್ಸ್ ಹಾಗೂ ಅಯ್ದಾ ಗ್ಯಾರಿಫುಲಿನಾ ಸಂಗೀತ ಕಾರ್ಯಕ್ರಮವನ್ನೂ ನಡೆಸಿಕೊಡಲಿದ್ದಾರೆ.

"ವೃತ್ತಿಜೀವನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರೂ, ವಿಶ್ವಕಪ್‌ನಂಥ ಮಹಾನ್ ಪಂದ್ಯಾವಳಿಯಲ್ಲಿ ಅದೂ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸಲು ಸಿಕ್ಕಿರುವ ಅವಕಾಶ ಬಹುದಿನಗಳ ನನ್ನ ಕನಸನ್ನು ನನಸಾಗುವಂತೆ ಮಾಡಿದೆ,'' ಎಂದು ವಿಲಿಯಮ್ಸ್ ಉದ್ಘಾಟನಾ ಕಾರ್ಯಕ್ರಮದ ಕುರಿತು ತಿಳಿಸಿದ್ದಾರೆ.

ರಷ್ಯಾಗೆ ಅಗ್ನಿಪರೀಕ್ಷೆ

ರಷ್ಯಾ ನೆಲದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ವಿಶ್ವಕಪ್ ಇದಾಗಿರುವುದರಿಂದ ಆತಿಥೇಯರು ಪಂದ್ಯಾವಳಿಯಲ್ಲಿ ಶುಭಾರಂಭಕ್ಕಾಗಿ ಕನವರಿಸುತ್ತಿದ್ದಾರೆ. 'ಎ' ಗುಂಪಿನಲ್ಲಿರುವ ರಷ್ಯಾ ಹಾಗೂ ಸೌದಿ ಅರೇಬಿಯಾ ಎರಡೂ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ. ೧೯೯೦ರ ಆವೃತ್ತಿಯ ನಂತರದಲ್ಲಿ ರಷ್ಯಾ ಆಡುತ್ತಿರುವ ನಾಲ್ಕನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದರೆ ಏಷ್ಯಾ ಅರ್ಹತಾ ಸುತ್ತಿನಲ್ಲಿ ಸೆಣಸಿ ಪ್ರಧಾನ ಘಟ್ಟಕ್ಕೇರಿರುವ ಸೌದಿ ಅರೇಬಿಯಾ ೫ನೇ ವಿಶ್ವಕಪ್‌ನಲ್ಲಿ ಆಡುತ್ತಿದೆ. ಇನ್ನು ಇದೇ ಎ ಗುಂಪಿನಲ್ಲಿ ಬಲಾಢ್ಯ ತಂಡವಾಗಿರುವ ಉರುಗ್ವೆ ಇದ್ದರೆ, ಈಜಿಪ್ಟ್ ಕೂಡಾ ಇದೇ ಗುಂಪಿನಲ್ಲಿದೆ. ಹೀಗಾಗಿ, ರಷ್ಯಾ ಹಾಗೂ ಸೌದಿ ಅರೇಬಿಯಾದ ಮುಂದಿನ ಹಾದಿ ಸುಗಮವಾಗಬೇಕಾದರೆ ಗೆಲುವು ಅನಿವಾರ್ಯ.

ಕಳೆದ ಆವೃತ್ತಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿದ್ದ ರಷ್ಯಾ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ೭೦ನೇ ಸ್ಥಾನದಲ್ಲಿದ್ದರೆ, ಸೌದಿ ಅರೇಬಿಯಾ ೬೭ನೇ ಸ್ಥಾನದಲ್ಲಿದೆ. ಶ್ರೇಯಾಂಕದಲ್ಲಿ ಇತ್ತಂಡಗಳಿಗೂ ಅತಿಯಾದ ವ್ಯತ್ಯಾಸವೇನಿಲ್ಲ. ಏತನ್ಮಧ್ಯೆ, ಒಟ್ಟಾರೆ ಎರಡು ಪಂದ್ಯಗಳ ಮುಖಾಮುಖಿಯಲ್ಲಿ ಸೌದಿ ಅರೇಬಿಯಾ ಒಂದರಲ್ಲಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ರಷ್ಯಾಗಂತೂ ಅಗ್ನಿಪರೀಕ್ಷೆ ಎದುರಾಗಿದೆ. ತವರು ಅಭಿಮಾನಿಗಳ ಬೆಂಬಲವಿದ್ದರೂ, ಅವರ ಸಮ್ಮುಖದಲ್ಲಿ ಆಡುವ ಒತ್ತಡವೂ ರಷ್ಯಾ ಪಡೆಯನ್ನು ಆವರಿಸಿದೆ.

ಈ ಮಧ್ಯೆ, ಆತಿಥೇಯ ರಾಷ್ಟ್ರವಾಗಿರುವ ಕಾರಣ ರಷ್ಯಾಗೆ ವಿಶ್ವಕಪ್‌ನಲ್ಲಿ ಭಾಗವಹಿಸಲು ಸುಲಭ ಅವಕಾಶ ಸಿಕ್ಕಿದೆ. ಇನ್ನು, ವಿಶ್ವಕಪ್ ಇತಿಹಾಸದಲ್ಲೇ ಇದುವರೆಗೂ ಆತಿಥೇಯ ತಂಡ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿಲ್ಲ. ಮನೆಯಂಗಣದ ತಂಡ ಆರು ಗೆಲುವು ಹಾಗೂ ಮೂರು ಡ್ರಾ ದಾಖಲಾಗಿದೆ.

ಇದನ್ನೂ ಓದಿ : ಫಿಫಾ ವಿಶೇಷ| ರಷ್ಯಾ ಆವೃತ್ತಿಯ ಟಾಪ್ ಟೆನ್ ಪಟ್ಟಿಯಲ್ಲಿ ಮೆಸ್ಸಿಯೇ ಮೋಡಿಗಾರ!

ಅಂಕಿ-ಅಂಶಗಳಲ್ಲಿ ಇತ್ತಂಡಗಳ ಬಲಾಬಲ

 • ೪೦: ಇದುವರೆಗಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರಷ್ಯಾ ಆಡಿರುವ ಪಂದ್ಯಗಳು
 • ೧೭: ರಷ್ಯಾ ತಂಡ ಗೆದ್ದಿರುವ ಪಂದ್ಯಗಳು
 • ೧೫: ರಷ್ಯಾ ತಂಡ ಅನುಭವಿಸಿರುವ ಸೋಲು
 • ೦೮: ಫಲಿತಾಂಶವಿಲ್ಲದೆ ರಷ್ಯಾ ತಂಡದ ಡ್ರಾ ಸಾಧನೆ
 • ೬೬: ರಷ್ಯಾ ಗಳಿಸಿರುವ ಗೋಲುಗಳು
 • ೪೭: ರಷ್ಯಾ ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿರುವ ಗೋಲು
 • ೧೩: ಇದುವರೆಗಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೌದಿ ಅರೇಬಿಯಾ ಆಡಿರುವ ಪಂದ್ಯಗಳು
 • ೦೨: ಸೌದಿ ಅರೇಬಿಯಾ ಗೆಲುವು
 • ೦೯: ಸೌದಿ ಅರೇಬಿಯಾ ತಂಡ ಅನುಭವಿಸಿರುವ ಸೋಲು
 • ೦೨: ಫಲಿತಾಂಶವಿಲ್ಲದೆ ರಷ್ಯಾ ತಂಡದ ಡ್ರಾ ಸಾಧನೆ
 • ೦೯: ಸೌದಿ ಅರೇಬಿಯಾ ಗಳಿಸಿರುವ ಗೋಲು
 • ೩೨: ಎದುರಾಳಿ ತಂಡಗಳಿಗೆ ಸೌದಿ ಅರೇಬಿಯಾ ಬಿಟ್ಟುಕೊಟ್ಟಿರುವ ಗೋಲು
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More