ಸುಂದರ ಸಂಜೆಯಲ್ಲಿ ಪಾಪ್ ಲಾಲಿತ್ಯಕ್ಕೆ ಮೈಮರೆತ ವಿಶ್ವಕ್ಕೀಗ ಶುರುವಾಯ್ತು ಫುಟ್ಬಾಲ್ ಜ್ವರ

ಲುಜ್ನಿಕಿ ಕ್ರೀಡಾಂಗಣ ೮೦ ಸಹಸ್ರ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು. ಬ್ರಿಟಿಷ್ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಹಾಡಿದ ಮೂರು ಮೋಹಕ ಹಾಡುಗಳಿಗೆ ಕ್ರೀಡಾಂಗಣದಲ್ಲಿದ್ದವರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ೨೧ನೇ ವಿಶ್ವಕಪ್‌ ಟೂರ್ನಿಗೆ ಅಧಿಕೃತ ಚಾಲನೆ ಇತ್ತರು

ಒಂದು ತಿಂಗಳ ಫುಟ್ಬಾಲ್ ಕಲರವಕ್ಕೆ ನಿರೀಕ್ಷಿತ ಸಂಗೀತ ಸ್ಪರ್ಶ ಸಿಕ್ಕಿತು. ಗುರುವಾರ (ಜೂನ್ ೧೪) ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ಆತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವಣದ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆದ ವರ್ಣರಂಜಿತ ಪಾಪ್ ಸ್ವರಮೇಳ ಸಮಾರಂಭದಲ್ಲಿ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಸಂಗೀತದ ಸುಧೆಯನ್ನು ಉಣಬಡಿಸಿದರಾದರೂ, ವೇದಿಕೆಯಿಂದ ಕೆಳಗಿಳಿಯುವಾಗ ಟಿವಿ ಕ್ಯಾಮೆರಾಗಳತ್ತ ತೋರು ಬೆರಳನ್ನು ತೋರಿ ಪ್ರತಿಯೋರ್ವರನ್ನೂ ಆಘಾತಗೊಳಿಸಿದರು.

ಅಂದಹಾಗೆ, ಮಿಕ್ಕ ವಿಶ್ವಕಪ್‌ ಪಂದ್ಯಾವಳಿಗಳಲ್ಲಿನ ಉದ್ಘಾಟನೆಯಂತೆ ಇದು ಹೆಚ್ಚು ಸಮಯದ್ದಾಗಿರಲಿಲ್ಲ. ಕೇವಲ ೩೦ ನಿಮಿಷದಲ್ಲೇ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಈ ಕಾರ್ಯಕ್ರಮದ ನಂತರ ನಡೆಯಬೇಕಿದ್ದ ಮೊದಲ ಪಂದ್ಯಕ್ಕಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಬೇಗನೇ ಮುಗಿಸಲಾಯಿತು.

ವಿಶ್ವಕಪ್‌ಗೆ ರೊನಾಲ್ಡೊ ಕಿಕ್!

ವಿಜ್ನುಕಿ ಕ್ರೀಡಾಂಗಣದ ಕೇಂದ್ರಭಾಗದಲ್ಲಿ ದೊಡ್ಡದಾದ ಫುಟ್ಬಾಲ್ ಅನ್ನು ಇರಿಸಲಾಗಿತ್ತು. ಚೆಂಡಿನ ಸುತ್ತಲೂ ನೃತ್ಯಗಾರರು ನೆರೆದಿದ್ದರು. ರಿಯಲ್ ಮ್ಯಾಡ್ರಿಡ್ ಮಾಜಿ ಆಟಗಾರ ಹಾಗೂ ಬಾರ್ಸಿಲೋನಾ ಸ್ಟ್ರೈಕರ್ ಮತ್ತು ೨೦೦೨ರ ಆವೃತ್ತಿಯಲ್ಲಿ ಜರ್ಮನಿ ವಿರುದ್ಧ ಎರಡು ಬಾರಿ ಗೋಲು ಬಾರಿಸಿ ಬ್ರೆಜಿಲ್‌ಗೆ ಕಪ್ ಗೆದ್ದುಕೊಟ್ಟಿದ್ದ ರೊನಾಲ್ಡೊ ಪುಟ್ಟ ಬಾಲಕನ ಕೈಹಿಡಿದು ಕ್ರೀಡಾಂಗಣದ ಕೇಂದ್ರಭಾಗದತ್ತ ನಡೆದರು.

ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣದ ಪಂದ್ಯದ ವೇಳೆ ರಷ್ಯಾ ಯುವತಿಯೊಬ್ಬಳು ಕಂಡ ಬಗೆ

೧೯೯೪ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೊನಾಲ್ಡೊ, ‘ರಷ್ಯಾ ೨೦೧೮’ ಹೆಸರಿನ ಅಂಗಿ ತೊಟ್ಟು ಗಮನ ಸೆಳೆದರು. ನಂತರ ಟೂರ್ನಿಗೆ ನಿಗದಿಯಾದ ಚೆಂಡನ್ನು ಬಾಲಕನತ್ತ ಕಿಕ್ ಮಾಡಿದ ರೊನಾಲ್ಡೊ ಅದನ್ನು, ಟೂರ್ನಿಯ ಅಧಿಕೃತ ಲಾಂಛನ 'ಜಬವಿಕಾ'ನತ್ತ ಪಾಸ್ ಮಾಡುವಂತೆ ಕೋರುವುದರೊಂದಿಗೆ ೨೦೧೮ರ ವಿಶ್ವಕಪ್‌ಗೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮೂರು ಹಾಡುಗಳ ಪೈಕಿ ವಿವಾದಗ್ರಸ್ತ ಹಾಡು 'ಪಾರ್ಟಿ ಲೈಕ್ ಎ ರಷ್ಯನ್' ವಿಲಿಯಮ್ಸ್ ಕಂಠಸಿರಿಯಲ್ಲಿ ಮೂಡಿಬರಲಿಲ್ಲ. ಆದರೆ, ೪೪ರ ಹರೆಯದ ಈ ಗಾಯಕ ೧೯೯೮ರಲ್ಲಿ ಹಾಡಿದ್ದ 'ಲೆಟ್ ಮಿ ಎಂಟರ್‌ಟೇನ್ ಯೂ' ಹಾಡನ್ನು ವೇದಿಕೆಯಲ್ಲಿ ಬ್ರೆಜಿಲ್‌ನ ಮಾಜಿ ಸ್ಟ್ರೈಕರ್ ರೊನಾಲ್ಡೊ ಜತೆಗೆ ಹಾಡುವುದರೊಂದಿಗೆ ಸಂಗೀತ ಸುಧೆಗೆ ಕಿಚ್ಚು ಹಚ್ಚಿದರು.

ಫಿಫಾ ವಿಶ್ವಕಪ್‌ನಲ್ಲಿ ಸಂಗೀತ ಪ್ರಸ್ತುತಿಪಡಿಸುವುದು 'ಬಾಲ್ಯದ ಕನಸು' ಹಾಗೂ 'ಇದೊಂದು ಮರೆಯಲಾಗದ ಪ್ರದರ್ಶನ' ಎಂದು ನುಡಿದ ವಿಲಿಯಮ್ಸ್ ಬಹುದಿನಗಳ ಕನಸು ನನಸಾಗಿದ್ದಕ್ಕೆ ಸಂತಸ ಹಂಚಿಕೊಂಡರು. ಬಳಿಕ ರಷ್ಯಾದ ಅಲೆಕ್ಸಾಂಡರ್ ಬೊಲ್ಡಾಚೆವ್ ಆಕರ್ಷಣೆಯ ಕೇಂದ್ರಬಿಂದುವಾದರೆ, ರಷ್ಯನ್ ಬೆಡಗಿ ಐಡಾ ಗರಿಫುಲಿನಿಯಾ ಕೂಡಾ ಅವರಿಗೆ ಸಾಥ್ ನೀಡಿದರು. ವಿಲಿಯಮ್ಸ್ ಅವರ 'ಏಂಜಲ್ಸ್' ಹಾಡಿಗೆ ಐಡಾ ಹೆಜ್ಜೆ ಪ್ರೇಕ್ಷಕರನ್ನು ರಂಜಿಸಿದರು.

ಪಾಪ್ ಗಾಯಕ ಬಾಬಿ ವಿಲಿಯಮ್ಸ್ ಹಾಡಿಗೆ ಸಹ ಕಲಾವಿದರ ನರ್ತನ

ಇನ್ನು, ಸ್ಪೇನ್ ತಂಡದ ಮಾಜಿ ನಾಯಕ ಐಕರ್ ಕ್ಯಾಸಿಲ್ಲಾಸ್ ಎಲ್ಲ ೩೨ ತಂಡಗಳ ಪಥ ಸಂಚಲನದಲ್ಲಿ ೨೦೧೦ರ ವಿಶ್ವಕಪ್ ಟ್ರೋಫಿಯನ್ನು ವೇದಿಕೆಗೆ ತಂದು ಪ್ರತಿಷ್ಠಾಪಿಸಿದರು. ಸರಿಸುಮಾರು ೮೦೦ ಮಂದಿ ಕಲಾವಿದರು ಈ ಸಂಗೀತ ರಸಸಂಜೆಯ ಬೆಡಗನ್ನು ಹೆಚ್ಚಿಸಿದರು.

ಇದನ್ನೂ ಓದಿ : ಫಿಫಾ ೨೦೧೮ | ರೋಮಾಂಚನ ಹುಟ್ಟಿಸಿದ ಸಾರ್ವಕಾಲಿಕ ಹತ್ತು ಗೋಲ್‌ಗಳು

" ಫುಟ್ಬಾಲ್ ಮತ್ತು ಸಂಗೀತ ಪ್ರೇಮಿಗಳನ್ನು ನಮ್ಮಗಳ ಜತೆಗೆ ರಷ್ಯಾಗೆ ಹಾಗೂ ಕ್ರೀಡಾಂಗಣಕ್ಕೆ ಆಹ್ವಾನಿಸಲು ಬಯಸುತ್ತೇನೆ. ಒಂದೊಮ್ಮೆ ರಷ್ಯಾಗೆ ಇಲ್ಲವೇ ಕ್ರೀಡಾಂಗಣಕ್ಕೆ ಬರಲಾಗದವರು ತಮ್ಮ ಟಿವಿ ಚಾನೆಲ್‌ಗಳನ್ನು ಕೊಂಚ ಮುಂಚಿತವಾಗಿಯೇ ಆನ್ ಮಾಡಿಕೊಳ್ಳುವ ಮೂಲಕ ಮರೆಯಲಾಗದ ಪ್ರದರ್ಶನದಿಂದ ವಂಚಿತರಾಗದಂತೆ ಆಹ್ವಾನಿಸಲು ಬಯಸುತ್ತೇನೆ,'' ಎಂದು ವಿಲಿಯಮ್ಸ್ ಉದ್ಘಾಟನೆಗೂ ಮುನ್ನ ನುಡಿಯುವ ಮೂಲಕ ಉದ್ಘಾಟನೆಯ ರೋಚಕತೆ ಹೆಚ್ಚಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More