ಫಿಫಾ ವಿಶೇಷ | ದಿಗ್ಗಜರ ಕಾದಾಟಕ್ಕೆ ಸಾಕ್ಷಿಯಾಗಲಿವೆ ಈ ಬೆರಗಿನ ಕ್ರೀಡಾಂಗಣಗಳು

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು ೬೪ ಪಂದ್ಯಗಳಿಗೆ ಹನ್ನೆರಡು ಕ್ರೀಡಾಂಗಣಗಳು ಸಜ್ಜಾಗಿವೆ. 11 ನಗರಗಳಲ್ಲಿನ ಈ ತಾಣಗಳನ್ನು ಸುಸಜ್ಜಿತಗೊಳಿಸಲಾಗಿದೆ. ೮೧ ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕ ಸಾಮರ್ಥ್ಯ ಹೊಂದಿರುವ ಲುಜ್ನಿಕಿ ಕ್ರೀಡಾಂಗಣವೇ ಬೃಹತ್ ತಾಣವೆನಿಸಿದೆ

ಲುಜ್ನಿಕಿ ಕ್ರೀಡಾಂಗಣ

ರಷ್ಯಾ ದೇಶದ ಪಶ್ಚಿಮ ಭಾಗದಲ್ಲಿನ ಮೊಸ್ಕ್ವಾ ನದಿ ತಟದಲ್ಲಿನ ಈ ಕ್ರೀಡಾಂಗಣವನ್ನು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಿರ್ಮಿಸಲಾಗಿದೆ. ಜುಲೈ ೧೫ರಂದು ನಡೆಯಲಿರುವ ಫೈನಲ್ ಒಳಗೊಂಡಂತೆ ಏಳು ಮಹತ್ವಪೂರ್ಣ ಪಂದ್ಯಗಳಿಗೆ ಈ ತಾಣ ಆತಿಥ್ಯ ಹೊತ್ತಿದೆ. ೮೧,೦೦೧ ಸಾವಿರ ಪ್ರೇಕ್ಷಕ ಸಾಮರ್ಥ್ಯದ ಈ ಕ್ರೀಡಾಂಗಣಕ್ಕೆ ಸೆಂಟ್ರಲ್ ಲೆನಿನ್ ಕ್ರೀಡಾಂಗಣ ಎಂತಲೂ ಕರೆಯಲಾಗುತ್ತಿದ್ದು, ೧೯೫೬ರಲ್ಲಿ ಇದನ್ನು ನಿರ್ಮಿಸಲಾಯಿತು.

ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣ

ಜೆನಿತ್ ಅರೇನಾ, ಕ್ರೆಸ್ಟೋವ್ಸ್ಕಿ ಹಾಗೂ ಪೀಟರ್ ಅರೇನಾ ಎಂತಲೂ ಕರೆಯಲಾಗುವ ಈ ಕ್ರೀಡಾಂಗಣ ರಷ್ಯಾದ ಉತ್ತರ ಭಾಗದಲ್ಲಿರುವ ಗಲ್ಫ್ ಆಫ್ ಫಿನ್ಲ್ಯಾಂಡ್‌ನಲ್ಲಿದೆ. ಈ ೨೦೧೭ರಲ್ಲಿ ಪುನರ್‌ನವೀಕರಿಸಲಾಗಿರುವ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯ ೬೮,೧೩೧. ನೇವಾ ನದಿಯ ದಡದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣವು ೨೦೧೭ರಿಂದ ಕಾರ್ಯಾಚರಿಸುತ್ತಿದೆ. ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯ ಒಂದು ಸೆಮಿಫೈನಲ್ ಪಂದ್ಯ ಇದೇ ಮೈದಾನದಲ್ಲಿ ಜರುಗಲಿದೆ.

ಫಿಶ್ತ್ ಕ್ರೀಡಾಂಗಣ

ದಕ್ಷಿಣ ಭಾಗದಲ್ಲಿರುವ ಸೋಚಿ ನಗರದಲ್ಲಿ ಫಿಶ್ತ್ ಕ್ರೀಡಾಂಗಣ ತಲೆ ಎತ್ತಿದೆ. ಕೌಕಾಸಸ್ ಪರ್ವತ ಶ್ರೇಣಿಗಳಿಂದ ಆವೃತವಾಗಿರುವ ಬ್ಲ್ಯಾಕ್ ಸಮುದ್ರದ ದಡದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ೨೦೧೩ರಲ್ಲಿ ಆರಂಭವಾದ ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯವನ್ನು ಎರಡು ವರ್ಷಗಳ ಹಿಂದಷ್ಟೇ ೪೭,೭೦೦ಕ್ಕೆ ಹೆಚ್ಚಿಸಲಾಗಿದೆ. ಕ್ವಾರ್ಟರ್‌ಫೈನಲ್ ಪಂದ್ಯವನ್ನೂ ಒಳಗೊಂಡಂತೆ ಈ ಕ್ರೀಡಾಂಗಣದಲ್ಲಿ ಒಟ್ಟು ಆರು ಪಂದ್ಯಗಳು ಜರುಗಲಿವೆ.

ಸ್ಪಾರ್ಟಕ್ ಕ್ರೀಡಾಂಗಣ

ಮಾಸ್ಕೋ ನಗರದ ವಾಯುವ್ಯ ಭಾಗದಲ್ಲಿರುವ ಈ ಕ್ರೀಡಾಂಗಣ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ರೋಮನ್ ಸಾಮ್ರಾಜ್ಯದ ಬಂಡಾಯಗಾರ ಸ್ಪಾರ್ಟಕಸ್ ಸ್ಮರಣಾರ್ಥ ಈ ಕ್ರೀಡಾಂಗಣಕ್ಕೆ ಸ್ಪಾರ್ಟಕ್ ಎಂದೇ ಕರೆಯಲಾಗಿದೆ. ಹದಿನೆಂಟು ವರ್ಷಗಳ ಹಿಂದೆಯೇ ಪೂರ್ಣವಾಗಬೇಕಿದ್ದ ಕ್ರೀಡಾಂಗಣವು ಕೆಲವೊಂದು ಕಾರಣಗಳಿಂದಾಗಿ ೨೦೧೪ರಲ್ಲಿ ಆಟಕ್ಕೆ ಸಜ್ಜಾಯಿತು. ೪೩,೨೯೮ ಪ್ರೇಕ್ಷಕ ಸಾಮರ್ಥ್ಯವಿರುವ ಈ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ಜರುಗಲಿವೆ.

ಕಜಾನ್ ಅರೆನಾ

ಮಾಸ್ಕೋ ನಗರದ ಪೂರ್ವಭಾಗದಲ್ಲಿರುವ ತತರ್‌ಸ್ಥಾನ್ ಗಣರಾಜ್ಯದಲ್ಲಿದೆ. ವೋಲ್ಗಾ ಮತ್ತು ಕಜಂಕಾ ನದಿಗಳ ಸಂಗಮದ ದಡದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದು ಕೂಡ ೨೦೧೩ರಲ್ಲಿ ಆರಂಭವಾಗಿದ್ದು, ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯ ೪೪,೭೭೯. ಈ ಕ್ರೀಡಾಂಗಣವು ಒಂದು ಕ್ವಾರ್ಟರ್‌ಫೈನಲ್ ಸೇರಿದಂತೆ ಒಟ್ಟು ೬ ಪಂದ್ಯಗಳಿಗೆ ಆತಿಥ್ಯ ಹೊತ್ತಿದೆ.

ಸಮರಾ ಅರೆನಾ

ರಷ್ಯಾದ ಆಗ್ನೇಯ ದಿಕ್ಕಿನಲ್ಲಿದೆ. ವೋಲ್ಗಾ ನದಿಯ  ಪೂರ್ವದಿಕ್ಕಿನಲ್ಲಿ ತಲೆಎತ್ತಿರುವ ಸಮರಾ ಅರೇನಾ ಕ್ರೀಡಾಂಗಣವು ಗುಮ್ಮಟಾಕಾರದಲ್ಲಿರುವುದು ವಿಶೇಷ. ಇದೇ ವರ್ಷ ಪೂರ್ಣಗೊಂಡಿರುವ ಈ ಕ್ರೀಡಾಂಗಣದ ಸಾಮರ್ಥ್ಯವು ೪೪,೮೦೭ರಷ್ಟಿದೆ. ಇನ್ನು, ಈ ಮೈದಾನ ಕೂಡ ಒಂದು ಕ್ವಾರ್ಟರ್‌ಫೈನಲ್ ಪಂದ್ಯವನ್ನು ಒಳಗೊಂಡಂತೆ ಒಟ್ಟು ೬ ಪಂದ್ಯಗಳಿಗೆ ಆತಿಥ್ಯ ಹೊತ್ತಿದೆ.

ವೋಲ್ಗಾಗ್ರ್ಯಾದ್ ಅರೆನಾ

ನೈರುತ್ಯ ದಿಕ್ಕಿನಲ್ಲಿನ ಹಳೆಯ ಕ್ರೀಡಾಂಗಣವನ್ನು ಕೆಡವಿ ಆ ಜಾಗದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ವೋಲ್ಗಾ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ದಡದಲ್ಲಿ ಮೈದಳೆದಿರುವ ಇದನ್ನು ಸ್ಟ್ಯಾಲಿನ್‌ಗ್ರ್ಯಾದ್ ಎಂದೂ ಕರೆಯಲಾಗುತ್ತಿತ್ತು. ಈ ನಗರದಲ್ಲಿನ ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯವು ೪೫,೫೬೮ರಷ್ಟಿದ್ದು, ಇದೂ ಕೂಡಾ ೨೦೧೮ರಲ್ಲಿ ಆಟಕ್ಕೆ ತೆರೆದುಕೊಂಡಿರುವ ಈ ಕ್ರೀಡಾಂಗಣದಲ್ಲಿ ಆರಂಭಿಕ ಹಂತದ ನಾಲ್ಕು ಪಂದ್ಯಗಳು ನಡೆಯಲಿವೆ.

ರೊಸ್ತೊವ್ ಅರೆನಾ

ಮಾಸ್ಕೋ ನಗರದ ದಕ್ಷಿಣ ಭಾಗದಲ್ಲಿರುವ ರೊಸ್ತೊವ್ ಅರೆನಾ ಕ್ರೀಡಾಂಗಣವು ಅಜೊವ್ ಸಮುದ್ರದಿಂದ ೨೦ ಮೈಲು ದೂರದಲ್ಲಿದೆ. ಡಾನ್ ನದಿಯ ದಂಡೆಯ ಮೇಲೆ ಇದನ್ನು ನಿರ್ಮಿಸಲಾಗಿದೆ. ೨೦೧೮ರಲ್ಲಿ ಆರಂಭವಾಗಿರುವ ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯವು ೪೫,೧೪೫. ಈ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ.

ನಿಜ್ನಿ ನೊವ್‌ಗೊರೋದ್ ಕ್ರೀಡಾಂಗಣ

ಮಾಸ್ಕೋ ನಗರದ ಪೂರ್ವ ದಿಕ್ಕಿನಲ್ಲಿರುವ ನಿಜ್ನಿ ನೊಮ್ ಗೊರೋದ್ ಕ್ರೀಡಾಂಗಣದ ಕಾಮಗಾರಿ ೨೦೧೮ರಲ್ಲಿ ಪೂರ್ಣಗೊಂಡಿತು. ನಿಜೆಗೊರೊದ್ ಒಬ್ಲ್ಯಾಸ್ಟ್ ನಗರದಲ್ಲಿರುವ ಈ ಕ್ರೀಡಾಂಗಣವು ವೋಲ್ಗಾ ಮತ್ತು ಓಕಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ನಿರ್ಮಿತಿಯಾಗಿದೆ. ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯವು ೪೫,೩೩೧ರಷ್ಟಿದ್ದು, ಇಲ್ಲಿ ಒಂದು ಕ್ವಾರ್ಟರ್‌ಫೈನಲ್ ಸೇರಿ ಆರು ಪಂದ್ಯಗಳು ಜರುಗಲಿವೆ.

ಎಕಾತೆರಿನ್‌ಬರ್ಗ್ ಅರೆನಾ

ಉರಲ್ ಪರ್ವತಶ್ರೇಣಿಗಳಿಂದ ಸುತ್ತುವರೆದಿರುವ, ರಷ್ಯಾದ ನಾಲ್ಕನೇ ಬಹುದೊಡ್ಡ ನಗರ ಎಕಾತೆರಿನ್‌ಬರ್ಗ್. ಈ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣವು ೧೯೫೭ರಲ್ಲೇ ನಿರ್ಮಾಣಗೊಂಡಿದೆ. ಸೆಂಟ್ರಲ್ ಸ್ಟೇಡಿಯಂ ಎಂದೂ ಕರೆಯಲಾಗುವ ಇಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ೨೦೧೮ರ ಫಿಫಾ ವಿಶ್ವಕಪ್‌ ಆತಿಥ್ಯವು ದೊರೆತ ನಂತರದಲ್ಲಿ ಈ ಕ್ರೀಡಾಂಗಣವನ್ನು ಉನ್ನತೀಕರಿಸಲಾಯಿತು. ಒಟ್ಟಾರೆ ಪ್ರೇಕ್ಷಕ ಸಾಮರ್ಥ್ಯವು ೩೫,೬೯೬.

ಇದನ್ನೂ ಓದಿ : ಫಿಫಾ ೨೦೧೮ | ರೋಮಾಂಚನ ಹುಟ್ಟಿಸಿದ ಸಾರ್ವಕಾಲಿಕ ಹತ್ತು ಗೋಲ್‌ಗಳು

ಮೊರ್ದೆವಿಯಾ ಅರೆನಾ

ಮಾಸ್ಕೋದ ಆಗ್ನೇಯ ದಿಕ್ಕಿನಲ್ಲಿರುವ ಸರಾನ್ಸ್ಕ್ ನಗರದಲ್ಲಿ ಈ ಮೊರ್ದೆವಿಯಾ ಅರೆನಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ನಾಲ್ಕು ಪಂದ್ಯಗಳಿಗೆ ಈ ಅಂಗಣ ಆತಿಥ್ಯ ಹೊತ್ತಿದೆ. ಅಂದಹಾಗೆ, ಈ ನಗರ ಮೊರ್ದೆವಿಯಾ ಗಣರಾಜ್ಯದ ರಾಜಧಾನಿ ಕೂಡಾ. ಇದೇ ವರ್ಷ ಆರಂಭವಾಗಿರುವ ಈ ಕ್ರೀಡಾಂಗಣದ ಒಟ್ಟಾರೆ ಪ್ರೇಕ್ಷಕ ಸಾಮರ್ಥ್ಯ ೪೪,೪೪೨.

ಕಲಿನಿಂಗ್ರಾದ್ ಕ್ರೀಡಾಂಗಣ

ಇಪ್ಪತ್ತೊಂದನೇ ವಿಶ್ವಕಪ್ ಪಂದ್ಯಾವಳಿಗೆ ಸಜ್ಜುಗೊಳಿಸಲಾಗಿರುವ ಹನ್ನೆರಡನೇ ಹಾಗೂ ಕೊನೆಯ ಕ್ರೀಡಾಂಗಣವಿದು. ಅರೆನಾ ಬಾಲ್ಟಿಕಾ ಎಂದು ಕೂಡ ಈ ತಾಣವನ್ನು ಕರೆಯಲಾಗುತ್ತದೆ. ಪೋಲೆಂಡ್ ಮತ್ತು ಲಿಥುವೇನಿಯಾ ರಾಷ್ಟ್ರಗಳ ಗಡಿ ಭಾಗದಲ್ಲಿರುವ ಕಲಿನಿನ್‌ಗ್ರ್ಯಾದ್ ಒಬ್ಲ್ಯಾಸ್ಟ್ ನಗರದಲ್ಲಿದೆ. ಮೂರು ವರ್ಷಗಳ ಕಾಮಗಾರಿ ೨೦೧೮ರಲ್ಲಿ ಮುಕ್ತಾಯ ಕಂಡಿದ್ದು, ಇಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಈ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯವು ೩೫,೨೧. ಅಂದಹಾಗೆ, ಎರಡನೇ ವಿಶ್ವ ಸಮರದವರೆಗೂ ಈ ನಗರವು ಜರ್ಮನ್‌ನ ಭೂಭಾಗವಾಗಿತ್ತು.

ತ್ರಿವಳಿ ಗೋಲಿನೊಂದಿಗೆ ಗೆಲುವಿನ ಹಳಿಗೆ ಮರಳಿದ ಕೊಲಂಬಿಯಾ ಆಸೆ ಜೀವಂತ  
ಪ್ರಜ್ಞಾನಂದ ಎಂಬ ಅಪರೂಪದ ಚೆಸ್ ಪ್ರತಿಭೆಯೊಂದಿಗೆ ಕಳೆದ ಅಮೂಲ್ಯ ಸಮಯ
ಸೆನೆಗಲ್ ಕೈಯಿಂದ ಜಪಾನ್ ಸೋಲು ತಪ್ಪಿಸಿ ರೋಚಕ ಡ್ರಾ ಸಾಧಿಸಿದ ಹೋಂಡಾ ಗೋಲು
Editor’s Pick More