ಮತ್ತೆ ಮಿಸ್ ಆದ್ರೆ ಮೆಸ್ಸಿಯೂ ಮರೆಯಾಗುವ ಸಂದಿಗ್ಧ ಕಾಲಘಟ್ಟವಿದು  

ಜಗತ್ತು ಕಂಡ ಶ್ರೇಷ್ಠ ಫುಟ್ಬಾಲ್ ಪಟುಗಳಲ್ಲಿ ಒಬ್ಬರಾದ ಲಯೋನೆಲ್ ಮೆಸ್ಸಿಗೆ ಕಟ್ಟಕಡೆಯ ಅವಕಾಶವಿದು. ಗುರುವಾರ (ಜೂನ್ ೨೧) ನಡೆಯಲಿರುವ ಕ್ರೊವೇಷಿಯಾ ವಿರುದ್ಧದ ಡಿ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಅವರನ್ನೂ ಒಳಗೊಂಡಂತೆ ಅರ್ಜೆಂಟೀನಾ ಗೆಲ್ಲಲೇಬೇಕಾದ ಸನ್ನಿವೇಶ ನಿರ್ಮಿತಿಯಾಗಿದೆ

ಗುಂಪು ಹಂತದ ಆರಂಭಿಕ ಪಂದ್ಯದಲ್ಲಿ ಮೆಸ್ಸಿ ಮಿಸ್ ಮಾಡಿದ ಪೆನಾಲ್ಟಿ ಗೋಲಿನಿಂದ ಅರ್ಜೆಂಟೀನಾ ಮಹತ್ವದ ಮೂರು ಪಾಯಿಂಟ್ಸ್ ಕಳೆದುಕೊಂಡು ಐಸ್‌ಲ್ಯಾಂಡ್ ವಿರುದ್ಧ ೧-೧ ಗೋಲಿನ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಆದರೆ, ನೈಜೀರಿಯಾವನ್ನು ೨-೦ ಗೋಲಿನಿಂದ ಹಣಿದ ಕ್ರೊವೇಷಿಯಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದು, ಅರ್ಜೆಂಟೀನಾಗೆ ಪ್ರಬಲ ಪೈಪೋಟಿ ಒಡ್ಡಲು ಸಜ್ಜಾಗಿದೆ.

ಒಂದೊಮ್ಮೆ, ಕ್ರೊವೇಷಿಯಾ ವಿರುದ್ಧವೇನಾದರೂ ಅರ್ಜೆಂಟೀನಾ ಸೋತರೆ, ಈ ಆವೃತ್ತಿಯಲ್ಲಿನ ಅದರ ವಿಶ್ವಕಪ್ ಅಭಿಯಾನವೇ ಅಂತ್ಯ ಕಾಣುವ ಅಪಾಯವಿದೆ. ಅಂದಹಾಗೆ, ಗುಂಪು ಹಂತದಲ್ಲಿ ನೈಜೀರಿಯಾ ವಿರುದ್ಧ ಸೆಣಸುವ ಅವಕಾಶವಿದೆಯಾದರೂ, ಅರ್ಜೆಂಟೀನಾ ಅಂತಿಮ ಹದಿನಾರರ ಘಟ್ಟ ತಲುಪುತ್ತದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಮೆಸ್ಸಿಗಂತೂ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಿದೆ. ಈ ಪಂದ್ಯದಲ್ಲಿ ಅವರು ಗೋಲು ಗಳಿಸುವುದು ತೀರಾ ಅನಿವಾರ್ಯವಾಗಿದ್ದು, ಏನಾದರೂ ಹೆಚ್ಚೂ ಕಮ್ಮಿ ಆದರೆ, ಅರ್ಜೆಂಟೀನಾ ಪರ ವಿಶ್ವಕಪ್ ಗೆಲ್ಲುವ ಅವರ ಕನಸು ಮಸುಕಾಗುವುದು ಮಾತ್ರವಲ್ಲ, ಅವರ ಅಂತಾರಾಷ್ಟ್ರೀಯ ವೃತ್ತಿಪರ ಬದುಕು ಕೂಡಾ ಅಸ್ತಮಿಸಿದಂತಾಗಲಿದೆ!

ಎರಡು ತಂಡಗಳ ಬಲಾಬಲ

 • ಕಳೆದ ನಾಲ್ಕು ಬಾರಿಯ ಮುಖಾಮುಖಿಯಲ್ಲಿ ಅರ್ಜೆಂಟೀನಾ ಎರಡರಲ್ಲಿ ಗೆದ್ದಿದ್ದರೆ, ಕ್ರೊವೇಷಿಯಾ ಗೆದ್ದಿರುವುದು ಒಂದರಲ್ಲಿ ಮಾತ್ರ. ಮತ್ತೊಂದು ಪಂದ್ಯ ಡ್ರಾನಲ್ಲಿ ಪರ್ಯವಸಾನ ಕಂಡಿದೆ.
 • ವಿಶ್ವಕಪ್‌ನಲ್ಲಿ ಒಂದು ಬಾರಿ ಎದುರುಬದುರಾಗಿದ್ದ ಅರ್ಜೆಂಟೀನಾ ಮತ್ತು ಕ್ರೊವೇಷಿಯಾ ಅಂತಿಮ ಹದಿನಾರರ ಘಟ್ಟದಲ್ಲಿ ಸೆಣಸಿದ್ದವು. ೧೯೯೮ರ ಈ ಆವೃತ್ತಿಯಲ್ಲಿ ಮೌರಿಸಿಯೊ ಪಿನೆಡಾ ದಾಖಲಿಸಿದ ಗೋಲಿನಿಂದ ಅರ್ಜೆಂಟೀನಾ ೧-೦ ಗೋಲಿನ ಗೆಲುವು ಪಡೆದಿತ್ತು.

ಅರ್ಜೆಂಟೀನಾ ಇತಿ ಮಿತಿ ಏನು?

 • ೧೯೭೪ರ ಆವೃತ್ತಿಯಲ್ಲಿ ಅರ್ಜೆಂಟೀನಾ ಮೊದಲ ಎರಡು ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿತ್ತು
 • ಅಂತಿಮ ಹದಿನಾರರ ಹಂತದಲ್ಲಿ ಅರ್ಜೆಂಟೀನಾ ಒಮ್ಮೆ ಮಾತ್ರ ಸೋಲನುಭವಿಸಿದ್ದು ೨೦೦೨ರ ಆವೃತ್ತಿಯಲ್ಲಿ ಮಾತ್ರ. ಇಂಗ್ಲೆಂಡ್ ವಿರುದ್ಧ ೦-೧ ಗೋಲಿನಿಂದ ಅರ್ಜೆಂಟೀನಾ ಸೋಲನುಭವಿಸಿತ್ತು. ಇನ್ನುಳಿದಂತೆ ೧೨ರಲ್ಲಿ ಗೆಲುವು ಮತ್ತು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ
 • ಅರ್ಜೆಂಟೀನಾ ಪರ ಆಡಿದ ಕಳೆದ ನಾಲ್ಕು ಆವೃತ್ತಿಗಳಲ್ಲಿಯೂ ಗೋಲು ದಾಖಲಿಸಿರುವ ಸರ್ಗಿಯೊ ಅಗ್ಯುರೊ
 • ವಿಶ್ವಕಪ್ ಫೈನಲ್ಸ್‌ಗಳಲ್ಲಿ ಮೆಸ್ಸಿಯ ೨೧ ಶಾಟ್‌ಗಳು ಗೋಲು ರಹಿತವಾಗಿವೆ
 • ಆದರೆ, ಕಳೆದೆರಡು ವರ್ಷಗಳಲ್ಲಿ ಅರ್ಜೆಂಟೀನಾ ಪರ ಆಡಿದ ೧೭ ಪಂದ್ಯಗಳಲ್ಲಿ ೧೪ ಗೋಲು ಬಾರಿಸಿದ್ದಾರೆ. (ಈಕ್ವೆಡಾರ್ ಮತ್ತು ಹೈಟಿ ವಿರುದ್ಧದ ಹ್ಯಾಟ್ರಿಕ್ ಸೇರಿದ) ಇದರಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ದಾಖಲಿಸಿದ ಆರು ಗೋಲುಗಳು ಸೇರಿವೆ.

ಕ್ರೊವೇಷಿಯಾ ಇತಿ ಮಿತಿ ಏನು-ಎತ್ತ?

ಇದನ್ನೂ ಓದಿ : ಫಿಫಾ ವಿಶ್ವಕಪ್ | ಮೆಸ್ಸಿ ಪೆನಾಲ್ಟಿ ಮಿಸ್‌ನಲ್ಲಿ ಅರ್ಜೆಂಟೀನಾ ಕೈಜಾರಿದ ಜಯ
 • ಒಂದೊಮ್ಮೆ ಅರ್ಜೆಂಟೀನಾ ವಿರುದ್ಧವೂ ಕ್ರೊವೇಷಿಯಾ ಗೆಲುವು ಸಾಧಿಸಿದ್ದೇ ಆದಲ್ಲಿ ೧೯೯೮ರ ನಂತರದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸತತ ಎರಡು ಗೆಲುವು ಸಾಧಿಸಿದ ಗರಿಮೆಗೆ ಕ್ರೊವೇಷಿಯಾ ಭಾಜನವಾಗುತ್ತದೆ
 • ವಿಶ್ವಕಪ್‌ನ ಗುಂಪು ಹಂತದಲ್ಲಿ ಇದುವರೆಗೆ ಮೂರು ಗೆಲುವು ಮತ್ತು ಒಂದು ಡ್ರಾ ಸಾಧಿಸಿರುವ ಕ್ರೊವೇಷಿಯಾ ಎರಡನೇ ಪಂದ್ಯದಲ್ಲಿ ಸೋತ ನಿದರ್ಶನವೇ ಇಲ್ಲ. ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೋಲು ಬಿಟ್ಟುಕೊಟ್ಟಿರುವ ಅದು, ಪ್ರಭುತ್ವ ಮೆರೆದಿದೆ. ಅಂದಹಾಗೆ, ಇಟಲಿ ವಿರುದ್ಧ ೨೦೦೨ರಲ್ಲಿ ೨-೧ ಗೋಲಿನಿಂದ ಕ್ರೊವೇಷಿಯಾ ಗೆದ್ದಿತ್ತು
 • ದಕ್ಷಿಣ ಅಮೆರಿಕನ್ನರ ವಿರುದ್ಧ ನಡೆದಿರುವ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿಯೂ ಕ್ರೊವೇಷಿಯಾ ಸೋಲಿನ ತಿವಿತಕ್ಕೆ ಗುರಿಯಾಗಿದೆ. ಬ್ರೆಜಿಲ್ ವಿರುದ್ಧ ಮೂರು ಪಂದ್ಯಗಳಲ್ಲಿ ಸೋತಿದ್ದರೆ, ಅರ್ಜೆಂಟೀನಾ ವಿರುದ್ಧ ಒಂದು ಪಂದ್ಯದಲ್ಲಿ ಕ್ರೊವೇಷಿಯಾ ಮುಗ್ಗರಿಸಿದೆ
 • ಮೊದಲ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ೨-೦ ಗೋಲುಗಳಿಂದ ಕ್ರೊವೇಷಿಯಾ ಜಯ ಸಾಧಿಸಿದೆಯಾದರೂ, ೯೨ನೇ ನಿಮಿಷದವರೆಗೆ ( ಲುಕಾ ಮಾಡ್ರಿಕ್ ೭೧ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಪಡೆದಿದ್ದನ್ನು ಹೊರತುಪಡಿಸಿ) ತಂಡದ ಯಾವೊಬ್ಬ ಆಟಗಾರನೂ ಗುರಿಯತ್ತ ಚೆಂಡನ್ನು ದಾಟಿಸುವ ಯತ್ನ ಮಾಡಿರಲಿಲ್ಲ.

ಪಂಡಿತರ ಲೆಕ್ಕಾಚಾರ?

Modric #coratia 2 ~0 #nigeria

A post shared by davidi (@makinisport) on

 • ಅರ್ಜೆಂಟೀನಾ ಹಾಗೂ ಕ್ರೊವೇಷಿಯಾ ನಡುವಣದ ಪಂದ್ಯದ ಕುರಿತು ಫುಟ್ಬಾಲ್ ಪಂಡಿತರು ತಮ್ಮದೇ ವ್ಯಾಖ್ಯಾನ ಮಾಡಿದ್ದಾರೆ. ಅರ್ಜೆಂಟೀನಾ, ಶೇ. ೭೩ರಷ್ಟು ಮುಂದಿನ ಹಂತಕ್ಕೆ ಪ್ರವೇಶ ಪಡೆಯತ್ತದೆಂದು ಗ್ರೇಸ್‌ನೋಟ್ ಸ್ಪೋರ್ಟ್ಸ್ ಪರಿಭಾವಿಸಿದೆ.

ಸಂಭವನೀಯ ಇಲೆವೆನ್

ಅರ್ಜೆಂಟೀನಾ: ಕ್ಯಾಬೆಲ್ಲೆರೊ, ಸಾಲ್ವಿಯೊ, ಒಟಾಮೆಂಡಿ, ರೊಜೊ, ಟಗ್ಲಿಯೊಫಿಕೊ, ಮೆಜಾ, ಮಸ್ಕೆರೇನೊ, ಮೆಸ್ಸಿ, ಬಿಗಿಲಾ, ಪವೊನ್ ಮತ್ತು ಅಗ್ಯುರೊ.

ಕ್ರೊವೇಷಿಯಾ ಇಲೆವೆನ್: ಸುಬಾಸಿಕ್, ವ್ರಸಾಲ್ಕೊ, ಲಾವ್ರೆನ್, ವಿಡಾ, ಸ್ಟ್ರಿನಿಕ್, ರಕಿಟಿಕ್, ಮಾಡ್ರಿಕ್, ರೆಬಿಕ್, ಕ್ರಮಾರಿಕ್, ಪೆರಿಸಿಕ್ ಮತ್ತು ಮಾಂಡ್‌ಜುಕಿಕ್

ದಿನಾಂಕ: ಜೂನ್ ೨೧ | ಪಂದ್ಯ ಆರಂಭ: ರಾತ್ರಿ ೧೧.೩೦ | ಗುಂಪು: ಡಿ | ಸ್ಥಳ: ನಿಝ್ನಿ ನೊವೊಗೊರದ್ ಕ್ರೀಡಾಂಗಣ | ನೇರಪ್ರಸಾರ: ಸೋನಿ ನೆಟ್ವರ್ಕ್

ಬೆಟ್ಟಿಂಗ್ ಲೆಕ್ಕಾಚಾರ!

 • ಲಯೋನೆಲ್ ಮೆಸ್ಸಿ ಗೋಲಿನ ಸಾಧ್ಯತೆ: ೧೬/೫
 • ಅರ್ಜೆಂಟೀನಾ ಗೆಲುವು: ೨-೧: ೧೭/೨
 • ೧-೧ ಡ್ರಾ: ೧೧/೨
 • ಕ್ರೊವೇಷಿಯಾ ಗೆಲುವು: ೨-೦: ೧೮/೧
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More