ಫಿಫಾ ವಿಶ್ವಕಪ್ | ಕೊರಿಯನ್ನರ ಕಂಗಳಲ್ಲಿ ನೀರಾಡಿಸಿದ ಜೇವಿಯರ್ ಅರ್ಧಶತಕ!

ಪ್ರೀಕ್ವಾರ್ಟರ್‌ಫೈನಲ್ ಕನಸಿನಲ್ಲಿದ್ದ ಕೊರಿಯನ್ನರ ಕಂಗಳಲ್ಲಿ ನೀರಾಡಿತು. ಜೇವಿಯರ್ ಹೆರ್ನಾಂಡೆಸ್ ಬಾರಿಸಿದ ಗೋಲು ಕೊರಿಯನ್ನರ ಆಸೆ ಆಕಾಂಕ್ಷೆಗಳ ಮೇಲೆ ಸವಾರಿ ಮಾಡಿತು. ೨-೧ ಗೋಲುಗಳಿಂದ ವಿಜೃಂಭಿಸಿದ ಮೆಕ್ಸಿಕೊ, ಹದಿನಾರರ ಘಟ್ಟದತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿತು

ಬಿಟ್ಟೂಬಿಡದೆ ಹೋರಾಡಿದ ಸನ್ ಹೆಯುಂಗ್ ಮಿನ್, ಹೆಚ್ಚುವರಿ ಸಮಯದಲ್ಲಿ ದಕ್ಷಿಣ ಕೊರಿಯನ್ನರಿಗೆ ಗೋಲು ತಂದುಕೊಟ್ಟರಾದರೂ ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಸನ್ ದಾಖಲಿಸಿದ ಗೋಲು ಕೊರಿಯನ್ನರ ಹೋರಾಟಕ್ಕೆ ಸಾಕ್ಷಿಯಾಯಿತೇ ವಿನಾ ಪಂದ್ಯದ ಗೆಲುವಿಗೆ ನೆರವಾಗಲಿಲ್ಲ. ಇತ್ತ, ಮೊದಲಾರ್ಧದಲ್ಲಿ ಪೆನಾಲ್ಟಿ ಗೋಲಿನೊಂದಿಗೆ ೧-೦ ಮುನ್ನಡೆ ಸಾಧಿಸಿದ್ದ ಮೆಕ್ಸಿಕೋಗೆ, ಜೇವಿಯರ್ ಬಾರಿಸಿದ ಗೋಲು ವಿಜಯಮಾಲೆ ತೊಡಿಸಿತು.

ಶನಿವಾರ (ಜೂ.೨೪) ರೊಸ್ತೊವ್ ಅರೇನಾದಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ ಮನಮೋಹಕ ಆಟದೊಂದಿಗೆ ವಿಜೃಂಭಿಸಿತು. ೨೬ನೇ ನಿಮಿಷದಲ್ಲಿ ಕಾರ್ಲೋಸ್ ವೆಲಾ ಪೆನಾಲ್ಟಿ ಗೋಲು ದೊರಕಿಸಿಕೊಟ್ಟು ತಂಡಕ್ಕೆ ಆರಂಭದಲ್ಲೇ ಮುನ್ನಡೆ ಒದಗಿಸಿದರೆ, ೬೬ನೇ ನಿಮಿಷದಲ್ಲಿ ಜೇವಿಯರ್ ಗೋಲು ಬಾರಿಸಿದರು. ಇನ್ನು, ಕೊನೆಯವರೆಗೂ ಗೋಲಿಗಾಗಿ ಹೋರಾಡಿದ ದಕ್ಷಿಣ ಕೊರಿಯನ್ನರ ಪರ ಸನ್ ಹ್ಯೂಂಗ್ ಮಿನ್ ೯೦+೩ನೇ ನಿಮಿಷದಲ್ಲಿ ಗೋಲು ಹೊಡೆದರು.

Todos estamos orgullosos de ti! 🇲🇽 follow @somosdemexico . . 📸 @annavalen

A post shared by Somos De Mexico (@somosdemexico) on

ರಾಷ್ಟ್ರೀಯ ತಂಡದ ಪರ ಆಡಿದ ೧೦೪ನೇ ಪಂದ್ಯದಲ್ಲಿ ೫೦ನೇ ಗೋಲು ಹೊಡೆಯುವುರೊಂದಿಗೆ ಜೇವಿಯರ್ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಈ ಗೆಲುವಿನೊಂದಿಗೆ ಮೆಕ್ಸಿಕೊ, ಗುಂಪಿನಲ್ಲಿ ೬ ಪಾಯಿಂಟ್ಸ್ ಕಲೆಹಾಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಜರ್ಮನ್ನರ ವಿರುದ್ಧ ಮಿಂಚು ಹರಿಸಿದ್ದ ಮೆಕ್ಸಿಕನ್ನರು ಇದೀಗ ಗುಂಪು ಹಂತದಲ್ಲಿ ಅಜೇಯ ಗುರಿಯನ್ನು ಹೊತ್ತಿದ್ದಾರೆ.

ಹೊರಬೀಳುವ ಭೀತಿಯಲ್ಲಿ ಕೊರಿಯಾ

ಮೊದಲ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಪೆನಾಲ್ಟಿ ಗೋಲಿನೊಂದಿಗೆ ಹಿನ್ನಡೆ ಅನುಭವಿಸಿದ್ದ ದಕ್ಷಿಣ ಕೊರಿಯಾ, ಈ ಪಂದ್ಯದಲ್ಲಿ ಗೆದ್ದಿದ್ದರೆ ಪ್ರೀಕ್ವಾರ್ಟರ್‌ಫೈನಲ್ ತಲುಪುವ ಅವಕಾಶ ಇರುತ್ತಿತ್ತು. ಆದರೆ, ಮೆಕ್ಸಿಕನ್ನರ ಆಕ್ರಮಣಕಾರಿ ಆಟದಿಂದ ಕಂಗೆಟ್ಟುಹೋದ ಕೊರಿಯಾ, ಟೂರ್ನಿಯಲ್ಲಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವುದು ಬಹುತೇಕ ದುಸ್ತರವೆನಿಸಿದೆ. ರಷ್ಯಾ ಆವೃತ್ತಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆಯನ್ನೇ ತೆರೆಯದ ಅದೀಗ ಅದೃಷ್ಟದ ಬೆನ್ನುಬಿದ್ದಿದೆ.

ಮನಮೋಹಕ ಮೆಕ್ಸಿಕೊ

KOR Vs MEX Rusia 2018

A post shared by Jazmín Gómez (@jazuka01) on

ಇದನ್ನೂ ಓದಿ : ಹದಿನಾರರ ಘಟ್ಟಕ್ಕೆ ಬೆಲ್ಜಿಯಂ ಕೊಂಡೊಯ್ದ ಲುಕಾಕು-ಹಜಾರ್ಡ್ ಡಬಲ್ ಗೋಲು

ಸರಿಸುಮಾರು ೩೫ ಡಿಗ್ರಿ ಉಷ್ಣಾಂಶದಿಂದ ಕೂಡಿದ್ದ ವಾತಾವರಣದಲ್ಲಿ ಮೆಕ್ಸಿಕೊ ಅತ್ಯಂತ ಶಿಸ್ತು ಹಾಗೂ ಯೋಜನಾಬದ್ಧ ಆಟದೊಂದಿಗೆ ಸತತ ಎರಡನೇ ಗೆಲುವು ಕಂಡಿತು. ಮಿಡ್‌ಫೀಲ್ಡ್‌ನಲ್ಲಿನ ಚಲನಶೀಲತೆ, ನಿಖರ ಆಟದೊಂದಿಗೆ ಅತ್ಯದ್ಭುತ ಆಕ್ರಮಣಕಾರಿ ಆಟದಿಂದ ಮೆಕ್ಸಿಕೊ ಆಟ ಮನಮುಟ್ಟುವಂತಿತ್ತು. ಅದರಲ್ಲೂ, ಜರ್ಮನ್ ವಿರುದ್ಧದ ಪಂದ್ಯದಲ್ಲಿ ಹೀರೋ ಆಗಿದ್ದ ಹಿರ್ವಿಂಗ್ ಲೊಜೊನೊ ಅಂತೂ ಮತ್ತೊಮ್ಮೆ ಅಪೂರ್ವ ಆಟದಿಂದ ತಂಡದಲ್ಲಿ ಹುರುಪು ತುಂಬಿದರು.

ಇಷ್ಟಾದರೂ, ಪೆನಾಲ್ಟಿ ಗೋಲಿನ ಅವಕಾಶಕ್ಕೂ ಮುನ್ನ ಮೆಕ್ಸಿಕೊ ವಿರುದ್ಧ ಗೋಲು ಗಳಿಸುವ ಬಹುಪಾಲು ಅವಕಾಶಗಳನ್ನು ದಕ್ಷಿಣ ಕೊರಿಯಾ ಸೃಷ್ಟಿಸಿತ್ತು. ಬ್ಯಾಕ್ ಪೋಸ್ಟ್‌ನಿಂದ ಲೀ ಯಂಗ್ ಗೋಲು ಬಾರಿಸುವ ಹುನ್ನಾರವನ್ನು ಲೊಜಾನೊ ಅದ್ಭುತವಾಗಿ ತಡೆದು ಮೆಕ್ಸಿಕೊವನ್ನು ರಕ್ಷಿಸಿದರು. ಆದರೆ, ೨೬ನೇ ನಿಮಿಷದಲ್ಲಿ ಕಾರ್ಲೊಸ್ ವೆಲಾ, ಪೆನಾಲ್ಟಿ ಗೋಲಿನೊಂದಿಗೆ ಕೊರಿಯಾ ಗೋಲಿಯನ್ನು ವಂಚಿಸಿದರು. ಜರ್ಮನಿ ವಿರುದ್ಧದ ಗೆಲುವಿನೊಂದಿಗೇ ತನ್ನ ಅಜ್ಜನ ಸಾವಿನ ಸುದ್ದಿ ಕೇಳಿದ್ದ ಸೆಲಾ, ಈ ದುಃಖದ ವೇಳೆಯಲ್ಲಿಯೂ ವಿಚಲಿತನಾಗದೆ ರಾಷ್ಟ್ರಕ್ಕೆ ಗೋಲು ತಂದುಕೊಟ್ಟರು.

ಕಳೆಗುಂದಿದ ಸನ್!

ಮೊದಲಾರ್ಧದಲ್ಲಿ ದಕ್ಷಿಣ ಕೊರಿಯಾ ಪರ ಆರು ಶಾಟ್‌ಗಳಲ್ಲಿ ಗೋಲು ತಂದುಕೊಡಲು ಯತ್ನಿಸಿದ ಸನ್ ಪ್ರಯತ್ನ ವ್ಯರ್ಥವಾಯಿತು. ಹೀಗಾಗಿ, ದ್ವಿತೀಯಾರ್ಧದಲ್ಲಿ ಸಮಬಲ ಸಾಧಿಸಲು ಅವರನ್ನೂ ಒಳಗೊಂಡಂತೆ ಕೊರಿಯಾ ಆಟಗಾರರು ಮೇಲಿಂದ ಮೇಲೆ ಪ್ರಯತ್ನ ನಡೆಸುತ್ತಲೇ ಸಾಗಿದರಾದರೂ, ಬಲಾಢ್ಯ ಮೆಕ್ಸಿಕೋ ರಕ್ಷಣಾವ್ಯೂಹವನ್ನು ಭೇದಿಸುವುದು ದುಃಸಾಧ್ಯವಾಯಿತು.

ಇತ್ತ, ಸಹ ಆಟಗಾರ ಲೊಜೊನೊ ನೆರವಿನಿಂದ ಹೆರ್ನಾಂಡೆಸ್ ಮೆಕ್ಸಿಕೊದ ಎರಡನೇ ಗೋಲು ಬಾರಿಸುತ್ತಿದ್ದಂತೆ ಕೊರಿಯನ್ನರ ಮೊಗವೂ ಕಪ್ಪಿಟ್ಟಿತು. ಪಟ್ಟುಬಿಡದೆ ಹೋರಾಡಿದ ಸನ್, ಕೊನೆಗೂ ಗೋಲೊಂದನ್ನು ಹೊಡೆದರಾದರೂ, ಉಕ್ಕಿಬರುತ್ತಿದ್ದ ಕಂಬನಿಯನ್ನು ಅವರಿಂದ ತಡೆಯಲಾಗಲಿಲ್ಲ.

ಮುಖ್ಯಾಂಶಗಳು

  • ೨೦೦೨ರ ವಿಶ್ವಕಪ್ ಆವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಮೆಕ್ಸಿಕನ್ನರು ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಒಂದರ ಹಿಂದೊಂದರಂತೆ ಎರಡು ಜಯ ದಾಖಲಿಸಿದರು
  • ಕಳೆದ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಸೋಲಿನ ತಿವಿತಕ್ಕೆ ಒಳಗಾದ ಕೊರಿಯನ್ನರು. ೧೯೮೬ರಿಂದ ೧೯೯೦ರವರೆಗಿನ ಅವಧಿಯಲ್ಲಿಯೂ ಕೊರಿಯನ್ನರು ನಾಲ್ಕು ಪಂದ್ಯಗಳನ್ನು ಕೈಚೆಲ್ಲಿದ್ದರು
  • ವಿಶ್ವಕಪ್‌ನಲ್ಲಿ ಮೆಕ್ಸಿಕೊ ೧೦ ಪೆನಾಲ್ಟಿ ಗೋಲುಗಳನ್ನು ದಾಖಲಿಸಿದೆ. ವಿಶ್ವಕಪ್ ಇತಿಹಾಸದಲ್ಲಿ, ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ಮಾತ್ರ ಇದಕ್ಕಿಂತಲೂ ಹೆಚ್ಚಿನ ಪೆನಾಲ್ಟಿ ಗೋಲುಗಳ ದಾಖಲೆ ಹೊಂದಿವೆ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More