ಪರದಾಡಿದ ಪನಾಮ ವಿರುದ್ಧ ಪಾರಮ್ಯ ಮೆರೆದ ಆಂಗ್ಲರು ಪ್ರೀಕ್ವಾರ್ಟರ್‌ಗೆ

ನಾಯಕ ಹ್ಯಾರಿ ಕೇನ್ ದಾಖಲಿಸಿದ ಹ್ಯಾಟ್ರಿಕ್ ಗೋಲಿನೊಂದಿಗೆ ಇಂಗ್ಲೆಂಡ್, ರಷ್ಯಾ ಆವೃತ್ತಿಯ ಇಪ್ಪತ್ತೊಂದನೇ ವಿಶ್ವಕಪ್‌ನಲ್ಲಿ ಬೃಹತ್ ಗೆಲುವು ದಾಖಲಿಸಿದೆ. ೬-೧ ಗೋಲುಗಳ ಈ ಗೆಲುವಿನೊಂದಿಗೆ ಆಂಗ್ಲರು ಹದಿನಾರರ ಘಟ್ಟಕ್ಕೆ ಧಾವಿಸಿದರೆ, ಪನಾಮ ಸೋಲಿನ ಸುಳಿಗೆ ಸಿಲುಕಿತು

ಇಂಥದ್ದೊಂದು ಗೆಲುವನ್ನು ಬಹುಶಃ ಇಂಗ್ಲೆಂಡ್ ಕೂಡ ನಿರೀಕ್ಷಿಸಿರಲಿಲ್ಲವೇನೋ. ಆದರೆ, ಪನಾಮದಂಥ ದುರ್ಬಲ ತಂಡದೆದುರು ಆಂಗ್ಲರ ಆರ್ಭಟ ನಿರೀಕ್ಷೆಗೂ ಮೀರಿದಂತೆ ಭೋರ್ಗರೆಯಿತು. ಗರೆತ್ ಸೌತ್‌ಗೇಟ್ ಮಾರ್ಗದರ್ಶನದ ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಸತತ ಒಂದರ ಹಿಂದೊಂದರಂತೆ ಎರಡು ಗೆಲುವು ಸಾಧಿಸಲು ಹ್ಯಾರಿ ಕೇನ್ ನಿರ್ವಹಿಸಿದ ಪಾತ್ರ ಮನೋಜ್ಞವಾದುದು. ಮೊದಲ ಪಂದ್ಯದಲ್ಲಿ ಎರಡು ಗೋಲು ದಾಖಲಿಸಿದ್ದ ಹ್ಯಾರಿ ಇದೀಗ ಹ್ಯಾಟ್ರಿಕ್ ಗೋಲಿನೊಂದಿಗೆ ಮಿಂಚು ಹರಿಸಿದ್ದಾರೆ.

ಭಾನುವಾರ ನಿಝ್ನಿ ನೊವ್‌ಗೊರೊದ್ ಕ್ರೀಡಾಂಗಣದಲ್ಲಿ ನಡೆದ ಜಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಸಂಪೂರ್ಣ ಪ್ರಭುತ್ವ ಮೆರೆಯಿತು. ಇಂಗ್ಲೆಂಡ್ ಪರ ಪಂದ್ಯದ ೨೨ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಹೊಡೆಯುವುದರೊಂದಿಗೆ ಹ್ಯಾಟ್ರಿಕ್‌ಗೆ ಮುನ್ನುಡಿ ಬರೆದ ಹ್ಯಾರಿ ಕೇನ್, ಆನಂತರದಲ್ಲಿ ೪೫+೧ನೇ ನಿಮಿಷದಲ್ಲಿ ಮತ್ತು ೬೨ನೇ ನಿಮಿಷದಲ್ಲಿ ಇನ್ನೆರಡು ಗೋಲುಗಳನ್ನು ದಾಖಲಿಸಿದರು. ಇನ್ನುಳಿದಂತೆ ಜಾನ್ ಸ್ಟೋನ್ಸ್ (೮ನೇ ನಿ.) ಜೆಸ್ಸಿ ಲಿಂಗಾರ್ಡ್ (೩೬ನೇ ನಿ.) ಜೆ ಸ್ಟೋನ್ಸ್ ೪೦ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪನಾಮ ಪರ ೭೮ನೇ ನಿಮಿಷದಲ್ಲಿ ಫೆಲಿಪಿ ಬಲೋಯ್ ಏಕಾಂಗಿ ಗೋಲು ದಾಖಲಿಸಿದರು.

ರೊನಾಲ್ಡೊ ಜೊತೆ ಸೇರಿದ ಹ್ಯಾರಿ

ಪಂದ್ಯ ಶುರುವಾದ ಆರಂಭದಿಂದಲೂ ಇಂಗ್ಲೆಂಡ್ ಬಿರುಸಿನ ಆಟದಿಂದ ಮೈದಾನದಲ್ಲಿ ಆರ್ಭಟಿಸಿತು. ಕೇವಲ ೮ ನಿಮಿಷದಲ್ಲೇ ಗೋಲಿನ ಖಾತೆ ತೆರೆದ ಅದು, ಆನಂತರದಲ್ಲಿ ಒಂದರ ಹಿಂದೊಂದರಂತೆ ಸತತ ಐದು ಗೋಲುಗಳನ್ನು ದಾಖಲಿಸಿತು. ವಿರಾಮಕ್ಕೂ ಮುಂಚೆಯೇ ಜಾನ್ ಸ್ಟೋನ್ಸ್ ಮತ್ತು ಹ್ಯಾರಿ ಕೇನ್ ತಲಾ ಎರಡೆರಡು ಗೋಲುಗಳನ್ನು ಬಾರಿಸಿ ಪನಾಮದ ಆತ್ಮಸ್ಥೈರ್ಯವನ್ನು ಹೊಸಕಿಹಾಕಿದರು.

ಏತನ್ಮಧ್ಯೆ, ವಿರಾಮದ ಹೊತ್ತಿನಲ್ಲೇ ಹ್ಯಾರಿ ಮತ್ತೊಂದು ಪೆನಾಲ್ಟಿ ಗೋಲು ದಾಖಲಿಸುವುದರೊಂದಿಗೆ ಇಂಗ್ಲೆಂಡ್ ೫-೦ ಮುನ್ನಡೆ ಪಡೆಯಿತು. ಹಂತ ಹಂತಕ್ಕೂ ಪನಾಮ ರಕ್ಷಣಾ ವ್ಯೂಹವನ್ನು ಭೇದಿಸುತ್ತಾ ಮುನ್ನಡೆದ ಅದು, ತನ್ನ ಗೆಲುವನ್ನು ಖಚಿತಪಡಿಸಿಕೊಂಡಿತು.

ಇನ್ನು, ವಿರಾಮದ ನಂತರದಲ್ಲಿಯೂ ಇಂಗ್ಲೆಂಡ್‌ಗೆ ಮತ್ತೊಂದು ಗೋಲು ತಂದುಕೊಡುವುದರ ಮೂಲಕ ಹ್ಯಾರಿ ಹ್ಯಾಟ್ರಿಕ್ ಸಾಧನೆ ಮೆರೆದರು. ಅದರೊಂದಿಗೆ ಪೋಲೆಂಡ್ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ ಸ್ಪೇನ್ ವಿರುದ್ಧ ದಾಖಲಿಸಿದ ಮೂರು ಗೋಲುಗಳ ಸಾಧನೆಯನ್ನು ಸರಿಗಟ್ಟಿದರು.

ರಾಷ್ಟ್ರೀಯ ತಂಡದ ಅಭೂತಪೂರ್ವ ಗೆಲುವಿನಲ್ಲಿ ಸಂಭ್ರಮಿಸಿದ ಇಂಗ್ಲೆಂಡ್ ಯುವತಿಯರು
ಇದನ್ನೂ ಓದಿ : ಸ್ಪೇನ್ ಪೆಟ್ಟಿನಿಂದ ಪೋರ್ಚುಗಲ್ ಪಾರು ಮಾಡಿದ ಪವರ್‌ಫುಲ್ ರೊನಾಲ್ಡೊ

ಮುಖ್ಯಾಂಶಗಳು

  • ೧೯೮೨ ಮತ್ತು ೨೦೦೬ರ ಎರಡೂ ಆವೃತ್ತಿಗಳಲ್ಲಿ ಗುಂಪು ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಮತ್ತದೇ ಸಾಧನೆ ಮೆರೆದಿದೆ
  • ವಿಶ್ವಕಪ್ ಹಾಗೂ ಯೂರೋಪಿಯನ್ ಚಾಂಪಿಯನ್‌ಶಿಪ್‌ನಂಥ ಪ್ರಧಾನ ಟೂರ್ನಿಗಳಲ್ಲಿ ಇಂಗ್ಲೆಂಡ್ ದಾಖಲಿಸಿದ ಬಹುದೊಡ್ಡ ಗೆಲುವಿದು
  • ವಿಶ್ವಕಪ್‌ನಲ್ಲಿ ತಂಡವೊಂದು ಪ್ರಥಮಾರ್ಧದಲ್ಲೇ ಐದು ಗೋಲುಗಳನ್ನು ದಾಖಲಿಸಿದ್ದು ಐದನೇ ಬಾರಿ. ೨೦೧೪ರ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜರ್ಮನಿ, ಬ್ರೆಜಿಲ್ ವಿರುದ್ಧ ಇಂಥದ್ದೇ ಸಾಧನೆ ಮೆರೆದಿತ್ತು
  • ಹ್ಯಾಟ್ರಿಕ್ ಗೋಲಿನೊಂದಿಗೆ ಮಿಂಚಿದ ಹ್ಯಾರಿ, ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೂರನೇ ಫುಟ್ಬಾಲ್ ಪಟುವೆನಿಸಿದರು.
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More