ಫ್ರೆಂಚರ ಆಕ್ರಮಣಕಾರಿ ಆಟದಲ್ಲಿ ಕರಗಿದ ಉರುಗ್ವೆ ಸೆಮಿಫೈನಲ್ ಕನಸು

ಯುವ ಆಟಗಾರ ಆ್ಯಂಟನಿ ಗ್ರೀಜ್‌ಮನ್ ಚಾಣಾಕ್ಷ ಆಟದಲ್ಲಿ ಉರುಗ್ವೆ ವಿಶ್ವಕಪ್ ಗೆಲುವಿನ ಓಟಕ್ಕೆ ತಡೆಬಿದ್ದಿತು. ಶುಕ್ರವಾರ (ಜು.೬) ನಡೆದ ಫಿಫಾ ವಿಶ್ವಕಪ್‌ನ ಮೊದಲ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಉರುಗ್ವೆಯನ್ನು ೨-೦ ಗೋಲುಗಳಿಂದ ಹಣಿದ ಫ್ರಾನ್ಸ್, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು

ರಫಾಯೆಲ್ ಆಕರ್ಷಕ ಹೆಡರ್ ನಂತರ ಆ್ಯಂಟನಿ ಗ್ರೀಜ್‌ಮನ್ ಎಡಗಾಲಿನ ಶಕ್ತಿಶಾಲಿ ಕಿಕ್‌ನಲ್ಲಿ ಉರುಗ್ವೆಯ ವಿಶ್ವಕಪ್ ಕನಸು ಕಮರಿಹೋಯಿತು. ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ತಲಾ ಒಂದೊಂದು ಗೋಲು ಹೊಡೆದ ಫ್ರೆಂಚರು, ದಕ್ಷಿಣ ಅಮೆರಿಕನ್ನರಿಗೆ ಆಘಾತಕಾರಿ ಸೋಲುಣಿಸಿ ೨೦೧೮ರ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದ ಮೊದಲ ತಂಡವೆನಿಸಿಕೊಂಡಿತು.

ಶುಕ್ರವಾರ (ಜುಲೈ ೬) ನಿಝ್ನಿ ನೊವ್‌ಗೊರೊದ್ ಕ್ರೀಡಾಂಗಣದಲ್ಲಿ ನಡೆದ ೨೧ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯ ಮೊದಲ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್ ಪರ ರಫಾಯೆಲ್ ವರಾನೆ (೪೦ನೇ ನಿ.) ಮತ್ತು ಗ್ರೀಜ್‌ಮನ್ (೬೧ನೇ ನಿ.) ಗೋಲು ದಾಖಲಿಸಿ ಉರುಗ್ವೆ ಪಾಲಿಗೆ ಉರುಳಾದರು. ಈ ಗೆಲುವಿನೊಂದಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಫ್ರೆಂಚರು, ಉರುಗ್ವೆ ವಿರುದ್ಧ ೫೨ ವರ್ಷಗಳ ಬಳಿಕ ಬಹುದೊಡ್ಡ ಗೆಲುವು ಪಡೆಯಿತು.

ಈ ಗೆಲುವಿನೊಂದಿಗೆ ಫ್ರಾನ್ಸ್, ಆರನೇ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ನಾಲ್ಕರ ಘಟ್ಟ ತಲುಪಿದ ಸಾಧನೆ ಮಾಡಿತು. ೧೯೯೮ ಮತ್ತು ೨೦೦೬ರಲ್ಲಿ ಫೈನಲ್ ತಲುಪಿದ್ದ ಫ್ರಾನ್ಸ್ ಇದೀಗ, ತಡರಾತ್ರಿ ಬ್ರೆಜಿಲ್ ಹಾಗೂ ಬೆಲ್ಜಿಯಂ ನಡುವಣ ನಡೆಯಲಿರುವ ಎರಡನೇ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಗೆದ್ದ ತಂಡದೊಟ್ಟಿಗೆ ಸೆಮಿಫೈನಲ್‌ನಲ್ಲಿ ಸೆಣಸಲಿದೆ.

ಉರುಗ್ವೆ ಕಳಾಹೀನ ಆಟ

ಫ್ರೆಂಚರಿಗೆ ಹೋಲಿಸಿದರೆ, ಉರುಗ್ವೆ ಆಟ ಅತ್ಯಂತ ಕಳಾಹೀನವಾಗಿತ್ತು. ಅದರಲ್ಲೂ ಗ್ರೀಜ್‌ಮನ್ ಫ್ರಾನ್ಸ್ ಪರ ಎರಡನೇ ಗೋಲು ಗಳಿಸುತ್ತಿದ್ದಂತೆ ಉರುಗ್ವೆ ಪಾಳೆಯದಲ್ಲಿ ಹೋರಾಡುವ ಕಸುವೇ ಕಳೆದುಹೋದಂತಾಗಿತ್ತು. ಚೆಂಡಿನ ಮೇಲೆ ಫ್ರಾನ್ಸ್ ಶೇ. ೬೨ರಷ್ಟು ಹಿಡಿತ ಸಾಧಿಸಿದರೆ, ಉರುಗ್ವೆಯ ಹಿಡಿತ ಶೇ. ೩೨ರಷ್ಟಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಸ್ಟಾರ್ ಆಟಗಾರ ಲೂಯಿಸ್ ಸ್ವಾರೆಜ್ ಬಗೆ ಬಗೆಯಲ್ಲಿ ಹೋರಾಡಿದರಾದರೂ, ಅವರಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದು ಉರುಗ್ವೆಯ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಪಂದ್ಯ ಶುರುವಾದ ಆರಂಭದಲ್ಲಿ ಇತ್ತಂಡಗಳಿಂದಲೂ ಗೋಲಿಗಾಗಿ ತೀವ್ರತರ ಸೆಣಸಾಟ ಕಂಡುಬಂತು. ಪರಸ್ಪರರ ಗೋಲು ಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡು ಎರಡೂ ತಂಡದ ಆಟಗಾರರು ಗೋಲಿಗಾಗಿ ನಡೆಸಿದ ಹೋರಾಟಕ್ಕೆ ಫಲ ಸಿಗಲಿಲ್ಲ. ಇನ್ನೇನು ವಿರಾಮಕ್ಕೆ ಐದು ನಿಮಿಷಗಳಿವೆ ಎನ್ನುವಾಗ ಉರುಗ್ವೆ ಸ್ವತಃ ಫ್ರಾನ್ಸ್‌ಗೆ ಗೋಲಿನ ಅವಕಾಶದ ಬಾಗಿಲು ತೆರೆದುಕೊಟ್ಟಿತು.

Someone isn’t a fan of Mbappe...

A post shared by The Hub Of Football ⚽️📲 (@thefootballist_) on

೩೮ನೇ ನಿಮಿಷದಲ್ಲಿ ಉರುಗ್ವೆ ಆಟಗಾರ ಬೆಂಟಾನ್‌ಕರ್, ಟೊಲಿಸ್ಸೊ ಅವರನ್ನು ಕೆಳಬೀಳಿಸಲಾಗಿ ಫ್ರಾನ್ಸ್‌ಗೆ ಫ್ರೀ ಕಿಕ್ ಅವಕಾಶ ದೊರೆಯಿತು. ಗ್ರೀಜ್‌ಮನ್ ತಿರುವಿನಿಂದ ಸಮಯ ನೋಡಿ ಕಿಕ್ ಮಾಡಿದ ಚೆಂಡನ್ನು ಉರುಗ್ವೆ ಗೋಲುಪೆಟ್ಟಿಗೆಯ ಎದುರುಗಡೆಯೇ ಉರುಗ್ವೆ ಆಟಗಾರರೊಂದಿಗೆ ಹೊಂಚುಹಾಕಿ ನಿಂತಿದ್ದ ರಫಾಯೆಲ್ ಒಡನೆಯೇ ಜಿಗಿದು ಚೆಂಡನ್ನು ಆಕರ್ಷಕ ಹೆಡರ್‌ನೊಂದಿಗೆ ಗುರಿಮುಟ್ಟಿಸಿದರು. ಉರುಗ್ವೆ ಗೋಲಿ ಫೆರ್ನಾಂಡೊ ಮುಸ್ಲೆರಾ ಚೆಂಡನ್ನು ತಡೆದರಾದರೂ, ಅದು ಅವರ ಕೈ ಸವರಿಕೊಂಡೇ ನೆಟ್‌ಗೆ ಬಡಿಯಿತು.

ಗ್ರೀಜ್‌ಮನ್ ಮಿಂಚು

ಇದನ್ನೂ ಓದಿ : ಫಿಫಾ ವಿಶ್ವಕಪ್ | ಕ್ವಾರ್ಟರ್‌ಫೈನಲ್ ಕದನದಲ್ಲಿ ಕಳೆದುಹೋಗುವವರು ಯಾರು?

ವಿರಾಮದ ಹೊತ್ತಿಗೆ ೦-೧ ಗೋಲಿನ ಹಿನ್ನಡೆ ಅನುಭವಿಸಿದ ಉರುಗ್ವೆ ಆತ್ಮಸ್ಥೈರ್ಯ ಅರ್ಧ ಕುಸಿದಂತೆ ಕಂಡುಬಂತು. ಆದರೆ, ಮೊದಲಾರ್ಧದಲ್ಲಿ ದಾಖಲಿಸಿದ ಗೋಲಿನಿಂದ ಫ್ರೆಂಚರ ಪಾಳೆಯದಲ್ಲಿ ಸಹಜವಾಗಿಯೇ ಆತ್ಮವಿಶ್ವಾಸ ಗರಿಗೆದರಿತು. ಇನ್ನು, ವಿರಾಮದ ಬಳಿಕ ಕೆಲವೇ ನಿಮಿಷಗಳಲ್ಲಿ ಫ್ರಾನ್ಸ್‌ಗೆ ಮತ್ತೊಂದು ಗೋಲು ದೊರಕಿಸಿಕೊಟ್ಟ ಗ್ರೀಜ್‌ಮನ್ ಉರುಗ್ವೆ ಆಟಗಾರರಲ್ಲಿ ಆಘಾತ ತಂದರು.

ಸಹ ಆಟಗಾರ ಟೊಲಿಸ್ಸೊ ಅವರಿಂದ ಪಾಸ್ ಪಡೆದ ಚೆಂಡನ್ನು ಹಿಡಿತಕ್ಕೆ ಪಡೆದ ಗ್ರೀಜ್‌ಮನ್, ಗೋಲುಪೆಟ್ಟಿಗೆಗೆ ಸಾಕಷ್ಟು ದೂರದಿಂದ ಎಡಗಾಲಿನಿಂದ ಬಾರಿಸಿದ ಚೆಂಡು ಗೋಲುಪೆಟ್ಟಿಗೆಯತ್ತ ಚಿಮ್ಮುತ್ತಾ ಬಂದ ಚೆಂಡನ್ನು ಉರುಗ್ವೆ ಗೋಲಿ ಮುಸ್ಲೆರಾ ತಡೆಯಲು ಯತ್ನಿಸಿದರೂ, ಮತ್ತೊಮ್ಮೆ ಅವರು ಚೆಂಡನ್ನು ಹಿಡಿತಕ್ಕೆ ಪಡೆಯಲು ವಿಫಲವಾದರು. ಅವರ ಕೈಗಳನ್ನು ತಾಗಿದ ಚೆಂಡು ನೆಟ್‌ಗೆ ಬಡಿಯುತ್ತಲೇ ಫ್ರಾನ್ಸ್ ೨-೦ ಮುನ್ನಡೆ ಪಡೆಯಿತು. ಅಲ್ಲಿಂದಾಚೆಗೆ ಗೋಲು ಬಾರಿಸಲು ಉರುಗ್ವೆ ಎಷ್ಟೋ ಬಗೆಯಲ್ಲಿ ಯತ್ನಿಸಿದರೂ, ಫ್ರಾನ್ಸ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಮುಖ್ಯಾಂಶಗಳು

  • ಈ ಹಿಂದಿನ ಎಂಟು ಮುಖಾಮುಖಿಗಳಲ್ಲಿ ಉರುಗ್ವೆ ವಿರುದ್ಧ ಕೇವಲ ಒಂದೇ ಒಂದು ಪಂದ್ಯ ಗೆದ್ದಿದ್ದ ಫ್ರಾನ್ಸ್. ಉಳಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದ ಅದು ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು
  • ವಿಶ್ವಕಪ್ ಪಂದ್ಯಾವಳಿಯಲ್ಲಂತೂ ಫ್ರಾನ್ಸ್ ಎದುರು ಅಜೇಯ ಓಟ ಕಾಯ್ದುಕೊಂಡಿದ್ದ ಉರುಗ್ವೆ. ೧೯೬೬ರಲ್ಲಿ ೨-೧ರಿಂದ ಗೆದ್ದಿದ್ದ ಉರುಗ್ವೆ, ೨೦೦೨ ಮತ್ತು ೨೦೧೦ರಲ್ಲಿ ೦-೦ ಡ್ರಾ ಸಾಧಿಸಿತ್ತು
  • ಕಳೆದ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ ದಕ್ಷಿಣ ಅಮೆರಿಕನ್ನರ ಎದುರು ಐದರಲ್ಲಿ ಗೆಲುವು ಇನ್ನುಳಿದ ನಾಲ್ಕರಲ್ಲಿ ಡ್ರಾ ಸಾಧಿಸಿದ್ದ ಫ್ರಾನ್ಸ್ ಅಜೇಯವಾಗಿತ್ತು
  • ಮೊದಲು ಗೋಲು ಬಿಟ್ಟುಕೊಟ್ಟ ಬಳಿಕ ವಿಶ್ವಕಪ್‌ನ ೧೬ ಪಂದ್ಯಗಳಲ್ಲಿ ಉರುಗ್ವೆ ಗೆಲುವು ಸಾಧಿಸಿಲ್ಲ ಎಂಬುದು ಗಮನೀಯ. ಹದಿಮೂರು ಪಂದ್ಯಗಳಲ್ಲಿ ಸೋತಿರುವ ಅದು, ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More