ಏಕದಿನ ಸರಣಿಗೆ ತಂಡ ಪ್ರಕಟ; ಗಾಯಾಳು ಬುಮ್ರಾ ಬದಲಿಗೆ ಶಾರ್ದೂಲ್‌ಗೆ ಸ್ಥಾನ

ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯಾಳುವಾಗಿದ್ದು, ಈಗಾಗಲೇ ಇಂಗ್ಲೆಂಡ್ ವಿರುದ್ಧದ ೩ ಟಿ೨೦ ಪಂದ್ಯ ಸರಣಿಯಿಂದ ಹೊರಬಿದ್ದಿದ್ದಾರೆ. ಏಕದಿನ ಪಂದ್ಯ ಸರಣಿಗೂ ಅವರು ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್‌ಗೆ ಆಯ್ಕೆ ಸಮಿತಿ ಅವಕಾಶ ಕಲ್ಪಿಸಿದೆ

ಇದೇ ತಿಂಗಳು ೧೨ರಿಂದ ಇಂಗ್ಲೆಂಡ್ ವಿರುದ್ಧ ಶುರುವಾಗಲಿರುವ ಮೂರು ಏಕದಿನ ಪಂದ್ಯ ಸರಣಿಗೂ ಭಾರತ ತಂಡದ ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಮುಂಬೈನ ಮತ್ತೋರ್ವ ವೇಗಿ ಶಾರ್ದೂಲ್ ಠಾಕೂರ್‌ಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸಕ್ತ ನಡೆಯುತ್ತಿರುವ ಮೂರು ಟಿ೨೦ ಪಂದ್ಯ ಸರಣಿಯಿಂದಲೂ ಬುಮ್ರಾ ವಂಚಿತರಾಗಿದ್ದಾರೆ. ಈ ಸರಣಿಗೂ ಮುನ್ನ ಡಬ್ಲಿನ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡು ಚುಟುಕು ಪಂದ್ಯ ಸರಣಿಯ ಮೊದಲ ಪಂದ್ಯದ ವೇಳೆ ಬುಮ್ರಾ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಭಾರತಕ್ಕೆ ಮರಳುವ ಮುನ್ನ ಅವರು, ಕಳೆದ ಬುಧವಾರದಂದು ಲೀಡ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿದ್ದು, ಅವರೀಗ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

“ಅಖಿಲ ಭಾರತ ಕ್ರಿಕೆಟ್ ಆಯ್ಕೆಸಮಿತಿಯು ಗಾಯಾಳು ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಶಾರ್ದೂಲ್ ಠಾಕೂರ್‌ಗೆ ಸ್ಥಾನ ಕಲ್ಪಿಸಿದೆ,’’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದಹಾಗೆ, ಬುಮ್ರಾ ಪುನಶ್ಚೇತನ ಶಿಬಿರದಲ್ಲಿ ದೈಹಿಕ ಫಿಟ್ನೆಸ್ ಗಳಿಸಲು ಇನ್ನಷ್ಟು ಸಮಯ ಹಿಡಿಯುವುದರಿಂದ ಬಹುತೇಕ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೂ ಅಲಭ್ಯರಾಗುವ ಸಂಭವವಿದೆ.

ಇದನ್ನೂ ಓದಿ : ತಿರುಗೇಟಿನ ಲೆಕ್ಕಾಚಾರದಲ್ಲಿರುವ ಆಂಗ್ಲರ ವಿರುದ್ಧ ಟಿ20 ಸರಣಿ ಜಯದ ಕಾತರ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಏಕದಿನ ಪಂದ್ಯಗಳ ಪೈಕಿ ಮೊದಲ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಜು.೧೨ರಂದು ನಡೆಯಲಿದ್ದರೆ, ಎರಡನೇ ಪಂದ್ಯ ಲಂಡನ್‌ನಲ್ಲಿ ಜು.೧೪ರಂದು ಜರುಗಲಿದೆ. ಮೂರನೇ ಹಾಗೂ ಕೊನೇ ಪಂದ್ಯವು ಜು.೧೭ರಂದು ಲೀಡ್ಸ್‌ನಲ್ಲಿ ಜರುಗಲಿದೆ. ಇನ್ನು, ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಆ.೧ರಿಂದ ಆರಂಭವಾಗಲಿದೆ.

ಏಕದಿನ ತಂಡ ಇಂತಿದೆ

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸುರೇಶ್ ರೈನಾ, ಎಂ ಎಸ್ ಧೋನಿ (ವಿಕೆಟ್‌ ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್ ಹಾಗೂ ಉಮೇಶ್ ಯಾದವ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More