ವಿಂಬಲ್ಡನ್ | ನಡಾಲ್, ಜೊಕೊ ತೃತೀಯ ಸುತ್ತಿಗೆ; ಸಿಲಿಕ್‌ಗೆ ಸೋಲಿನ ಆಘಾತ

ವರ್ಷದ ಮೂರನೇ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ವಿಂಬಲ್ಡನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಮರಿನ್ ಸಿಲಿಕ್ ಹೋರಾಟಕ್ಕೆ ತೆರೆಬಿದ್ದಿದ್ದು, ಅವರು ದ್ವಿತೀಯ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಇತ್ತ, ರಾಫೆಲ್ ನಡಾಲ್, ಜೊಕೊವಿಚ್ ಹಾಗೂ ಪೊಟ್ರೊ ತೃತೀಯ ಸುತ್ತಿಗೆ ಧಾವಿಸಿದ್ದಾರೆ

ವಿಶ್ವದ ನಂ.೧ ಆಟಗಾರ ರಾಫೆಲ್ ನಡಾಲ್ ಹಾಗೂ ಮಾಜಿ ಚಾಂಪಿಯನ್ ನೊವಾಕ್ ಜೊಕೊವಿಚ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಮುನ್ನಡೆದರು. ಆದರೆ, ಕಳೆದ ಸಾಲಿನ ರನ್ನರ್‌ಅಪ್ ಮರಿನ್ ಸಿಲಿಕ್ ಎರಡನೇ ಸುತ್ತಿನ ಪಂದ್ಯದಲ್ಲೇ ಸೋತು ಅಚ್ಚರಿ ಫಲಿತಾಂಶದೊಂದಿಗೆ ಟೂರ್ನಿಯಿಂದ ಹೊರನಡೆದರು. ಮೂರನೇ ಶ್ರೇಯಾಂಕಿತ ಸಿಲಿಕ್ ನಿರ್ಗಮನ ವಿಂಬಲ್ಡನ್ ಪಂದ್ಯಾವಳಿಯ ನಾಲ್ಕನೇ ದಿನದ ಪ್ರಮುಖ ಅಚ್ಚರಿಗಳಲ್ಲೊಂದು.

ಗುರುವಾರ (ಜು.೫) ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕಜಕ್‌ಸ್ತಾನದ ಮಿಖಾಯಿಲ್ ಕುಕುಶ್ಕಿನ್ ವಿರುದ್ಧ ನಡಾಲ್ ೬-೪, ೬-೩, ೬-೪ ನೇರ ಸೆಟ್‌ಗಳಲ್ಲಿ ಜಯಿಸಿದರು. ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಅಲೆಕ್ಸ್ ಡಿ ಮಿನೌರ್ ವಿರುದ್ಧ ಸೆಣಸಲಿದ್ದಾರೆ. ಅಂತೆಯೇ, ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಚ್, ಎಡಗಾಲಿಗೆ ಚಿಕಿತ್ಸೆ ಪಡೆದು ಗೆಲುವು ಪಡೆದರು.

ಅಂದಹಾಗೆ, ೨೦೦೮, ೨೦೧೦ರ ಚಾಂಪಿಯನ್ ನಡಾಲ್‌ಗೆ ಕಜಕ್ ಆಟಗಾರ ಕುಕುಶ್ಕಿನ್ ದಿಟ್ಟ ಪೈಪೋಟಿಯನ್ನೇ ಒಡ್ಡಿದರು. ತನ್ನ ಪತ್ನಿಯಿಂದಲೇ ಕೋಚಿಂಗ್ ಪಡೆಯುತ್ತಿರುವ ಕುಕುಶ್ಕಿನ್, ಪಂದ್ಯದಲ್ಲಿನ ೧೩ ಬ್ರೇಕ್ ಪಾಯಿಂಟ್ಸ್‌ಗಳಲ್ಲಿ ಕೇವಲ ಎರಡನ್ನಷ್ಟೇ ಬಿಟ್ಟುಕೊಟ್ಟರು. “ನಿಜವಾಗಿಯೂ, ಈ ಪಂದ್ಯ ಕಠಿಣವಾಗಿತ್ತು. ಹುಲ್ಲುಹಾಸಿನ ಟೂರ್ನಿಗಳಲ್ಲಿ ಚೆಂಡು ಹೆಚ್ಚು ಪುಟಿಯುವುದಿಲ್ಲ. ಕುಕುಶ್ಕಿನ್ ದಿಟ್ಟ ಪೈಪೋಟಿ ಒಡ್ಡಿದರು. ನಿಜವಾಗಿಯೂ ಇದು ಒಳ್ಳೆಯ ಪರೀಕ್ಷೆಯಾಗಿತ್ತು,’’ ಎಂದು ೧೮ನೇ ಗ್ರಾಂಡ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ನಡಾಲ್ ಪಂದ್ಯದ ಬಳಿಕ ತಿಳಿಸಿದರು.

ಫೆಡರರ್‌ ಹಾದಿ ಸುಗಮ?

ಕ್ರೊವೇಷ್ಯಾ ಆಟಗಾರ ಮರಿನ್ ಸಿಲಿಕ್ ನಿರ್ಗಮನವು ೨೧ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಜರ್ ಫೆಡರರ್‌ ಹಾದಿಯನ್ನು ಸುಮಗಗೊಳಿಸಿದಂತೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಅರ್ಜೆಂಟೀನಾ ಆಟಗಾರ ಗ್ಯುಡೊ ಪೆಲ್ಲಾ ಎದುರು ಮೊದಲ ಎರಡು ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ ಹೊರತಾಗಿಯೂ, ಆನಂತರ ಎಚ್ಚರ ತಪ್ಪಿದ ಸಿಲಿಕ್ ವಿರುದ್ಧ ವಿಶ್ವದ ೮೨ನೇ ಶ್ರೇಯಾಂಕಿತ ಪೆಲ್ಲಾ, ೩-೬, ೧-೬, ೬-೪, ೭-೬ (೭/೩) ಮತ್ತು ೭-೫ ಸೆಟ್‌ಗಳಲ್ಲಿ ಜಯಿಸಿದರು.

ಒಂದೊಮ್ಮೆ ಈ ಪಂದ್ಯದಲ್ಲಿ ಸಿಲಿಕ್ ಜಯ ಕಂಡಿದ್ದೇ ಆಗಿದ್ದಲ್ಲಿ, ಸೆಮಿಫೈನಲ್‌ನಲ್ಲಿ ಸ್ವಿಸ್ ಮಾಸ್ಟರ್ ಫೆಡರರ್, ಸಿಲಿಕ್ ವಿರುದ್ಧ ಸೆಣಸಬೇಕಿರುತ್ತಿತ್ತು. ಸಿಲಿಕ್ ಅಪಾಯಕಾರಿ ಆಟಗಾರನಾಗಿರುವ ಹಿನ್ನೆಲೆಯಲ್ಲಿ ಅವರ ನಿರ್ಗಮನವು ಫೆಡರರ್‌ಗೆ ವರವಾಗಿದೆ ಎಂದು ಹೇಳಲಾಗಿದೆ.

ಜೊಕೊವಿಚ್ ಗೆಲುವು

ಕೋರ್ಟ್ ಎರಡರಲ್ಲಿ ನಡೆದ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಜೊಕೊವಿಚ್, ಅರ್ಜೆಂಟೀನಾ ಆಟಗಾರ ಹೊರಾಸಿಯೊ ಜೆಬಲಾಸ್ ಎದುರು ೬-೧, ೬-೨, ೬-೩ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಸತತ ೧೦ನೇ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಧಾವಿಸಿರುವ ಜೊಕೊವಿಚ್, ಮುಂದಿನ ಹಂತದಲ್ಲಿ ಬ್ರಿಟನ್‌ನ ಕೈಲ್ ಎಡ್ಮುಂಡ್ ವಿರುದ್ಧ ಕಾದಾಡಲಿದ್ದಾರೆ.

ಜೆಬಲಾಸ್ ವಿರುದ್ಧದ ಗೆಲುವಿನೊಂದಿಗೆ ಜೊಕೊವಿಚ್ ವಿಂಬಲ್ಡನ್‌ನಲ್ಲಿ ೬೦ನೇ ಗೆಲುವು ದಾಖಲಿಸಿದರು. ಓಪನ್ ಯುಗದಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಐದನೇ ಟೆನಿಸಿಗ ಎನಿಸಿಕೊಂಡರು. ೩೩ರ ಹರೆಯದ ಪ್ರತಿಸ್ಪರ್ಧಿಯ ವಿರುದ್ಧ ೧೫ ಏಸ್ ಮತ್ತು ೩೧ ವಿನ್ನರ್‌ಗಳಿಂದ ಮಿಂಚು ಹರಿಸಿದ ಜೊಕೊವಿಚ್, ಹೆಚ್ಚು ಪ್ರಯಾಸವಿಲ್ಲದೆಯೇ ಜಯಶಾಲಿಯಾದರು.

ವಾವ್ರಿಂಕಾ ಪರಾಭವ

ಪುರುಷರ ದ್ವಿತೀಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಕೂಡ ಸೋಲಿನ ಸುಳಿಗೆ ಸಿಲುಕಿದರು. ಆರನೇ ಶ್ರೇಯಾಂಕಿತ ಆಟಗಾರ ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ವಿರುದ್ಧದ ಹಣಾಹಣಿಯಲ್ಲಿ ಅವರನ್ನು, ೭-೬ (೯/೭), ೬-೩, ೭-೬ (೮/೬) ಸೆಟ್‌ಗಳಿಂದ ಗ್ರಿಗೊರ್ ಮಣಿಸಿ ತೃತೀಯ ಸುತ್ತಿಗೆ ಅರ್ಹತೆ ಪಡೆದರು.

ವಾವ್ರಿಂಕಾ ವಿರುದ್ಧದ ಗೆಲುವಿನೊಂದಿಗೆ ವಿಶ್ವದ ೧೩೩ನೇ ಶ್ರೇಯಾಂಕಿತ ಆಟಗಾರ ಡಿಮಿಟ್ರೊವ್, ಇದೇ ಮೊದಲ ಬಾರಿಗೆ ಪ್ರಧಾನ ಪಂದ್ಯಾವಳಿಯೊಂದರಲ್ಲಿ ಮೂರನೇ ಸುತ್ತು ತಲುಪಿದ ಸಾಧನೆ ಮಾಡಿದರು. ಅಂದಹಾಗೆ, ಈ ಋತುವಿನಲ್ಲಿ ಎರಡನೇ ಬಾರಿಗೆ ಡಿಮಿಟ್ರೊವ್ ಈ ಸಾಧನೆ ಮಾಡಿದಂತಾಗಿದೆ. ಇನ್ನು, ಪುರುಷರ ವಿಭಾಗದ ಇನ್ನೆರಡು ಪ್ರತ್ಯೇಕ ಪಂದ್ಯಗಳಲ್ಲಿ ಅಮೆರಿಕ ಆಟಗಾರ ಜಾನ್ ಇಸ್ನೆರ್ ಮತ್ತು ಆಸ್ಟ್ರೆಲಿಯಾದ ನಿಕ್ ಕಿರ್ಗಿಯೋಸ್ ಗೆಲುವಿನ ಅಭಿಯಾನ ಮುಂದುವರೆಸಿದರು.

ಒಂಬತ್ತನೇ ಶ್ರೇಯಾಂಕಿತ ಆಟಗಾರ ಇಸ್ನೆರ್, ಬೆಲ್ಜಿಯಂನ ಅರ್ಹತಾ ಆಟಗಾರ ರೂಬೆನ್ ವಿರುದ್ಧ ೬-೧, ೬-೪, ೬-೭ (೬/೮), ೬-೭ (೩/೭) ಹಾಗೂ ೭-೫ರ ಐದು ಸೆಟ್‌ಗಳ ಆಟದಲ್ಲಿ ಗೆಲುವು ಪಡೆದರೆ, ಹದಿನೈದನೇ ಶ್ರೇಯಾಂಕಿತ ಕಿರ್ಗಿಯೋಸ್, ೬-೩, ೬-೪, ೭-೫ ನೇರ ಸೆಟ್‌ಗಳಿಂದ ಹಾಲೆಂಡ್‌ನ ರಾಬಿನ್ ಹಾಸೆ ವಿರುದ್ಧ ಗೆಲುವು ಪಡೆದರು..

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More