ವಿಂಬಲ್ಡನ್ | ಮುಗುರುಜಾ, ಬೌಚರ್ಡ್ ಔಟ್; ಹ್ಯಾಲೆಪ್-ಕೆರ್ಬರ್ ಗೆಲುವಿನ ಓಟ

ಹಾಲಿ ಚಾಂಪಿಯನ್ ಗಾರ್ಬೈನ್ ಮುಗುರುಜಾ ವಿಂಬಲ್ಡನ್ ಹೋರಾಟ ಅಂತ್ಯ ಕಂಡಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಹೊರಬಿದ್ದಿದ್ದಾರೆ. ಇತ್ತ, ೨೪ನೇ ಗ್ರಾಂಡ್‌ಸ್ಲಾಮ್‌ಗಾಗಿ ಹೋರಾಡುತ್ತಿರುವ ಸೆರೆನಾ ವಿಲಿಯಮ್ಸ್ ಜೊತೆಗೆ ಜರ್ಮನಿಯ ಏಂಜಲಿಕ್ ಕೆರ್ಬರ್ ಕೂಡ ೩ನೇ ಸುತ್ತಿಗೆ ಮುನ್ನಡೆದರು

ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ, ವಿಂಬಲ್ಡನ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿ ಬಿಕ್ಕಳಿಸಿದ್ದಾರೆ. ಸತತ ಎರಡನೇ ಪ್ರಶಸ್ತಿ ಅರಸಿ ವಿಂಬಲ್ಡನ್‌ಗೆ ಆಗಮಿಸಿದ್ದ ಹಾಲಿ ಚಾಂಪಿಯನ್‌ ಎರಡನೇ ಸುತ್ತಿನಲ್ಲೇ ನಿರ್ಗಮಿಸುವಂತೆ ಮಾಡಿದ್ದು ಬೆಲ್ಜಿಯನ್ ಆಟಗಾರ್ತಿ ಅಲಿಸನ್ ವಾನ್. ಮೂರು ಸೆಟ್‌ಗಳ ಕಾದಾಟದಲ್ಲಿ ದಿಟ್ಟ ಪೈಪೋಟಿ ನೀಡಿದ ಅಲಿಸನ್, ೫-೭, ೬-೨, ೬-೧ ಸೆಟ್‌ಗಳಿಂದ ಗೆಲುವು ಪಡೆದು ತೃತೀಯ ಸುತ್ತಿಗೆ ಧಾವಿಸಿದರು.

ಈ ಸೋಲಿನೊಂದಿಗೆ ಟೂರ್ನಿಯಲ್ಲಿದ್ದ ಟಾಪ್ ಟೆನ್ ಆಟಗಾರ್ತಿಯರ ಪೈಕಿ ಆರನೇ ಸ್ಪರ್ಧಿ ಕೇವಲ ದ್ವಿತೀಯ ಸುತ್ತಿನ ಪಂದ್ಯದಲ್ಲೇ ನಿರ್ಗಮಿಸಿದಂತಾಗಿದೆ. ಸದ್ಯ, ಅಗ್ರ ಕ್ರಮಾಂಕಿತ ಆಟಗಾರ್ತಿ ಸಿಮೋನಾ ಹ್ಯಾಲೆಪ್, ಏಳನೇ ಶ್ರೇಯಾಂಕಿತೆ ಕೆರೊಲಿನಾ ಪ್ಲಿಸ್ಕೋವಾ ಹಾಗೂ ೧೦ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಸ್ ವಿಂಬಲ್ಡನ್‌ನಲ್ಲಿ ಉಳಿದಿರುವ ಪ್ರಮುಖ ಆಟಗಾರ್ತಿಯರು.

“ನಾನೇನಾದರೂ ಜಾಗ್ರತೆ ವಹಿಸದೆಹೋದರೆ ಆಕೆ ಗೆಲುವು ಸಾಧಿಸುವುದು ಶತಃಸಿದ್ಧ ಎಂಬುದನ್ನು ಮನಗಂಡೆ. ಹೀಗಾಗಿ, ಪಟ್ಟು ಬಿಡದೆ ಹೋರಾಟ ಮಾಡಲು ನಿರ್ಧರಿಸಿದೆ,’’ ಎಂದು ೨೪ರ ಹರೆಯದ ಅಲಿಸನ್ ನುಡಿದರೆ, “ಮೇಲ್ನೋಟಕ್ಕೆ ನಾನು ಸಹಜವಾಗಿ ಇರುವಂತೆ ನಿಮಗೆ ಅನಿಸಬಹುದು. ಆದರೆ, ಒಳಗಡೆ ನಾನು ನರಳುತ್ತಿದ್ದೇನೆ. ಅಲಿಸನ್ ಶ್ರೇಷ್ಠ ಟೆನಿಸ್ ಆಡಿದರು. ಕೆಲವೊಂದು ಸಂದರ್ಭದಲ್ಲಿ ಆಕೆ ವಹಿಸಿದ ಧೈರ್ಯವನ್ನೂ ನಾನು ತಳೆಯಲಿಲ್ಲ,’’ ಎಂದು ಮುಗುರುಜಾ ನುಡಿದರು.

ಹ್ಯಾಲೆಪ್ ಮುನ್ನಡೆ

ವಿಶ್ವದ ನಂ.೧ ಮಹಿಳಾ ಟೆನಿಸ್ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಸತತ ಎರಡನೇ ಗೆಲುವಿನೊಂದಿಗೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಕಾಲಿಟ್ಟರು. ಗುರುವಾರ (ಜು.೫) ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಿ ಆಟಗಾರ್ತಿ ಝೆಂಗ್ ಸೈಸೈ ವಿರುದ್ಧ ೭-೫, ೬-೦ ನೇರ ಸೆಟ್‌ಗಳಲ್ಲಿ ಹ್ಯಾಲೆಪ್ ಗೆಲುವು ಸಾಧಿಸಿದರು. ವೃತ್ತಿಬದುಕಿನ ಎರಡನೇ ಗ್ರಾಂಡ್‌ಸ್ಲಾಮ್‌ಗಾಗಿ ಹೋರಾಡುತ್ತಿರುವ ರೊಮೇನಿಯಾ ಆಟಗಾರ್ತಿ ಹ್ಯಾಲೆಪ್, ಮುಂದಿನ ಸುತ್ತಿನಲ್ಲಿ ತೈವಾನ್ ಆಟಗಾರ್ತಿ ಹೀಹ್ ಸು ವೀ ವಿರುದ್ಧ ಸೆಣಸಲಿದ್ದಾರೆ.

೨೦೧೪ರ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಹೋರಾಟ ಮುಗಿಸಿದ್ದ ಹ್ಯಾಲೆಪ್, ಸದ್ಯ ಪ್ರಚಂಡ ಫಾರ್ಮ್‌ನಲ್ಲಿದ್ದು, ಸತತ ಎರಡನೇ ಗ್ರಾಂಡ್‌ಸ್ಲಾಮ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಪ್ಯಾರಿಸ್‌ನಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ವೃತ್ತಿಬದುಕಿನ ಮೊದಲ ಗ್ರಾಂಡ್‌ಸ್ಲಾಮ್ ಗೆದ್ದ ಹ್ಯಾಲೆಪ್, ಚೀನಿ ಆಟಗಾರ್ತಿಯ ವಿರುದ್ಧ ಆಕ್ರಮಣಕಾರಿ ಆಟದೊಂದಿಗೆ ಜಯಭೇರಿ ಬಾರಿಸಿದರು. ಮೊದಲ ಸೆಟ್‌ನಲ್ಲಿ ತುಸು ಪೈಪೋಟಿ ನೀಡಿದ ಝೆಂಗ್, ಎರಡನೇ ಸೆಟ್‌ನಲ್ಲಿ ಕಳಾಹೀನರಾದರು.

ಬೌಚರ್ಡ್ ನಿರ್ಗಮನ

ಇದನ್ನೂ ಓದಿ : ವೋಜ್ನಿಯಾಕಿಗೆ ಒಲಿದ ಆಸ್ಟ್ರೇಲಿಯಾ ಓಪನ್ ಗರಿ; ಫೈನಲ್‌ನಲ್ಲಿ ಮುಗ್ಗರಿಸಿದ ಹ್ಯಾಲೆಪ್

ಕೆನಡಾ ಆಟಗಾರ್ತಿ ಯುಜೇನಿ ಬೌಚರ್ಡ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದರು. ಕಳೆದ ಸಾಲಿನಲ್ಲಿ ಫೈನಲ್‌ವರೆಗೆ ಸಾಗಿದ್ದ ಬೌಚರ್ಡ್ ವಿರುದ್ಧ ಆಸ್ಟ್ರೇಲಿಯಾದ ನಂ ೧ ಆಟಗಾರ್ತಿ ಆ್ಯಶ್ಲೆ ಬಾರ್ಟಿ ೬-೪, ೭-೫ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ತೃತೀಯ ಸುತ್ತಿಗೆ ಮುನ್ನಡೆದರು. ಬಾರ್ಟಿಯ ದಿಟ್ಟ ಆಟದೆದುರು ಬೌಚರ್ಡ್ ಮಂಕಾದರು.

ಬಾರ್ಟಿಯಂತೆ ಬೌಚರ್ಡ್ ಕೂಡಾ ಜೂನಿಯರ್ ವಿಂಬಲ್ಡನ್ ಚಾಂಪಿಯನ್ ಆಗಿದ್ದರಾದರೂ, ಗುರುವಾರ ನಡೆದ ಪಂದ್ಯದಲ್ಲಿ ಬೌಚರ್ಡ್ ಸಹಜ ಆಟವಾಡಲು ವಿಫಲವಾದರು. ಒಂಬತ್ತು ಭರ್ಜರಿ ಏಸ್‌ಗಳನ್ನು ಸಿಡಿಸಿದ ಬಾರ್ಟಿ, ಎರಡನೇ ಸೆಟ್‌ನಲ್ಲಿ ಅನುಭವಿಸಿದ ಹಿನ್ನಡೆಯನ್ನಂತೂ ಪ್ರಬಲವಾಗಿ ಮೆಟ್ಟಿನಿಂತು ಬೌಚರ್ಡ್ ಹೋರಾಟಕ್ಕೆ ಕೊನೆಹಾಡಿದರು.

ಕೆರ್ಬರ್ ಗೆಲುವು

ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಏಂಜಲಿಕ್ ಕೆರ್ಬರ್, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರೆಸಿದ್ದಾರೆ. ಆದಾಗ್ಯೂ, ವನಿತೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನಲ್ಲಿ ಆಕೆ ಪ್ರಯಾಸದ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬೇಕಾಯಿತು. ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ಆನಂತರ ಪುಟಿದೆದ್ದ ಜರ್ಮನ್ ಆಟಗಾರ್ತಿ ಕೆರ್ಬರ್ ಜಯದ ನಗೆಬೀರಿದರು.

ಹನ್ನೊಂದನೇ ಶ್ರೇಯಾಂಕಿತೆ ಕೆರ್ಬರ್, ಅಮೆರಿಕದ ಅರ್ಹತಾ ಆಟಗಾರ್ತಿ ಕ್ಲಾರಿ ಲಿಯು ಒಡ್ಡಿದ ಕಠಿಣ ಪ್ರತಿರೋಧವನ್ನು ೩-೬, ೬-೨, ೬-೪ ಸೆಟ್‌ಗಳಲ್ಲಿ ಹತ್ತಿಕ್ಕಿ ಮುಂದಿನ ಸುತ್ತಿಗೆ ಧಾವಿಸಿದರು. ಕಳೆದ ವರ್ಷ ಇದೇ ವಿಂಬಲ್ಡನ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಹದಿನೆಂಟರ ಹರೆಯದ ಕ್ಲಾರಿ, ಪ್ರಸ್ತುತ ಟೂರ್ನಿಯಲ್ಲಿ ಆಡುತ್ತಿರುವ ಅತಿ ಕೆಳ ಕ್ರಮಾಂಕಿತ ಅಂದರೆ, ೨೩೭ನೇ ಶ್ರೇಯಾಂಕಿತೆ.

ಎರಡು ತಾಸುಗಳ ಸುದೀರ್ಘ ಹಣಾಹಣಿಯಲ್ಲಿ ಕ್ಲಾರಿ ತೀವ್ರತರ ಪೈಪೋಟಿ ನೀಡಿದರೂ, ಎರಡು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಕೆರ್ಬರ್ ಸವಾಲನ್ನು ಹತ್ತಿಕ್ಕಲು ವಿಫಲವಾದರು. ಮೊದಲ ಸೆಟ್‌ನ ಗೆಲುವು ತುಸು ಆತ್ಮವಿಶ್ವಾಸ ತಂದಿತಾದರೂ, ಆ ಬಳಿಕ ಕೆರ್ಬರ್ ಪ್ರಬಲವಾಗಿ ತಿರುಗಿಬಿದ್ದಿದ್ದರಿಂದ ಅನನುಭವಿ ಕ್ಲಾರಿ ಸೋಲೊಪ್ಪಿಕೊಂಡರು. ಮುಂದಿನ ಸುತ್ತಿನಲ್ಲೀಗ ಕೆರ್ಬರ್, ಜಪಾನ್‌ನ ನವೊಮಿ ಒಸಾಕ ವಿರುದ್ಧ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More