ಫಿಫಾ ವಿಶ್ವಕಪ್ ನಾಲ್ಕರ ಘಟ್ಟ; ಲುಜ್ನಿಕಿಯಲ್ಲಿ ಗೆಲುವಿನ ಲಕ್ ಯಾರದ್ದು?

ಎಂಬತ್ತು ಸಾವಿರ ಪ್ರೇಕ್ಷಕ ಸಾಮರ್ಥ್ಯದ ಲುಜ್ನಿಕಿ ಕ್ರೀಡಾಂಗಣ ಜು.೧೫ರಂದು ನಡೆಯಲಿರುವ ಫೈನಲ್‌ಗೂ ಮುನ್ನ ಮತ್ತೊಂದು ಮಹತ್ವಪೂರ್ಣ ಪಂದ್ಯಕ್ಕೆ ಅಣಿಯಾಗಿದೆ. ಬುಧವಾರ (ಜು.೧೧) ಇಂಗ್ಲೆಂಡ್ ಹಾಗೂ ಕ್ರೊವೇಷ್ಯಾ ನಡುವಣದ ಎರಡನೇ ಸೆಮಿಫೈನಲ್‌ಗೆ ಈ ಅಂಗಣ ಸರ್ವಸನ್ನದ್ಧವಾಗಿದೆ

ಡಿ ಗುಂಪಿನಲ್ಲಿದ್ದ ಕ್ರೊವೇಷ್ಯಾ ಆಕರ್ಷಕ ಆಟದಿಂದ ಗಮನ ಸೆಳೆದಿದೆ. ಮುಖ್ಯವಾಗಿ, ಅರ್ಜೆಂಟೀನಾ ವಿರುದ್ಧದ ೩-೦ ಅಂತರದ ಗೆಲುವು ಇಡೀ ಟೂರ್ನಿಯ ಪ್ರಮುಖ ಪಂದ್ಯಗಳಲ್ಲಿ ಒಂದು. ಇನ್ನು, ನೈಜೀರಿಯಾ ವಿರುದ್ಧ ಸುಲಭ ಗೆಲುವು ಸಾಧಿಸಿದ ಕ್ರೊವೇಷ್ಯಾ, ಐಸ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ೨-೧ರಿಂದ ಮಿಂಚಿತ್ತಲ್ಲದೆ, ೯ ಪಾಯಿಂಟ್ಸ್‌ಗಳೊಂದಿಗೆ ನಾಕೌಟ್‌ಗೆ ಲಗ್ಗೆ ಹಾಕಿತ್ತು. ಇನ್ನು, ನಾಕೌಟ್ ಹಂತದಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿದ್ದ ಅದು, ಡೆನ್ಮಾರ್ಕ್ (೩-೨) ಹಾಗೂ ರಷ್ಯಾ ವಿರುದ್ಧ (೪-೩) ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೃಂಭಿಸಿತ್ತು.

ಜಿ ಗುಂಪಿನಲ್ಲಿದ್ದ ಇಂಗ್ಲೆಂಡ್, ಕೊನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ೦-೧ ಗೋಲಿನ ಹಿನ್ನಡೆಯಿಂದ ಗುಂಪಿನಲ್ಲಿ ಎರಡನೇ ತಂಡವಾಗಿ ನಾಕೌಟ್‌ಗೆ ತಲುಪಿತು. ಇದಕ್ಕೂ ಮುನ್ನ, ಟ್ಯುನಿಷಿಯಾ ವಿರುದ್ಧ ೨-೧ ಮತ್ತು ಪನಾಮ ವಿರುದ್ಧ ೬-೧ ಗೋಲುಗಳಿಂದ ಇಂಗ್ಲೆಂಡ್ ಭರ್ಜರಿ ಗೆಲುವು ಪಡೆದಿತ್ತು. ಇನ್ನು, ನಾಕೌಟ್ ಹಂತದಲ್ಲಿ ಮೊದಲಿಗೆ, ಕೊಲಂಬಿಯಾ ವಿರುದ್ಧ ೧-೧ ಗೋಲಿನ ಸಮಬಲ ಸಾಧಿಸಿದ ತ್ರೀ ಲಯನ್ಸ್, ಪೆನಾಲ್ಟಿ ಶೂಟೌಟ್‌ನಲ್ಲಿ ೪-೩ರಿಂದ ಗೆದ್ದಿತ್ತು. ಅಂತೆಯೇ, ಕ್ವಾರ್ಟರ್‌ಫೈನಲ್‌ನಲ್ಲಿ ೨-೦ ಗೋಲುಗಳಿಂದ ಸ್ವೀಡಿಷರಿಗೆ ಕಹಿ ಉಣಿಸಿತ್ತು.

ಕ್ರೊವೇಷ್ಯಾ ಇತಿಹಾಸ

ಡೆವೊರ್ ಸುಕೆರ್, ಜ್ವೊನೊಮಿರ್ ಬೊಬಾನ್ ಹಾಗೂ ಸ್ಲಾವೆನ್ ಬಿಲಿಕ್‌ರಂಥ ಪ್ರತಿಭಾನ್ವಿತ ಆಟಗಾರರ ಅಪೂರ್ವ ಆಟದಲ್ಲಿ ೨೦ ವರ್ಷಗಳ ಹಿಂದೆ ಕ್ರೊವೇಷ್ಯಾ ಫಿಫಾ ವಿಶ್ವಕಪ್ ಪಂದ್ಯಾವಳಿಯ ಅಂತಿಮ ನಾಲ್ಕರ ಘಟ್ಟಕ್ಕೇರಿತ್ತು. ಅಂತಿಮ ಎಂಟರ ಘಟ್ಟದಲ್ಲಿ ಜರ್ಮನ್ನರನ್ನು ಮನೆಗೆ ಕಳುಹಿಸಿದ್ದ ಕ್ರೊವೇಷಿಯನ್ನರು, ಉಪಾಂತ್ಯದಲ್ಲಿ ಫ್ರೆಂಚರಿಗೆ ಮಂಡಿಯೂರಿದ್ದರು.

ಅಲ್ಲಿಂದ ಇಲ್ಲಿವರೆಗೆ ಕುಂಟುತ್ತ, ತೆವಳುತ್ತ ಹಲವಾರು ಏರಿಳಿತಗಳನ್ನು ಕಂಡಿರುವ ಕ್ರೊವೇಷಿಯನ್ನರು, ೨೦೦೨, ೨೦೦೬, ೨೦೧೪ರಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿದ್ದರು. ಇನ್ನು, ೨೦೧೦ರ ಆವೃತ್ತಿಗಂತೂ ಅರ್ಹತೆಯನ್ನೇ ಗಳಿಸಿರಲಿಲ್ಲ. ಆದರೆ, ಪ್ರಸ್ತುತ ತಂಡ ೯೦ರ ದಶಕದಾಚೆಗಿನ ಪ್ರಚಂಡ ತಂಡವೆನಿಸಿದೆ. ಆಂಗ್ಲರಿಗೆ ಸವಾಲಾಗಿರುವುದು ಇದುವೇ.

ಆಂಗ್ಲರ ಕತೆ ಏನು?

ಎರಡನೇ ಸೆಮಿಫೈನಲ್‌ನಲ್ಲಿ ಗೆಲ್ಲುವ ಫೇವರಿಟ್ ತಂಡವೆನಿಸಿರುವ ತ್ರೀ ಲಯನ್ಸ್ ಖ್ಯಾತಿಯ ಆಂಗ್ಲರು ಕೂಡ ಇತ್ತೀಚಿನ ದಿನಗಳಲ್ಲಿ ಅಬ್ಬರಿಸತೊಡಗಿದ್ದಾರೆ. ಸ್ಟೀವ್ ಮೆಕ್ಲಾರೆನ್ ಮ್ಯಾನೇಜರ್ ಆಗಿದ್ದ ವೇಳೆ ವೆಂಬ್ಲೆಯಲ್ಲಿ ನಡೆದಿದ್ದ ಇದೇ ಕ್ರೊವೇಷಿಯಾ ವಿರುದ್ಧ ೨-೩ ಗೋಲುಗಳಿಂದ ಸೋತಿದ್ದ ಇಂಗ್ಲೆಂಡ್, ೨೦೦೮ರ ಯೂರೋಪಿಯನ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸುವುದರಿಂದ ವಂಚಿತವಾಗಿತ್ತು.

ಆದರೆ, ಅಲ್ಲಿಂದಾಚೆಗಿನ ಆಂಗ್ಲರ ದಾಖಲೆ ಅಮೋಘವಾಗಿದೆ. ಕ್ರೊವೇಷ್ಯಾ ವಿರುದ್ಧ ೨೦೦೪ರ ಯೂರೋ ಕಪ್‌ನಲ್ಲಿ ಸೆಣಸಿದ್ದ ಇಂಗ್ಲೆಂಡ್ ಪರ ವೇಯ್ನ್ ರೂನಿ ಡಬಲ್ ಗೋಲಿನಲ್ಲಿ ಆಂಗ್ಲರು ೪-೨ ಗೆಲುವು ಸಾಧಿಸಿದ್ದರು. ಅಂತೆಯೇ, ೨೦೦೮ರ ಜಾಗ್ರೆಬ್‌ನಲ್ಲಿ ಥಿಯೋ ವಾಲ್ಕಟ್ ಹ್ಯಾಟ್ರಿಕ್‌ನಲ್ಲಿ ಇಂಗ್ಲೆಂಡ್ ೪-೧ರಿಂದ ವಿಜೃಂಭಿಸಿತ್ತು.

🏴󠁧󠁢󠁥󠁮󠁧󠁿 ENGLAND vs. CROATIA 🇭🇷 We’re so excited, we’ve got a semi! Third time lucky for our guess the score competition as we still haven’t had a correct guess 🤷‍♀️ Obviously it’s coming home but by how much? Tell us your prediction to win A FREE MONTH’S MEMBERSHIP! If you can correctly guess how many attempts Sterling will have without hitting the back of the net, we will throw in another free month! 😂 As you can see from our amazing editing skills, Luke did a great job of training Adam up on photoshop before he left us last week- NAILED IT 👍 #worldcup #worldcuppredictions #fitfam #anytimefitness #afchelmsford #englandvscroatia #like4follow #followforfollowback #semi #harrykane #itscominghome

A post shared by Anytime Fitness Chelmsford (@afchelmsford) on

ಇದನ್ನೂ ಓದಿ : ಫಿಫಾ ಸ್ಪೆಷಲ್ | ಇಂಗ್ಲೆಂಡ್ ವಿಶ್ವಕಪ್ ಗೆದ್ದಾಯ್ತು, ಲೆಟ್ ಅಸ್ ಸೆಲೆಬ್ರೇಟ್!

ಇಂಗ್ಲೆಂಡ್‌ನ ತ್ರಿ ಸ್ಟಾರ್!

ನಾಯಕ ಹ್ಯಾರಿ ಕೇನ್ ಅಪೂರ್ವ ಆಟ ಈ ಬಾರಿಯ ವಿಶ್ವಕಪ್‌ನಲ್ಲಿ ಅನಾವರಣಗೊಂಡಿದೆ. ಇದುವರೆಗೆ ೬ ಗೋಲುಗಳನ್ನು ಹೊಡೆದಿರುವ ಅವರು, ಗೋಲ್ಡನ್ ಬೂಟ್ ರೇಸ್‌ನಲ್ಲಿರುವ ಮುಂಚೂಣಿಗ. ಪ್ರತಿಭಾನ್ವಿತ ಫಾರ್ವರ್ಡ್ ಆಟಗಾರ ಹ್ಯಾರಿ, ಎಲ್ಲ ವಿಧದ ಗೋಲುಗಳ ಗಳಿಕೆಯಲ್ಲಿಯೂ ನೈಪುಣ್ಯ ತೋರಿರುವಾತ. ೨೪ರ ಹರೆಯದ ಅವರು, ಇದುವರೆಗೆ ೨೮ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ೧೯ ಗೋಲುಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ಅವರು ೩೬೩ ನಿಮಿಷಗಳ ಕಾಲ ಮೈದಾನದಲ್ಲಿ ಸೆಣಸಿದ್ದಾರೆ.

ವಯಸ್ಸು: ೨೪ | ಆಡಿರುವ ಪಂದ್ಯ: ೪ | ಗಳಿಸಿರುವ ಗೋಲು: ೬ | ಆಡುವ ಸ್ಥಾನ: ಫಾರ್ವರ್ಡ್

ಡೆಲೆ ಅಲಿ

ಅತ್ಯದ್ಭುತ ಚಲನಶೀಲ ಪಾಸ್‌ಗಳಿಂದ ಗಮನ ಸೆಳೆದಿರುವ ೨೨ರ ಹರೆಯದ ಡೆಲೆ ಅಲಿ, ರಕ್ಷಣಾತ್ಮಕ ಆಟದಲ್ಲಿಯೂ ಗಮನ ಸೆಳೆದಿರುವಾತ. ಇದುವರೆಗೆ ೨೮ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಡೆಲೆ, ಮೂರು ಗೋಲುಗಳನ್ನು ದಾಖಲಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ೩ ಪಂದ್ಯಗಳನ್ನಾಡಿರುವ ಅವರು ೨೩೮ ನಿಮಿಷಗಳ ಕಾಲ ಮೈದಾನದಲ್ಲಿ ಹೋರಾಟ ನಡೆಸಿದ್ದಾರೆ. ಐದು ಬಾರಿ ಗೋಲಿಗಾಗಿ ಯತ್ನಿಸಿ, ಆಕರ್ಷಕ ಹೆಡರ್‌ನೊಂದಿಗೆ ಗೋಲಿನ ಖಾತೆಯನ್ನೂ ತೆರೆದಿರುವ ಡೆಲೆ, ಸೆಮಿಫೈನಲ್‌ನಲ್ಲೂ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ

ವಯಸ್ಸು: ೨೨ | ಆಡಿರುವ ಪಂದ್ಯ: ೩ | ಗಳಿಸಿರುವ ಗೋಲು: ೧ | ಆಡುವ ಸ್ಥಾನ: ಮಿಡ್‌ಫೀಲ್ಡರ್

ಗ್ಯಾರಿ ಕಾಹಿಲ್

ಪ್ರಸ್ತುತ ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರರಲ್ಲಿ ಒಬ್ಬರಾಗಿರುವ ೩೨ರ ಹರೆಯದ ಗ್ಯಾರಿ ಕಾಹಿಲ್ ಸಾಂಬಾ ನಾಡು ಬ್ರೆಜಿಲ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿಯೂ ಭಾಗವಹಿಸಿದ್ದರು. ೬೧ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು ಐದು ಗೋಲುಗಳನ್ನು ದಾಖಲಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿರುವ ಅವರು, ೯೦ ನಿಮಿಷಗಳ ಕಾಲ ಮೈದಾನದಲ್ಲಿದ್ದರು. ಯಾವುದೇ ಗೋಲು ಗಳಿಸದ ಅವರು ಇನ್ನಷ್ಟೇ ಖಾತೆ ತೆರೆಯಬೇಕಿದೆ.

ವಯಸ್ಸು: ೩೨ | ಆಡಿರುವ ಪಂದ್ಯ: ೧ | ಗಳಿಸಿರುವ ಗೋಲು: ೦ | ಆಡುವ ಸ್ಥಾನ: ಡಿಫೆಂಡರ್

ಕ್ರೊವೇಷ್ಯಾ ತ್ರಿಮೂರ್ತಿಗಳು

ಲೂಕಾ ಮಾಡ್ರಿಕ್

ವಿಶ್ವ ಶ್ರೇಷ್ಠ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾಗಿರುವ ಲೂಕಾ ಮಾಡ್ರಿಕ್ ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರರಲ್ಲಿ ಒಬ್ಬರು. ಕ್ರೊವೇಷ್ಯಾದ ಫಿಫಾ ವಿಶ್ವಕಪ್ ಫೈನಲ್ ಕನಸು ನನಸಾಗಲು ಇವರು ಸೆಮಿಫೈನಲ್‌ನಲ್ಲಿ ನೀಡಲಿರುವ ಪ್ರದರ್ಶನ ನಿರ್ಣಾಯಕವಾಗಲಿದೆ. ೩೨ರ ಹರೆಯದ ಲೂಕಾ, ಇಲ್ಲೀವರೆಗೆ ೧೧೧ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ೧೪ ಗೋಲುಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಐದು ಪಂದ್ಯಗಳನ್ನಾಡಿರುವ ಲೂಕಾ, ೪೮೫ ನಿಮಿಷಗಳ ಕಾಲ ಆಡಿದ್ದಾರೆ. ಒಂದು ಪೆನಾಲ್ಟಿ ಗೋಲು ಸೇರಿದಂತೆ ಒಟ್ಟು ೨ ಗೋಲುಗಳನ್ನು ದಾಖಲಿಸಿದ್ದಾರೆ.

ವಯಸ್ಸು: ೩೨ | ಆಡಿರುವ ಪಂದ್ಯ: ೫ | ಗಳಿಸಿರುವ ಗೋಲು: ೨ | ಆಡುವ ಸ್ಥಾನ: ಮಿಡ್‌ಫೀಲ್ಡರ್

ಇವಾನ್ ರಾಕಿಟಿಕ್

ಬಾರ್ಸಿಲೋನಾ ಮತ್ತು ಸೆವಿಲ್ಲಾ ಕ್ಲಬ್‌ ಪರ ಅತ್ಯಾಕರ್ಷಕ ಆಟವಾಡಿರುವ ೩೦ರ ಹರೆಯದ ಇವಾನ್ ರಾಕಿಟಿಕ್ ರಾಷ್ಟ್ರೀಯ ತಂಡದ ಪರ ಇಲ್ಲವೇ ಪ್ರಮುಖ ಪಂದ್ಯಾವಳಿಗಳಲ್ಲಿ ನಿರಾಸೆ ಅನುಭವಿಸಿರುವಾತ. ಸಹ ಆಟಗಾರ ಲೂಕಾ ಅವರಂಗೆ ಅಪರೂಪದ ಮಿಡ್‌ಫೀಲ್ಡ್ ತಂತ್ರಗಾರಿಕೆ ಹೊಂದಿರುವ ಇವಾನ್, ಇದುವರೆಗೆ ೯೭ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು ೧೫ ಗೋಲುಗಳನ್ನು ಗಳಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ೫ ಪಂದ್ಯಗಳನ್ನಾಡಿರುವ ಇವಾನ್ ೪೨೯ ನಿಮಿಷಗಳ ಆಡಿದ್ದು, ಗೋಲೊಂದನ್ನು ಕೂಡಾ ಬಾರಿಸಿದ್ದಾರೆ.

ವಯಸ್ಸು: ೩೦ | ಆಡಿರುವ ಪಂದ್ಯ: ೫ | ಗಳಿಸಿರುವ ಗೋಲು: ೧ | ಆಡುವ ಸ್ಥಾನ: ಮಿಡ್‌ಫೀಲ್ಡರ್

ಮರಿಯೊ ಮಾಂಡ್‌ಜುಕಿಕ್

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿರಿಸಿದ ದಿನಗಳಲ್ಲಿ ಕ್ರೊವೇಷ್ಯಾದ ಮಹಾನ್ ಆಟಗಾರ ಅಲೆನ್ ಬೊಕ್ಸಿಕ್ ಅವರೊಂದಿಗೆ ಮರಿಯೋ ಅವರನ್ನು ಹೋಲಿಸಲಾಗುತ್ತಿತ್ತು. ೩೨ರ ಹರೆಯದ ಮರಿಯೋ, ಇದುವರೆಗೆ ೮೭ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ೩೧ ಗೋಲುಗಳನ್ನು ಗಳಿಸಿರುವ ಅನುಭವಿ ಹಾಗೂ ಅಪಾಯಕಾರಿ ಆಟಗಾರ. ಇಂಗ್ಲೆಂಡ್‌ಗೆ ಮಾರಕವಾಗಬಹುದಾದ ಮರಿಯೋ ಪ್ರತಿಭಾನ್ವಿತ ಫಾರ್ವರ್ಡ್ ಆಟಗಾರನಾಗಿದ್ದು, ಪ್ರಸಕ್ತ ಟೂರ್ನಿಯಲ್ಲಿ ೪ ಪಂದ್ಯಗಳನ್ನಾಡಿದ್ದು, ೪೦೩ ನಿಮಿಷಗಳ ಕಾಲ ಆಡಿದ್ದಾರೆ. ಒಂಬತ್ತು ಬಾರಿ ನಡೆಸಿದ ಗೋಲಿನ ಯತ್ನಗಳಲ್ಲಿ ಒಂದು ಬಾರಿ ಮಾತ್ರ ಯಶ ಕಂಡಿದ್ದಾರೆ.

ವಯಸ್ಸು: ೩೨ | ಆಡಿರುವ ಪಂದ್ಯ: ೪ | ಗಳಿಸಿರುವ ಗೋಲು: ೧ | ಆಡುವ ಸ್ಥಾನ: ಫಾರ್ವರ್ಡ್

ಸಂಭಾವ್ಯ ಇಲೆವೆನ್

ಇಂಗ್ಲೆಂಡ್: ಜೋರ್ಡಾನ್ ಪಿಕ್‌ಫೋರ್ಡ್, ಕೈಲ್ ವಾಕರ್, ಜಾನ್ ಸ್ಟೋನ್ಸ್, ಹ್ಯಾರಿ ಮಗ್ಯುರಿ; ಕೀರನ್ ಟ್ರಿಪ್ಪಿಯರ್, ಡೆಲೆ, ಜೋರ್ಡಾನ್ ಹೆಂಡರ್ಸನ್, ಜೆಸ್ಸಿ ಲಿಂಗಾರ್ಡ್, ಆಶ್ಲೆ ಯಂಗ್; ರಹೀಮ್ ಸ್ಟರ್ಲಿಂಗ್, ಹ್ಯಾರಿ ಕೇನ್.

ಕ್ರೊವೇಷ್ಯಾ: ಡ್ಯಾನಿಜೆಲ್ ಸುಬಾಸಿಕ್; ಸಿಮೆ ವ್ರಸಾಲ್ಕೊ, ಡೀಜನ್ ಲಾವ್ರೆನ್, ಡೊಮೊಗೊಜ್ ವಿಡಾ, ಇವಾನ್ ಸ್ಟಿರಿನಿಕ್; ಇವಾನ್ ರಾಕಿಟಿಕ್, ಮಾರ್ಸೆಲೊ ಬ್ರೊಜೊವಿಕ್, ಆಂಟೆ ರೆಬಿಕ್, ಲೂಕಾ ಮಾಡ್ರಿಕ್, ಇವಾನ್ ಪೆರಿಸಿಕ್; ಮರಿಯೋ ಮಾಂಡ್‌ಜುಕಿಕ್

ದಿನಾಂಕ: ಜುಲೈ ೧೧ | ಪಂದ್ಯ ಆರಂಭ: ರಾತ್ರಿ ೧೧.೩೦ (ಭಾರತೀಯ ಕಾಲಮಾನ) | ಸ್ಥಳ: ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣ | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More