ಸೆಮಿಫೈನಲ್ ಸಮರದಲ್ಲಿ ಫ್ರೆಂಚರನ್ನು ಫೈನಲ್‌ಗೆ ಕೊಂಡೊಯ್ದ ಗ್ರೀಜ್‌ಮನ್, ಟಿಟಿ

ಫ್ರೆಂಚರ ಪಾಲಿಗೆ ರೆಡ್ ಡೆವಿಲ್ಸ್‌ ಕೇವಲ ಬೆದರುಬೊಂಬೆ ಆಯಿತಷ್ಟೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮಂಗಳವಾರ (ಜು.೧೦) ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ೧-೦ ಗೋಲಿನಿಂದ ಬೆಲ್ಜಿಯಂ ಅನ್ನು ಬೆಚ್ಚಿಸಿ ಫೈನಲ್‌ಗೆ ಲಗ್ಗೆ ಹಾಕಿತು

ಪ್ರಥಮಾರ್ಧದಲ್ಲಿನ ಬಿರುಸು ಬೆಲ್ಜಿಯಂ ಆಟಗಾರರಲ್ಲಿ ಮಂಕಾಗಿತ್ತು. ಫ್ರಾನ್ಸ್ ಗೋಲಿ ಹ್ಯೂಗೊ ಲಾರಿಸ್ ಅತ್ಯಮೋಘ ರಕ್ಷಣಾತ್ಮಕ ಆಟ ವಿರಾಮಕ್ಕೂ ಮುನ್ನ ಬೆಲ್ಜಿಯನ್ನರು ನಡೆಸಿದ ಆಕ್ರಮಮಣಕಾರಿ ದಾಳಿಯನ್ನು ಹತ್ತಿಕ್ಕಿತು. ಆದರೆ, ದ್ವಿತೀಯಾರ್ಧದಲ್ಲಿ ಫ್ರೆಂಚರು ತೋರಿದ ಪ್ರಬಲ ಆಟ ಹಾಗೂ ಸ್ಟಾರ್ ಆಟಗಾರ ಆ್ಯಂಟನಿ ಗ್ರೀಜ್‌ಮನ್ ಮಿಂಚಿನ ಆಟ ಮತ್ತವರ ಗೋಲಿನ ಯತ್ನವನ್ನು ೫೧ನೇ ನಿಮಿಷದಲ್ಲಿ ಆಕರ್ಷಕ ಹೆಡರ್‌ನೊಂದಿಗೆ ಸಾಕಾರಗೊಳಿಸಿದ ಸ್ಯಾಮುಯೆಲ್ ಟಿಟಿ ಫ್ರೆಂಚರ ಪಾಲಿಗೆ ಹೀರೋವಾದರು! ಇವರೊಂದಿಗೆ ಪಂದ್ಯದಾದ್ಯಂತ ಅಭೇದ್ಯ ಕೋಟೆಯಂತೆ ಗೋಲುಪೆಟ್ಟಿಗೆಯನ್ನು ಕಾಯ್ದ ಹ್ಯೂಗೊ ಲಾರಿಸ್ ಕೂಡ ತಂಡದ ಗೆಲುವಿನ ರೂವಾರಿಗಳಲ್ಲಿ ಒಬ್ವರೆನಿಸಿದರು.

ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಕೇವಲ ಒಂದು ಗೋಲಿನ ಅಂತರದಲ್ಲಿ ಜಯ ಸಾಧಿಸಿತಾದರೂ, ಅದರ ರಕ್ಷಣಾತ್ಮಕ ಆಟ ಮನಮುಟ್ಟುವಂತಿತ್ತು. ಬೆಲ್ಜಿಯಂನ ಅಪಾಯಕಾರಿ ಆಟಗಾರನೆಂದೇ ಕರೆಸಿಕೊಂಡಿದ್ದ ರೊಮೇಲು ಲುಕಾಕು ಹಾಗೂ ಕೆವಿನ್ ಡಿ ಬ್ರ್ಯೂಯ್ನಿ ಸೆಮಿಫೈನಲ್‌ನಲ್ಲಿ ತೀವ್ರ ನಿರಾಸೆ ಮೂಡಿಸಿದರು. ವಾಸ್ತವವಾಗಿ, ಬೆಲ್ಜಿಯಂ ಗೋಲಿ ಎಚ್ಚರ ತಪ್ಪಿದ್ದರೆ, ಕೊನೆಕೊನೆಗೆ ಇನ್ನೂ ಒಂದೆರಡು ಗೋಲುಗಳನ್ನು ಫ್ರಾನ್ಸ್ ಗಳಿಸುತ್ತಿತ್ತು.

ಸೋಲು ಬೆನ್ನು ಹತ್ತಿದ್ದು ಖಚಿತವಾಗುತ್ತಿದ್ದಂತೆ ಗೋಲು ಗಳಿಸಲು ತೀವ್ರತರ ಹೋರಾಟ ನಡೆಸಿದ ಬೆಲ್ಜಿಯಂ, ತನ್ನ ಪ್ರಯತ್ನದಲ್ಲಿ ವಿಫಲವಾಯಿತು. ಪಂದ್ಯ ಮುಗಿಯುವ ಕೊನೇ ಕ್ಷಣಗಳಲ್ಲಿ ತನಗೆ ಸಿಕ್ಕ ಫ್ರೀ ಕಿಕ್ ಅನ್ನು ಕೂಡ ಅದು ಕೈಚೆಲ್ಲಿತು. ಕೆವಿನ್ ಡಿ ಬ್ರ್ಯೂಯ್ನಿ ೩೦ ಗಜಗಳ ಅಂತರದಿಂದ ಬಾರಿಸಿದ ಚೆಂಡನ್ನು ಚಾಡ್ಲಿ ಹಿಡಿತಕ್ಕೆ ಪಡೆದರೂ, ಎಂಬಾಪೆ ಅದನ್ನು ದೂರ ದೂಡಿದರು. ಅಲ್ಲಿಯೇ ಇದ್ದ ಲುಕಾಕು ಚೆಂಡನ್ನು ಹಿಡಿತಕ್ಕೆ ಪಡೆಯಲು ಸಾಧ್ಯವಾಗದೆ ಚಡಪಡಿಸಿದರು. ಇದೀಗ ಭಾನುವಾರ (ಜು.೧೫) ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್ ಇಲ್ಲವೇ ಕ್ರೊವೇಷ್ಯಾ ವಿರುದ್ಧ ಹ್ಯಾಟ್ರಿಕ್ ವಿಶ್ವಕಪ್‌ಗಾಗಿ ಸೆಣಸಲಿದೆ ಫ್ರಾನ್ಸ್ ತಂಡ.

ಇದನ್ನೂ ಓದಿ : ಫಿಫಾ ವಿಶ್ವಕಪ್ ನಾಲ್ಕರ ಘಟ್ಟ; ರೆಡ್ ಡೆವಿಲ್ಸ್‌ಗೆ ಅಜೇಯ ಫ್ರೆಂಚರ ಸವಾಲು

ಸಮಬಲದ ಕಾದಾಟ

ಪಂದ್ಯದ ಮೊದಲಾರ್ಧದಲ್ಲಿ ಬೆಲ್ಜಿಯಂ ಗೋಲು ಗಳಿಸುವ ಕೆಲ ಅವಕಾಶಗಳನ್ನು ಕೈಚೆಲ್ಲಿತಾದರೂ, ಒಂದು ವಿಧದಲ್ಲಿ ಈ ಅವಧಿಯ ಆಟ ಸಮಬಲದಿಂದ ಕೂಡಿತ್ತು. ಯಾವುದೇ ಗೋಲು ದಾಖಲಾಗದೆಹೋದರೂ, ಇತ್ತಂಡಗಳೂ ಗೋಲು ಬಿಟ್ಟುಕೊಡದೆ ಸಮಬಲ ತೋರಿದವು. ೧೫ನೇ ನಿಮಿಷದಲ್ಲಿ ಹಜಾರ್ಡ್ ಬೆಲ್ಜಿಯಂಗೆ ಗೋಲು ತಂದುಕೊಡಲು ನಡೆಸಿದ ಪ್ರಯತ್ನವೂ ವಿಫಲವಾಯಿತು.

ವಿರಾಮದ ನಂತರದ ಆಟ ಶುರುವಾಗಿ ಕೇವಲ ೬ ನಿಮಿಷಗಳಾಗಿದ್ದವಷ್ಟೆ. ಗೋಲು ಪೆಟ್ಟಿಗೆಯ ಸಮೀಪವನ್ನು ಗುರಿಯಾಗಿಸಿಕೊಂಡು ಗ್ರೀಜ್‌ಮನ್ ಕಿಕ್ ಮಾಡಿದ ಚೆಂಡನ್ನು ಸ್ಯಾಮುಯೆಲ್ ಜಿಗಿದು ತಲೆಯಿಂದ ಗುದ್ದಿದ ಚೆಂಡು ಬೆಲ್ಜಿಯಂ ಗೋಲಿಯ ತಲೆ ಮೇಲಿನಿಂದ ನೆಟ್‌ಗೆ ಅಪ್ಪಳಿಸಿತು. ಅಂದಹಾಗೆ, ಬೆಲ್ಜಿಯಂ ಮಿಡ್‌ಫೀಲ್ಡರ್ ತಲೆಯನ್ನೂ ಸವರಿಕೊಂಡು ಚೆಂಡು ಚಿಮ್ಮಿದ್ದು ಕೂಡ ಗಮನ ಸೆಳೆಯಿತು.

ತನ್ನ ೨೨ ವಿಶ್ವಕಪ್ ಪಂದ್ಯಗಳಲ್ಲಿ ಫ್ರಾನ್ಸ್, ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸದೆ ಸೋಲು ಅನುಭವಿಸಿದ್ದು ಒಮ್ಮೆ ಮಾತ್ರ. ೧೦ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ೧೧ರಲ್ಲಿ ಡ್ರಾ ಸಾಧಿಸಿತ್ತು. ಇದೀಗ ತನ್ನ ಗೆಲುವಿನ ಯಾನವನ್ನು ೧೧ಕ್ಕೆ ವಿಸ್ತರಿಸಿಕೊಂಡಿತು.

ಮುಖ್ಯಾಂಶಗಳು

  • ಈ ಹಿಂದೆ ಫ್ರಾನ್ಸ್ ಹಾಗೂ ಬೆಲ್ಜಿಯಂ ೭೩ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಫ್ರಾನ್ಸ್ ೨೪ ಪಂದ್ಯಗಳಲ್ಲಿ ಗೆಲುವು ಪಡೆದರೆ, ಬೆಲ್ಜಿಯಂ ೩೦ರಲ್ಲಿ ಜಯ ಸಾಧಿಸಿತ್ತು. ಉಳಿದ ೧೯ ಪಂದ್ಯಗಳು ಡ್ರಾ ಕಂಡಿವೆ.
  • ೧೯೮೬ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನಕ್ಕಾಗಿನ ಸೆಣಸಾಟದಲ್ಲಿ ಬೆಲ್ಜಿಯಂ ಅನ್ನು ೪-೨ ಗೋಲುಗಳಿಂದ ಮಣಿಸಿದ್ದ ಫ್ರಾನ್ಸ್, ಆ ಬಳಿಕ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಬೆಲ್ಜಿಯಂ ಅನ್ನು ಎದುರುಗೊಂಡಿತ್ತು.
  • ೨೯೩೮ರ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಮೊದಲ ಸುತ್ತಿನಲ್ಲೇ ಬೆಲ್ಜಿಯಂ ಅನ್ನು ೩-೧ ಗೋಲುಗಳಿಂದ ಮಣಿಸಿತ್ತು ಫ್ರಾನ್ಸ್.
  • ೧೯೮೬ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೆಣಸಿದ್ದ ಬೆಲ್ಜಿಯಂ, ಅರ್ಜೆಂಟೀನಾ ಎದುರು ಸೋಲನುಭವಿಸಿತ್ತು. ಆನಂತರ ಅದು ನಾಲ್ಕರ ಘಟ್ಟಕ್ಕೆ ಕಾಲಿರಿಸಿದ್ದು ಇದೇ ಮೊದಲು.
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More