ನಕಲಿ ಪ್ರಮಾಣಪತ್ರ ನೀಡಿ ಡಿಎಸ್‌ಪಿ ಹುದ್ದೆ ಕಳೆದುಕೊಂಡ ಹರ್ಮನ್ ಪ್ರೀತ್ ಕೌರ್!

ಭಾರತ ಟಿ೨೦ ವನಿತಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸುಳ್ಳು ಪ್ರಮಾಣಪತ್ರ ನೀಡಿದ ತಪ್ಪಿಗಾಗಿ ಡಿಎಸ್‌ಪಿ ಹುದ್ದೆ ಕಳೆದುಕೊಂಡಿದ್ದಾರೆ! ಹರ್ಮನ್‌ಪ್ರೀತ್ ಕೌರ್ ಪದವಿಯನ್ನು ಖಾತ್ರಿಪಡಿಸಬೇಕಾದ ವಿವಿಯಲ್ಲಿ ಸಂಬಂಧಪಟ್ಟ ದಾಖಲೆಗಳೇ ಇಲ್ಲ ಎಂದು ಎನ್‌ಡಿಟಿವಿ ವರದಿಯೊಂದು ಹೇಳಿದೆ

ಡೆಪ್ಯುಟಿ ಸೂಪರಿಂಟಿಂಡೆಂಟ್ ಪೊಲೀಸ್ (ಡಿಎಸ್‌ಪಿ) ಹುದ್ದೆಗಾಗಿ ಪ್ರತಿಭಾನ್ವಿತ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ವಂಚನೆಯ ಹಾದಿ ಹಿಡಿದರೇ ಎಂಬ ಅನುಮಾನ ಎಲ್ಲರನ್ನೂ ಕಾಡಿದೆ. ಆಕೆಯ ಪದವಿ ಪ್ರಮಾಣಪತ್ರ ನಕಲಿ ಎಂಬುದೀಗ ಬಹಿರಂಗವಾಗಿದ್ದು, ಡಿಎಸ್‌ಪಿ ಹುದ್ದೆಯಿಂದ ಪೇದೆಯ ಹುದ್ದೆಗೆ ಹಿಂಬಡ್ತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಹರ್ಮನ್‌ಪ್ರೀತ್ ಕೌರ್‌ಗೆ ಪಂಜಾಬ್ ಪೊಲೀಸ್ ಇಲಾಖೆ ಮುಖೇನ ತಲುಪಿಸಲಾಗಿರುವ ಪತ್ರದಲ್ಲಿ, ಡಿಎಸ್‌ಪಿ ಹುದ್ದೆಯಿಂದ ಪೇದೆಯ ಸ್ಥಾನಕ್ಕೆ ಹಿಂಬಡ್ತಿ ನೀಡಲಾಗಿದೆ ಎಂಬುದನ್ನು ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಮೀರತ್‌ನ ಚೌಧರಿ ಚರಣ್ ಸಿಂಗ್ ವಿವಿ (ಸಿಸಿಎಸ್‌ಯು) ಜಾಗೃತ ದಳ ನಡೆಸಿದ ತನಿಖೆಯಲ್ಲಿ ಹರ್ಮನ್‌ಪ್ರೀತ್ ಪದವಿ ಪ್ರಮಾಣಪತ್ರವು ನಕಲಿ ಎಂಬುದು ಬೆಳಕಿಗೆ ಬಂದಿದೆ.

ಹರ್ಮನ್‌ಪ್ರೀತ್ ಕೌರ್ ಪದವಿಯ ಬಗ್ಗೆ ಅನುಮಾನಗೊಂಡಿದ್ದ ಪಂಜಾಬ್ ಪೊಲೀಸ್ ಇಲಾಖೆ, ವಿವಿಯ ಅಧಿಕಾರಿಗಳನ್ನು ಸಂಪರ್ಕಿಸಿ ಆಕೆಯ ಪದವಿಯ ಬಗ್ಗೆ ದೃಢೀಕರಿಸಬೇಕೆಂದು ಮನವಿ ಮಾಡಿತ್ತು. ಭಾರತೀಯ ವನಿತಾ ಕ್ರಿಕೆಟ್‌ಗೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಕ್ರೀಡಾ ಕೋಟಾದಡಿ ಪಂಜಾಬ್ ಸರ್ಕಾರವು ಹರ್ಮನ್‌ಪ್ರೀತ್ ಕೌರ್‌ಗೆ ಮಾರ್ಚ್ ತಿಂಗಳಿನಲ್ಲಿ ಡಿಎಸ್‌ಪಿ ಹುದ್ದೆಯನ್ನು ಪ್ರದಾನ ಮಾಡಿತ್ತು.

ಇದನ್ನೂ ಓದಿ : ವನಿತಾ ಕ್ರಿಕೆಟ್ | ಹರ್ಮನ್ ಆಲ್ರೌಂಡ್ ಆಟ ವ್ಯರ್ಥ, ಬಾಂಗ್ಲಾ ಏಷ್ಯಾ ಚಾಂಪಿಯನ್

“ಜಲಂಧರ್‌ನ ಪೊಲೀಸ್ ಅಧಿಕಾರಿಯೊಬ್ಬರು ಏಪ್ರಿಲ್ ತಿಂಗಳಿನಲ್ಲಿ ವಿವಿಯನ್ನು ಸಂಪರ್ಕಿಸಿ, ಹರ್ಮನ್‌ಪ್ರೀತ್ ಕೌರ್ ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಬಿಎ ಪದವಿ ಪ್ರಮಾಣಪತ್ರದ ಕುರಿತು ಪರಿಶೀಲನೆ ನಡೆಸಬೇಕೆಂದು ಕೋರಿದ್ದರು. ೨೦೧೧ರಲ್ಲಿ ತಾನು ವಿವಿಯಿಂದ ಪದವಿ ಪಡೆದಿದ್ದಾಗಿ ೨೯ರ ಹರೆಯದ ಹರ್ಮನ್‌ಪ್ರೀತ್ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಈ ಸಾಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಹರ್ಮನ್ ಹೆಸರು ಎಲ್ಲಿಯೂ ನೋಂದಣಿ ಆಗಿರಲಿಲ್ಲ ಎಂಬುದು ಕಂಡುಬಂತು. ಈ ಸಂಗತಿಯನ್ನು ಪೊಲೀಸ್ ಅಧಿಕಾರಿಗೆ ನಾವು ತಿಳಿಸಿದೆವು,’’ ಎಂದು ಸಿಸಿಎಸ್ ವಿವಿಯ ಜಾಗೃತ ದಳದ ಪ್ರೊಫೆಸರ್ ಸಂಜಯ್ ಭಾರದ್ವಾಜ್ ತಿಳಿಸಿದ್ದಾರೆ.

ಭಾರತ ವನಿತಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಲ್ರೌಂಡ್ ಆಟಗಾರ್ತಿ ಹರ್ಮನ್‌ಪ್ರೀತ್, ಕೇವಲ ಎರಡು ಟೆಸ್ಟ್ ಆಡಿದ್ದು, ೮.೬೬ರ ಸರಾಸರಿಯಲ್ಲಿ ೨೬ ರನ್ ಗಳಿಸಿದ್ದಾರೆ. ೨೦೦೯ರಲ್ಲಿ ಪಾಕಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ ಹರ್ಮನ್, ೮೭ ಏಕದಿನ ಪಂದ್ಯಗಳಲ್ಲಿ ೩೫.೪೧ರ ಸರಾಸರಿಯಲ್ಲಿ ೩ ಶತಕ, ೧೧ ಅರ್ಧಶತಕ ಸೇರಿದ ೨,೧೯೬ ರನ್ ಪೇರಿಸಿದ್ದಾರೆ. ಅಂತೆಯೇ, ೨೨ ಏಕದಿನ, ೨೦ ಟಿ೨೦ ವಿಕೆಟ್‌ಗಳನ್ನೂ ಗಳಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More