ವಿಂಬಲ್ಡನ್ | ಜೊಕೊ-ನಡಾಲ್ ಕ್ವಾರ್ಟರ್‌ ನಾಗಾಲೋಟ, ಹೊರಬಿದ್ದ ಮಾಂಫಿಲ್ಸ್

ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ನಂ.೧ ಆಟಗಾರ ರಾಫೇಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಅಂತಿಮ ಎಂಟರ ಘಟ್ಟಕ್ಕೆ ಧಾವಿಸಿದ್ದಾರೆ. ಅಂತೆಯೇ, ಜಪಾನ್ ಆಟಗಾರ ಕೀ ನಿಶಿಕೊರಿ, ಅಮೆರಿಕದ ಜಾನ್ ಇಸ್ನೆರ್ ಪ್ರೀಕ್ವಾರ್ಟರ್‌ನಲ್ಲಿ ಜಯಿಸಿ ಮುಂದಿನ ಹಂತಕ್ಕೆ ಧಾವಿಸಿದರು

ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ ಮೂರನೇ ವಿಂಬಲ್ಡನ್ ಗೆಲ್ಲುವತ್ತ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್‌ನಲ್ಲಿ ಅಂತಿಮ ಎಂಟರ ಹಂತಕ್ಕೆ ಧಾವಿಸಿರುವ ನಡಾಲ್, ವೃತ್ತಿಬದುಕಿನ ಹದಿನೆಂಟನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ಹೋರಾಟವನ್ನು ಈ ಮೂಲಕ ಜೀವಂತವಾಗಿಟ್ಟರು.

ಸೋಮವಾರ (ಜುಲೈ ೯) ತಡರಾತ್ರಿ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ೯೩ನೇ ಶ್ರೇಯಾಂಕಿತ ಜೆಕ್ ಆಟಗಾರ ಜಿರಿ ವೆಸೆಲಿ ವಿರುದ್ಧ ನಡಾಲ್ ೬-೩, ೬-೩, ೬-೪ ನೇರ ಸೆಟ್‌ಗಳಲ್ಲಿ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಿದರು. ಇದರೊಂದಿಗೆ ಕಳೆದ ನಾಲ್ಕು ಪಂದ್ಯಗಳಲ್ಲಿಯೂ ನಡಾಲ್ ನೇರ ಸೆಟ್‌ಗಳ ಗೆಲುವಿನೊಂದಿಗೆ ಎಂಟರ ಘಟ್ಟಕ್ಕೆ ಕಾಲಿಟ್ಟಂತಾಗಿದೆ. ಪ್ರಸ್ತುತ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ನಡಾಲ್, ಮೊದಲ ಎರಡು ಸೆಟ್‌ಗಳಲ್ಲಿ ಏಳು ಪಾಯಿಂಟ್ಸ್‌ಗಳನ್ನು ಕಳೆದುಕೊಂಡರೂ, ೩೭ ವಿನ್ನರ್‌ಗಳೊಂದಿಗೆ ಅಂತಿಮ ಎಂಟರ ಘಟ್ಟಕ್ಕೆ ಕಾಲಿರಿಸಿದರು.

ಮುಂದಿನ ಸುತ್ತಿನಲ್ಲಿ ಅವರು ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಇಲ್ಲವೇ ಗಿಲ್ಲೆಸ್ ಸಿಮೋನ್ ಎದುರು ಸೆಣಸಲಿದ್ದಾರೆ. ಅಂದಹಾಗೆ, ಪೊಟ್ರೊ ಮತ್ತು ಸಿಮೊನ್ ನಡುವಣದ ಪಂದ್ಯವು ಅಮಾನತುಗೊಂಡಿದ್ದು, ಮಂಗಳವಾರ (ಜುಲೈ ೧೦) ಮುಂದುವರೆಯಲಿದೆ. ಮೊದಲ ಎರಡೂ ಸೆಟ್‌ಗಳನ್ನು ಟೈ ಬ್ರೇಕರ್‌ನಲ್ಲಿ ಗೆದ್ದಿರುವ ಪೊಟ್ರೊ ಮೂರನೇ ಸೆಟ್‌ನಲ್ಲಿ ೫-೭ ಹಿನ್ನಡೆ ಅನುಭವಿಸಿದ್ದಾರೆ.

ಆ್ಯಂಡರ್ಸನ್ ಗೆಲುವು

ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ಟೆನಿಸಿಗ ಕೆವಿನ್ ಆ್ಯಂಡರ್ಸನ್ ಅನುಭವಿ ಆಟಗಾರ ಫ್ರಾನ್ಸ್‌ನ ಗೇಲ್ ಮಾಂಫಿಲ್ಸ್ ವಿರುದ್ಧ ಜಯ ಸಾಧಿಸಿದರು. ಐದು ಸೆಟ್‌ಗಳ ಮಾರಾಮಾರಿ ಕದನದಲ್ಲಿ ಫ್ರಾನ್ಸ್ ಆಟಗಾರನ ವಿರುದ್ಧ ಆ್ಯಂಡರ್ಸನ್, ೭-೬ (೪), ೭-೬ (೨), ೫-೭, ೭-೬ (೪) ಸೆಟ್‌ಗಳಿಂದ ಗೆಲುವು ಪಡೆದರು. ೧೦ನೇ ಬಾರಿಗೆ ಆಲ್ ಇಂಗ್ಲೆಂಡ್ ಓಪನ್ ಕ್ಲಬ್‌ನಲ್ಲಿ ಸೆಣಸಿದ್ದ ಮಾಂಫಿಲ್ಸ್ ಈ ಬಾರಿಯೂ ನಾಲ್ಕನೇ ಸುತ್ತಿನ ಸವಾಲನ್ನು ಮೀರಲು ವಿಫಲವಾದರು.

ಎಂಟನೇ ಶ್ರೇಯಾಂಕಿತ ಆ್ಯಂಡರ್ಸನ್ ೨೦ ಭರ್ಜರಿ ಏಸ್‌ಗಳನ್ನು ಸಿಡಿಸಿ ಅಪೂರ್ವ ಆಟವಾಡಿದರು. ಮುಂದಿನ ಸುತ್ತಿನಲ್ಲಿ ಅವರು ಸ್ವಿಸ್ ಆಟಗಾರ ರೋಜರ್ ಫೆಡರರ್ ವಿರುದ್ಧ ಸೆಣಸಲಿದ್ದು, ಹದಿನಾರನೇ ಬಾರಿಗೆ ವಿಂಬಲ್ಡನ್ ಕ್ವಾರ್ಟರ್‌ಫೈನಲ್ ತಲುಪಿರುವ ಫೆಡರರ್‌ಗೆ ಭಾರೀ ಸವಾಲಾಗುವ ಸುಳಿವು ನೀಡಿದ್ದಾರೆ. ೨೦೧೭ರ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದ ಆ್ಯಂಡರ್ಸನ್, ಕಳೆದ ಮೂರು ಬಾರಿಯ ವಿಂಬಲ್ಡನ್ ಅಭಿಯಾನದಲ್ಲಿ ನಾಲ್ಕನೇ ಸುತ್ತಿಗೇ ನಿರ್ಗಮಿಸಿದ್ದರು.

ನಿ‍ಶಿಕೊರಿಗೆ ರೋಚಕ ಜಯ

ಜಪಾನ್ ಆಟಗಾರ ಕೀ ನಿಶಿಕೊರಿ ಕೂಡಾ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಧಾವಿಸಿದ್ದಾರೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ರೋಚಕ ಕಾದಾಟದಲ್ಲಿ ಅವರು, ಲಾಟ್ವಿಯಾದ ಅರ್ನೆಸ್ಟ್ಸ್ ಗುಬ್ಲಿಸ್ ವಿರುದ್ಧ ೪-೬, ೭-೬ (೫), ೭-೬ (೧೦) ಹಾಗೂ ೬-೧ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಇದನ್ನೂ ಓದಿ : ವಿಂಬಲ್ಡನ್ | ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದ ಫೆಡರರ್ ಮತ್ತು ರಾನಿಕ್

ಮೊಣಕೈ ನೋವಿನ ಸೆಳೆತವನ್ನೂ ಮೆಟ್ಟಿನಿಂತ ನಿಶಿಕೊರಿ, ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ, ನಂತರದ ಎರಡು ಸೆಟ್‌ಗಳನ್ನು ಟೈಬ್ರೇಕರ್‌ನಲ್ಲಿ ಜಯಿಸಿದರು. ಅಂತೆಯೇ ನಾಲ್ಕನೇ ಸೆಟ್ ಅನ್ನು ಸುಲಭವಾಗಿಯೇ ಕೈವಶ ಮಾಡಿಕೊಂಡ ಅವರು, ಮೊದಲ ಬಾರಿಗೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ ಕದ ತಟ್ಟಿದರು.

ವಿಶ್ವದ ಮಾಜಿ ನಂ ೧೦ ಆಟಗಾರ ಗುಲ್ಬಿಸ್ ಕೂಡಾ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ಕನಸಿನೊಂದಿಗೆ ಕಣಕ್ಕಿಳಿದಿದ್ದರಾದರೂ, ನಿಶಿಕೊರಿಯ ಆಕ್ರಮಣಕಾರಿ ಆಟಕ್ಕೆ ಪ್ರತಿ ಹೇಳಲಾಗದೆ ಸೋಲಪ್ಪಿದರು. ಕಳೆದ ಒಂಬತ್ತು ಯತ್ನಗಳಲ್ಲಿ ವಿಂಬಲ್ಡನ್‌ ಕ್ವಾರ್ಟರ್‌ಫೈನಲ್ ತಲುಪಲು ವಿಫಲವಾಗಿದ್ದ ವಿಶ್ವದ ಮಾಜಿ ನಾಲ್ಕನೇ ಶ್ರೇಯಾಂಕಿತ ನಿಶಿಕೊರಿ, ಮೊಣಕೈ ನೋವಿನಲ್ಲೂ ವಿಚಲಿತವಾಗದೆ ಹೋರಾಟ ಮುಂದುವರಿಸಿದ್ದಾರೆ.

ಇಸ್ನೆರ್ ಗೆಲುವು

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಅಂತಿಮ ಹದಿನಾರರ ಹಂತದ ಪಂದ್ಯದಲ್ಲಿ ಅಮೆರಿಕ ಆಟಗಾರ ಜಾನ್ ಇಸ್ನೆರ್ ಸ್ಟೆಫಾನೊಸ್ ಸಿಸಿಪಾಸ್ ವಿರುದ್ಧ ೬-೪, ೭-೬ (೧೦/೮), ೭-೬ (೭/೪) ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಮುನ್ನಡೆದರು. ಗ್ರೀಸ್ ಆಟಗಾರ ಸಿಸಿಪಾಸ್ ಮೊದಲ ಸೆಟ್‌ಗಿಂತಲೂ ಕೊನೆಯ ಎರಡೂ ಸೆಟ್‌ಗಳಲ್ಲಿ ದಿಟ್ಟ ಪ್ರದರ್ಶನ ನೀಡಿದರು. ಕೂದಲೆಳೆಯ ಅಂತರದಿಂದ ಈ ಸೆಟ್‌ಗಳನ್ನು ಇಸ್ನೆರ್ ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

ಜೊಕೊವಿಚ್‌ಗೆ ಜಯ

ವಿಶ್ವದ ಮಾಜಿ ನಂ.೧ ಆಟಗಾರ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ಟೂರ್ನಿಯಲ್ಲಿ ಜಯದ ಓಟ ಮುಂದುವರಿಸಿದ್ದು, ೧೦ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು. ರಷ್ಯನ್ ಆಟಗಾರ ಕರೆನ್ ಕಚಾನೊವ್ ವಿರುದ್ಧ ೬-೪, ೬-೨, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ಮೊದಲ ಸೆಟ್‌ನಲ್ಲಿ ಕೆಲವು ಕ್ಷುಲ್ಲಕ ಪ್ರಮಾದಗಳೆನ್ನೆಸಗಿದ ನೊವಾಕ್, ಆನಂತರ ಎಚ್ಚರಿಕೆಯ ಆಟವಾಡಿದರು. ೧೨ನೇ ಶ್ರೇಯಾಂಕಿತ ಜೊಕೊವಿಚ್, ಜಪಾನ್ ಆಟಗಾರ ಕೀ ನಿಶಿಕೊರಿ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಕಾದಾಡಲಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಇಬ್ಬರು ಆಟಗಾರರ ನಡುವಣದ ಈ ಪಂದ್ಯ ರೋಚಕವಾಗಿರುವ ನಿರೀಕ್ಷೆ ಹುಟ್ಟುಹಾಕಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More