ವಿಂಬಲ್ಡನ್ | ನಡಾಲ್-ಪೊಟ್ರೊ ಕ್ವಾರ್ಟರ್‌ ಸೆಣಸಾಟ; ಸೆರೆನಾ, ಕೆರ್ಬರ್ ಸೆಮಿಗೆ

ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪುರುಷರ ಅಂತಿಮ ಎಂಟರ ಘಟ್ಟದಲ್ಲಿ ವಿಶ್ವದ ನಂ.೧ ಆಟಗಾರ ರಾಫೆಲ್ ನಡಾಲ್, ಅರ್ಜೆಂಟೀನಾದ ಡೆಲ್ ಪೊಟ್ರೊ ಜೊತೆ ಸೆಣಸಲಿದ್ದಾರೆ. ವನಿತೆಯರ ಸಿಂಗಲ್ಸ್‌ನಲ್ಲಿ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಮತ್ತು ಏಂಜಲಿಕ್ ಕೆರ್ಬರ್ ಉಪಾಂತ್ಯಕ್ಕೆ ಕಾಲಿರಿಸಿದರು

ವಿಶ್ವದ ಮಾಜಿ ನಂ ೧ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಅಂತಿಮ ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟಿದ್ದಾರೆ. ೩೬ರ ಹರೆಯದ ಸೆರೆನಾ ವರ್ಷದ ಮೂರನೇ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಕಳೆದ ಸೆಪ್ಟೆಂಬರ್‌ನಿಂದ ಇದೇ ಮೊದಲ ಬಾರಿಗೆ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು.

ಮಂಗಳವಾರ (ಜುಲೈ ೧೦) ಸೆಂಟರ್ ಕೋರ್ಟ್‌ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಕಾದಾಟದಲ್ಲಿ ಇಟಲಿ ಆಟಗಾರ್ತಿ ಕೆಮಿಲಾ ಗಿಯೋರ್ಗಿ ವಿರುದ್ಧ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಆಕೆ, ೩-೬, ೬-೩, ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ೧೩ನೇ ಶ್ರೇಯಾಂಕಿತೆ ಜುಲಿಯಾ ಜಾರ್ಜರ್ಸ್ ವಿರುದ್ಧ ಸೆರೆನಾ ಸೆಣಸಲಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ಸೆರೆನಾ, ಈ ಋತುವಿನ ವಿಂಬಲ್ಡನ್‌ನಲ್ಲಿ ಮೊದಲ ಬಾರಿಗೆ ಸೆಟ್ ಒಂದರಲ್ಲಿ ಹಿನ್ನಡೆ ಅನುಭವಿಸಿದರು. ಆದರೆ, ವಿಶ್ವದ ೫೨ನೇ ಶ್ರೇಯಾಂಕಿತೆ ಕೆಮಿಲಾ ತದನಂತರದಲ್ಲಿ ಎಡವಿದರು. ಮೊದಲ ಸೆಟ್‌ನಲ್ಲಿ ಕೆಮಿಲಾ ಅತಿಹೆಚ್ಚು ವಿನ್ನರ್ ಮತ್ತು ಏಸ್‌ಗಳಿಂದ ಕೃಷ್ಣಸುಂದರಿಯ ದಿಕ್ಕು ತಪ್ಪಿಸಿದರಾದರೂ, ಎರಡನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ವಿಫಲವಾದರು.

ಕೆರ್ಬರ್‌ಗೆ ಮಣಿದ ಕಸಾಕಿನಾ

ಅತ್ಯಾಕರ್ಷಕ ಪ್ರದರ್ಶನ ಮುಂದುವರೆಸಿದ್ದ ಕಜಕ್‌ಸ್ತಾನದ ಡರಿಯಾ ಕಸಾಕಿನಾ ವಿಂಬಲ್ಡನ್ ಓಪನ್‌ನಿಂದ ಹೊರಬಿದ್ದರು. ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಹದಿನಾಲ್ಕನೇ ಶ್ರೇಯಾಂಕಿತೆ ಕಸಾಕಿನಾ ಎರಡು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಜರ್ಮನಿಯ ಏಂಜಲಿಕ್ ಕೆರ್ಬರ್ ಎದುರು ೩-೬, ೫-೭ ಸೆಟ್‌ಗಳಿಂದ ಸೋಲನುಭವಿಸಿದರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ಕಸಾಕಿನ ಎಸಗಿದ ಸರ್ವೀಸ್ ಪ್ರಮಾದಗಳಲ್ಲದೆ, ಏಳು ಡಬಲ್ ಫಾಲ್ಟ್‌ಗಳನ್ನು ಲಾಭವಾಗಿ ಬಳಸಿಕೊಂಡ ಕೆರ್ಬರ್, ಕಜಕ್ ಆಟಗಾರ್ತಿಯನ್ನು ಸುಲಭವಾಗಿಯೇ ಮಣಿಸಿದರು. ಆದಾಗ್ಯೂ, ಎರಡನೇ ಸೆಟ್‌ನಲ್ಲಿ ತಿರುಗಿಬೀಳಲು ಕಸಾಕಿನಾ ಪ್ರಯತ್ನಿಸಿದರಾದರೂ, ಕೆರ್ಬರ್ ಅದಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಮೇಲಾಗಿ, ಈ ಹಂತದಲ್ಲಿಯೂ ಕಸಾಕಿನಾ ಫೋರ್‌ಹ್ಯಾಂಡ್ ಪ್ರಮಾದದೊಂದಿಗೆ ಸೆಟ್ ಬಿಟ್ಟುಕೊಟ್ಟರು.

೨೦೧೬ರ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ರನ್ನರ್‌ಅಪ್ ಆಗಿರುವ ಕೆರ್ಬರ್, ಮೂರನೇ ಬಾರಿಗೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಪ್ರಶಸ್ತಿ ಸುತ್ತಿಗೆ ಅರ್ಹತೆ ಗಳಿಸಲು ಕೆರ್ಬರ್, ೨೦೧೭ರ ಫ್ರೆಂಚ್ ಓಪನ್ ಚಾಂಪಿಯನ್, ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೋ ವಿರುದ್ಧ ಸೆಣಸಲಿದ್ದಾರೆ. ಅಂದಹಾಗೆ, ಇಂದು ನಡೆದ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಒಸ್ಟಾಪೆಂಕೊ ೭-೫, ೬-೪ ನೇರ ಸೆಟ್‌ಗಳಲ್ಲಿ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಜಯಿಸಿದರು.

ಇದನ್ನೂ ಓದಿ : ವಿಂಬಲ್ಡನ್ | ಜೊಕೊ-ನಡಾಲ್ ಕ್ವಾರ್ಟರ್‌ ನಾಗಾಲೋಟ, ಹೊರಬಿದ್ದ ಮಾಂಫಿಲ್ಸ್

Hop-dog 🌭 . #Wimbledon @kasatkina #tennis #sport #instasport

A post shared by Wimbledon (@wimbledon) on

ಪೊಟ್ರೊ ಗೆಲುವು

ಅಂದಹಾಗೆ, ಸೋಮವಾರ (ಜುಲೈ ೯) ಸ್ಥಗಿತಗೊಂಡಿದ್ದ ಪುರುಷರ ವಿಭಾಗದ ಕೊನೆಯ ಅಂತಿಮ ಹದಿನಾರರ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಗೆಲುವು ಸಾಧಿಸಿದರು. ಐದನೇ ಶ್ರೇಯಾಂಕಿತ ಪೊಟ್ರೊ, ಫ್ರಾನ್ಸ್ ಆಟಗಾರ ಗಿಲ್ಲೆಸ್ ಸಿಮೋನ್ ವಿರುದ್ಧ ೭-೬ (೭/೧), ೭-೬ (೭/೫), ೫-೭, ೭-೬ (೭/೫) ಸೆಟ್‌ಗಳಿಂದ ಗೆಲುವು ಪಡೆದು ಎಂಟರ ಘಟ್ಟಕ್ಕೆ ಅರ್ಹತೆ ಪಡೆದರು.

೨೯ರ ಹರೆಯದ ಪೊಟ್ರೊ ೨೦೧೩ರ ನಂತರ ಅಂದರೆ ಐದು ವರ್ಷಗಳ ಬಳಿಕ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು. ೨೦೧೩ರಲ್ಲಿ ಸೆಮಿಫೈನಲ್ ತಲುಪಿದ್ದ ಪೊಟ್ರೊ, ಐದು ಸೆಟ್‌ಗಳ ರೋಚಕ ಸೆಣಸಾಟದಲ್ಲಿ ಜೊಕೊವಿಚ್ ವಿರುದ್ಧ ಸೋಲನುಭವಿಸಿದ್ದರು. ಅಲ್ಲಿಂದಾಚೆಗೆ ಮುಂಗೈ ಮಣಿಕಟ್ಟಿನ ಗಾಯದಿಂದಾಗಿ ಪೊಟ್ರೊ ಹೆಚ್ಚೂ ಕಮ್ಮಿ ಎರಡು ವರ್ಷ ಟೆನಿಸ್ ಕೋರ್ಟ್‌ ನಿಂದ ಹೊರಗುಳಿದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More