ಆಂಗ್ಲರ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟು ಫೈನಲ್‌ಗೆ ಲಗ್ಗೆ ಹಾಕಿದ ಕ್ರೊವೇಷ್ಯಾ

ಪಂದ್ಯ ಶುರುವಾದ ಐದೇ ನಿಮಿಷದಲ್ಲಿ ಗೋಲಿನ ಸವಿಯುಂಡ ಆಂಗ್ಲರು ಅದಾಗಲೇ ಫೈನಲ್ ತಲುಪಿದೆವೆಂದು ಭ್ರಮಿಸಿದರು! ಆದರೆ, ಹೆಚ್ಚುವರಿ ಸಮಯದಲ್ಲಿ ಮರಿಯೋ ಮ್ಯಾಜಿಕ್‌ನಲ್ಲಿ ೨-೧ ಗೋಲುಗಳ ಗೆಲುವು ಕಂಡ ಕ್ರೊವೇಷ್ಯಾ, ಮೊದಲ ಬಾರಿಗೆ ಫೈನಲ್‌ ತಲುಪಿದ ಸಂಭ್ರಮದಲ್ಲಿ ತೇಲಾಡಿತು

ತನ್ನೆದುರು ತಡೆಗೋಡೆಯಾಗಿ ನಿಂತ ಸರತಿ ಸಾಲಿನ ತಲೆಗಳ ಮೇಲಿಂದ ಟ್ರಿಪ್ಪಿಯರ್ ಬಲವಾಗಿ ಒದ್ದ ಚೆಂಡು ಕ್ರೊವೇಷ್ಯಾ ಗೋಲು ಪೆಟ್ಟಿಗೆಯೊಳಗೆ ಸೇರಿಕೊಳ್ಳುತ್ತಿದ್ದಂತೆ ಇಂಗ್ಲೆಂಡ್ ಪಾಳೆಯದಲ್ಲಿ ಮಿಂಚಿನ ಸಂಚಾರವಾಯಿತು. ಫ್ರೀ ಕಿಕ್ ಅವಕಾಶದಲ್ಲಿ ೨೦ ಗಜಗಳ ಅಂತರದಿಂದ ಬಾರಿಸಿದ ಚೆಂಡು ಹೀಗೆ ನೇರ ಗುರಿ ಮುಟ್ಟುತ್ತದೆ ಎಂಬುದು ಸ್ವತಃ ಕೀರನ್‌ ಟ್ರಿಪ್ಪಿಯರ್‌ಗೆ ತಿಳಿದಿತ್ತೋ ಇಲ್ಲವೋ. ಆದರೆ, ಐದು ನಿಮಿಷಗಳಲ್ಲೇ ಅವರು ತ್ರೀ ಲಯನ್ಸ್‌ಗೆ ೧-೦ ಮುನ್ನಡೆ ತಂದುಕೊಟ್ಟರು. ಆದರೇನಂತೆ, ಕ್ರೊವೇಷ್ಯಾ ಪ್ರಚಂಡ ಆಟದಲ್ಲಿ ಅವರ ಈ ಮನಮೋಹಕ ಗೋಲು ವ್ಯರ್ಥವೆನಿಸಿತು.

ಬುಧವಾರ (ಜು.೧೧) ತಡರಾತ್ರಿ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ೨೦೧೮ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಅಮೋಘ ಅರಂಭ ಕಂಡ ಆಂಗ್ಲರು ದ್ವಿತೀಯಾರ್ಧದಲ್ಲಿ ಎಡವಿದರು. ಇವಾನ್ ಪೆರಿಸಿಕ್ (೬೮ನೇ ನಿ.) ಸಮಬಲದ ಗೋಲು ದಾಖಲಿಸಿದರೆ, ಮರಿಯೋ ಮಾಂಡ್‌ಜುಕಿಕ್ ೧೦೯ನೇ ನಿಮಿಷದಲ್ಲಿ ದಾಖಲಿಸಿದ ಗೋಲು ಕ್ರೊವೇಷ್ಯಾದ ಚಾರಿತ್ರಿಕ ಸಾಧನೆಗೆ ಕಳಶವಾಯಿತು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರೊವೇಷ್ಯಾ ಫೈನಲ್‌ ತಲುಪಿದ್ದು, ಭಾನುವಾರ (ಜು.೧೫) ನಡೆಯಲಿರುವ ಪ್ರಶಸ್ತಿಗಾಗಿನ ಹಣಾಹಣಿಯಲ್ಲಿ ಫ್ರಾನ್ಸ್ ವಿರುದ್ಧ ಸೆಣಸಲಿದೆ.

ಶುರುವಿನಿಂದಲೂ ಗೋಲಿಗಾಗಿ ಸೆಣಸಿದ ಕ್ರೊವೇಷ್ಯಾದ ಆಟ ಅತೀವ ಬಿರುಸು ಪಡೆದದ್ದು ವಿರಾಮದ ಬಳಿಕವೇ. ಅದರಲ್ಲೂ, ಪಂದ್ಯ ಪೂರ್ಣಾವಧಿಯಲ್ಲಿ ೧-೧ ಗೋಲಿನಿಂದ ಸಮಬಲ ಕಂಡಾಗಲಂತೂ, ಕ್ರೊವೇಷ್ಯಾ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿಯಿತು. ಇಂಗ್ಲೆಂಡ್ ಕೂಡ ಅದಕ್ಕೆ ತಕ್ಕಂತೆ ಜಯದ ಗೋಲಿಗಾಗಿ ತಡಕಾಡುತ್ತಿತ್ತು. ಆದರೆ, ತನ್ನ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಗ್ಲೆಂಡ್ ಆಟದ ಕಡೇ ಭಾಗದಲ್ಲಿ ಗೋಲು ಬಿಟ್ಟುಕೊಟ್ಟು ಯಾತನೆ ಅನುಭವಿಸಿತು.

ಇನ್ನೇನು ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಇಂಗ್ಲೆಂಡ್‌ನ ಬಹುತೇಕ ಆಟಗಾರರು ಹಿಂದೆ ಸರಿದಿದ್ದರು. ಈ ವೇಳೆಯಲ್ಲಿ ಸಹ ಆಟಗಾರ ಇವಾನ್ ಪೆರಿಸಿಕ್ ನೆರವಿನೊಂದಿಗೆ ಮರಿಯೋ ಎಡಗಾಲಿನಿಂದ ಗೋಲು ಹೊಡೆದು ಇಂಗ್ಲೆಂಡ್ ಪಾಳೆಯದಲ್ಲಿ ತಲ್ಲಣ ಸೃಷ್ಟಿಸಿದರು. ಹೆಚ್ಚುವರಿ ಸಮಯದಲ್ಲಿ ಯಾವುದೇ ಗೋಲು ದಾಖಲಾಗದೆ ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೇತರನ್ನು ನಿರ್ಣಯಿಸಬೇಕಾಗುತ್ತದೆ ಎಂಬಂಥ ಸಮಯದಲ್ಲೇ ಸುಲಭಕರ ಗೋಲಿನೊಂದಿಗೆ ಮಾಂಡ್‌ಜುಕಿಕ್ ಮಿಂಚು ಹರಿಸಿದರು.

ಇತಿಹಾಸ ಬರೆದ ಕೀರನ್

ಅಂದಹಾಗೆ, ಇಂಗ್ಲೆಂಡ್ ಪರ ಮೊದಲ ಗೋಲು ತಂದುಕೊಟ್ಟ ಕೀರನ್, ಹೊಸದೊಂದು ದಾಖಲೆಯನ್ನು ಬರೆದರು. ೨೦೦೬ರಲ್ಲಿ ಈಕ್ವೆಡಾರ್ ವಿರುದ್ಧ ಇಂಥದ್ದೇ ಫ್ರೀ ಕಿಕ್‌ನಲ್ಲಿ ಆಗಿನ ಇಂಗ್ಲೆಂಡ್ ತಂಡದ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಗಳಿಸಿದ ಗೋಲಿನ ನಂತರ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಫ್ರೀ ಕಿಕ್‌ನಲ್ಲಿ ನೇರ ಗೋಲು ಗಳಿಸಿದ್ದು ಎರಡನೇ ಬಾರಿ. ಆ ನಿಟ್ಟಿನಲ್ಲಿ ಮಿಡ್‌ಫೀಲ್ಡರ್ ಕೀರನ್ ಟ್ರಿಪ್ಪಿಯರ್ ಇತಿಹಾಸ ಬರೆದರು.

ಕೀರನ್ ಗೋಲಿನೊಂದಿಗೆ ಮುನ್ನಡೆ ಪಡೆದ ಇಂಗ್ಲೆಂಡ್, ವಿರಾಮದವರೆಗೂ ಕ್ರೊವೇಷ್ಯಾ ದಾಳಿ ಮಾಡದಂತೆ ಎಚ್ಚರಿಕೆ ವಹಿಸಿತು. ಮುಖ್ಯವಾಗಿ, ಇವಾನ್ ರಾಕಿಟಿಚ್ ಮೇಲಿಂದ ಮೇಲೆ ನಡೆಸಿದ ಹಲವಾರು ದಾಳಿಯನ್ನು ವ್ಯರ್ಥಗೊಳಿಸಿಸುವಲ್ಲಿಯೂ ಇಂಗ್ಲೆಂಡ್ ಯಶಸ್ವಿಯಾಯಿತು. ಆದರೆ, ವಿರಾಮದ ನಂತರದಲ್ಲಿ ಅದು ಮೈಮರೆತದ್ದರ ಫಲವಾಗಿ ಇಡೀ ಪಂದ್ಯದ ಚಿತ್ರಣವನ್ನೇ ಕ್ರೊವೇಷಿಯನ್ನರು ಬುಡಮೇಲು ಮಾಡಿದರು.

ಇದನ್ನೂ ಓದಿ : ಸೆಮಿಫೈನಲ್ ಸಮರದಲ್ಲಿ ಫ್ರೆಂಚರನ್ನು ಫೈನಲ್‌ಗೆ ಕೊಂಡೊಯ್ದ ಗ್ರೀಜ್‌ಮನ್, ಟಿಟಿ

ಆಂಗ್ಲರ ಎಡವಟ್ಟು

ಪಂದ್ಯದ ಮೊದಲಾರ್ಧದಲ್ಲೇ ೧-೦ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡಿಗರನ್ನು ಕೊಂಚ ಮೈಮರೆಯುವಂತೆ ಮಾಡಿತು. ಅರ್ಜೆಂಟೀನಾದಂಥ ಪ್ರಬಲ ತಂಡವನ್ನು ೩-೦ ಗೋಲುಗಳಿಂದ ಮಣಿಸಿ ಟೂರ್ನಿಯಲ್ಲಿ ಆಘಾತಕಾರಿ ಹಾಗೂ ಅಚ್ಚರಿದಾಯಕ ಫಲಿತಾಂಶ ನೀಡಿದ್ದ ಕ್ರೊವೇಷ್ಯಾವನ್ನು ಅದು ಲಘುವಾಗಿ ಪರಿಗಣಿಸಿ ಅದಕ್ಕೆ ಭಾರೀ ಬೆಲೆ ತೆತ್ತಿತು.

ಮುಖ್ಯವಾಗಿ, ದ್ವಿತೀಯಾರ್ಧದಲ್ಲಿ ಅದರ ಹೋರಾಟ ಕೂಡಾ ಕ್ರೊವೇಷ್ಯಾದಷ್ಟು ಆಕ್ರಮಣಕಾರಿಯಾಗಿ ಆಗಲೀ, ಇಲ್ಲವೇ ರಕ್ಷಣಾತ್ಮಕವಾಗಿಯಾಗಲೀ ಕೂಡಿರಲಿಲ್ಲ. ಅದಕ್ಕೆ ತಾಜಾ ಉದಾಹರಣೆ ಮಿಡ್‌ಫೀಲ್ಡರ್ ಇವಾನ್ ಪೆರಿಸಿಕ್ ಬಾರಿಸಿದ ಅದ್ಭುತ ಗೋಲು. ಈ ಗೋಲು ಸಮಬಲ ತಂದ ಮೇಲೆ ಇತ್ತಂಡಗಳಿಂದಲೂ ಗೋಲು ದಾಖಲಾಗದೆ ಪಂದ್ಯ ಹೆಚ್ಚುವರಿ ಸಮಯಕ್ಕೆ ಜಾರಿತು. ಈ ಹಂತದಲ್ಲಿ ಮರಿಯೋ ಮ್ಯಾಜಿಕ್ ಕ್ರೊವೇಷ್ಯಾಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು.

ಮುಖ್ಯಾಂಶಗಳು

  • ಇಂದಿನ ಪಂದ್ಯ ಇತ್ತಂಡಗಳಿಗೂ ಎಂಟನೆಯದ್ದಾಗಿತ್ತು. ಹಿಂದಿನ ಏಳು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಲ್ಕರಲ್ಲಿ ಗೆದ್ದಿದ್ದರೆ, ಕ್ರೊವೇಷ್ಯಾ ಎರಡರಲ್ಲಿ ಜಯ ಸಾಧಿಸಿತ್ತು. ಒಂದು ಪಂದ್ಯ ಡ್ರಾ ಆಗಿತ್ತು. ಈ ಆರೂ ಪಂದ್ಯಗಳೂ ಬುಧವಾರದಂದೇ ನಡೆದಿತ್ತೆನ್ನುವುದು ವಿಶೇಷ
  • ೨೦೦೪ರ ಯೂರೋ ಕಪ್ ಪಂದ್ಯಾವಳಿಯಲ್ಲಿ ಎದುರುಬದುರಾಗಿದ್ದ ಇತ್ತಂಡಗಳ ಪೈಕಿ ಇಂಗ್ಲೆಂಡ್ ೪-೨ ಗೋಲುಗಳಿಂದ ಕ್ರೊವೇಷ್ಯಾವನ್ನು ಮಣಿಸಿತ್ತು
  • ೧೯೬೬ರಲ್ಲಿ ಪೋರ್ಚುಗಲ್ ವಿರುದ್ಧ ೨-೧ ಗೋಲುಗಳಿಂದ ಗೆದ್ದಿದ್ದ ಇಂಗ್ಲೆಂಡ್, ೧೯೯೦ರ ಆವೃತ್ತಿಯಲ್ಲಿಯೂ ಸೆಮಿಫೈನಲ್ ತಲುಪಿತ್ತಾದರೂ, ಜರ್ಮನಿ ಎದುರು ಸೋತಿತ್ತು
  • ೧೯೮೨ರಿಂದೀಚೆಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಎದುರುಬದುರಾದ ಎರಡು ಯೂರೋಪಿಯನ್ ರಾಷ್ಟ್ರಗಳಲ್ಲಿ ಇಂಗ್ಲೆಂಡ್ ಒಮ್ಮೆಯೂ ಸೋತಿದ್ದಿಲ್ಲ.
  • ಪ್ರಮುಖ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎಚ್ಚರ ತಪ್ಪಿದ್ದು ಐದನೇ ಬಾರಿ. ೧೯೬೮ರ ಯೂರೋ ಕಪ್‌ನಲ್ಲಿ ಯುಗೊಸ್ಲಾವಿಯಾ ವಿರುದ್ಧ ನಾಲ್ಕರ ಘಟ್ಟದಲ್ಲಿ ಸೋತಿದ್ದ ಇಂಗ್ಲೆಂಡ್, ೧೯೯೦ರ ವಿಶ್ವಕಪ್‌ನಲ್ಲಿ ಜರ್ಮನಿ ವಿರುದ್ಧ ಸೋತಿತ್ತು. ಅಂತೆಯೇ, ೧೯೯೬ರ ಯೂರೋ ಕಪ್‌ನ ಸೆಮಿಫೈನಲ್‌ನಲ್ಲಿ ಜರ್ಮನಿಗೆ ಮಣಿದಿದ್ದ ಇಂಗ್ಲೆಂಡ್, ಇದೀಗ ಪ್ರಸ್ತುತ ಟೂರ್ನಿಯಲ್ಲಿ ಕ್ರೊವೇಷ್ಯಾಗೆ ಮಣಿದಿದೆ.
  • ವಿಶ್ವಕಪ್ ಪಂದ್ಯಾವಳಿಯ ಐದು ಯತ್ನಗಳಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ ಚಾರಿತ್ರಿಕ ಸಾಧನೆಗೆ ಕ್ರೊವೇಷ್ಯಾ ಭಾಜನವಾಯಿತು. ಮಿಲೇನಿಯಂ ಬಳಿಕ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More