ವಿಶ್ವಕಪ್ ಪ್ರಯೋಗದ ಜತೆಗೆ ಎರಡನೇ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿ ಭಾರತ

ಮೂರು ಚುಟುಕು ಪಂದ್ಯ ಸರಣಿಯನ್ನು ೨-೧ರಿಂದ ಗೆಲ್ಲುವುದರೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಶುಭಾರಂಭ ಮಾಡಿರುವ ಪ್ರವಾಸಿ ಟೀಂ ಇಂಡಿಯಾ, ಇದೀಗ ಏಕದಿನ ಸರಣಿಯನ್ನು ಗುರಿಯಾಗಿಸಿಕೊಂಡಿದೆ. ಮೂರು ಪಂದ್ಯಗಳ ಸರಣಿಗೆ ನಾಟಿಂಗ್‌ಹ್ಯಾಮ್‌ನಲ್ಲಿ ಗುರುವಾರ (ಜುಲೈ ೧೨) ಚಾಲನೆ ಸಿಗಲಿದೆ

ಹೆಚ್ಚೂ ಕಮ್ಮಿ ಇದೇ ಸಮಯಕ್ಕೆ ಒಂದು ವರ್ಷದ ಬಳಿಕ ಇದೇ ಬ್ರಿಟಿಷರ ನೆಲದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ಗೆ ಭಾರತ ತಂಡ ಸೂಕ್ತ ತಯಾರಿ ನಡೆಸಲು ಸಜ್ಜಾಗಿದೆ. ಇಂಗ್ಲೆಂಡ್ ಪ್ರವಾಸದ ಆರಂಭಿಕ ಹಂತದಲ್ಲಿ ಅಭೂತಪೂರ್ವ ಯಶ ಕಂಡಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ, ಇದೀಗ ಏಕದಿನ ಸರಣಿಯಲ್ಲಿಯೂ ಇದೇ ಆಕ್ರಮಣಕಾರಿ ಆಟವಾಡುವ ಸಂಕಲ್ಪ ತೊಟ್ಟಿದೆ.

ಆದರೆ, ಚುಟುಕು ಪಂದ್ಯ ಸರಣಿಯನ್ನು ಕಳೆದುಕೊಂಡು ತಿದಿಗುಟ್ಟುತ್ತಿರುವ ಆತಿಥೇಯ ಇಂಗ್ಲೆಂಡ್, ಪ್ರವಾಸಿಗರಿಗೆ ಚುರುಕು ಮುಟ್ಟಿಸುವ ಕಾರ್ಯತಂತ್ರ ಹೆಣೆದಿದೆ. ಏಕದಿನ ಕ್ರಿಕೆಟ್ ಪ್ರಕಾರದಲ್ಲಿ ವಿಶ್ವದ ನಂ ೧ ತಂಡವಾಗಿರುವ ಇಂಗ್ಲೆಂಡ್, ಮೇಲ್ನೋಟಕ್ಕೆ ಸರಣಿ ಗೆಲ್ಲುವ ಫೇವರಿಟ್ ಎನಿಸಿದರೂ, ಆಲ್ರೌಂಡ್ ಆಟದೊಂದಿಗೆ ಪ್ರವಾಸದ ಮೊದಲ ಹಂತದಲ್ಲೇ ವಿಸ್ಮಯಕಾರಿ ಪ್ರದರ್ಶನ ನೀಡಿರುವ ಕೊಹ್ಲಿ ಪಡೆಯನ್ನು ಮಣಿಸುವುದು ಅಷ್ಟು ಸುಲಭಸಾಧ್ಯವಲ್ಲ.

ಇಂಗ್ಲೆಂಡ್ ಆರ್ಭಟ

ಭಾರತ ಸರಣಿಗೂ ಮುನ್ನ ಮುಕ್ತಾಯ ಕಂಡ ಆಸ್ಟ್ರೇಲಿಯಾ ವಿರುದ್ಧದ ೬ ಏಕದಿನ ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು ಇಂಗ್ಲೆಂಡ್ ೬-೦ ಅಂತರದಿಂದ ಗೆದ್ದಿತ್ತು. ಜೋಸ್ ಬಟ್ಲರ್, ಜೇಸನ್ ರಾಯ್, ಜಾನಿ ಬೇರ್‌ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್ ಹಾಗೂ ಬೆನ್ ಸ್ಟೋಕ್ಸ್‌ರಂಥ ಪ್ರಚಂಡ ಆಟಗಾರರಿಂದ ಕೂಡಿರುವ ಇಂಗ್ಲೆಂಡ್ ಏಕದಿನ ತಂಡ ಅತ್ಯಂತ ಬಲಾಢ್ಯವಾಗಿದೆ. ಭಾರತದ ಸ್ಪಿನ್ ಬೌಲಿಂಗ್‌ಗೆ ದಿಟ್ಟ ಉತ್ತರ ನೀಡಿದ್ದೇ ಆದಲ್ಲಿ ಇಂಗ್ಲೆಂಡ್‌ ಅನ್ನು ನಿಯಂತ್ರಿಸುವುದು ಕೊಹ್ಲಿ ಬಳಗಕ್ಕೆ ಕಷ್ಟವಾಗಲಿದೆ.

ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಈ ಸರಣಿಯನ್ನು ಗೆದ್ದದ್ದೇ ಆದಲ್ಲಿ, ವಿರಾಟ್ ಪಡೆ ಆಂಗ್ಲರನ್ನು ಐಸಿಸಿ ಶ್ರೇಯಾಂಕ ಪಟ್ಟಿಯ ಅಗ್ರಸ್ಥಾನದಿಂದ ಕೆಳೆಗಳೆದು ತಾನು ಆ ಸ್ಥಾನಕ್ಕೆ ಲಗ್ಗೆ ಹಾಕಲಿದೆ. ಅಗ್ರಪಟ್ಟದೊಂದಿಗೆ ಸರಣಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂಗ್ಲೆಂಡ್ ತಂಡದ ಮುಂದಿದೆ.

ಇದನ್ನೂ ಓದಿ : ರೋಹಿತ್ ಶರ್ಮಾ ಅಜೇಯ ಶತಕದಲ್ಲಿ ಟಿ೨೦ ಸರಣಿ ಗೆದ್ದ ಟೀಂ ಇಂಡಿಯಾ

ದಾಖಲೆ ಇನ್ನಿಂಗ್ಸ್

ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ಮನೋಜ್ಞ ಇನ್ನಿಂಗ್ಸ್‌ಗಳನ್ನು ಕಟ್ಟಿ ವಿಶ್ವದಾಖಲೆ ಬರೆದಿರುವ ಇಂಗ್ಲೆಂಡ್ ತಂಡ ನಿರ್ದಯಿ ಆಟಕ್ಕೆ ಹೆಸರಾಗಿದೆ. ೨೦೧೫ರ ಐಸಿಸಿ ವಿಶ್ವಕಪ್‌ನಲ್ಲಿನ ವೈಫಲ್ಯದ ನಂತರದಲ್ಲಿ ೫೦ ಓವರ್‌ಗಳ ಪ್ರಕಾರದಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ಬೆರಗು ಮೂಡಿಸುವಂತಿದೆ. ಕಳೆದ ವಿಶ್ವಕಪ್ ಆಚೆಗೆ ೬೯ ಏಕದಿನ ಪಂದ್ಯಗಳನ್ನಾಡಿರುವ ಆಂಗ್ಲ ಪಡೆ, ೪೬ರಲ್ಲಿ ಗೆಲುವು ಸಾಧಿಸಿದೆ.

ಭಾರತ ವಿರುದ್ಧ ಇಂಗ್ಲೆಂಡ್ ದ್ವಿಪಕ್ಷೀಯ ಸರಣಿ ಆಡಿದ್ದು ೨೦೧೭ರಲ್ಲಿ. ತವರಿನಲ್ಲಿ ಮಾತ್ರವಲ್ಲ, ತವರಿನಾಚೆಗೂ ಇಂಗ್ಲೆಂಡ್ ತಂಡದ ಸಾಧನೆಯೇನೂ ಕಮ್ಮಿಯಿಲ್ಲ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸದಲ್ಲಿ ಇಯಾನ್ ಮಾರ್ಗನ್ ಪಡೆಯ ಬ್ಯಾಟಿಂಗ್ ಭೋರ್ಗರೆದಿದೆ. ಆಡಿದ ೬೯ ಪಂದ್ಯಗಳಲ್ಲಿಯೂ ೩೦೦+ ರನ್ ಕಲೆಹಾಕಿರುವುದಲ್ಲದೆ, ೧೧ ಬಾರಿ ೩೫೦ ರನ್ ಪೇರಿಸಿರುವ ಇಂಗ್ಲೆಂಡ್, ೩ ಬಾರಿ ೪೦೦ ರನ್ ಗಡಿ ದಾಟಿದೆ.

ಈ ಎಲ್ಲ ಅಂಕಿಅಂಶಗಳು ಭಾರತ ತಂಡದ ಏಕದಿನ ಸರಣಿ ಗೆಲುವಿನ ಆಸೆಗೆ ಅಡ್ಡಿಯಾಗಲಿದೆ ಎಂಬುದನ್ನು ಒತ್ತಿ ಹೇಳುತ್ತಿವೆ. ಆದರೆ, ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲಿ ವಿಶೇಷವಾಗಿ ಪದಾರ್ಪಣೆ ದಿನದಿಂದ ಮಿಂಚು ಹರಿಸುತ್ತಿರುವ ಸ್ಪಿನ್‌ದ್ವಯರಾದ ಯಜುವೇಂದ್ರ ಚಾಹಲ್ (೨೩ ಏಕದಿನ ಪಂದ್ಯಗಳಲ್ಲಿ ೪೩ ವಿಕೆಟ್) ಹಾಗೂ ಚೈನಾಮನ್ ಕುಲದೀಪ್ ಯಾದವ್ (೨೦ ಏಕದಿನ ಪಂದ್ಯಗಳಲ್ಲಿ ೩೯ ವಿಕೆಟ್) ಮೇಲೆ ಅತೀವ ಭರವಸೆ ಇರಿಸಿಕೊಂಡಿರುವ ಭಾರತ, ಆಂಗ್ಲರನ್ನು ಅದರ ನೆಲದಲ್ಲೇ ಬೇಟೆಯಾಡುವ ಗುರಿ ಹೊತ್ತಿದೆ.

ವಿಶ್ವಕಪ್ ಪ್ರಯೋಗ

ಮೊದಲೇ ಹೇಳಿದಂತೆ ಇಂಗ್ಲೆಂಡ್ ವಿರುದ್ಧದ ಈ ಮೂರು ಏಕದಿನ ಪಂದ್ಯ ಸರಣಿಯನ್ನು ಭಾರತ ಮುಂಬರಲಿರುವ ವಿಶ್ವಕಪ್ ಪ್ರಯೋಗಕ್ಕೆ ಒಡ್ಡಿಕೊಳ್ಳುವುದು ನಿಶ್ಚಿತವಾಗಿದೆ. ಕನ್ನಡಿಗ ಕೆ ಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿರುವುದು ಒಂದೆಡೆಯಾದರೆ, ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡಾ ನಿರ್ಣಾಯಕವಾದ ಕೊನೆಯ ಟಿ೨೦ ಪಂದ್ಯದಲ್ಲಿ ಅಜೇಯ ಶತಕದೊಂದಿಗೆ ಮಿಂಚಿದ್ದರು. ಸದ್ಯ, ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ತುಸು ಚಿಂತೆ ತಂದಿರುವುದು ಶಿಖರ್ ಧವನ್ ಅಸ್ಥಿರ ಆಟ.

ಇನ್ನು, ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕಕ್ಕಿಂತಲೂ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿಯುವ ಸಾಧ್ಯತೆಯೂ ಇದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಇಂಥದ್ದೊಂದು ಪ್ರಯೋಗ ಟೀಂ ಇಂಡಿಯಾಗೆ ಅನಿವಾರ್ಯವಾಗಿದೆ ಕೂಡಾ. ಮೂರನೇ ಕ್ರಮಾಂಕದಲ್ಲಿ ರಾಹುಲ್‌ ಅವರನ್ನು ಆಡಿಸುವ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರವೂ ಫಲಕೊಟ್ಟಿದೆ. ಐರ್ಲೆಂಡ್ ವಿರುದ್ಧ ೭೦ ರನ್ ಗಳಿಸಿದ್ದ ರಾಹುಲ್, ಇಂಗ್ಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಅಜೇಯ ೧೦೧ ರನ್ ಗಳಿಸಿದ್ದರು.

ಇತ್ತ, ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಎಂ ಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಪಲ್ಲಟವಾಗುವ ಸಂಭವಗಳು ಕಡಿಮೆ. ಅಂತೆಯೇ, ಬೌಲಿಂಗ್ ವಿಭಾಗದಲ್ಲಿ ಸ್ಪಿನ್‌ದ್ವಯರಾದ ಚಾಹಲ್ ಮತ್ತು ಕುಲದೀಪ್ ಜತೆಗೆ ಹೆಚ್ಚುವರಿ ವೇಗದ ಬೌಲರ್‌ ಬೇಕೆನಿಸಿದರೆ ಸಿದ್ಧಾರ್ಥ್ ಕೌಲ್ ಇಲ್ಲವೇ ಶಾರ್ದೂಲ್ ಠಾಕೂರ್ ಸಜ್ಜಾಗಿದ್ದಾರೆ. ಅಂತೆಯೇ, ಬೆನ್ನು ನೋವಿನಿಂದ ಚೇತರಿಸಿಕೊಂಡದ್ದೇ ಆದಲ್ಲಿ, ಭುವನೇಶ್ವರ್ ಸಹ ವೇಗಿ ಉಮೇಶ್ ಯಾದವ್‌ಗೆ ಸಾಥ್ ನೀಡಲಿದ್ದಾರೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಎಂ ಎಸ್ ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್, ಸಿದ್ಧಾರ್ಥ್ ಕೌಲ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್.

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜಾನಿ ಬೇರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಮೊಯೀನ್ ಅಲಿ, ಜೋ ರೂಟ್, ಜೇಕ್ ಬಾಲ್, ಟಾಮ್ ಕುರನ್, ಅಲೆಕ್ಸ್ ಹೇಲ್ಸ್, ಲಿಯಾಮ್ ಪ್ಲಂಕೆಟ್, ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಡೇವಿಡ್ ವಿಲ್ಲಿ ಮತ್ತು ಮಾರ್ಕ್ ವುಡ್.

ಪಂದ್ಯ ಆರಂಭ: ಸಂಜೆ ೫.೦೦ರಿಂದ (ಭಾರತೀಯ ಕಾಲಮಾನ) | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More