ಪೊಟ್ರೊ ಸವಾಲು ಮೆಟ್ಟಿದ ನಡಾಲ್ ಸೆಮಿಗೆ; ಜೊಕೊ ಜೊತೆ ಸೆಣಸಾಟ

ಜಿದ್ದಾಜಿದ್ದಿನಿಂದ ಕೂಡಿದ್ದ ಐದು ಸೆಟ್‌ಗಳ ಸೆಣಸಾಟದಲ್ಲಿ ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ವಿರುದ್ಧ ಜಯಭೇರಿ ಬಾರಿಸಿದ ರಾಫೆಲ್ ನಡಾಲ್, ವಿಂಬಲ್ಡನ್‌ನಲ್ಲಿ ೬ ವರ್ಷಗಳ ಬಳಿಕ ಸೆಮಿಫೈನಲ್ ತಲುಪಿದರು. ಶುಕ್ರವಾರ (ಜು.೧೩) ಜೊಕೊವಿಚ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕಾದಾಡಲಿದ್ದಾರೆ

ವರ್ಷದ ಮೂರನೇ ಗ್ರಾಂಡ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ವಿಶ್ವದ ನಂ ೧ ಟೆನಿಸಿಗ ರಾಫೆಲ್ ನಡಾಲ್ ಇನ್ನೆರಡು ಹೆಜ್ಜೆಗಳನ್ನಷ್ಟೇ ಕ್ರಮಿಸಬೇಕಿದೆ. ಕಳೆದ ತಿಂಗಳಷ್ಟೇ ಪ್ಯಾರಿಸ್‌ನಲ್ಲಿ ೧೧ನೇ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ನಡಾಲ್, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮತ್ತೆ ಪ್ರಶಸ್ತಿ ಕಚ್ಚಲು ಅಣಿಯಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಅವರು ಸೆಮಿಫೈನಲ್‌ನಲ್ಲಿ ಅವರು ವಿಶ್ವದ ಮಾಜಿ ನಂ ೧ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಗೆಲುವು ಸಾಧಿಸಬೇಕಿದೆ.

ಇನ್ನು, ಬುಧವಾರ (ಜುಲೈ ೧೧) ತಡರಾತ್ರಿ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯಗಳೆರಡು ಅತೀವ ರೋಚಕತೆಯ ಗೂಡಾಗಿತ್ತು. ಮೊದಲಿಗೆ, ಸ್ವಿಸ್ ಆಟಗಾರ ಹಾಗೂ ಹಾಲಿ ಚಾಂಪಿಯನ್ ರೋಜರ್ ಫೆಡರರ್, ಜಿದ್ದಾಜಿದ್ದಿನಿಂದ ಕೂಡಿದ್ದ ಐದು ಸೆಟ್‌ಗಳ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಕೆವಿನ್ ಆ್ಯಂಡರ್ಸನ್ ವಿರುದ್ಧ ಸೋಲನುಭವಿಸಿ ಹೊರಬಿದ್ದರು.

ಇದಾದ ಕೆಲವೇ ತಾಸುಗಳಲ್ಲಿ ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಕೂಡಾ ಅವರನ್ನು ಹಿಂಬಾಲಿಸಿದರು. ಕ್ಲೇ ಕೋರ್ಟ್‌ ಕಿಂಗ್ ವಿರುದ್ಧದ ಗ್ರಾಸ್ ಕೋರ್ಟ್ ಅಂಗಣದಲ್ಲಿ ಈ ಹಿಂದಿನ ಎರಡೂ ಮುಖಾಮುಖಿಯಲ್ಲಿ ಸೋತಿದ್ದ ಪೊಟ್ರೊ, ಮೊದಲ ಗೆಲುವಿನ ಆಂಚಿನಲ್ಲಿ ಎಡವಿದರು. ಅಮೋಘ ಆಟವಾಡಿದ ನಡಾಲ್, ೭-೫, ೬-೭ (೭/೯), ೪-೬, ೬-೪, ೬-೪ ಸೆಟ್‌ಗಳಲ್ಲಿ ಗೆಲುವು ಪಡೆದು ೨೦೧೧ರ ನಂತರ ವಿಂಬಲ್ಡನ್ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ಐದು ತಾಸಿನ ಆಟ

ಫೆಡರರ್ ಮತ್ತು ಕೆವಿನ್ ನಡುವಣದ ಪಂದ್ಯದಂತೆ ನಡಾಲ್ ಹಾಗೂ ಪೊಟ್ರೊ ನಡುವಣದ ಪಂದ್ಯವೂ ಐದು ತಾಸಿನದ್ದಾಗಿತ್ತು. ಮೊದಲ ಎರಡೂ ಸೆಟ್‌ಗಳಲ್ಲಿ ಸಮಬಲ ಸಾಧಿಸಿದ ಬಳಿಕ ನಿರ್ಣಾಯಕವಾದ ಐದನೇ ಸೆಟ್‌ನಲ್ಲಿ ಒತ್ತಡ ಮೆಟ್ಟಿನಿಂತು ಅತ್ಯಾಕರ್ಷಕ ಆಟವಾಡಿದ ಸ್ಪೇನ್ ಆಟಗಾರ ಜಯದ ನಗೆಬೀರಿದರು.

೨೦೧೩ರಲ್ಲಿ ಒಮ್ಮೆ ಮಾತ್ರ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದ ಪೊಟ್ರೊ, ಐದು ವರ್ಷಗಳ ಬಳಿಕ ಮತ್ತೊಮ್ಮೆ ನಾಲ್ಕರ ಘಟ್ಟ ತಲುಪುವ ಕನಸು ಕಂಡಿದ್ದರಾದರೂ, ಅದು ಸಾಕಾರವಾಗಲು ನಡಾಲ್ ಬಿಡಲಿಲ್ಲ. ಅಂದಹಾಗೆ, ಪೊಟ್ರೊ ಮತ್ತು ನಡಾಲ್ ನಡುವಣದ ಆಟ ಕೆಲವೊಂದು ಪ್ರಹಸನದಿಂದಲೂ ಕೂಡಿತ್ತು.

ಮೇಲುಗೈ ಸಾಧಿಸುವ ಪರಸ್ಪರರ ಕಾದಾಟದಲ್ಲಿ ಪೊಟ್ರೊ, ನಿಯಂತ್ರಣ ಕಳೆದುಕೊಂಡು ಅಂಗಣದಲ್ಲೇ ತಡವರಿಸಿ ಬಿದ್ದರೆ, ನಡಾಲ್, ಪ್ರೇಕ್ಷಕರ ಸ್ಟ್ಯಾಂಡ್‌ನೊಳಗಡೆಯೇ ನುಗ್ಗಿದ ಘಟನೆಯೂ ನಡೆಯಿತು. ಆದರೆ, ರೋಚಕ ಸೆಣಸಾಟದ ಐದನೇ ಸೆಟ್‌ನಲ್ಲಿ ಐದು ಬ್ರೇಕ್ ಪಾಯಿಂಟ್ಸ್ ಗಳಿಸಿದ ನಡಾಲ್, ಪೊಟ್ರೊ ಹೋರಾಟಕ್ಕೆ ತೆರೆಎಳೆದರು.

ಇದನ್ನೂ ಓದಿ : ವಿಂಬಲ್ಡನ್ | ಹಾಲಿ ಚಾಂಪಿಯನ್ ಫೆಡರರ್‌ಗೆ ಕ್ವಾರ್ಟರ್‌ನಲ್ಲಿ ಸೋಲಿನ ಆಘಾತ

ಇಸ್ನೆರ್ ಸೆಮಿಗೆ

ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕ ಆಟಗಾರ ಜಾನ್ ಇಸ್ನೆರ್ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಧಾವಿಸಿದರು. ಕೆನಡಾ ಆಟಗಾರ ಮಿಲಾಸ್ ರಾನಿಕ್ ವಿರುದ್ಧದ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಇಸ್ನೆರ್, ೬-೭ (೫/೭), ೭-೬ (೯/೭), ೬-೪, ೬-೩ ಸೆಟ್‌ಗಳಲ್ಲಿ ಜಯಶಾಲಿಯಾದರು.

ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಶರವೇಗದಲ್ಲಿ ತಿರುಗಿಬಿದ್ದ ಇಸ್ನೆರ್, ರಾನಿಕ್ ಎದುರಿನ ಕಾದಾಟದಲ್ಲಿ ಮೇಲುಗೈ ಸಾಧಿಸಿದರು. ಇದರೊಂದಿಗೆ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಇಸ್ನೆರ್ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. ೩೩ರ ಹರೆಯದ ಇಸ್ನೆರ್, ೪೧ನೇ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಉಪಾಂತ್ಯಕ್ಕೆ ಅರ್ಹತೆ ಪಡೆದದ್ದು ಅಮೆರಿಕನ್ ಆಟಗಾರನ ಐತಿಹಾಸಿಕ ಸಾಧನೆ ಎನಿಸಿಕೊಂಡಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More