ಕುಲದೀಪ್ ಸ್ಪಿನ್ ಸುಳಿಯಲ್ಲಿ ಸಿಲುಕಿದ ಆಂಗ್ಲರಿಗೆ ಬಟ್ಲರ್-ಸ್ಟೋಕ್ಸ್ ಆಸರೆ

ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ (೨೫ಕ್ಕೆ ೬) ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್‌ಗೆ ಇಂಗ್ಲೆಂಡ್ ತತ್ತರಿಸಿತು. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬಿಜ್‌ನಲ್ಲಿ ಗುರುವಾರ (ಜು.೧೨) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರನ್ನು ಕುಲದೀಪ್ ೨೬೮ಕ್ಕೆ ಕಟ್ಟಿಹಾಕುವಲ್ಲಿ ಯಶ ಕಂಡರು 

ಉಪಖಂಡದಲ್ಲಿ ಸ್ಪಿನ್ ಸುಳಿಯಲ್ಲಿ ವಿದೇಶಿಗರು ಸಿಲುಕಿ ಪರದಾಡುವುದು ಮಾಮೂಲಿ. ಆದರೆ, ವಿದೇಶಿ ನೆಲದಲ್ಲಿಯೂ ಸ್ಪಿನ್ ಚಮತ್ಕಾರ ಮೆರೆಯುವುದೆಂದರೆ ಆತಿಥೇಯ ತಂಡದ ನಿಷ್ಕ್ರಿಯತೆ ಎಷ್ಟರಮಟ್ಟಿನದ್ದು ಎಂಬುದು ವೇದ್ಯವಾಗುವ ಸಂಗತಿ. ಪ್ರವಾಸಿ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತೊಮ್ಮೆ ತನ್ನ ಮುಂಗೈ ಮಣಿಕಟ್ಟಿನ ಚಮತ್ಕಾರ ಮೆರೆದ ಫಲವಾಗಿ ಆತಿಥೇಯ ಇಂಗ್ಲೆಂಡ್ ನಿಗದಿತ ೫೦ ಓವರ್‌ಗಳನ್ನೂ ಮುಗಿಸಲಾಗದೆ ಸರ್ವಪತನ ಕಾಣುವಂತಾಯಿತು.

ಜೋಸ್ ಬಟ್ಲರ್ (೫೩; ೫೧ ಎಸೆತ, ೫ ಬೌಂಡರಿ) ಹಾಗೂ ಬೆನ್ ಸ್ಟೋಕ್ಸ್ (೫೦: ೧೦೩ ಎಸೆತ, ೨ ಬೌಂಡರಿ) ಏನಾದರೂ ಮಧ್ಯಮ ಕ್ರಮಾಂಕದಲ್ಲಿ ಎಡವಿದ್ದರೆ, ಇಂಗ್ಲೆಂಡ್‌ನ ಇನ್ನಿಂಗ್ಸ್ ಅತ್ಯಂತ ಶೋಚನೀಯವಾಗಿರುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಆದರೆ, ಈ ಇಬ್ಬರ ಜವಾಬ್ದಾರಿಯುತ ಹಾಗೂ ಎಚ್ಚರಿಕೆಯ ಆಟದಿಂದಾಗಿ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಸಫಲವಾಯಿತು.

ಇಂಗ್ಲೆಂಡ್ ಪ್ರವಾಸದ ಮೊದಲ ಹಂತದಲ್ಲಿ ನಡೆದ ಮೂರು ಚುಟುಕು ಪಂದ್ಯ ಸರಣಿಯನ್ನು ೨-೧ರಿಂದ ಗೆದ್ದ ಭಾರತ ತಂಡ, ಆತಿಥೇಯರಿಗೆ ಈ ಬಾರಿ ಅಪಾಯಕಾರಿ ಆಗುವ ಎಲ್ಲ ಸುಳಿವುಗಳನ್ನೂ ನೀಡಿತ್ತು. ಈ ಸುಳಿವರಿತ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟೂ ಹೋರಾಟ ನಡೆಸಿದರಾದರೂ, ಸ್ಪಿನ್ ಬೌಲಿಂಗ್‌ಗೆ ಸಮರ್ಥ ಉತ್ತರ ನೀಡಲು ಇನ್ನೂ ಅದಕ್ಕೆ ಸಾಧ್ಯವಾಗಿಲ್ಲ ಎಂಬುದು ಋಜುವಾಯಿತು.

ಇದನ್ನೂ ಓದಿ : ರೋಹಿತ್ ಶರ್ಮಾ ಅಜೇಯ ಶತಕದಲ್ಲಿ ಟಿ೨೦ ಸರಣಿ ಗೆದ್ದ ಟೀಂ ಇಂಡಿಯಾ

ಉತ್ತಮ ಆರಂಭ

ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್‌ನ ಆರಂಭವೇನೂ ಕಳಪೆಯಿಂದ ಕೂಡಿರಲಿಲ್ಲ. ಆಕ್ರಮಣಕಾರಿ ಆಟಕ್ಕೆ ಹೆಸರಾದ ಜೇಸನ್ ರಾಯ್ (೩೮: ೩೫ ಎಸೆತ, ೬ ಬೌಂಡರಿ) ಮತ್ತು ಜಾನಿ ಬೇರ್‌ಸ್ಟೋ (೩೮: ೩೫ ಎಸೆತ, ೫ ಬೌಂಡರಿ, ೧ ಸಿಕ್ಸರ್) ಸ್ಫೋಟಕ ಆಟದೊಂದಿಗೆ ತಂಡಕ್ಕೆ ಭರ್ಜರಿ ತಳಪಾಯ ಹಾಕಿಕೊಡಲು ಯತ್ನಿಸಿದರು. ಆದರೆ, ೧೧ನೇ ಓವರ್‌ನಲ್ಲಿ ದಾಳಿಗಿಳಿದ ಕುಲದೀಪ್ ಯಾದವ್ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಪ್ರಬಲ ಬರೆ ಎಳೆದರು.

ಈ ಓವರ್‌ನ ಎರಡನೇ ಎಸೆತದಲ್ಲಿ ಜೇಸನ್ ರಾಯ್ ಬಿರುಸಿನ ಹೊಡೆತಕ್ಕೆ ಮುಂದಾಗಿ ಉಮೇಶ್ ಯಾದವ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಇನ್ನು, ಹದಿಮೂರನೇ ಓವರ್‌ನಲ್ಲಿ ಮತ್ತೆ ಬೌಲಿಂಗ್‌ಗಿಳಿದ ಕುಲದೀಪ್ ಯಾದವ್, ಜಾನಿ ಬೇರ್‌ಸ್ಟೋ ಮತ್ತು ಜೋ ರೂಟ್ (೩) ಅವರನ್ನು ಎಲ್‌ಬಿ ಬಲೆಗೆ ಸಿಲುಕಿಸಿದರು. ಕೆಲವೇ ಓವರ್‌ಗಳ ಅಂತರದಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ನ ರನ್‌ ಗತಿ ಕ್ಷೀಣಿಸಲಾರಂಭಿಸಿತು.

ಬಟ್ಲರ್-ಸ್ಟೋಕ್ಸ್ ಆಸರೆ

ರೂಟ್ ನಿರ್ಗಮನದ ನಂತರದಲ್ಲಿ ನಾಯಕ ಇಯಾನ್ ಮಾರ್ಗನ್ (೧೯) ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಸುರೇಶ್ ರೈನಾಗೆ ಕ್ಯಾಚಿತ್ತು ನಿರ್ಗಮಿಸಿದ ನಂತರದಲ್ಲಿ ಇಂಗ್ಲೆಂಡ್ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ಆದರೆ, ಈ ಹಂತದಲ್ಲಿ ಜತೆಯಾದ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ತಂದರು.

ಕುಲದೀಪ್ ಯಾದವ್ ಸೇರಿದಂತೆ ಭಾರತದ ಮಿಕ್ಕ ಬೌಲರ್‌ಗಳ ದಾಳಿಯನ್ನೂ ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮನೋಜ್ಞ ಜತೆಯಾಟ ಪ್ರದರ್ಶಿಸಿತು. ಬೆನ್ ಸ್ಟೋಕ್ಸ್ ತೀರಾ ಮಂದಗತಿಯ ಆಟಕ್ಕೆ ಮೊರೆ ಹೋದರೆ, ಜೋಸ್ ಬಟ್ಲರ್ ಅಂತೂ ಎಂದಿನ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಆದರೆ, ಈ ಇಬ್ಬರನ್ನೂ ಕುಲದೀಪ್ ಯಾದವ್ ಪೆವಿಲಿಯನ್‌ಗೆ ಅಟ್ಟುವ ಮೂಲಕ ಮತ್ತೆ ಇಂಗ್ಲೆಂಡ್‌ನ ಹಿನ್ನಡೆಗೆ ಕಾರಣರಾದರು. ಈ ಇಬ್ಬರ ನಿರ್ಗಮನದ ನಂತರದಲ್ಲಿ ಮೊಯೀನ್ ಅಲಿ (೨೪) ಮತ್ತು ಆದಿಲ್ ರಶೀದ್ (೨೪) ತಂಡದ ಮೊತ್ತ ೨೬೦ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: ೪೯.೫ ಓವರ್‌ಗಳಲ್ಲಿ ೨೬೮/೧೦ (ಬೆನ್ ಸ್ಟೋಕ್ಸ್ ೫೦, ಜೋಸ್ ಬಟ್ಲರ್ ೫೩; ಕುಲದೀಪ್ ಯಾದವ್ ೨೫ಕ್ಕೆ ೬, ಉಮೇಶ್ ಯಾದವ್ ೭೦ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More