ವಿಂಬಲ್ಡನ್ | ಫೈನಲ್‌ನಲ್ಲಿ ಸೆರೆನಾಗೆ ಕೆರ್ಬರ್ ಸವಾಲು; ಜೆಲಾನಾ, ಜುಲಿಯಾ ನಿರ್ಗಮನ

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ಏಂಜಲಿಕ್ ಕೆರ್ಬರ್ ಫೈನಲ್ ತಲುಪಿದ್ದಾರೆ. ಗುರುವಾರ (ಜು.೧೨) ನಡೆದ ಎರಡು ಸೆಮಿಫೈನಲ್‌ಗಳಲ್ಲಿ ಜುಲಿಯಾ ವಿರುದ್ಧ ಸೆರೆನಾ ಗೆದ್ದರೆ, ಜೆಲೆನಾ ಎದುರು ಕೆರ್ಬರ್ ಜಯಿಸಿದರು

ಗೆಲುವು ಸಾಧಿಸುವ ಧಾವಂತದಲ್ಲಿ ವಿಪುಲ ಪ್ರಮಾಣದ ತಪ್ಪುಗಳನ್ನೆಸಗಿದ ಲಾಟ್ವಿಯಾ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಫೈನಲ್ ತಲುಪುವುದರಿಂದ ವಂಚಿತರಾದರು. ಪ್ರತಿಸ್ಪರ್ಧಿಯ ಸ್ವಪ್ರಮಾದದ ಲಾಭ ಪಡೆದ ಕೆರ್ಬರ್, ಆಲ್ ಇಂಗ್ಲೆಂಡ್ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಧಾವಿಸಿದರು.

ಗುರುವಾರ (ಜು.೧೨) ಸೆಂಟರ್ ಕೋರ್ಟ್‌ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನ್ ಆಟಗಾರ್ತಿ ಕೆರ್ಬರ್, ಒಸ್ಟಾಪೆಂಕೊ ಎದುರು ೬-೩, ೬--೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು. ಶನಿವಾರ (ಜು.೧೪) ನಡೆಯಲಿರುವ ಅಂತಿಮ ಸುತ್ತಿನಲ್ಲಿ ಕೆರ್ಬರ್, ೨೩ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೆಣಸಲಿದ್ದಾರೆ.

ಮೊದಲ ಸೆಟ್‌ನಿಂದಲೇ ಇಬ್ಬರ ನಡುವೆ ತೀವ್ರ ಹಣಾಹಣಿ ನಡೆಯಿತು. ೩-೩ ಸಮಬಲದ ಕಾದಾಟ ಕ್ರಮೇಣ ಇನ್ನಷ್ಟು ಆಕ್ರಮಣಕಾರಿಯಾಗಿ ಪರಿವರ್ತಿತವಾಯಿತು. ಈ ಹಂತದಲ್ಲಿ ಒಸ್ಟಾಪೆಂಕೊ ಆತುರದ ಹೊಡೆತಗಳಿಂದ ಕೈ ಸುಟ್ಟುಕೊಂಡರು. ಅನಗತ್ಯ ತಪ್ಪು ಹೊಡೆತಗಳಿಂದ ಧಾರಾಳವಾಗಿ ಪಾಯಿಂಟ್ಸ್‌ಗಳನ್ನು ಜರ್ಮನ್ ಆಟಗಾರ್ತಿಗೆ ಧಾರೆ ಎರೆದ ಆಕೆ, ಅದಕ್ಕೆ ತಕ್ಕ ಬೆಲೆ ತೆತ್ತರು. ಜತೆಗೆ ಆಕೆಯ ಡಬಲ್ ಫಾಲ್ಟ್‌ ಕೂಡಾ ಕೆರ್ಬರ್‌ಗೆ ವರವಾಯಿತು. ಎರಡನೇ ಸೆಟ್ ಕೂಡ ಹೆಚ್ಚು ಭಿನ್ನವೇನಾಗಿರಲಿಲ್ಲ. ಮೊದಲ ಸೆಟ್‌ನಲ್ಲಿನ ಮತ್ತದೇ ತಪ್ಪುಗಳಿಂದ ಒಸ್ಟಾಪೆಂಕೊ ನೇರ ಸೆಟ್‌ಗಳ ಸೋಲಿಗೆ ಪಕ್ಕಾದರು.

ಇದನ್ನೂ ಓದಿ : ವಿಂಬಲ್ಡನ್ | ನಡಾಲ್, ಪೊಟ್ರೊ ಜಯದ ಓಟ; ಸೋತು ಹೊರಬಿದ್ದ ಸಿಮೋನಾ ಹ್ಯಾಲೆಪ್

ಸೆರೆನಾಗೆ ಸುಲಭ ಜಯ

ಇತ್ತ, ದಿನದ ಮತ್ತೊಂದು ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಸುಲಭ ಗೆಲುವು ಪಡೆದರು. ಜರ್ಮನಿಯ ಆಟಗಾರ್ತಿ ಜುಲಿಯಾ ಜಾರ್ಜರ್ಸ್ ವಿರುದ್ಧ ಅಬ್ಬರದ ಆಟವಾಡಿದ ಸೆರೆನಾ, ೬-೨, ೬-4 ಎರಡು ನೇರ ಹಾಗೂ ಸುಲಭ ಸೆಟ್‌ಗಳೊಂದಿಗೆ ಜಯಭೇರಿ ಬಾರಿಸಿದರು. ಇದರೊಂದಿಗೆ ಎಂಟನೇ ವಿಂಬಲ್ಡನ್ ಗೆಲ್ಲುವತ್ತ ಕೃಷ್ಣಸುಂದರಿ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೆರೆನಾ, ಜರ್ಮನ್ ಆಟಗಾರ್ತಿ ಜುಲಿಯಾ ಪುಟಿದೇಳದಂತೆ ನೋಡಿಕೊಂಡರು. ಮೊದಲ ಸೆಟ್‌ನಲ್ಲಂತೂ ಕೇವಲ ಎರಡು ಗೇಮ್‌ಗಳನ್ನಷ್ಟೇ ಬಿಟ್ಟುಕೊಟ್ಟ ಸೆರೆನಾ, ಆ ಮೂಲಕ ತನ್ನ ಗೆಲುವನ್ನು ಖಚಿತಪಡಿಸಿದರು. ಎರಡನೇ ಸೆಟ್‌ನಲ್ಲಿ ತಿರುಗಿಬೀಳಲು ಜುಲಿಯಾ ಯತ್ನಿಸಿದರೂ, ಸೆರೆನಾ ಅದಕ್ಕೆ ಅವಕಾಶ ಕಲ್ಪಿಸದೆ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟರು.

೨೦೦೨, ೨೦೦೩, ೨೦೦೯, ೨೦೧೦, ೨೦೧೨, ೨೦೧೫, ೨೦೧೬ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿ ಮೆರೆದಿರುವ ಸೆರೆನಾ, ಇದೀಗ ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಕರ್ಬರ್ ವಿರುದ್ಧ ಗೆಲುವು ಸಾಧಿಸಿದ್ದೇ ಆದಲ್ಲಿ, ವಿಶ್ವ ದಾಖಲೆಯ ೨೪ನೇ ಗ್ರಾಂಡ್‌ಸ್ಲಾಮ್‌ ಗೆಲುವು ಪಡೆಯಲಿದ್ದಾರೆ. ಮಾತ್ರವಲ್ಲ, ತಾಯಿಯಾದ ನಂತರವೂ ಗ್ರಾಂಡ್‌ಸ್ಲಾಮ್ ಗೆದ್ದ ಆಟಗಾರ್ತಿಯರ ಸಾಲಿಗೆ ಕೃಷ್ಣಸುಂದರಿ ಸೇರ್ಪಡೆಯಾಗಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More