ಚಾರಿತ್ರಿಕ ಸಾಧನೆ ಮೆರೆದ ಹಿಮಾ ದಾಸ್ ಫುಟ್ಬಾಲ್ ಆಟಗಾರ್ತಿಯೂ ಹೌದು!

ಭಾರತೀಯ ಟ್ರ್ಯಾಕ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊಟ್ಟಮೊದಲ ಅಥ್ಲೀಟ್ ಎನಿಸಿಕೊಂಡಿರುವ ಹಿಮಾ ದಾಸ್ ಕಡು ಬಡತನದಿಂದ ಬಂದಾಕೆ. ಐಎಎಎಫ್‌ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಈಕೆ ಫುಟ್ಬಾಲ್ ಆಟಗಾರ್ತಿಯೂ ಹೌದಂತೆ!

“ಮಾನಸಿಕವಾಗಿ ಮಾತ್ರವಲ್ಲ, ಆಕೆ ದೈಹಿಕವಾಗಿಯೂ ಗಟ್ಟಿಗಿತ್ತಿ. ಹುಡುಗರ ಜೊತೆಗೆ ಫುಟ್ಬಾಲ್ ಆಡಬೇಡ ಎಂದರೂ ಆಕೆ ಎಂದೂ ಆ ಕರೆಗೆ ಓಗೊಟ್ಟವಳೇ ಅಲ್ಲ. ಪರಿಪೂರ್ಣ ಓಟಗಾರ್ತಿಯಾಗಿ ಪರಿವರ್ತನೆಯಾಗುವವರೆಗೂ ಫುಟ್ಬಾಲ್ ಆಡುವುದನ್ನು ಆಕೆ ನಿಲ್ಲಿಸಲೂ ಇಲ್ಲ...”

-೧೮ರ ಹರೆಯದ ಹಿಮಾ ದಾಸ್ ಕುರಿತು ಆಕೆಯ ಸೋದರ ಸಂಬಂಧಿ ಜಾಯ್ ದಾಸ್ ಅವರ ನುಡಿಗಳು. ಫಿನ್‌ಲ್ಯಾಂಡ್‌ನಲ್ಲಿ ಗುರುವಾರ (ಜು.೧೨) ವಿಶ್ವ ಕಿರಿಯರ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಆ ಮೂಲಕ ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಮಹಿಳಾ ಸ್ಪ್ರಿಂಟರ್ ಎನಿಸಿಕೊಂಡ ಹಿಮಾದಾಸ್ ಈಗ ಇಡೀ ದೇಶದ ಮನೆಮಾತಾಗಿದ್ದಾರೆ.

“ಆರ್ಥಿಕವಾಗಿ ಸದೃಢವಲ್ಲದೆ ಹೋದರೂ, ಆಕೆಯ ಕ್ರೀಡಾ ಉತ್ಸಾಹಕ್ಕೆ ಮನೆಯವರು ಧಕ್ಕೆ ತರಲಿಲ್ಲ. ಕ್ರೀಡೆಯಲ್ಲಿ ಆಕೆ ಆಸಕ್ತಿ ತಳೆದು ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಂತೆ ನಾವೆಲ್ಲ ಸಂತಸಗೊಳ್ಳುತ್ತಿದ್ದೆವು. ಏಷ್ಯಾ ಕ್ರೀಡಾಕೂಟ ಹಾಗೂ ಒಲಿಂಪಿಕ್ಸ್‌ನಂಥ ಕೂಟಗಳಲ್ಲಿ ಆಕೆ ಪದಕ ಗೆದ್ದು ತರಬೇಕೆಂಬುದು ನಮ್ಮ ಕನಸಾಗಿದೆ. ಹಿಮಾ ಚಿನ್ನದ ಸಾಧನೆ ತಿಳಿದು ಬೆಳಗ್ಗಿನಿಂದಲೇ ಗ್ರಾಮವೆಲ್ಲ ಸಂಭ್ರಮಿಸುತ್ತಿದೆ. ನಮ್ಮ ಸಂಬಂಧಿಕರು ಹಿಮಾ ಮನೆಗೆ ಆಗಮಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ,’’ ಎಂದು ಜಾಯ್ ದಾಸ್ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ವಿಶೇಷ ವರದಿ ಹೇಳಿದೆ.

ಬಡತನದ ಬೇಗೆ

ಬಡತನದ ಬೇಗೆಗೆ ಸಿಲುಕಿರುವ ಅಸ್ಸಾಂ ಮೂಲದ ಹಿಮಾ ದಾಸ್ ಕುಟುಂಬದ ಆಸರೆಗೆ ಇರುವುದು ೨ ಬಿಘಾ (೦.೪ ಎಕರೆ) ಜಮೀನಷ್ಟೆ. ತಂದೆ ರೊಂಜಿತ್ ದಾಸ್ ಇರುವ ಪುಟ್ಟ ಜಮೀನನಲ್ಲೇ ಬೆವರು ಬಸಿದರೆ, ಹಿಮಾ ತಾಯಿ ಜುನಾಲಿ ಗೃಹಿಣಿ. ಆರು ಮಂದಿಯ ಕುಟುಂಬದ ಆದಾಯದ ಮೂಲ ಕೂಡಾ ಈ ಜಮೀನು ಮಾತ್ರವೇ. ನಾಲ್ವರು ಮಕ್ಕಳಲ್ಲಿ ಹಿಮಾಳೇ ಹಿರಿಯಳು. ಮೂವರು ಕಿರಿಯ ತಂಗಿಯರು ಮತ್ತು ಓರ್ವ ತಮ್ಮ ಹಿಮಾ ಜತೆಗೆ ಹುಟ್ಟಿದವರು. ಓರ್ವ ಕಿರಿಯ ಸೋದರಿ ೧೦ನೇ ತರಗತಿಯಲ್ಲಿ ಓದುತ್ತಿದ್ದರೆ, ಅವಳಿ ಜವಳಿಯಾದ ತಮ್ಮ ಮತ್ತು ತಂಗಿ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ತನ್ನ ಹಳ್ಳಿಗೆ ಅರ್ಧ ಕಿ.ಮೀ. ದೂರದ ಧಿಂಗ್‌ನಲ್ಲಿ ಹಿಮಾ ಹನ್ನೆರಡನೇ ತರಗತಿಯಲ್ಲಿ ಓದುತ್ತಿದ್ದಾರೆ.

ಶಾಲಾ ದಿನಗಳಲ್ಲಿ ಬಾಲಕರ ಜತೆಗೆ ತನ್ನ ಹಳ್ಳಿಯ ಶಾಲೆಯ ಮಣ್ಣಿನ ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಹಿಮಾ ದಾಸ್ ಚುರುಕಿನ ವೇಗದಿಂದ ಗಮನ ಸೆಳೆಯುತ್ತಿದ್ದಳು. ಇದನ್ನು ಗಮನಿಸಿದ ಶಿಕ್ಷಕರು ಆಕೆಗೆ ಅಥ್ಲೆಟಿಕ್ಸ್‌ ಅಭ್ಯಾಸ ನಡೆಸುವಂತೆ ಹುರಿದುಂಬಿಸಿದ್ದು ಇಂದಿನ ಆಕೆಯ ಐತಿಹಾಸಿಕ ಸಾಧನೆಗೆ ಪ್ರೇರಣೆ. ೨೦೧೬ರಲ್ಲಿ ಅಂತರ ಜಿಲ್ಲಾ ಕ್ರೀಡಾಕೂಟದಲ್ಲಿ ಮೊದಲಿಗೆ ಹಿಮಾ ದಾಸ್ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದ ಅಥ್ಲೆಟಿಕ್ಸ್ ಕೋಚ್ ನಿಪಾನ್ ದಾಸ್ ಮುಂದೆ ಹಿಮಾ ವೃತ್ತಿಬದುಕಿಗೆ ಹೊಸ ತಿರುವು ನೀಡಿದರು.

ಇದನ್ನೂ ಓದಿ : ಭಾರತದ ಸ್ವರ್ಣ ಸಾಧಕಿ ಹಿಮಾ ದಾಸ್‌ಗೆ ಅಭಿನಂದನೆಗಳ ಮಹಾಪೂರ

ಹಳ್ಳಿಯಿಂದ ೧೫೦ ಕಿ.ಮೀ. ದೂರದ ಗುವಾಹತಿಗೆ ಹಿಮಾಳನ್ನು ಕರೆದುತಂದ ನಿಪಾನ್ ದಾಸ್, ಆಕೆ ಭವಿಷ್ಯದ ಭಾರತೀಯ ಅಥ್ಲೀಟ್ ಆಗುವ ಆತ್ಮವಿಶ್ವಾಸ ಹಾಗೂ ಹುರುಪನ್ನು ತುಂಬಿದರು. ಮೊದಮೊದಲಿಗೆ ಆಕೆಯನ್ನು ಗುವಾಹತಿಗೆ ಆಕೆಯ ಮನೆಯವರು ಮತ್ತು ಸ್ವತಃ ಹಿಮಾಗೆ ಇಷ್ಟವಿರಲಿಲ್ಲ. ಆದರೆ, ನಿಪಾನ್ ದಾಸ್ ಮನೆಯವರ ಸಮ್ಮತಿ ಪಡೆದು ಹಿಮಾಳ ಬಾಳಿನಲ್ಲಿ ಬೆಳಕು ಮೂಡಿಸಿದರು.

“ನಮ್ಮ ಮನೆಯ ಸ್ಥಿತಿ ಏನು, ಹಣಕಾಸಿನ ಸಮಸ್ಯೆಯಿಂದಾಗಿ ನಾವು ಹೇಗೆಲ್ಲಾ ತೊಂದರೆ ಅನುಭವಿಸಿದ್ದೇವೆ ಎಂಬುದು ನನಗೆ ಗೊತ್ತು. ಆದರೆ, ಸರ್ವಶಕ್ತ ಭಗವಂತ ಪ್ರತಿಯೊಬ್ಬರಿಗೂ ಏನಾದರೂ ಒಂದನ್ನು ಕರುಣಿಸಿರುತ್ತಾನೆ. ನಾನು ಸಕಾರಾತ್ಮಕ ಮನೋಭಾವದವಳು. ಹಿಂದಿನದಕ್ಕಿಂತ ನಾಳಿನ ಕುರಿತು ಹೆಚ್ಚು ಚಿಂತಿಸುವವಳು. ಮುಂದಿನ ದಿನಗಳಲ್ಲಿ ನಾನು ನನ್ನ ಮನೆಗೆ ಹಾಗೂ ದೇಶಕ್ಕೆ ಘನತರವಾದುದನ್ನು ತಂದುಕೊಡುತ್ತೇನೆ ಎಂಬ ವಿಶ್ವಾಸದಲ್ಲಿ ಜೀವಿಸುತ್ತಿದ್ದೇನೆ,’’ ಎಂದು ಹಿಮಾ ಪ್ರತಿಕ್ರಿಯಿಸಿದ್ದಾರೆ.

“ನಾನು ಓಡುವಾಗ ನನ್ನ ಗಮನವೆಲ್ಲಾ ವೇಗದ ಮೇಲೆಯೇ ಇರುತ್ತದೆ. “ಸದ್ಯಕ್ಕೆ ನಾನು ಯಾವುದೇ ಗುರಿಯನ್ನು ಇಟ್ಟುಕೊಂಡಿಲ್ಲ. ಇನ್ನು, ಏಷ್ಯಾಡ್‌ನಲ್ಲಾಗಲೀ ಇಲ್ಲವೇ ಒಲಿಂಪಿಕ್ಸ್‌ನಲ್ಲಾಗಲೀ ಪದಕ ಗೆಲ್ಲುವ ಬಗ್ಗೆಯೂ ಈಗ ಚಿಂತಿಸುತ್ತಿಲ್ಲ. ಸದ್ಯಕ್ಕಂತೂ ದೇಶಕ್ಕಾಗಿ ವಿಶೇಷವಾದ ಸಾಧನೆಯನ್ನು ಮಾಡಿದ ಸಂತೃಪ್ತಿ ಮಾತ್ರ ನನ್ನಲ್ಲಿದೆ,’’ ಎಂತಲೂ ಹಿಮಾ ಹೇಳಿದ್ದಾರೆ. ಅಂದಹಾಗೆ, ಹಿಮಾ ಸಾಧನೆಯನ್ನು ಮನಸ್ಸಾರೆ ಹೊಗಳಿರುವ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ₹ ೧ ಲಕ್ಷ ಬಹುಮಾನ ಘೋಷಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More