ಭಾರತದ ಸ್ವರ್ಣ ಸಾಧಕಿ ಹಿಮಾ ದಾಸ್‌ಗೆ ಅಭಿನಂದನೆಗಳ ಮಹಾಪೂರ

ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಹೊಸ ಆಶಾಕಿರಣ ಉದಯವಾಗಿದೆ. ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನ ಮಹಿಳೆಯರ ೪೦೦ ಮೀಟರ್ ಓಟದ ಸ್ಪರ್ಧೆಯನ್ನು ೫೧.೪೬ ಸೆ.ಗಳಲ್ಲಿ ಕ್ರಮಿಸಿ ಭಾರತಕ್ಕೆ ಐತಿಹಾಸಿಕ ಸ್ವರ್ಣ ಪದಕ ತಂದುಕೊಟ್ಟ ಹಿಮಾ ದಾಸ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ

ಫಿನ್‌ಲ್ಯಾಂಡ್‌ಗೆ ತೆರಳುವ ಮುನ್ನವೇ ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದ್ದ ಹಿಮಾ ದಾಸ್, ತನ್ನ ಮೇಲಿನ ಭರವಸೆ ಹುಸಿಗೊಳಿಸದೆ ಇಡೀ ದೇಶವೇ ಹೆಮ್ಮೆಪಡುವಂಥ ಸಾಧನೆ ಮೆರೆದಿದ್ದಾರೆ. ಟಾಂಪೆರೆಯಲ್ಲಿ ನಡೆಯುತ್ತಿರುವ, ಐಎಎಎಫ್ ೨೦ ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೧೮ರ ಹರೆಯದ ಹಿಮಾ ದಾಸ್ ಗುರುವಾರ (ಜು.೧೨) ತಡರಾತ್ರಿ ಸ್ವರ್ಣ ಪದಕ ಗೆದ್ದುಕೊಂಡರು.

ಈ ಸಾಧನೆಯ ಮೂಲಕ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ಹಿಮಾ ದಾಸ್ ಸೇರ್ಪಡೆಯಾದರು. ೨೦೧೬ರ ಪೋಲೆಂಡ್ ಆವೃತ್ತಿಯಲ್ಲಿ ನೀರಜ್ ಚೋಪ್ರಾ ವಿಶ್ವದಾಖಲೆಯ ಚಿನ್ನದ ಪದಕ ಜಯಿಸಿದ್ದರು. ಆದರೆ, ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಿನ್ನ ಗೆದ್ದ ಮೊಟ್ಟಮೊದಲ ಮಹಿಳಾ ಅಥ್ಲೀಟ್ ಎಂಬ ಗರಿಮೆಗೆ ಹಿಮಾ ದಾಸ್ ಭಾಜನವಾದರು.

ಇದಕ್ಕೂ ಮುನ್ನ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಸೀಮಾ ಪುನಿಯಾ ೨೦೦೨ರಲ್ಲಿ ಕಂಚು ಗೆದ್ದರೆ, ನವಜೀತ್ ಕೌರ್ ಧಿಲ್ಲೋನ್ ೨೦೧೪ರಲ್ಲಿ ಇದೇ ಡಿಸ್ಕ್ ಎಸೆತ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಹೀಗಾಗಿ, ಹಿಮಾ ದಾಸ್ ಸಾಧನೆ ಐತಿಹಾಸಿಕ ಎನಿಸಿದೆ.

ಇದನ್ನೂ ಓದಿ : ಭಾರತೀಯ ಅಥ್ಲೆಟಿಕ್ಸ್ ಬೆಳಗಿದ ಸ್ಟಾರ್ ಅಥ್ಲೀಟ್ ವಿಕಾಸ್ ಗೌಡ ವಿದಾಯ

Champion!!! #himadas #iaaf #india #1 #gold

A post shared by Ajay Jaywant Kamble (@ajayjaywantkamble) on

ಅಂದಹಾಗೆ, ಈ ವಿಭಾಗದಲ್ಲಿ ರೊಮೇನಿಯಾದ ಆಂಡ್ರಿಯಾ ಮಿಕ್ಲೊಸ್ ೫೨.೦೭ ಸೆಕೆಂಡುಗಳ ಸಾಧನೆಯೊಂದಿಗೆ ರಜತ ಪದಕ ಗೆದ್ದರೆ, ಅಮೆರಿಕದ ಟೈಲರ್ ಮ್ಯಾನ್ಸನ್ ೫೨.೨೮ ಸೆಕೆಂಡುಗಳಲ್ಲಿ ತಲುಪುವುದರೊಂದಿಗೆ ಕಂಚಿನ ಪದಕ ಜಯಿಸಿದರು. ಇದಕ್ಕೂ ಮುನ್ನ ಹಿಮಾ ದಾಸ್, ಹೀಟ್ ೪ರಲ್ಲಿ ೫೨.೨೫ ಸೆಕೆಂಡುಗಳಲ್ಲಿ ಕ್ರಮಿಸಿ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿದ್ದರು.

ಇನ್ನು, ಸೆಮಿಫೈನಲ್‌ನಲ್ಲಿ ೫೨.೧೦ ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಹಿಮಾ ದಾಸ್ ಮೊದಲ ಸ್ಥಾನ ಗಳಿಸಿದರು. ಇನ್ನು, ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಜಿಸ್ನಾ ಮ್ಯಾಥ್ಯೂ ಕೂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಹೀಟ್ ೫ರಲ್ಲಿ ೫೪.೩೨ ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಕೇರಳ ಮೂಲದ ಜಿಸ್ನಾ, ಸೆಮಿಫೈನಲ್‌ನಲ್ಲಿ ಮಾತ್ರ ೫೩.೮೬ ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರಿಂದ ಮುಂದಿನ ಹಂತ ತಲುಪಲು ಎಡವಿದರು.

#HimaDas #goldmedal #madeusproud #india #athlete

A post shared by Thyag Raj (@rthyag) on

ಯಾರೀ ಹಿಮಾ ದಾಸ್?

ಚಾಂಪಿಯನ್‌ಶಿಪ್ ಶುರುವಾಗುವ ಮುನ್ನವೇ ಅಸ್ಸಾಂನ ಹಿಮಾ ದಾಸ್ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ೨೦ ವರ್ಷದೊಳಗಿನವರ ೪೦೦ ಮೀಟರ್ ಫೈನಲ್‌ನಲ್ಲಿ ೫೧.೩೨ ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಹಿಮಾ ದಾಸ್, ಆರನೇ ಸ್ಥಾನ ಗಳಿಸಿದ್ದರು. ಅಲ್ಲಿಂದಾಚೆಗೆ ಸತತ ಅಭ್ಯಾಸ ನಡೆಸಿದ್ದ ಅವರು, ತನ್ನ ಓಟದ ಗತಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿದ್ದರಲ್ಲದೆ, ಸಮಯದ ಮಿತಿಯನ್ನೂ ಗಣನೀಯವಾಗಿ ಹೆಚ್ಚಿಸಿಕೊಂಡಿದ್ದರು.

ಗುವಾಹತಿಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇಪ್ಪತ್ತು ವರ್ಷದೊಳಗಿನವರ ೪೦೦ ಮೀಟರ್ ವಿಭಾಗದಲ್ಲಿ ೫೧.೧೩ ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಚಾರಿತ್ರಿಕ ಸಾಧನೆ ಮೆರೆದಿರುವ ಹಿಮಾ ದಾಸ್‌ಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ಸೇರಿದಂತೆ ಭಾರತೀಯ ಅಥ್ಲೆಟಿಕ್ಸ್ ವಲಯ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More