ಟೀಂ ಇಂಡಿಯಾದ ಆಲ್ರೌಂಡ್ ಆಟದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು

ಸರಿಸುಮಾರು ೧೦ ವರ್ಷಗಳ ಬಳಿಕ ತವರಿನಲ್ಲಿ ಇಂಗ್ಲೆಂಡ್ ವೇಗಿಗಳು ವಿಕೆಟ್ ಪಡೆಯಲು ತಿಣುಕಿದ್ದೊಂದೇ ಸಾಕು ಆಂಗ್ಲರ ದಯನೀಯ ಸೋಲನ್ನು ವಿವರಿಸಲು! ಭಾರತದಂಥ ಪ್ರಬಲ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ಥಿರಗೊಳಿಸಲಾಗದ ಇಂಗ್ಲೆಂಡ್, ಏಕದಿನ ಸರಣಿಯಲ್ಲಿಯೂ ಕಹಿ ಆರಂಭ ಕಂಡಿತು

ಈ ಬಾರಿಯ ಭಾರತದ ಇಂಗ್ಲೆಂಡ್ ಪ್ರವಾಸ ಹೆಚ್ಚು ಪ್ರಖರವಾಗಿರಲಿದೆ ಎಂಬ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮಾತನ್ನು ವಿರಾಟ್ ಪಡೆ ನಿಜವಾಗಿಸುವತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಆರಂಭಿಕ ಹಂತದ ಮೊದಲ ಮೂರು ಟಿ೨೦ ಪಂದ್ಯಗಳ ಸರಣಿಯನ್ನು ೨-೧ರಿಂದ ಗೆದ್ದು ಬೀಗಿದ್ದ ಭಾರತ ತಂಡ, ಇದೀಗ ಮೊದಲ ಏಕದಿನ ಪಂದ್ಯದಲ್ಲಿ ೮ ವಿಕೆಟ್ ಭರ್ಜರಿ ಗೆಲುವು ಸಾಧಿಸಿ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ.

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬಿಜ್‌ನಲ್ಲಿ ಗುರುವಾರ (ಜು.೧೨) ತಡರಾತ್ರಿ ಮುಗಿದ ಪಂದ್ಯದಲ್ಲಿ ಗೆಲ್ಲಲು ೨೬೯ ರನ್ ಗುರಿ ಪಡೆದಿದ್ದ ವಿರಾಟ್ ಕೊಹ್ಲಿ ಬಳಗ, ಕೇವಲ ೨ ವಿಕೆಟ್ ಕಳೆದುಕೊಂಡು ೫೯ ಎಸೆತಗಳು ಬಾಕಿ ಇರುವಂತೆಯೇ ಅಂದರೆ, ೪೦.೧ ಓವರ್‌ಗಳಲ್ಲೇ ವಿಜಯ ಪತಾಕೆ ಹಾರಿಸಿತು. ಕುಲದೀಪ್ ಯಾದವ್ (೨೫ಕ್ಕೆ ೬) ವೃತ್ತಿಬದುಕಿನ ಶ್ರೇಷ್ಠ ಸ್ಪೆಲ್‌ನಲ್ಲಿ ಆತಿಥೇಯರ ರನ್ ಗಳಿಕೆಯ ಓಟಕ್ಕೆ ಸಾಧ್ಯವಾದಷ್ಟೂ ಕಡಿವಾಣ ಹಾಕಿದ ವಿರಾಟ್ ಪಡೆ, ಆನಂತರ ಬ್ಯಾಟಿಂಗ್‌ನಲ್ಲೂ ವಿಜೃಂಭಿಸಿತು.

ವಿಜಯದ ಬೆನ್ನುಬಿದ್ದ ಭಾರತ, ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್ (೪೦: ೨೭ ಎಸೆತ, ೮ ಬೌಂಡರಿ) ಅವರನ್ನು ಮೊದಲ ೮ ಓವರ್‌ಗಳಲ್ಲೇ ಕಳೆದುಕೊಂಡರೂ, ಆನಂತರ ಎಡವಿದ್ದು, ವಿರಾಟ್ ಕೊಹ್ಲಿ (೭೫: ೮೨ ಎಸೆತ, ೭ ಬೌಂಡರಿ) ಅರ್ಧಶತಕದ ನಂತರ ವಿಕೆಟ್ ಒಪ್ಪಿಸಿದಾಗ. ಆದರೆ, ವಿರಾಟ್ ವಿಕೆಟ್ ಏನೂ ಭಾರತದ ಪಾಲಿಗೆ ಹೊರೆಯಾಗಲಿಲ್ಲ. ಅದಾಗಲೇ ರೋಹಿತ್ ಶರ್ಮಾ ಅವರೊಂದಿಗೆ ೨ನೇ ವಿಕೆಟ್‌ಗೆ ಅಮೋಘ ೧೬೭ ರನ್ ಜೊತೆಯಾಟವಾಡಿದ್ದ ಅವರು, ಯಾವುದೇ ದುಗುಡವಿಲ್ಲದೆ ಪೆವಿಲಿಯನ್ ದಾರಿ ತುಳಿದರು.

ಮತ್ತೆ ಮಿಂಚಿದ ರೋಹಿತ್

ಚುಟುಕು ಪಂದ್ಯ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ರೋಹಿತ್ ಶರ್ಮಾ, ಏಕದಿನ ಸರಣಿಯಲ್ಲಿಯೂ ಭಾರತ ಶುಭಾರಂಭಗೈಯಲು ನೆರವಾದರು. ಕ್ರೀಸ್‌ನಲ್ಲಿ ಇದ್ದ ಅಷ್ಟೂ ಹೊತ್ತು ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ನಡೆಸಿ ತ್ವರಿತಗತಿಯಲ್ಲೇ ಪೆವಿಲಿಯನ್ ದಾರಿ ತುಳಿದರೆ, ರೋಹಿತ್ ಶರ್ಮಾ ಎಂದಿನ ತನ್ನ ಸಹನಾಶೀಲ ಬ್ಯಾಟಿಂಗ್‌ನಿಂದಲೇ ಕ್ರಮೇಣ ಆಕ್ರಮಣಕಾರಿಯಾಗಿ ಆಂಗ್ಲರನ್ನು ಕಾಡಿದರು.

ಧವನ್ ನಿರ್ಗಮನದ ನಂತರದಲ್ಲಿ ಕ್ರೀಸ್‌ಗಿಳಿದ ನಾಯಕ ಕೊಹ್ಲಿಯನ್ನು ಕೂಡಿಕೊಂಡ ರೋಹಿತ್, ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಬೇರ್ಪಡಿಸಲು ಇಂಗ್ಲೆಂಡ್ ಬೌಲರ್‌ಗಳು ಇನ್ನಿಲ್ಲದಂತೆ ಹೋರಾಡಿದರೂ, ಫಲ ಮಾತ್ರ ಶೂನ್ಯವೆಂಬಂತಾಯಿತು. ಅದ್ಭುತ ಸಂಯೋಜನೆಯಲ್ಲಿದ್ದ ರೋಹಿತ್ ಮತ್ತು ಕೊಹ್ಲಿಯನ್ನು ಬೇರ್ಪಡಿಸಲಾಗದ ಇಂಗ್ಲೆಂಡ್‌ಗೆ ತನ್ನ ಸೋಲು ನಿಶ್ಚಿತ ಎಂಬುದು ಮನವರಿಕೆಯಾಯಿತು.

#rohitsharma #viratkohli

A post shared by Aryan (@rohitswarrior_) on

ಇದನ್ನೂ ಓದಿ : ಕುಲದೀಪ್ ಸ್ಪಿನ್ ಸುಳಿಯಲ್ಲಿ ಸಿಲುಕಿದ ಆಂಗ್ಲರಿಗೆ ಬಟ್ಲರ್-ಸ್ಟೋಕ್ಸ್ ಆಸರೆ

೩೩ನೇ ಓವರ್‌ನ ಕೊನೇ ಎಸೆತದಲ್ಲಿ ಆದಿಲ್ ರಶೀದ್ ಎಸೆತವನ್ನು ದಂಡಿಸಲು ಮುನ್ನುಗ್ಗಿದ ಕೊಹ್ಲಿಯನ್ನು ವಿಕೆಟ್‌ ಕೀಪರ್ ಜೋಸ್ ಬಟ್ಲರ್ ಸ್ಟಂಪೌಟ್ ಮಾಡಿದರು. ಕೊಹ್ಲಿ ನಿರ್ಗಮನದ ನಂತರದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ (೮) ಜೊತೆಗೆ ರೋಹಿತ್ ತಂಡವನ್ನು ಸುನಾಯಾಸವಾಗಿ ಗೆಲುವಿನ ದಡ ಮುಟ್ಟಿಸಿದರು. ೧೧೪ ಎಸೆತಗಳನ್ನು ಎದುರಿಸಿದ ರೋಹಿತ್, ೧೫ ಬೌಂಡರಿ, ೪ ಸಿಕ್ಸರ್‌ ಸೇರಿದ ೧೩೭ ರನ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ೧೮ನೇ ಶತಕ ಸಿಡಿಸಿ ಅಜೇಯರಾಗುಳಿದರು.

ದಿಗ್ಗಜರ ದಾಖಲೆ ಸರಿಗಟ್ಟಿದ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ತಂಡದ ಸಾರಥಿ ಕೊಹ್ಲಿ, ನಾಯಕನಾಗಿ ಅತಿಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದವರ ಸಾಲಿಗೆ ಸೇರ್ಪಡೆಯಾದರು. ವೆಸ್ಟ್‌ ಇಂಡೀಸ್‌ನ ಕ್ಲೈವ್ ಲಾಯ್ಡ್, ರಿಕಿ ಪಾಂಟಿಂಗ್ ೫೦ ಏಕದಿನ ಪಂದ್ಯಗಳಲ್ಲಿ ೩೯ರಲ್ಲಿ ಜಯದ ಸವಿಯುಂಡಿದ್ದರು. ಇದೀಗ ಕೊಹ್ಲಿ ಅವರ ಸಾಧನೆಯನ್ನು ಸರಿಗಟ್ಟಿದರು.

ಇನ್ನುಳಿದಂತೆ, ದಕ್ಷಿಣ ಆಫ್ರಿಕಾದ ದಿವಂಗತ ಕ್ರಿಕೆಟಿಗ ಹ್ಯಾನ್ಸಿ ಕ್ರೊನಿಯೆ ೩೭ ಪಂದ್ಯಗಳನ್ನು ಗೆದ್ದರೆ, ವೆಸ್ಟ್‌ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ (೩೬), ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಶಾನ್ ಪೊಲಾಕ್ (೩೪) ಮತ್ತು ಪಾಕಿಸ್ತಾನದ ವಾಸೀಂ ಅಕ್ರಮ್ ಹಾಗೂ ವಕಾರ್ ಯೂನಿಸ್ ತಲಾ ೩೩ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: ೪೯.೫ ಓವರ್‌ಗಳಲ್ಲಿ ೨೬೮/೧೦ (ಬೆನ್ ಸ್ಟೋಕ್ಸ್ ೫೦, ಜೋಸ್ ಬಟ್ಲರ್ ೫೩; ಕುಲದೀಪ್ ಯಾದವ್ ೨೫ಕ್ಕೆ ೬) ಭಾರತ: ೪೦.೧ ಓವರ್‌ಗಳಲ್ಲಿ ೨೬೯/೨ (ರೋಹಿತ್ ಶರ್ಮಾ ೧೩೭, ವಿರಾಟ್ ಕೊಹ್ಲಿ ೭೫; ಮೊಯೀನ್ ಅಲಿ ೬೦ಕ್ಕೆ ೧) ಫಲಿತಾಂಶ: ಭಾರತಕ್ಕೆ ೮ ವಿಕೆಟ್ ಗೆಲುವು ಮತ್ತು ೩ ಪಂದ್ಯ ಸರಣಿಯಲ್ಲಿ ೧-೦ ಮುನ್ನಡೆ ಪಂದ್ಯಶ್ರೇಷ್ಠ: ಕುಲದೀಪ್ ಯಾದವ್

ಮುಖ್ಯಾಂಶಗಳು

  • ತವರಿನಲ್ಲಿ ಇಂಗ್ಲೆಂಡ್‌ನ ವೇಗಿಗಳು ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲವಾದದ್ದು ಇದು ಮೂರನೇ ಬಾರಿ
  • ೨೦೦೦೬ರ ಡರ್‌ಹ್ಯಾಮ್ ಏಕದಿನ ಪಂದ್ಯದಲ್ಲಿ ೨೭.೨ ಓವರ್‌ಗಳನ್ನು ಹಂಚಿಕೊಂಡಿದ್ದ ಇಂಗ್ಲೆಂಡ್‌ನ ವೇಗಿಗಳು ಶ್ರೀಲಂಕಾ ವಿರುದ್ಧ ಯಾವುದೇ ವಿಕೆಟ್ ಗಳಿಸಿರಲಿಲ್ಲ
  • ಅಂತೆಯೇ, ಇದೇ ಶ್ರೀಲಂಕಾ ವಿರುದ್ಧದ ಸರಣಿಯ ಲೀಡ್ಸ್ ಪಂದ್ಯದಲ್ಲಿ ೨೪ ಓವರ್‌ಗಳಲ್ಲಿ ಇಂಗ್ಲೆಂಡ್ ವೇಗಿಗಳು ವಿಕೆಟ್‌ ರಹಿತ ಆಟವಾಡಿದ್ದರು
  • ೨೦೧೪ರ ಸರಣಿಯ ಎಡ್ಜ್‌ಬ್ಯಾಸ್ಟನ್ ಪಂದ್ಯದಲ್ಲಿ ೨೦೭ ರನ್ ಗೆಲುವಿನ ಗುರಿ ಪಡೆದಿದ್ದ ಭಾರತ ತಂಡ, ೧೧೭ ರನ್ ಭರ್ಜರಿ ಗೆಲುವು ಕಂಡಿತ್ತು. ಇದಾದ ನಂತರದಲ್ಲಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವಿದು
  • ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ಎದುರು ಗರಿಷ್ಠ ಏಕದಿನ ಸ್ಕೋರ್ ದಾಖಲೆ ಬರೆದ ಭಾರತದ ಮೊದಲ ಬ್ಯಾಟ್ಸ್‌ಮನ್ ರೋಹಿತ್. ಈ ಹಿಂದೆ ೨೦೧೧ರ ಕಾರ್ಡಿಫ್ ಏಕದಿನ ಪಂದ್ಯದಲ್ಲಿ ಕೊಹ್ಲಿ ೧೦೭ ರನ್ ಗಳಿಸಿದ್ದರು
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More