ಸರಣಿ ಸತ್ವಪರೀಕ್ಷೆಗೆ ಸಿಲುಕಿದ ಆತಿಥೇಯ ಆಂಗ್ಲರಿಂದ ತಿರುಗೇಟು ಸಾಧ್ಯವೇ?

ಅತೀವ ಚಡಪಡಿಕೆ ಹಾಗೂ ವಿಚಿತ್ರ ಒತ್ತಡಕ್ಕೆ ಸಿಲುಕಿರುವ ಆತಿಥೇಯ ಇಂಗ್ಲೆಂಡ್‌ಗೆ ಶನಿವಾರ (ಜು.೧೪) ಸತ್ವಪರೀಕ್ಷೆಯೊಂದು ಎದುರಾಗಿದೆ. ಪ್ರವಾಸಿ ಭಾರತ ತಂಡದ ಆಲ್ರೌಂಡ್ ಆಟ, ಅದರಲ್ಲೂ ಸ್ಪಿನ್ ಸುಳಿಯಲ್ಲಿ ಸಿಲುಕಿರುವ ಆಂಗ್ಲರಿಗೆ ಏಕದಿನ ಸರಣಿ ಉಳಿಸಿಕೊಳ್ಳುವ ಸವಾಲು ಎದುರಾಗಿದೆ

ಚುಟುಕು ಸರಣಿ ಗೆಲುವಿನ ಬೆನ್ನಿಗೇ ಏಕದಿನ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವೀಗ ಆಂಗ್ಲರ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಐತಿಹಾಸಿಕ ಕ್ರಿಕೆಟ್ ತಾಣ ಲಾರ್ಡ್ಸ್ ಮೈದಾನದಲ್ಲಿ ಚರಿತ್ರೆ ಬರೆಯಲು ಅಣಿಯಾಗಿರುವ ಭಾರತ ತಂಡವನ್ನು ನಿಯಂತ್ರಿಸದ ಹೊರತು, ಆತಿಥೇಯರು ಏಕದಿನ ಸರಣಿಯನ್ನು ಸಮ ಮಾಡಿಕೊಳ್ಳುವುದು ದುಸ್ತರವಾಗಲಿದೆ.

ಚುಟುಕು ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಇಂಗ್ಲೆಂಡ್, ಎರಡನೇ ಪಂದ್ಯದಲ್ಲಿ ಪುಟಿದೆದ್ದು ನಿಂತಿತ್ತು. ಅಲೆಕ್ಸ್ ಹೇಲ್ಸ್ ದಾಖಲಿಸಿದ ಅರ್ಧಶತಕ ತಂಡದ ಕೈಹಿಡಿದಿತ್ತು. ಆದರೆ, ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಅವರನ್ನೂ ಒಳಗೊಂಡಂತೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ತಡಬಡಾಯಿಸಿದ್ದರು. ಅಂದಹಾಗೆ, ಭಾನುವಾರ (ಜುಲೈ ೧೫) ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಹಿನ್ನೆಲೆಯಲ್ಲಿ ಎರಡು ಪಂದ್ಯಗಳ ನಡುವಿನ ಬಿಡುವು ಕೇವಲ ಒಂದು ದಿನವಷ್ಟೆ.

ಈ ಮಧ್ಯೆ, ಎರಡೂ ತಂಡಗಳು ಶುಕ್ರವಾರ ಲಂಡನ್‌ಗೆ ಪ್ರಯಾಣ ಬೆಳೆಸಬೇಕಿದ್ದುದರಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕನಿಷ್ಠ ವಿಡಿಯೋ ತುಣುಕುಗಳನ್ನು ನೋಡಲೂ ಸಮಯ ಇಲ್ಲದಂತಾಗಿದೆ. ಪ್ರಸಕ್ತ ಪ್ರವಾಸದಲ್ಲಿ ಪ್ರಬಲ ಸವಾಲಾಗಿ ಪರಿಣಮಿಸಿರುವ ಕುಲದೀಪ್ ಯಾದವ್ ಸ್ಪಿನ್‌ಗೆ ಸೂಕ್ತ ಉತ್ತರ ನೀಡಲು ಅವರ ಬೌಲಿಂಗ್ ಕುರಿತ ವಿಡಿಯೋ ತುಣುಕುಗಳನ್ನು ಅವಲೋಕಿಸುವುದು ಕೂಡ ಮಹತ್ತರ ಪಾತ್ರ ವಹಿಸುತ್ತದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಈ ಅವಕಾಶದಿಂದಲೂ ಇಂಗ್ಲೆಂಡ್ ವಂಚಿತವಾಗಿದೆ.

ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದಿದ್ದರೂ, ಸಂಪೂರ್ಣವಾಗಿ ಏನೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಹಿನ್ನಡೆ ಕಂಡಿಲ್ಲ. ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್‌ರಂಥವರು ಭಾರತೀಯ ಸ್ಪಿನ್ನರ್‌ಗಳ ಕೈಚಳಕಕ್ಕೆ ದಿಟ್ಟ ಉತ್ತರ ನೀಡುವಲ್ಲಿ ಕೊಂಚಮಟ್ಟಿಗಾದರೂ ಶ್ರಮಿಸುತ್ತಿದ್ದಾರೆ. ಆದರೆ, ತಂಡದ ವೇಗದ ಬೌಲಿಂಗ್‌ ವೈಫಲ್ಯ ಕಂಡಿರುವುದು ಇಂಗ್ಲೆಂಡ್‌ನ ತಲೆನೋವು ಹೆಚ್ಚಿಸಿದೆ.

ಮುಖ್ಯವಾಗಿ, ಮೊದಲ ಏಕದಿನ ಪಂದ್ಯದಲ್ಲಿ ಲಿಯಾಮ್ ಪ್ಲಂಕೆಟ್, ಡೇವಿಡ್ ವಿಲ್ಲಿಯಂಥ ವೇಗಿಗಳು ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದರು. ಇದು ತಂಡದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ವಾಸ್ತವವಾಗಿ, ಮೊದಲ ಪಂದ್ಯದಲ್ಲಿ ೨೬೮ ರನ್‌ ಕಲೆಹಾಕಿದ್ದ ಇಂಗ್ಲೆಂಡ್, ಕಳಪೆ ಮೊತ್ತವನ್ನೇನೂ ಪೇರಿಸಿರಲಿಲ್ಲ.

ಆದರೆ, ಅದಕ್ಕೆ ಕುಲದೀಪ್ ಯಾದವ್ ಇಲ್ಲವೇ ಯಜುವೇಂದ್ರ ಚಾಹಲ್ ಅವರಂಥ ಸ್ಪಿನ್ನರ್‌ಗಳ ಕೊರತೆ ಢಾಳಾಗಿತ್ತು. ಅದೂ ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಭಾರತದಂಥ ತಂಡವನ್ನು ಆಲ್ರೌಂಡ್ ಆಟದಿಂದಲ್ಲದೆ ಮಿಕ್ಕ ಯಾವ ಅಸ್ತ್ರದಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಆಂಗ್ಲರು ಅರಿಯಬೇಕಿದೆ.

ಇದನ್ನೂ ಓದಿ : ಟೀಂ ಇಂಡಿಯಾದ ಆಲ್ರೌಂಡ್ ಆಟದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು

ಬಟ್ಲರ್ ಏಕಾಂಗಿ ಹೋರಾಟ

ಐಪಿಎಲ್‌ನಲ್ಲಿ ಆಡುವುದರೊಂದಿಗೆ ಭಾರತೀಯ ಸ್ಪಿನ್ನರ್‌ಗಳ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಲ್ಲುತ್ತಿರುವ ಜೋಸ್ ಬಟ್ಲರ್, ಇಂಗ್ಲೆಂಡ್ ತಂಡದ ಏಕಾಂಗಿ ಆಸರೆಯಂತಿದ್ದಾರೆ. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಅವರು, ಎಂದಿನ ನಿರ್ಭಿಡೆ ಬ್ಯಾಟಿಂಗ್‌ನಿಂದಲೇ ಗಮನ ಸೆಳೆದಿದ್ದರು. ಆದರೆ, ಬಟ್ಲರ್ ಕೂಡಾ ಕುಲದೀಪ್ ಯಾದವ್‌ ಸ್ಪಿನ್ ಚಮತ್ಕಾರಕ್ಕೆ ಮಣಿದಿದ್ದರು.

ಇನ್ನು, ಬೆನ್ ಸ್ಟೋಕ್ಸ್ ಕೂಡಾ ಮಂದಗತಿಯ ಆಟದ ಮಧ್ಯೆಯೂ ತಂಡದ ಇನ್ನಿಂಗ್ಸ್ ಚೇತರಿಸಿಕೊಳ್ಳಲು ನೆರವಾಗಿದ್ದರು. ಆದರೆ, ಅವರು ಬೌಲಿಂಗ್‌ನಲ್ಲಿ ಮೊನಚು ಕಳೆದುಕೊಳ್ಳುತ್ತಿರುವುದು ಪ್ರವಾಸಿ ತಂಡ ಮೇಲುಗೈ ಸಾಧಿಸಲು ಪ್ರೇರಕವಾಗಿದೆ. ಜೋ ರೂಟ್, ನಾಯಕ ಇಯಾನ್ ಮಾರ್ಗನ್ ವೈಫಲ್ಯ ಒಂದೆಡೆಯಾದರೆ, ಜೇಸನ್ ರಾಯ್, ಜಾನಿ ಬೇರ್‌ಸ್ಟೋ ಕೂಡಾ ಅಸ್ಥಿರ ಆಟದಿಂದ ಹೊರಬರಬೇಕಿದೆ.

ವಿರಾಟ್ ಆಟ!

ಅಂದಹಾಗೆ, ಆತಿಥೇಯ ತಂಡದ ಸ್ಥಿತಿಗತಿ ಹೀಗಿದ್ದರೆ, ವಿರಾಟ್ ಪಡೆಯಂತೂ ಪ್ರಚಂಡ ಫಾರ್ಮ್‌ನಲ್ಲಿದೆ. ಆರಂಭಿಕ ರೋಹಿತ್ ಶರ್ಮಾ ಪ್ರಚಂಡ ಫಾರ್ಮ್‌ನಲ್ಲಿದ್ದರೆ, ನಾಯಕ ವಿರಾಟ್ ಕೊಹ್ಲಿ ಸಹ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮೇಲಿನ ಕ್ರಮಾಂಕದ ಸ್ಥಿರ ಪ್ರದರ್ಶನದಿಂದ ಸದ್ಯ, ಮಧ್ಯಮ ಕ್ರಮಾಂಕಿತ ಆಟಗಾರರಾದ ಧೋನಿ, ರೈನಾ, ಮನೀಶ್ ಪಾಂಡೆಯಂಥವರ ಮೇಲಿನ ಹೊರೆ ಕಡಿಮೆಯಾಗಿದೆ.

ಇತ್ತ, ಬೌಲಿಂಗ್‌ನಲ್ಲಂತೂ ವೇಗಿ ಉಮೇಶ್ ಯಾದವ್ ಮತ್ತು ಸ್ಪಿನ್‌ದ್ವಯರಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಬಲ ಪ್ರದರ್ಶನವಾಗಿದೆ. ಒಟ್ಟಾರೆ, ಭಾರತ ತಂಡದ ಪ್ರದರ್ಶನವೇ ವಿರಾಟ್ ದರ್ಶನದಂತಾಗಿದೆ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಎಂ ಎಸ್ ಧೋನಿ (ವಿಕೆಟ್‌ ಕೀಪರ್), ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಉಮೇಶ್ ಯಾದವ್.

ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೇರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್‌ ಕೀಪರ್), ಇಯಾನ್ ಮಾರ್ಗನ್, ಜೋ ರೂಟ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಲಿಯಾಮ್ ಪ್ಲಂಕೆಟ್, ಡೇವಿಡ್ ವಿಲ್ಲಿ / ಮಾರ್ಕ್ ವುಡ್, ಆದಿಲ್ ರಶೀದ್ ಮತ್ತು ಜೇಕ್ ಬಾಲ್

ಪಂದ್ಯ ಆರಂಭ: ಮಧ್ಯಾಹ್ನ ೩.೩೦ರಿಂದ | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More