೧೨ ವರ್ಷದ ಬಳಿಕ ನಿವೃತ್ತಿ ಘೋಷಿಸಿದ ಭಾರತೀಯ ಕ್ರಿಕೆಟಿಗ ಮೊಹಮದ್ ಕೈಫ್!

ಭಾರತೀಯ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಫೀಲ್ಡರ್‌, ಉತ್ತರ ಪ್ರದೇಶ ಮೂಲದ ಮೊಹಮದ್ ಕೈಫ್ ಶುಕ್ರವಾರ (ಜು.೧೩) ಎಲ್ಲ ಬಗೆಯ ಕ್ರಿಕೆಟ್ ಪ್ರಕಾರದಿಂದ ಅಧಿಕೃತವಾಗಿ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಭಾರತ ಪರ ಕೊನೆಯ ಬಾರಿಗೆ ಆಡಿದ ೧೨ ವರ್ಷಗಳ ಬಳಿಕ ಕೈಫ್ ನಿವೃತ್ತಿ ಹೇಳಿದ್ದಾರೆ

ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಕ್ರಿಕೆಟ್‌ನ ಆಧಾರಸ್ತಂಭವಾಗಿದ್ದ ಮೊಹಮದ್ ಕೈಫ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಕೊನೆಯ ಬಾರಿಗೆ ಭಾರತದ ಪರ ಆಡಿದ್ದ ಕೈಫ್, ಮತ್ತೊಮ್ಮೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಳಿಸಲೇ ಇಲ್ಲ. ಹೀಗಾಗಿ, ಕಡೆಗೂ ವೃತ್ತಿಬದುಕಿಗೆ ಅವರು ವಿದಾಯ ಹೇಳಿದ್ದಾರೆ.

೩೭ರ ಹರೆಯದ ಕೈಫ್, ಭಾರತದ ಪರ ೧೩ ಟೆಸ್ಟ್, ೧೨೫ ಏಕದಿನ ಪಂದ್ಯಗಳನ್ನಾಡಿದ್ದಾರೆ. ಕೈಫ್ ವೃತ್ತಿಬದುಕಿನ ಸರ್ವಶ್ರೇಷ್ಠ ಕ್ಷಣವೆಂದರೆ ೨೦೦೨ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯ. ಇಂಗ್ಲೆಂಡ್‌ನ ಚಾರಿತ್ರಿಕ ತಾಣ ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೈಫ್ ಅಮೋಘ ೮೭ ರನ್ ಗಳಿಸುವುದರೊಂದಿಗೆ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.

“ಪ್ರಥಮ ದರ್ಜೆ ಕ್ರಿಕೆಟ್‌ನಿಂದಲೂ ನಾನು ನಿವೃತ್ತಿ ಪಡೆಯುತ್ತಿದ್ದೇನೆ ಎಂಬುದನ್ನು ಈ ಪತ್ರದ ಮುಖೇನ ನಿಮಗೆ ತಿಳಿಸಲಿಚ್ಛಿಸುತ್ತೇನೆ,’’ ಎಂಬ ಒಕ್ಕಣೆಯ ಇಮೇಲ್ ಸಂದೇಶವನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಸಿ ಕೆ ಖನ್ನಾ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ರವಾನಿಸಿದ್ದಾರೆ.

#MohammadKaif With His Family❤

A post shared by Cricket Updates 300K🔥 (@cric8) on

ಇದನ್ನೂ ಓದಿ : ಕಿರಿಯರ ವಿಶ್ವಕಪ್: ಕೈಫ್, ಕೊಹ್ಲಿ, ಚಾಂದ್ ನಂತರ ಇದೀಗ ಪೃಥ್ವಿ ಶಾ ಸರದಿ

೨೦೦೦ದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಹತ್ತೊಂಬತ್ತು ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಲು ಯುವರಾಜ್ ಸಿಂಗ್ ಜೊತೆ ಪ್ರಧಾನ ಪಾತ್ರ ವಹಿಸಿದ್ದವರು ಕೈಫ್. ಮೊಟ್ಟಮೊದಲ ಬಾರಿಗೆ ಕಿರಿಯರ ವಿಶ್ವಕಪ್‌ನಲ್ಲಿ ಯುವ ಭಾರತಕ್ಕೆ ಕಿರೀಟ ತಂದುಕೊಟ್ಟ ಕೀರ್ತಿಯೂ ಕೈಫ್ ಅವರದ್ದು. ಅಂದಹಾಗೆ, ಉತ್ತರ ಪ್ರದೇಶಕ್ಕೆ ರಣಜಿ ಟ್ರೋಫಿಯನ್ನೂ ತಂದಿತ್ತ ಕೈಫ್, ಚತ್ತೀಸ್‌ಗಢ ಪರ ಕೊನೆಯ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು.

“ಐತಿಹಾಸಿಕ ನ್ಯಾಟ್‌ವೆಸ್ಟ್ ಟ್ರೋಫಿ ಪಂದ್ಯಾವಳಿಯ ಗೆಲುವಿಗೆ ೧೬ ವರ್ಷ ತುಂಬುತ್ತಿದೆ. ನನ್ನ ವೃತ್ತಿಬದುಕಿನಲ್ಲಿ ಭಾರತಕ್ಕೆ ಈ ಐತಿಹಾಸಿಕ ಟ್ರೋಫಿ ಗೆಲುವು ತಂದುಕೊಟ್ಟ ಕ್ಷಣವನ್ನು ನಾನಿಂದು ನಿವೃತ್ತಿಯಾಗುತ್ತಿರುವ ದಿನ ನೆನೆಯುವುದಕ್ಕೆ ಸಂತಸವಾಗುತ್ತಿದೆ,’’ ಎಂತಲೂ ಕೈಫ್ ಇಮೇಲ್‌ನಲ್ಲಿ ಬರೆದುಕೊಂಡಿದ್ದಾರೆ.

ಅಸಾಮಾನ್ಯ ಫೀಲ್ಡರ್!

ಭಾರತೀಯ ಕ್ರಿಕೆಟ್‌ನ ಬಲು ಅಪರೂಪದ ಕ್ಷೇತ್ರರಕ್ಷಕರಲ್ಲಿ ಮೊಹಮದ್ ಕೈಫ್ ಕೂಡ ಒಬ್ಬರು. ೩೦ ಗಜಗಳ ಸರ್ಕಲ್‌ನಲ್ಲಿ, ಅದರಲ್ಲೂ ಕವರ್‌ನಲ್ಲಂತೂ ಅವರ ಚುರುಕಿನ ಫೀಲ್ಡಿಂಗ್ ಸಮ್ಮೋಹನಕಾರಿ. ಇನ್ನು, ಪಾಯಿಂಟ್ ವಿಭಾಗದಲ್ಲಿ ಯುವರಾಜ್ ಸಿಂಗ್ ಜೊತೆ ಕೈಫ್ ಭಾರತೀಯ ಫೀಲ್ಡಿಂಗ್‌ನ ಬೆನ್ನೆಲುಬಾಗಿದ್ದರು. ಸೌರವ್ ಗಂಗೂಲಿ ಸಾರಥ್ಯದ ಸಂದರ್ಭದಲ್ಲಿ ಭಾರತೀಯ ತಂಡದ ಪ್ರಮುಖ ಕ್ಷೇತ್ರರಕ್ಷಕ ಎಂದರೆ ಕೈಫ್ ಮಾತ್ರವೇ ಎನ್ನುವಷ್ಟು ಅವರು ಪ್ರಭಾವ ಬೀರಿದ್ದರು.

ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಶುರುವಿನ ಐದು ವರ್ಷಗಳಲ್ಲಿ ತಂಡದ ಕಾಯಂ ಸದಸ್ಯನಾಗಿದ್ದ ಕೈಫ್, ಆಡುವ ದಿನಗಳಲ್ಲಂತೂ ಈಗಿನ ಕೊಹ್ಲಿಯಂತೆ ಫಿಟ್ಟೆಸ್ಟ್ ಕ್ರಿಕೆಟಿಗನೆನಿಸಿದ್ದರು. ಭಾರತದ ಪರ ೧೨೫ ಏಕದಿನ ಪಂದ್ಯಗಳನ್ನಾಡಿರುವ ಕೈಫ್, ೩೨ರ ಬ್ಯಾಟಿಂಗ್ ಸರಾಸರಿಯಲ್ಲಿ ಎರಡು ಶತಕ ಸೇರಿದ 2,753 ರನ್ ಗಳಿಸಿದ್ದಾರೆ.

ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುತ್ತಿದ್ದ ಕೈಫ್, ಹೆಚ್ಚು ಕಾಲ ಆಡುವ ಅವಕಾಶದಿಂದ ವಂಚಿತರಾಗುತ್ತಿದ್ದರು. ಬಹುತೇಕ ಓವರ್‌ಗಳು ಮುಗಿಯುವ ಹೊತ್ತಿನಲ್ಲಿ ಕ್ರೀಸ್‌ಗಿಳಿಸಲ್ಪಡುತ್ತಿದ್ದ ಅವರಿಗೆ ಸಿಗುತ್ತಿದ್ದುದು ಕೇವಲ ಕೆಲವೇ ಕೆಲವು ಎಸೆತಗಳಷ್ಟೆ.

ಕೈಫ್ ವೃತ್ತಿಬದುಕಿನ ಅಪರೂಪದ ಫೀಲ್ಡಿಂಗ್ ಕ್ಷಣಗಳು

೧೩ ಟೆಸ್ಟ್ ಪಂದ್ಯಗಳನ್ನಾಡಿರುವ ಕೈಫ್, ೩೨.೦೧ರ ಬ್ಯಾಟಿಂಗ್ ಸರಾಸರಿಯಲ್ಲಿ 1 ಶತಕ, ೩ ಅರ್ಧಶತಕ ಸೇರಿದ ೬೨೪ ರನ್ ಕಲೆಹಾಕಿದ್ದಾರೆ. ವಿಶೇಷವಾದ ಬ್ಯಾಟಿಂಗ್ ತಂತ್ರಗಾರಿಕೆಗೂ ಹೆಸರಾಗಿದ್ದ ಅವರು, ೨೦೦೬ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಅದಾದ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಾಗದ ಕೈಫ್, ಉ.ಪ್ರದೇಶ ಪರ ಹಲವಾರು ವರ್ಷಗಳ ಕಾಲ ರಣಜಿ ಕ್ರಿಕೆಟ್ ಆಡಿದರು. ೧೨೯ ಪ್ರಥಮ ದರ್ಜೆ ಪಂದ್ಯಗಳಲ್ಲಿ ೧೫ ಶತಕ ಸೇರಿದ ೭,೫೮೧ ರನ್‌ ಗಳಿಸಿರುವ ಕೈಫ್, ಪ್ರಸ್ತುತ ಕ್ರಿಕೆಟ್ ವಿಶ್ಲೇಷಕ ಹಾಗೂ ಹಿಂದಿ ಭಾಷೆಯ ಗೌರವಾನ್ವಿತ ಪಂದ್ಯ ವಿಶ್ಲೇಷಣೆಕಾರ ಎನಿಸಿಕೊಂಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More