ಒಲ್ಲದ ಮೂರನೇ ಸ್ಥಾನದಲ್ಲಿ ಬೆಲ್ಜಿಯಂ-ಇಂಗ್ಲೆಂಡ್‌ಗೆ ಪ್ರತಿಷ್ಠೆಯದ್ದೇ ಪಣ

ಫಿಫಾ ವಿಶ್ವಕಪ್ ಫೈನಲ್ ಕನಸಿನಲ್ಲಿದ್ದ ಬೆಲ್ಜಿಯಂ ಮತ್ತು ಇಂಗ್ಲೆಂಡ್‌ ತಂಡಗಳಿಗೆ ಸೆಮಿಫೈನಲ್‌ನಲ್ಲಿ ಭ್ರಮನಿರಸನವಾದದ್ದೀಗ ಇತಿಹಾಸ. ಮೂರನೇ ಸ್ಥಾನ ಇವೆರಡೂ ತಂಡಗಳಿಗೆ ಒಲ್ಲದ ಸಂಗತಿ. ಆದರೆ, ಈ ಒಲ್ಲದ ಮನಸ್ಸಿನಲ್ಲೇ ಇವೆರಡೂ ತಂಡಗಳಿಗೆ ಸದ್ಯ ಎದುರಾಗಿರುವುದು ಪ್ರತಿಷ್ಠೆಯ ಪ್ರಶ್ನೆಯಷ್ಟೆ

ಸ್ವತಃ ಇಂಗ್ಲೆಂಡ್ ಕೋಚ್ ಗರೆತ್ ಸೌತ್ ಗೇಟ್ ಹೇಳುವಂತೆ ಯಾವ ತಂಡವೂ ಮೂರನೇ ಸ್ಥಾನಕ್ಕಾಗಿ ಸ್ಪರ್ಧಿಸಲು ಇಚ್ಛಿಸುವುದಿಲ್ಲ. ಆದರೆ, ಇಂಗ್ಲೆಂಡ್‌ಗೆ ಹೋಲಿಸಿದರೆ ಬೆಲ್ಜಿಯಂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ೧೯೯೬ರಲ್ಲಿ ಪ್ರಶಸ್ತಿ ಗೆದ್ದಿದ್ದ ಇಂಗ್ಲೆಂಡ್ ಆನಂತರದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಆ ನಿಟ್ಟಿನಲ್ಲಿ ನೋಡುವುದಾದರೆ, ಬೆಲ್ಜಿಯಂ ಫಿಫಾ ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ ಮೆರೆಯಲು ಈ ಪಂದ್ಯ ಅದರ ಪಾಲಿಗೆ ಅತಿ ಮಹತ್ವವೆನಿಸಿದೆ.

ರಾಬರ್ಟ್ ಮಾರ್ಟಿನೆಜ್ ಮಾರ್ಗದರ್ಶನದ ಬೆಲ್ಜಿಯಂ, ಇದೇ ವಿಶ್ವಕಪ್‌ ಗುಂಪು ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ೧-೦ ಗೆಲುವು ಪಡೆದಿತ್ತು. ಆದರೆ, ಆ ಪಂದ್ಯದಲ್ಲಿನ ಗೆಲುವು ಸಾಧಿಸಲು ಇಂಗ್ಲೆಂಡ್‌ ಪ್ರಮುಖ ಆಟಗಾರರಿಲ್ಲದ ತಂಡವಾಗಿ ಕಣಕ್ಕಿಳಿದಿದ್ದುದೇ ಕಾರಣವಾಗಿತ್ತು. ಇನ್ನು, ಬೆಲ್ಜಿಯಂ ಪಾಳೆಯದಲ್ಲಿ ಅನುಭವಿಗಳ ಜೊತೆಗೆ ಯುವ ಆಟಗಾರರೂ ಕೈ ಜೋಡಿಸಿದ್ದಾರೆ. ನಾಯಕ ಹಜಾರ್ಡ್, ರೊಮೆಲು ಲುಕಾಕು ಹಾಗೂ ಕೆವಿನ್ ಡಿ ಬ್ರ್ಯೂನ್ ಇಂಗ್ಲೆಂಡ್ ರಕ್ಷಣಾ ಕೋಟೆಯನ್ನು ಭೇದಿಸುವಷ್ಟು ಸಮರ್ಥರಿದ್ದಾರೆ. ಅಂತೆಯೇ ಆಕ್ಸೆಲ್ ವಿಷೆಲ್, ಮರೌನ್ ಫೆಲೈನಿ, ಮೌಸಾ ಡೆಂಬೆಲ್ ಹಾಗೂ ನಾಸೆರ್ ಚಾಡ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ.

ಇನ್ನು, ಇಂಗ್ಲೆಂಡ್ ಪಾಳೆಯ ಕೂಡಾ ಬಲಿಷ್ಠರ ತಂಡವಾಗಿದೆ. ೨೪ರ ಹರೆಯದ ಹ್ಯಾರಿ ಕೇನ್ ಆರು ಗೋಲುಗಳನ್ನು ಹೊಡೆದು ಗಮನ ಸೆಳೆದಿದ್ದಾರೆ. ಆದರೆ, ನಿರ್ಣಾಯಕವಾಗಿದ್ದ ಸೆಮಿಫೈನಲ್ ಸೆಣಸಾಟದಲ್ಲಿ ಅವರಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂದಹಾಗೆ, ಬೆಲ್ಜಿಯಂನ ಸ್ಟಾರ್ ಆಟಗಾರ ರೊಮೆಲು ಲುಕಾಕು ಕೂಡಾ ಸೆಮಿಫೈನಲ್‌ನಲ್ಲಿ ವೈಫಲ್ಯ ಅನುಭವಿಸಿದ್ದರು.

ಜೋರ್ಡನ್ ಹೆಂಡರ್ಸನ್, ಹ್ಯಾರಿ ಮೆಗೈರ್, ಜಾನ್ ಸ್ಟೋನೆಸ್, ಕೈಲ್ ವಾಕರ್ ಹಾಗೂ ಡೆನ್ನಿ ರೋಸ್ ರಕ್ಷಣಾ ಪಡೆಯಲ್ಲಿದ್ದು, ಗಾಯಾಳು ಕೀರನ್ ಟ್ರಿಪ್ಪಿಯರ್ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬುದು ಸಂಜೆಯ ಹೊತ್ತಿಗಷ್ಟೇ ಖಚಿತವಾಗಲಿದೆ. ಕ್ರೊವೇಷ್ಯಾ ವಿರುದ್ಧ ಆಕರ್ಷಕ ಗೋಲು ಹೊಡೆದಿದ್ದ ಟ್ರಿಪ್ಪಿಯರ್ ಮಿಂಚು ಹರಿಸಿದ್ದರು.

ಇದನ್ನೂ ಓದಿ : ಫಿಫಾ ವಿಶ್ವಕಪ್ | ಸಾಂಬಾ ಕನಸಿಗೆ ಎಳ್ಳುನೀರು ಬಿಟ್ಟ ಬೆಲ್ಜಿಯಂ ಬೊಂಬಾಟ್ ಆಟ

ನಿಮಗಿದು ಗೊತ್ತಿರಲಿ

ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಬೆಲ್ಜಿಯಂಗಿಂತಲೂ ಹೆಚ್ಚು ಗೋಲು ದಾಖಲಿಸಿದ ಏಕೈಕ ನಿದರ್ಶನಕ್ಕೆ ೬೦ ವರ್ಷಗಳ ಇತಿಹಾಸವಿದೆ. ೧೯೫೮ರಲ್ಲಿ ಫ್ರಾನ್ಸ್ ೬-೩ ಗೋಲುಗಳಿಂದ ಪಶ್ಚಿಮ ಜರ್ಮನಿಯನ್ನು ಮಣಿಸಿತ್ತು. ನಾಲ್ಕು ಗೋಲುಗಳನ್ನು ಬಾರಿಸಿದ ಜಸ್ಟ್ ಫಾಂಟೇನ್, ಈ ಏಕೈಕ ಟೂರ್ನಿಯಲ್ಲೇ ೧೩ ಗೋಲುಗಳಿಂದ ದಾಖಲೆ ಬರೆದಿದ್ದರು.

ಅಂದಹಾಗೆ, ೧೯೮೬ರ ಮೆಕ್ಸಿಕೋ ಆವೃತ್ತಿಯಲ್ಲಿ ಬೆಲ್ಜಿಯಂ ನಾಲ್ಕನೇ ಸ್ಥಾನಕ್ಕೆ ತೃಪ್ತವಾಗಿತ್ತು. ಆಗ ಫ್ರಾನ್ಸ್ ವಿರುದ್ಧ ೪-೨ ಗೋಲುಗಳಿಂದ ಬೆಲ್ಜಿಯಂ ಗೆಲುವು ಸಾಧಿಸಿತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿನ ತನ್ನ ಈ ಸಾಧನೆಯನ್ನು ಉತ್ತಮೀಕರಿಸಲು ಅದೀಗ ಸರ್ವಸನ್ನದ್ಧವಾಗಿದೆ

ಸಂಭವನೀಯ ಇಲೆವೆನ್

ಬೆಲ್ಜಿಯಂ: ಥಿಬೌಟ್ ಕೊರ್ಟೊಯಿಸ್; ಜಾನ್ ವೆರ್ಟೊಂಘೆನ್, ವಿನ್ಸೆಂಟ್ ಕೊಂಪನಿ, ಟಾಬಿ ಆಲ್ಡೆರ್‌ವಿರೆಲ್ಡ್; ಆಕ್ಸೆಲ್ ವಿಟ್ಸೆಲ್, ಕೆವಿನ್ ಡಿ ಬ್ರ್ಯೂಯ್ನಿ, ನಾಸೆರ್ ಚಾಡ್ಲಿ, ಥಾಮಸ್ ಮ್ಯುನಿಯರ್; ಮರೌನೆ ಫೆಲ್ಲಾಯಿನಿ, ಈಡೆನ್ ಹಜಾರ್ಡ್; ರೊಮೇಲು ಲುಕಾಕು.

ಇಂಗ್ಲೆಂಡ್: ಜೋರ್ಡನ್ ಪಿಕ್‌ಫೋರ್ಡ್; ಕೈಲ್ ವಾಕರ್, ಜಾನ್ ಸ್ಟೋನ್ಸ್, ಹ್ಯಾರಿ ಮಗ್ಯುರಿ; ಕೀರನ್ ಟ್ರಿಪ್ಪಿಯರ್, ಡೆಲೆ ಅಲಿ, ಜೋರ್ಡನ್ ಹೆಂಡರ್ಸನ್, ಜೆಸ್ಸಿ ಲಿಂಗಾರ್ಡ್, ಫ್ಯಾಬಿಯನ್ ಡೆಲ್ಫ್; ರಹೀಮ್ ಸ್ಟೆರ್ಲಿಂಗ್ ಹಾಗೂ ಹ್ಯಾರಿ ಕೇನ್.

ಪಂದ್ಯ ಆರಂಭ: ರಾತ್ರಿ ೭.೩೦ರಿಂದ | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More