ವಿಂಬಲ್ಡನ್ | ಸ್ವಿಸ್ ಮಾಸ್ಟರ್ ಫೆಡರರ್ ಮಣಿಸಿದ್ದ ಆಂಡರ್ಸನ್‌ ಫೈನಲ್‌ಗೆ

ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ೨೧ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಕನಸಿಗೆ ಎಳ್ಳುನೀರು ಬಿಟ್ಟಿದ್ದ ದಕ್ಷಿಣ ಆಫ್ರಿಕಾ ಆಟಗಾರ ಕೆವಿನ್ ಆ್ಯಂಡರ್ಸನ್ ಚೊಚ್ಚಲ ವಿಂಬಲ್ಡನ್ ಫೈನಲ್ ತಲುಪಿದ್ದಾರೆ. ಅಮೆರಿಕದ ಜಾನ್ ಇಸ್ನೆರ್ ವಿರುದ್ಧದ ಐದು ಸೆಟ್‌ಗಳ ರೋಚಕ ಸೆಣಸಿನಲ್ಲಿ ಆ್ಯಂಡರ್ಸನ್ ಐತಿಹಾಸಿಕ ದಿಗ್ವಿಜಯ ಸಾಧಿಸಿದರು

ವಿಂಬಲ್ಡನ್ ವಾರಾಂತ್ಯ ವೀರೋಚಿತ ಆಟಕ್ಕೆ ಸಾಕ್ಷಿಯಾಗುವ ಮುನ್ನುಡಿ ಬರೆದ ದಕ್ಷಿಣ ಆಫ್ರಿಕಾ ಆಟಗಾರ ಕೆವಿನ್ ಆ್ಯಂಡರ್ಸನ್, ವೃತ್ತಿಬದುಕಿನಲ್ಲಿ ಅಪರೂಪದ ಗೆಲುವು ಕಂಡರು. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶುಕ್ರವಾರ (ಜು.೧೩) ನಡೆದ ಸುದೀರ್ಘ ಕಾಲದ ಸೆಣಸಾಟದಲ್ಲಿ ಆ್ಯಂಡರ್ಸನ್, ಅಮೆರಿಕದ ಟೆನಿಸಿಗ ಜಾನ್ ಇಸ್ನೆರ್ ವಿರುದ್ಧ ೭-೬ (೮/೬), ೬-೭ (೫/೭), ೬-೭ (೯/೧೧), ೬-೪ ಹಾಗೂ ೨೬-೨೪ ಸೆಟ್‌ಗಳಲ್ಲಿ ಗೆಲುವು ಪಡೆದು ಮೊಟ್ಟಮೊದಲ ಬಾರಿಗೆ ವಿಂಬಲ್ಡನ್ ಫೈನಲ್‌ಗೆ ಕಾಲಿರಿಸಿದರು.

ಭಾನುವಾರ (ಜು.೧೫) ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆ್ಯಂಡರ್ಸನ್, ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲವೇ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ ಸೆಣಸಲಿದ್ದಾರೆ. ಅಂದಹಾಗೆ, ನಡಾಲ್ ಮತ್ತು ಜೊಕೊವಿಚ್ ನಡುವಣದ ಪಂದ್ಯ ಕೂಡ ತೀವ್ರ ರೋಚಕತೆ ಸೃಷ್ಟಿಸಿದ್ದು, ೧೭ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ನಡಾಲ್ ವಿರುದ್ಧ ಸರ್ಬಿಯಾ ಆಟಗಾರ ಕೊಂಚ ಮೇಲುಗೈ ಸಾಧಿಸಿದ್ದಾರೆ. ಮಂದ ಬೆಳಕಿನಿಂದಾಗಿ ಸ್ಥಗಿತಗೊಂಡಿರುವ ಪಂದ್ಯದಲ್ಲಿ ನಡಾಲ್ ಎದುರು ಜೊಕೊವಿಚ್ ಎರಡು ಸೆಟ್ ಮುನ್ನಡೆ ಸಾಧಿಸಿದ್ದಾರೆ.

ಐತಿಹಾಸಿಕ ಸೆಣಸಾಟ

ಆಧುನಿಕ ವಿಂಬಲ್ಡನ್ ಟೆನಿಸ್ ೧೫೦ನೇ ವರ್ಷಾಚರಣೆಯಲ್ಲಿದೆ ನಿಜ, ಅದಕ್ಕೆ ತಕ್ಕಂತೆ ಈ ಆವೃತ್ತಿಯನ್ನು ಸ್ಮರಣೀಯವಾಗಿಸಿದ ಏಕೈಕ ವ್ಯಕ್ತಿ ಎಂದರೆ ಅದು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಮಾತ್ರವೇ. ೯ನೇ ವಿಂಬಲ್ಡನ್ ಪ್ರಶಸ್ತಿಗಾಗಿನ ಫೆಡರರ್ ನಾಗಾಲೋಟವನ್ನು ಹತ್ತಿಕ್ಕಿದ್ದ ಆ್ಯಂಡರ್ಸನ್, ಸೆಮಿಫೈನಲ್‌ನಲ್ಲೂ ಮನಮೋಹಕ ಆಟವಾಡುವುದರೊಂದಿಗೆ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದರು.

ಚೊಚ್ಚಲ ವಿಂಬಲ್ಡನ್ ಫೈನಲ್ ತಲುಪುವ ಕನಸು ಕಟ್ಟಿದ್ದ ಜಾನ್ ಇಸ್ನೆರ್ ಒಡ್ಡಿದ ಕಠಿಣ ಪ್ರತಿರೋಧವನ್ನು ಐದು ಸೆಟ್‌ಗಳ ಆಟದಲ್ಲಿ ಹತ್ತಿಕ್ಕಿದ ಆ್ಯಂಡರ್ಸನ್, ಬರೋಬ್ಬರಿ ಆರೂವರೆ ತಾಸಿನ ಪಂದ್ಯದಲ್ಲಿ ಗೆಲುವು ಪಡೆದು ಅಪೂರ್ವ ದಾಖಲೆಯನ್ನೇ ಬರೆದರು. ವಿಂಬಲ್ಡನ್ ಕಂಡ ಎರಡನೇ ಅತಿದೊಡ್ಡ ಪಂದ್ಯವಿದು ಎಂಬುದು ಗಮನಾರ್ಹ. ೨೦೧೩ರಲ್ಲಿ ಅರ್ಜೆಂಟಿನಾ ಆಟಗಾರ ಡೆಲ್ ಪೊಟ್ರೊ ವಿರುದ್ಧ ಜೊಕೊವಿಚ್ ಎರಡು ತಾಸು, ೪೪ ನಿಮಿಷಗಳ ಕಾಲ ಸೆಣಸಾಡಿ ಗೆಲುವು ಸಾಧಿಸಿದ್ದುದು ಇಲ್ಲೀವರೆಗಿನ ದಾಖಲೆ ಎನಿಸಿತ್ತು.

ಟೆನಿಸ್ ಲೋಕದ ೩ನೇ ಸುದೀರ್ಘ ಪಂದ್ಯ

ಬಡಪೆಟ್ಟಿಗೆ ಬಗ್ಗದ ಆಸಾಮಿ ತಾನೆಂಬುದನ್ನು ಆ್ಯಂಡರ್ಸನ್ ನಿರೂಪಿಸಿದರಲ್ಲದೆ, ವಿಶ್ವ ಟೆನಿಸ್ ಲೋಕ ಕಂಡ ಮೂರನೇ ಸುದೀರ್ಘ ಪಂದ್ಯಕ್ಕೂ ಕಾರಣರಾದರು. ವಿಶೇಷ ಎಂದರೆ, ಇದೇ ಜಾನ್ ಇಸ್ನೆರ್ ಹತ್ತು ವರ್ಷಗಳ ಹಿಂದೆ ಇದೇ ವಿಂಬಲ್ಡನ್ ಟೂರ್ನಿಯಲ್ಲಿ ಟೆನಿಸ್ ಜಗತ್ತಿನ ಬಹು ಸುದೀರ್ಘ ಕಾಲದ ಆಟದ ದಾಖಲೆ ಬರೆದಿದ್ದರು. ಫ್ರಾನ್ಸ್ ಆಟಗಾರ ನಿಕೊಲಾಸ್ ಮಹುಟ್ ವಿರುದ್ಧದ ಮೊದಲ ಸುತ್ತಿನ ಮೊದಲ ಸೆಟ್ ಅನ್ನು ೭೦-೬೮ರಿಂದ ಗೆದ್ದಿದ್ದ ಇಸ್ನೆರ್, ಪಂದ್ಯ ಗೆಲ್ಲಲು ತೆಗೆದುಕೊಂಡಿದ್ದ ಸಮಯ ೧೧ ತಾಸು ಹಾಗೂ ಐದು ನಿಮಿಷಗಳು!

ಅರ್ಜೆಂಟೀನಾದ ಲಿಯೊನಾರ್ಡೊ ಮಯೆರ್ ಹಾಗೂ ಬ್ರೆಜಿಲ್‌ನ ಜಾವೊ ಸೌಜಾ ನಡುವಣದ ೨೦೧೫ರ ಡೇವಿಸ್ ಕಪ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯ ಆರು ತಾಸು ಹಾಗೂ ೪೩ ನಿಮಿಷಗಳ ಕಾಲ ನಡೆದಿತ್ತು. ಕಳೆದ ವರ್ಷ ಯುಎಸ್ ಓಪನ್ ಫೈನಲ್‌ನಲ್ಲಿ ನಡಾಲ್ ಎದುರು ರನ್ನರ್‌ಅಪ್ ಆಗಿದ್ದ ಆ್ಯಂಡರ್ಸನ್ , ೧೯೨೧ರಲ್ಲಿ ಬ್ರಿಯಾನ್ ನಾರ್ಟನ್ ನಂತರ ವಿಂಬಲ್ಡನ್ ಫೈನಲ್ ತಲುಪಿದ ಮೊಟ್ಟಮೊದಲ ದಕ್ಷಿಣ ಆಫ್ರಿಕಾ ಟೆನಿಸಿಗ ಎನಿಸಿದರು.

ಐದು ಸೆಟ್‌ಗಳ ಮಹಾಕಾವ್ಯ!

ಜಾನ್ ಇಸ್ನೆರ್ ಮತ್ತು ಕೆವಿನ್ ಆ್ಯಂಡರ್ಸನ್ ನಡುವಣದ ಪಂದ್ಯ ಒಂದು ವಿಧದಲ್ಲಿ ಟೆನಿಸ್ ಲೋಕದ ಇನ್ನೊಂದು ಮಹಾಕಾವ್ಯವೇ ಸರಿ. ಗೆಳೆಯರೂ ಆಗಿರುವ ಈ ಟೆನಿಸ್ ಜೋಡಿ ದೈಹಿಕವಾಗಿಯೂ ಸಮಾಂತರದವರು! ಎತ್ತರದ ದೈಹಿಕ ಪ್ರಕೃತಿಯ ಈ ಇಬ್ಬರ ಆಟ ವಾರಾಂತ್ಯದ ವಿಂಬಲ್ಡನ್ ಸೊಬಗು ಸವಿಯಲು ಸೇರಿದ್ದ ಗಣ್ಯ ವ್ಯಕ್ತಿಗಳನ್ನು ಮುದಗೊಳಿಸಿತು. ಬುಧವಾರವಷ್ಟೇ ಫೆಡರರ್ ವಿರುದ್ಧ ೪ ಗಂಟೆ ೧೪ ನಿಮಿಷಗಳ ಹೋರಾಟದಲ್ಲಿ ಗೆಲುವು ಪಡೆದಿದ್ದ ಆ್ಯಂಡರ್ಸನ್, ಅದಕ್ಕೂ ಮುನ್ನ ನಾಲ್ಕನೇ ಸುತ್ತಿನಲ್ಲಿ ಫ್ರಾನ್ಸ್‌ನ ಗೇಲ್ ಮಾಂಫಿಲ್ಸ್ ವಿರುದ್ಧ ಮೂರು ತಾಸು ೨೯ ನಿಮಿಷಗಳ ಸೆಣಸಿನಲ್ಲಿ ಜಯ ಪಡೆದಿದ್ದರು.

“ನನಗೆ ಈಗ ಏನು ಹೇಳಬೇಕೋ ತಿಳಿಯದಾಗಿದೆ. ಇಂಥದ್ದೊಂದು ವಾತಾವರಣದಲ್ಲಿ ಸ್ಪರ್ಧಿಸುವುದು ನಮ್ಮಿಬ್ಬರಿಗೂ ಕಷ್ಟದ ಕೆಲಸ ಎಂಬುದನ್ನಷ್ಟೇ ಹೇಳಬಯಸುವೆ. ಸುದೀರ್ಘ ಕಾಲದಿಂದ ನಾವಿಬ್ಬರೂ ಗೆಳೆಯರು. ಇಷ್ಟಕ್ಕೂ ನನ್ನ ವೃತ್ತಿಬದುಕನ್ನು ಇಲ್ಲೀವರೆಗೆ ಎಳೆದುತರುವಲ್ಲಿ ಜಾನ್‌ನ ಕೊಡುಗೆಯೂ ಸೇರಿದೆ. ಜಾನ್‌ಗೆ ಅಭಿನಂದನೆಗಳನ್ನು ತಿಳಿಸಲಾಶಿಸುತ್ತೇನೆ. ಬಹುಶಃ ಮುಂದಿನ ದಿನಗಳಲ್ಲಿ ಆತ ಇನ್ನಷ್ಟು ಪ್ರಖರವಾಗಿ ಬರಲಿದ್ದಾರೆ,’’ ಎಂದು ಪಂದ್ಯದ ಬಳಿಕ ಆ್ಯಂಡರ್ಸನ್ ತಿಳಿಸಿದರು.

ಕಡೇ ಆಟದ ಸೊಬಗು

ಮೊದಲ ನಾಲ್ಕು ಸೆಟ್‌ಗಳ ಪೈಕಿ ನಾಲ್ಕನೇ ಸೆಟ್ ಒಂದನ್ನು ಹೊರತುಪಡಿಸಿ ಮಿಕ್ಕವು ಟೈಬ್ರೇಕರ್‌ನಲ್ಲಿ ಮುಗಿದಿದ್ದವು. ಕೆವಿನ್ ೪೯ ಏಸಸ್‌ಗಳನ್ನು ಸಿಡಿಸಿದರೆ, ಇಸ್ನೆರ್ ಕಡೆಯಿಂದಲೂ ೫೩ ಏಸ್‌ಗಳು ಸ್ಫೋಟಿಸಿದ್ದವು. ಇನ್ನು, ೧೧೮ ವಿನ್ನರ್‌ಗಳನ್ನು ಕೆವಿನ್ ಬಾರಿಸಿದರೆ, ಇಸ್ನೆರ್ ೧೨೯ ವಿನ್ನರ್‌ಗಳನ್ನು ದಾಖಲಿಸಿದರು. ಆದರೆ, ಪಂದ್ಯದಾದ್ಯಂತ ಕೆವಿನ್ ೨೯೭ ಪಾಯಿಂಟ್ಸ್ ಕಲೆಹಾಕಿದರೆ, ಇಸ್ನೆರ್ ಪೇರಿಸಿದ್ದು ೨೭೧ ಪಾಯಿಂಟ್ಸ್‌.

ಮೊದಲ ಎರಡೂ ಸೆಟ್‌ಗಳು ಟೈಬ್ರೇಕರ್‌ನಲ್ಲಿ ಪರ್ಯವಸಾನ ಕಂಡಾಗ, ಕೆವಿನ್ ಮೂರನೇ ಸೆಟ್‌ನಲ್ಲಿ ೪-೩ರಿಂದ ಮುನ್ನಡೆ ಪಡೆದರು. ಇಸ್ನೆರ್ ಅವರ ಸತತ ೧೧೦ನೇ ಸರ್ವೀಸ್‌ ಓಟವನ್ನು ತುಂಡರಿಸಿದ ಕೆವಿನ್, ಸೆಟ್ ಗೆಲ್ಲುವ ವಿಶ್ವಾಸ ಮೂಡಿಸಿದರೂ, ಪಟ್ಟು ಬಿಡದ ಇಸ್ನೆರ್ ಪುನಃ ಸೆಟ್ ಅನ್ನು ಟೈಬ್ರೇಕರ್‌ಗೆ ವಿಸ್ತರಿಸಿ ಜಯ ಪಡೆದರು. ಆದರೆ, ನಾಲ್ಕನೇ ಸೆಟ್‌ನಲ್ಲಿ ಶುರುವಿನಲ್ಲೇ ಇಸ್ನೆರ್ ಸರ್ವ್ ಮುರಿದ ಕೆವಿನ್ ಸೆಟ್ ಗೆದ್ದು ನಿರ್ಣಾಯಕ ಕಾದಾಟಕ್ಕೆ ವೇದಿಕೆ ಸೃಷ್ಟಿಸಿದರು.

೧೫ನೇ ಗೇಮ್‌ಗೆ ಸೆಟ್ ಸಾಗುತ್ತಿದ್ದಂತೆ ಪಂದ್ಯ ರೋಚಕ ಕಳೆಗಟ್ಟಿತು. ಇದಕ್ಕೂ ಮುನ್ನ ಕೆವಿನ್ ಮೊದಲ ಬ್ರೇಕ್ ಪಾಯಿಂಟ್ಸ್ ಗಳಿಸಿದರೂ, ಇಸ್ನೆರ್ ೪೨ನೇ ಏಸ್‌ನೊಂದಿಗೆ ಪುಟಿದೆದ್ದರು. ಇನ್ನು, ೨೧ ಮತ್ತು ೩೪ನೇ ಗೇಮ್‌ನಲ್ಲಿಯೂ ಇದೇ ಜಿದ್ದಾಜಿದ್ದಿ ನಡೆಯಿತಾದರೂ, ಕೆವಿನ್ ಮುನ್ನಡೆಗೆ ಇಸ್ನೆರ್ ಆಸ್ಪದ ನೀಡಲೇ ಇಲ್ಲ. ಆದರೆ, ಸಾಕಷ್ಟು ಆಡಿ ದಣಿದಿದ್ದ ಅಮೆರಿಕನ್ ಆಟಗಾರ ಕೊನೇ ಘಟ್ಟದಲ್ಲಿ ಏಮಾರಿದರು.

ನಿರ್ಣಾಯಕ ಘಟ್ಟದಲ್ಲಿ ಇಸ್ನೆರ್ ಎಸಗಿದ ಫೋರ್‌ಹ್ಯಾಂಡ್ ಶಾಟ್ ವೈಡ್ ಎನಿಸಿಕೊಳ್ಳುತ್ತಿದ್ದಂತೆ ಕೆವಿನ್ ಗೆಲುವಿನ ನಿಟ್ಟುಸಿರುಬಿಟ್ಟರು. ಅಲ್ಲೀವರೆಗೆ ದಂಗುಬಡಿದು ಸೀಟಿನ ಅಂಚಿನಲ್ಲಿ ಕುಳಿತಿದ್ದ ಪ್ರೇಕ್ಷಕ ಸಮುದಾಯ, ಇಬ್ಬರು ಮಹಾನ್ ಆಟಗಾರರು ಸೆಂಟರ್ ಕೋರ್ಟ್‌ನಲ್ಲಿ ಸೃಷ್ಟಿಸಿದ ಮಹಾಕಾವ್ಯದ ಸೊಬಗು ಸವಿದು ಸಂಪ್ರೀತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More