ಅರ್ಜುನ್ ತೆಂಡೂಲ್ಕರ್‌ ಮೊದಲ ವಿಕೆಟ್‌ಗೆ ಕಾಂಬ್ಳಿಯ ಕಣ್ಣೀರಿನ ಹಾರೈಕೆ!

ಶತಕಗಳ ಶತಕದಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮೊಟ್ಟಮೊದಲ ಅಂತಾರಾಷ್ಟ್ರೀಯ ವಿಕೆಟ್ ಗಳಿಸಿದ್ದಾರೆ. ೧೯ ವರ್ಷದೊಳಗಿನವರ ಶ್ರೀಲಂಕಾ ತಂಡದ ವಿರುದ್ಧ ಅರ್ಜುನ್ ಈ ಸಾಧನೆ ಮಾಡಿದ್ದು, ಮಾಜಿ ಕ್ರಿಕೆಟಿಗ ಕಾಂಬ್ಳಿ ಕಣ್ಣೀರಿನ ಕೊಡುಗೆ ನೀಡಿದ್ದಾರೆ!

ಮೊದಲ ಅಂತಾರಾಷ್ಟ್ರೀಯ ವಿಕೆಟ್ ಆಯಿತು, ಇನ್ನೇನಿದ್ದರೂ ಮೊದಲ ಶತಕವಷ್ಟೆ! ಅರ್ಜುನ್ ತೆಂಡೂಲ್ಕರ್‌ನತ್ತ ಸಹಜ ಪ್ರಶ್ನೆ ಎದ್ದಿದೆ ಈಗ. ಹತ್ತೊಂಬತ್ತು ವರ್ಷದೊಳಗಿನ ಭಾರತ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಮಾಡಿದಾಗ ಕೆಲವರು ಅರ್ಜುನ್ ಸೇರ್ಪಡೆಯ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಪ್ರಭಾವ ಇದೆ ಎಂಬ ಕುಹಕವಾಡಿದ್ದರು. ಹಾಗೊಂದು ವೇಳೆ ಸಚಿನ್ ಪ್ರಭಾವ ಇದ್ದರೂ, ಅರ್ಜುನ್ ಮಾತ್ರ ತನ್ನ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ಕೊಲಂಬೋದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಹತ್ತೊಂಬತ್ತು ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಅರ್ಜುನ್ ಮೊದಲ ವಿಕೆಟ್ ಗಳಿಸಿದ್ದಾರೆ. ದಿನದಾಟದ ಭೋಜನ ವಿರಾಮದ ಹೊತ್ತಿಗೆ ಐದು ಓವರ್‌ಗಳನ್ನು ಪೂರೈಸಿದ ಅರ್ಜುನ್ ತೆಂಡೂಲ್ಕರ್, ಕೇವಲ ೧೮ ರನ್ ನೀಡಿದ್ದಲ್ಲದೆ, ಶ್ರೀಲಂಕಾದ ಕಮಿಲ್ ಮಿಶ್ರಾ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ಮಿಶ್ರಾ ಅವರ ವಿಕೆಟ್ ಅನ್ನು ಅರ್ಜುನ್ ಎಗರಿಸುತ್ತಿದ್ದಂತೆ ಭಾರತ ತಂಡದ ಮಾಜಿ ಆಟಗಾರ ಹಾಗೂ ಸಚಿನ್ ಬಾಲ್ಯಕಾಲದ ಸ್ನೇಹಿತ ವಿನೋದ್ ಕಾಂಬ್ಳಿ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆನಂದಬಾಷ್ಪದ ಶುಭ ಹಾರೈಕೆ ಕೋರಿದರು. “ನಾನಿದನ್ನು ನೋಡುತ್ತಿದ್ದಂತೆ ಕಣ್ಣುಗಳು ಆನಂದದಿಂದ ಕಣ್ಣೀರುಗರೆಯಿತು. ಇದು ಆರಂಭವಷ್ಟೆ. ಮುಂಬರುವ ದಿನಗಳಲ್ಲಿ ನೂರಾರು ಯಶಸ್ಸುಗಳಿಗೆ ಸೋಪಾನವಾಗಲಿ,’’ ಎಂದು ಅಭಿನಂದಿಸಿದ್ದಾರೆ.

1st Wicket in IND U19 💖 #ArjunTendulkar #INDvSL #INDvsSL #INDU19vSLU19 #IndU19

A post shared by Arjun Tendulkar (@arjuntendulkar.official) on

ಯುವ ಶ್ರೀಲಂಕಾ ತಂಡದ ವಿರುದ್ಧದ ಪಂದ್ಯಾವಳಿಗೆ ಜುಲೈ ತಿಂಗಳಿನಲ್ಲಿ ಆಯ್ಕೆಯಾಗಿದ್ದ ಅರ್ಜುನ್, ಡಬ್ಲ್ಯೂ ವಿ ರಾಮನ್ ಮತ್ತು ಸನತ್ ಕುಮಾರ್ ಕಣ್ಗಾವಲಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದರು. ಜುಲೈ ೧೦ರಂದು ಕೊಲಂಬೋಗೆ ಆಗಮಿಸಿದ್ದ ಯುವ ಭಾರತ ತಂಡ, ೧೨ರಿಂದ ೧೩ರವರೆಗಿನ ಎರಡು ದಿನಗಳ ಕಾಲ ಇದೇ ಮೈದಾನದಲ್ಲಿ ಅಭ್ಯಾಸ ನಡೆಸಿತ್ತು.

ಎರಡನೇ ಯುವ ಟೆಸ್ಟ್ ಪಂದ್ಯ ಇದೇ ೨೩ರಿಂದ ೨೬ರವರೆಗೆ ನಡೆಯಲಿದೆ. ಇನ್ನು, ಮೊದಲ ಏಕದಿನ ಪಂದ್ಯವು ಜುಲೈ ೨೯ರಂದು ಪಿ ಸಾರಾ ಓವಲ್ ಮೈದಾನದಲ್ಲಿ ನಡೆಯಲಿದ್ದು, ನಂತರದ ಎರಡು ಪಂದ್ಯಗಳು ಸಿನ್ಹಾಲಿಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಗಸ್ಟ್ ೧ ಮತ್ತು ೪ರಂದು ಜರುಗಲಿದೆ. ಹಾಗೆಯೇ, ಕೊನೆಯ ಎರಡು ಪಂದ್ಯಗಳು ಮೊರ್ತುವಾದ ಡಿ ಸೊಯ್ಸಾ ಕ್ರೀಡಾಂಗಣದಲ್ಲಿ ಆಗಸ್ಟ್ ೬ ಮತ್ತು ೯ರಂದು ಜರುಗಲಿದೆ.

ಅಂದಹಾಗೆ, ಮಂಗಳವಾರ (ಜು.೧೭) ಆರಂಭವಾದ ಪಂದ್ಯದಲ್ಲಿ ಅರ್ಜುನ್ ೧೧ ಓವರ್‌ಗಳಲ್ಲಿ ೨ ಮೇಡನ್ ಸೇರಿ ೩೩ ರನ್‌ಗಳಿಗೆ ೧ ವಿಕೆಟ್ ಗಳಿಸಿದರೆ, ಹರ್ಷ ತ್ಯಾಗಿ (೯೨ಕ್ಕೆ ೪) ಮತ್ತು ಆಯುಷ್ ಬಡೋನಿ (೨೪ಕ್ಕೆ ೪) ತಲಾ ನಾಲ್ಕು ವಿಕೆಟ್ ಗಳಿಸಿದರು. ೭೦.೩ ಓವರ್‌ಗಳಲ್ಲಿ ೨೪೪ ರನ್‌ಗಳಿಗೆ ಶ್ರೀಲಂಕಾ ಪತನ ಕಂಡಿದೆ. ಇದಕ್ಕೆ ಪ್ರತಿಯಾಗಿ ಭಾರತ ತಂಡ, ೧೬.೪ ಓವರ್‌ಗಳಲ್ಲಿ ೧ ವಿಕೆಟ್‌ಗೆ ೯೨ ರನ್ ಗಳಿಸಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More