ವೈಭವದ ವೃತ್ತಿಬದುಕಿಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ಫುಟ್ಬಾಲಿಗ ಕಾಹಿಲ್

ಆಸ್ಟ್ರೇಲಿಯಾ ಫುಟ್ಬಾಲ್‌ ಲೋಕದ ಸಾರ್ವಕಾಲಿಕ ಗರಿಷ್ಠ ಗೋಲಿನ ಸರದಾರ ಟಿಮ್ ಕಾಹಿಲ್ ಮಂಗಳವಾರ (ಜು.೧೭) ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ೩೮ರ ಹರೆಯದ ಕಾಹಿಲ್, ನಾಲ್ಕು ವಿಶ್ವಕಪ್‌ನಲ್ಲಿ ಆಡಿದ್ದಲ್ಲದೆ, ೧೦೭ ಪಂದ್ಯಗಳಲ್ಲಿ ೫೦ ಗೋಲುಗಳನ್ನು ದಾಖಲಿಸಿದ್ದಾರೆ

ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಪ್ರಮುಖ ಆಟಗಾರ ಟಿಮ್ ಕಾಹಿಲ್ ವೃತ್ತಿಬದುಕಿಗೆ ತೆರೆಬಿದ್ದಿದೆ. ‘ಸಾಕರೂಸ್‌’ ಎಂದೇ ಕರೆಯಲಾಗುವ ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಪರ ಅತ್ಯಮೋಘ ಪ್ರದರ್ಶನ ನೀಡಿದ್ದ ಟಿಮ್, ಎರಡು ದಿನಗಳ ಹಿಂದಷ್ಟೇ ಮುಕ್ತಾಯ ಕಂಡ ಫಿಫಾ ವಿ‍ಶ್ವಕಪ್ ಪಂದ್ಯಾವಳಿಯಲ್ಲಿಯೂ ಭಾಗವಹಿಸಿದ್ದರು. ಪೆರು ವಿರುದ್ಧದ ಪಂದ್ಯ ಅವರು ಆಡಿದ ಕಡೆಯ ಅಂತಾರಾಷ್ಟ್ರೀಯ ಪಂದ್ಯವೆನಿಸಿದೆ.

“ಸಾಕರೂಸ್ ಜೊತೆಗಿನ ನನ್ನ ವೃತ್ತಿಬದುಕಿಗೆ ನಾನಿಂದು ವಿದಾಯ ಹೇಳುತ್ತಿದ್ದೇನೆ. ನನ್ನ ಬೂಟುಗಳನ್ನು ಅಧಿಕೃತವಾಗಿ ತೂಗು ಹಾಕುತ್ತಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದನ್ನು ಬರೇ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ಆಸ್ಟ್ರೇಲಿಯಾ ಬ್ಯಾಡ್ಜ್ ತೊಡಲು ನನಗೆ ನೆರವಾದ ಪ್ರತಿಯೊಬ್ಬರನ್ನೂ ಈ ದಿನ ಸ್ಮರಿಸಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ,’’ ಎಂದು ಟಿಮ್ ತಿಳಿಸಿದ್ದಾರೆ.

ಮಾಜಿ ಎವರ್ಟನ್ ಸ್ಟ್ರೈಕರ್ ಟಿಮ್, ಆಸ್ಟ್ರೇಲಿಯಾ ದೇಶವು ಜಗತ್ತಿಗೆ ನೀಡಿದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ. ಅಂದಹಾಗೆ, ನಿವೃತ್ತಿಯ ಬಳಿಕ ಕ್ಲಬ್ ಫುಟ್ಬಾಲ್‌ನಲ್ಲಿ ಕಾಣಿಸಿಕೊಳ್ಳುವ ಕುರಿತೇನೂ ಟಿಮ್ ಖಚಿತಪಡಿಸಿಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಿಟಿಗೆ ವಿದಾಯ ಹೇಳಿದ ಬಳಿಕ ಇದೇ ಜನವರಿ ತಿಂಗಳಿನಲ್ಲಿ ಇಂಗ್ಲಿಷ್ ಚಾಂಪಿಯನ್‌ಶಿಪ್‌ನ ಮಿಲ್ವಾಲ್ ಕ್ಲಬ್‌ಗೆ ಅಲ್ಪಾವಧಿಗಷ್ಟೇ ಟಿಮ್ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : ಫಿಫಾ ವಿಶ್ವಕಪ್ ನೋವಿನಲ್ಲೂ ಫುಟ್ಬಾಲ್ ಪ್ರೇಮಿಗಳ ಹೃದಯ ಗೆದ್ದ ಜಪಾನ್

ಸಿಡ್ನಿ ಮೂಲ

ಸಿಡ್ನಿ ಮೂಲದ ಟಿಮ್ ತಾಯಿ ಸಮೋವಾದವರು. ಆರಂಭದ ಫುಟ್ಬಾಲ್ ಜೀವಿತ ಕೂಡ ಸಮೋವಾದಿಂದಲೇ ಶುರುವಾಗಿತ್ತು. ೨೦ ವರ್ಷದೊಳಗಿನವರ ಪಶ್ಚಿಮ ಸಮೋವಾ ತಂಡದ ಪರ ಟಿಮ್ ಆಡಿದ್ದರು. ಆಸ್ಟ್ರೇಲಿಯಾ ಫುಟ್ಬಾಲ್ ತಂಡಕ್ಕೆ ಕಾಲಿರಿಸಿದ್ದು ೨೦೦೪ರಲ್ಲಿ. ಇದಾದ ಎರಡು ವರ್ಷಗಳ ನಂತರ ಜರ್ಮನಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಗೋಲು ದಾಖಲಿಸುವ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಫುಟ್ಬಾಲ್ ಪಟುವೆನಿಸಿದರು. ಅಂತೆಯೇ, ೨೦೧೦ ಮತ್ತು ೨೦೧೪ರ ಆವೃತ್ತಿಯಲ್ಲಿಯೂ ಟಿಮ್ ಕಾಹಿಲ್ ಗೋಲು ಹೊಡೆದಿದ್ದರು.

ಇನ್ನು, ೨೦೦೭ರಲ್ಲಿ ನಡೆದ ಏಷ್ಯಾ ಕಪ್‌ನಲ್ಲಿಯೂ ಆಸ್ಟ್ರೇಲಿಯಾ ಪರ ಗೋಲು ಹೊಡೆದ ಮೊದಲ ಸಾಧಕ ಎನಿಸಿದರು. ಇದಲ್ಲದೆ, ೨೦೧೫ರಲ್ಲಿ ಆಸ್ಟ್ರೇಲಿಯಾಗೆ ಏಷ್ಯಾ ಕಪ್ ಗೆದ್ದುಕೊಡುವಲ್ಲಿಯೂ ಟಿಮ್ ಪ್ರಧಾನ ಪಾತ್ರ ವಹಿಸಿದ್ದರು. ಮೆಲ್ಬೋರ್ನ್ ಸಿಟಿ ಜೊತೆಗಿನ ಒಡನಾಟಕ್ಕೂ ಮುಂಚೆ ಇಂಗ್ಲೆಂಡ್‌ನ ಮಿಲ್ವಾಲ್ ಹಾಗೂ ಎವರ್ಟನ್ ಪರ ಸರಿಸುಮಾರು ೧೪ ವರ್ಷ ಕಳೆದರು. ನ್ಯೂಯಾರ್ಕ್ ರೆಡ್ ಬ್ಲೂಸ್ ಜೊತೆಗಿನ ಒಪ್ಪಂದಕ್ಕೂ ಮುನ್ನ ಅವರು ೧೦೦ ಗೋಲುಗಳನ್ನು ದಾಖಲಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More