ಫೈನಲ್ ಪಂದ್ಯದಲ್ಲಿ ವಿರಾಟ್ ಪಡೆಯನ್ನು ಕಟ್ಟಿಹಾಕಿದ ಇಂಗ್ಲೆಂಡ್ ಬೌಲರ್‌ಗಳು

ಕಡೆಯ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಕಲೆಹಾಕಿದ ೧೭ ರನ್‌ಗಳಲ್ಲಿ ಸೇರಿದ್ದ ಎರಡು ಸಿಕ್ಸರ್‌ಗಳಷ್ಟೇ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಬೌಂಡರಿ ಗೆರೆ ದಾಟಿಸಿದ್ದು. ನಿರ್ಣಾಯಕವಾದ ಲೀಡ್ಸ್ ಪಂದ್ಯದಲ್ಲಿ ಆಂಗ್ಲರು ವಿರಾಟ್ ಪಡೆಯನ್ನು ೨೫೬ ರನ್‌ಗಳಿಗೆ ಕಟ್ಟಿಹಾಕಿದರು

ಸ್ಪಿನ್‌ ಸುಳಿಯಲ್ಲಿ ಸಿಲುಕುವ ಭೀತಿ ಇದ್ದರೂ, ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೊನೆಯ ಪಂದ್ಯದಲ್ಲಿಯೂ ಸ್ಪಿನ್ ಸ್ನೇಹಿ ತಾಣವನ್ನೇ ಆಂಗ್ಲರು ಸಜ್ಜುಗೊಳಿಸಿರುವುದರ ಹಿಂದೆ ಬೇರೆ ಏನೋ ಉದ್ದೇಶ ಇದ್ದಂತಿದೆ. ಇಂಗ್ಲೆಂಡ್‌ನ ಪಿಚ್‌ಗಳು ಸಹಜವಾಗಿಯೇ ವೇಗಿಗಳ ಸ್ವರ್ಗ ಎನಿಸಿದರೂ, ಭಾರತ ವಿರುದ್ಧದ ಸರಣಿಯಲ್ಲಿ ಸ್ಪಿನ್ ಸ್ನೇಹಿ ಪಿಚ್‌ ಸಜ್ಜುಗೊಳಿಸಿರುವುದರ ಹಿಂದೆ ನಿಸ್ಸಂಶಯವಾಗಿಯೂ ಇಂಗ್ಲೆಂಡ್ ಕೂಡ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಅನ್ನು ಗಂಭೀರವಾಗಿ ಪರಿಗಣಿಸಿದಂತಿದೆ.

ಅಂದಹಾಗೆ, ಹೆಡಿಂಗ್ಲೆಯ ಲೀಡ್ಸ್ ಮೈದಾನದಲ್ಲಿ ಮಂಗಳವಾರ (ಜು.೧೭) ನಡೆದ ಮೂರನೇ ಹಾಗೂ ಸರಣಿ ನಿರ್ಧರಿಸಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ, ಆತಿಥೇಯ ತಂಡದ ಬೌಲರ್‌ಗಳ ಸಂಘಟಿತ ದಾಳಿಯಿಂದ ವಿಶೇಷವಾಗಿ ಲೆಗ್‌ಸ್ಪಿನ್ನರ್ ಆದಿಲ್ ರಶೀದ್ (೪೯ಕ್ಕೆ ೩) ಮತ್ತು ಡೇವಿಡ್ ವಿಲ್ಲಿಯ (೪೦ಕ್ಕೆ ೩) ಚಮತ್ಕಾರಿ ಬೌಲಿಂಗ್‌ಗೆ ತಡಬಡಾಯಿಸಿ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ೨೫೬ ರನ್‌ಗಳನ್ನಷ್ಟೆ.

ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿದ್ದು ನಾಯಕ ವಿರಾಟ್ ಕೊಹ್ಲಿ (೭೧: ೭೨ ಎಸೆತ, ೮ ಬೌಂಡರಿ) ಮಾತ್ರವೇ. ಶಿಖರ್ ಧವನ್ (೪೪: ೪೯ ಎಸೆತ, ೭ ಬೌಂಡರಿ) ಹಾಗೂ ಎಂ ಎಸ್ ಧೋನಿ (೪೨: ೬೬ ಎಸೆತ, ೪ ಬೌಂಡರಿ) ಕೊಂಚ ಪ್ರತಿರೋಧ ತೋರಿದರಾದರೂ, ಅರ್ಧಶತಕ ದಾಖಲಿಸಲೂ ಇವರಿಬ್ಬರಿಂದ ಸಾಧ್ಯವಾಗಲಿಲ್ಲ. ವಿರಾಟ್ ಮತ್ತು ದಿನೇಶ್ ಕಾರ್ತಿಕ್ (೨೧: ೨೨ ಎಸೆತ, ೩ ಬೌಂಡರಿ) ಇಬ್ಬರನ್ನೂ ಬೌಲ್ಡ್ ಮಾಡಿದ ಆದಿಲ್ ರಶೀದ್, ಭಾರತದ ಇನ್ನಿಂಗ್‌ಗೆ ಬರೆ ಎಳೆದರೆ, ಧೋನಿ ವಿಕೆಟ್ ಅನ್ನು ವಿಲ್ಲಿ ಎಗರಿಸಿದರು.

ಇದನ್ನೂ ಓದಿ : ಲೀಡ್ಸ್‌ನಲ್ಲಿ ಸರಣಿ ಕೈವಶಕ್ಕೆ ಅಣಿಯಾದ ಆತಿಥೇಯರಿಗೆ ವಿರಾಟ್ ಸವಾಲು

ಆಂಗ್ಲರ ಆರಂಭಿಕ ದಾಳಿ

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ವಿರಾಟ್ ಪಡೆಯನ್ನು ಬ್ಯಾಟಿಂಗ್‌ಗೆ ಇಳಿಸಿದರು. ಅವರ ಪ್ರಬುದ್ಧ ನಿರ್ಣಯಕ್ಕೆ ೬ನೇ ಓವರ್‌ನಲ್ಲೇ ಫಲ ಸಿಕ್ಕಿತು. ವೇಗಿ ಡೇವಿಡ್ ವಿಲ್ಲಿಯ ದಾಳಿಯಲ್ಲಿ ಮಾರ್ಕ್ ವುಡ್‌ಗೆ ಕ್ಯಾಚಿತ್ತ ಆರಂಭಿಕ ರೋಹಿತ್ ಶರ್ಮಾ ಕ್ರೀಸ್ ತೊರೆದರು. ೧೮ ಎಸೆತಗಳನ್ನು ಎದುರಿಸಿದ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಗಳಿಸಿದ್ದು ಕೇವಲ ೨ ರನ್‌!

ಬಳಿಕ ಬಂದ ಕೊಹ್ಲಿಯನ್ನು ಕೂಡಿಕೊಂಡ ಧವನ್, ಇಂಗ್ಲೆಂಡ್ ಬೌಲರ್‌ಗಳ ದಾಳಿಯನ್ನು ಎದುರಿಸಿ ಸ್ವಸ್ಥ ಇನ್ನಿಂಗ್ಸ್ ಕಟ್ಟಲು ಸಜ್ಜಾದರು. ಕೇವಲ ೧೩ ರನ್‌ಗಳಿಗೆ ರೋಹಿತ್ ಶರ್ಮಾರ ಪ್ರಮುಖ ವಿಕೆಟ್ ಕಳೆದುಕೊಂಡು ಊನಗೊಂಡಿದ್ದ ತಂಡದ ಇನ್ನಿಂಗ್ಸ್‌ಗೆ ಈ ಜೋಡಿ ಕೊಂಚ ಚೇತರಿಕೆ ತುಂಬಿತು. ಆದಾಗ್ಯೂ, ಈ ಜೋಡಿಯನ್ನು ೧೮ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಬೇರ್ಪಡಿಸಿ ಮತ್ತೆ ಭಾರತದ ಹಿನ್ನಡೆಗೆ ಕಾರಣರಾದರು. ಅರ್ಧಶತಕದತ್ತ ದಾಪುಗಾಲಿಡುತ್ತಿದ್ದ ಧವನ್ ರನೌಟ್ ಆಗಿ ಕ್ರೀಸ್ ತೊರೆದರು.

ಇನ್ನು, ಕಳೆದ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ಕೈಬಿಟ್ಟಿದ್ದ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್, ಅವರ ಬದಲು ತಮಿಳುನಾಡು ಕ್ರಿಕೆಟಿಗ ದಿನೇಶ್ ಕಾರ್ತಿಕ್‌ಗೆ ಅವಕಾಶ ಕಲ್ಪಿಸಿತ್ತು. ದಿನೇಶ್ ಕಾರ್ತಿಕ್ ಕೂಡ ಆಕ್ರಮಣಕಾರಿ ಆಟದೊಂದಿಗೆ ಆಂಗ್ಲರ ಮೇಲೆ ಎರಗಿದರು. ಆದರೆ, ಅವರ ಈ ಆಕ್ರಮಣಕಾರಿತನ ಹೆಚ್ಚು ಹೊತ್ತು ಸಾಗದೆ, ಆದಿಲ್ ರಶೀದ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.

ಕೊಹ್ಲಿ ಮೂರು ಸಾವಿರ ರನ್ ದಾಖಲೆ

ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆಡಲಿಳಿದ ಧೋನಿ ಜೊತೆಗೆ ಕೊಹ್ಲಿ ಹೋರಾಟ ಮುಂದುವರಿಸಿದರು. ಈ ಜೋಡಿ ಸ್ಥಿರ ಪ್ರದರ್ಶನದ ಗಟ್ಟಿ ಛಾಪು ಮೂಡಿಸುತ್ತಿದ್ದಂತೆ ಮತ್ತೆ ಆದಿಲ್ ರಶೀದ್ ಭಾರತಕ್ಕೆ ಹಿನ್ನಡೆ ತಂದರು. ಆಕರ್ಷಕ ಬ್ಯಾಟಿಂಗ್‌ನಿಂದ ಭಾರತದ ಇನ್ನಿಂಗ್ಸ್‌ ಅನ್ನು ಮುನ್ನಡೆಸುತ್ತಿದ್ದ ಕೊಹ್ಲಿ ವಿಕೆಟ್ ಎಗರಿಸಿದ ಅವರು, ಈ ಬಾರಿ ಭಾರತಕ್ಕೆ ಬಲವಾದ ಪ್ರಹಾರ ನೀಡಿದರು.

ಕೊಹ್ಲಿ ವಿಕೆಟ್ ಬೀಳುತ್ತಲೇ ಭಾರತದ ಇನ್ನಿಂಗ್ಸ್‌ಗೆ ನಿಜವಾಗಿಯೂ ಭಾರಿ ಹೊಡೆತ ನೀಡಿತು. ಏಕೆಂದರೆ, ಆನಂತರದಲ್ಲಿ ಆಡಲಿಳಿದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ (೧) ಇದೇ ೩೧ನೇ ಓವರ್‌ನ ಕೊನೇ ಎಸೆತದಲ್ಲಿ ರಶೀದ್‌ಗೆ ಬಲಿಯಾದರು. ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್ ಎಗರಿಸಿದ ರಶೀದ್, ಕೊನೇ ಎಸೆತದಲ್ಲಿ ಮತ್ತೊಂದು ಮಹತ್ವಪೂರ್ಣ ವಿಕೆಟ್ ಕಿತ್ತು ಆಂಗ್ಲರು ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾದರು. ಅಂದಹಾಗೆ, ಕೊಹ್ಲಿ ಅರ್ಧಶತಕ ಪೂರೈಸುವುದರೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ೩ ಸಹಸ್ರ ರನ್ ದಾಖಲೆ ಬರೆದರು.

ಕೆಳ ಕ್ರಮಾಂಕದ ಹೋರಾಟ

ಭಾರತ ತಂಡದ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಾಗ, ಕೆಳ ಕ್ರಮಾಂಕಿತ ಆಟಗಾರರ ಹೋರಾಟ ತಂಡದ ಇನ್ನಿಂಗ್ಸ್‌ಗೆ ಕೊಂಚಮಟ್ಟಿಗಾದರೂ ಶಕ್ತಿ ತುಂಬಿತು. ಹಾರ್ದಿಕ್ ಪಾಂಡ್ಯ (೨೧: ೨೧ ಎಸೆತ, ೨ ಬೌಂಡರಿ), ಭುವನೇಶ್ವರ್ ಕುಮಾರ್ (೨೧: ೩೫ ಎಸೆತ, ೧ ಬೌಂಡರಿ) ಹಾಗೂ ಕೊನೆಯಲ್ಲಿ ೧೩ ಎಸೆತಗಳಲ್ಲಿ ೨ ಸಿಕ್ಸರ್ ಸೇರಿದ ಅಜೇಯ ೨೨ ರನ್ ಗಳಿಸಿದ ಶಾರ್ದೂಲ್ ಠಾಕೂರ್ ಶ್ರಮ ಭಾರತದ ಇನ್ನಿಂಗ್ಸ್ ಅನ್ನು ೨೫೦ರ ಗಡಿ ದಾಟಿಸುವಲ್ಲಿ ಸಹಾಯವಾಯಿತು.

ಸಂಕ್ಷಿಪ್ತ ಸ್ಕೋರ್

ಭಾರತ: ೫೦ ಓವರ್‌ಗಳಲ್ಲಿ ೨೫೬/೮ (ಕೊಹ್ಲಿ ೭೧, ಧವನ್ ೪೪, ಧೋನಿ ೪೨; ಡೇವಿಡ್ ವಿಲ್ಲಿ ೪೦ಕ್ಕೆ ೩, ಆದಿಲ್ ರಶೀದ್ ೪೯ಕ್ಕೆ ೩)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More