ವಿಶ್ವಕಪ್ ಬ್ಯಾಡ್ಮಿಂಟನ್‌ಗೆ ಅಣಿಯಾದ ಸಿಂಧುಗೆ ಕಾದಿದೆ ಒಕುಹಾರ ಸವಾಲು

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಫಿಫಾ ವಿಶ್ವಕಪ್ ಬೆನ್ನಿಗೇ ಇದೀಗ ಮತ್ತೊಂದು ವಿಶ್ವಕಪ್‌ಗೆ ಜಗತ್ತು ಅಣಿಯಾಗಿದೆ. ಇದೇ ೩೦ರಿಂದ ಆಗಸ್ಟ್ ೫ರವರೆಗೆ ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ನ ಒಕುಹಾರ ಸವಾಲು ಒಲಿಂಪಿಕ್ಸ್ ರನ್ನರ್‌ ಸಿಂಧುಗೆ ಎದುರಾಗಿದೆ

ಭಾರತದ ಇಬ್ಬರು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಈ ಬಾರಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಠಿಣ ಸವಾಲು ಎದುರಿಸಬೇಕಿದೆ. ೨೪ನೇ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯ ಆರಂಭಿಕ ಸುತ್ತಿನ ಮೊದಲ ಪಂದ್ಯದಲ್ಲಿ ಬೈ ಪಡೆಯುವ ಸಂಭವವಿದೆಯಾದರೂ, ಟೂರ್ನಿ ಸಾಗುತ್ತಿದ್ದಂತೆ ಕಠಿಣ ಸವಾಲಿಗೆ ಗುರಿಯಾಗುವ ಸಾಧ್ಯತೆ ಇದೆ.

ಮೊದಲ ಸುತ್ತಿನಲ್ಲಿ ಬೈ ಪಡೆದ ಬಳಿಕ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ವಿಶ್ವದ ೩೭ನೇ ಶ್ರೇಯಾಂಕಿತೆ ಫಿಟ್ರಿಯಾನಿ ಫಿಟ್ರಿಯಾನಿ, ಬಳಿಕ ವಿಶ್ವದ ೪೪ನೇ ಶ್ರೇಯಾಂಕಿತೆ ಲಿಂಡಾ ಜೆಟ್‌ಚಿರಿ ವಿರುದ್ಧ ಸೆಣಸಲಿದ್ದಾರೆ. ಇದಾದ ಬಳಿಕ ಎದುರಾಗುವ ಪಂದ್ಯ ಸಿಂಧುಗೆ ಭಾರೀ ಸವಾಲಾಗಿ ಪರಿಣಮಿಸಲಿದೆ. ಮೂರನೇ ಸುತ್ತಿನ ಈ ಪಂದ್ಯದಲ್ಲಿ ವಿಶ್ವದ ೯ನೇ ಶ್ರೇಯಾಂಕಿತೆ ಸುಂಗ್ ಜಿ ಹ್ಯುನ್ ವಿರುದ್ಧ ಸಿಂಧು ಕಾದಾಡಬೇಕಿದೆ.

ಒಂದೊಮ್ಮೆ ಸುಂಗ್ ಜಿ ವಿರುದ್ಧ ಸಿಂಧು ಗೆಲುವು ಸಾಧಿಸುವಲ್ಲಿ ಸಫಲವಾದರೆ, ಮುಂದಿನ ಹಂತದಲ್ಲಿ ಅಂದರೆ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಆಕೆಗೆ ಎದುರಾಗುವುದು ಹಾಲಿ ಚಾಂಪಿಯನ್ ನೊಜೊಮಿ ಒಕುಹಾರ. ಕಳೆದ ಆವೃತ್ತಿಯಲ್ಲಿ ಇದೇ ಒಕುಹಾರ ವಿರುದ್ಧ ಸಿಂಧು ಸೋಲನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಹಾಗೆ, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಥಾಯ್ಲೆಂಡ್ ಓಪನ್‌ ಫೈನಲ್‌ನಲ್ಲಿ ಇದೇ ಸಿಂಧು, ಒಕುಹಾರ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತಿದ್ದರು.

ಇದನ್ನೂ ಓದಿ : ರೋಚಕ ಹಣಾಹಣಿಯಲ್ಲಿ ಸಿಂಧು ಮಣಿಸಿ ಕಾಮನ್ವೆಲ್ತ್ ಚಿನ್ನಕ್ಕೆ ಮುತ್ತಿಟ್ಟ ಸೈನಾ

ಸೈನಾಗೂ ಕಠಿಣ ಪರೀಕ್ಷೆ

ಇತ್ತ, ಭಾರತದ ಮತ್ತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಕೂಡಾ ಕಠಿಣ ಪರೀಕ್ಷೆಗೆ ಗುರಿಯಾಗಲಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದ ಬಳಿಕ ಸ್ವಿಡ್ಜರ್ಲೆಂಡ್‌ನ ಸಬ್ರಿನಾ ಜಾಕ್ವೆಟ್ ಮತ್ತು ಟರ್ಕಿಯ ಅಲಿಯೆ ಡೆಮಿರ್‌ಬ್ಯಾಗ್ ನಡುವಣದ ಪಂದ್ಯದಲ್ಲಿ ಗೆದ್ದವರೊಂದಿಗೆ ಸೈನಾ ಕಾದಾಡಲಿದ್ದಾರೆ.

ಎರಡನೇ ಸುತ್ತಿನಲ್ಲಿ ಸೈನಾ ಗೆಲುವು ಸಾಧಿಸಿದ ಬಳಿಕ ಪ್ರೀ ಕ್ವಾರ್ಟರ್‌ನಲ್ಲಿ ಬಹುತೇಕ ಥಾಯ್ಲೆಂಡ್ ಆಟಗಾರ್ತಿ ಇಂಟನಾನ್ ರಚನಾಕ್ ಎದುರು ಸೆಣಸುವ ಸಂಭವವಿದೆ. ಅಂತೆಯೇ, ಈ ಸುತ್ತಿನಲ್ಲಿಯೂ ಸೈನಾ ಗೆಲುವು ಸಾಧಿಸಿದರೆ, ಕ್ವಾರ್ಟರ್‌ಫೈನಲ್‌ನಲ್ಲಿ ಆಕೆಗೆ ಎದುರಾಗುವುದು ರಿಯೊ ಒಲಿಂಪಿಕ್ಸ್ ವಿಜೇತೆ ಕೆರೋಲಿನ್ ಮರಿನ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More