ಎಲ್ಲ ಬಗೆಯ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾದ ಲಂಕಾ ಆರಂಭಿಕ ಗುಣತಿಲಕ

ವಿದೇಶಿ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿ, ಶ್ರೀಲಂಕಾ ತಂಡದ ಆರಂಭಿಕ ಟೆಸ್ಟ್ ಆಟಗಾರ ದನುಷ್ಕಾ ಗುಣತಿಲಕ ಎಲ್ಲ ಬಗೆಯ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟಿದ್ದಾರೆ. ಸದ್ಯ, ತನಿಖೆಗೂ ಆದೇಶ ನೀಡಲಾಗಿದ್ದು, ತನಿಖೆ ನಂತರ ಗುಣತಿಲಕ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್‌ ಅನಿರೀಕ್ಷಿತ ಮತ್ತು ಆಘಾತಕಾರಿ ಘಟನೆಗೆ ಸಿಲುಕಿದೆ. ಸ್ನೇಹಿತನೊಬ್ಬ ಎಸಗಿದ ದುಷ್ಕೃತ್ಯದಿಂದಾಗಿ, ಲಂಕಾದ ಆರಂಭಿಕ ಆಟಗಾರ ದನುಷ್ಕಾ ಗುಣತಿಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದಾರೆ.

೨೭ರ ಹರೆಯದ ದನುಷ್ಕಾ, ತನ್ನ ಗೆಳೆಯನ ಜೊತೆ ಭಾನುವಾರ ತಡರಾತ್ರಿ ಕೊಲಂಬೋದ ಹೋಟೆಲ್‌ಗೆ ಭೇಟಿ ಕೊಟ್ಟಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ತಂಡ ಕೊಲಂಬೋ ಹೋಟೆಲ್‌ನಲ್ಲಿಯೇ ಉಳಿದುಕೊಂಡಿತ್ತು. ಈ ವೇಳೆ ನಾರ್ವೆಯ ಮಹಿಳೆಯೊಬ್ಬರು ಅವರ ಜೊತೆಗಿದ್ದರು ಎನ್ನಲಾಗಿದ್ದು, ಗುಣತಿಲಕ ಅವರ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರವೆಸಗಿದ ಎಂಬ ಆರೋಪವಿದೆ.

ಶ್ರೀಲಂಕಾ ಮೂಲದ ಆದರೆ, ಬ್ರಿಟಿಷ್ ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿಯಿಂದ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ನಾರ್ವೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಏತನ್ಮಧ್ಯೆ, ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ. ಆದರೆ, ಆತನ ಜೊತೆಗೆ ಗುಣತಿಲಕ ಇದ್ದುದೇ ಅವರನ್ನು ಅಮಾನತುಗೊಳಿಸಲು ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್‌ನಲ್ಲಿ ಎದುರಾಯಿತೇ ಸಮರ್ಥ ನಾಯಕರ ಕೊರತೆ?

“ನಾರ್ವೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ೨೬ರ ಹರೆಯದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ,’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ‘’ಸದ್ಯಕ್ಕಂತೂ ಗುಣತಿಲಕ ಅವರ ಮೇಲೆ ಯಾವುದೇ ಗಂಭೀರ ಆರೋಪವಿಲ್ಲ,’’ ಎಂತಲೂ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ.

ಆದರೆ, ನಿಯಮಾವಳಿಯ ಪ್ರಕಾರ ಯಾವುದೇ ಕ್ರಿಕೆಟ್ ಸರಣಿ ನಡೆಯುವಾಗ ಆಟಗಾರರು, ತಂಡಕ್ಕೆ ನಿಗದಿಗೊಳಿಸಲಾಗಿರುವ ಹೋಟೆಲ್‌ಗೆ ಮಧ್ಯರಾತ್ರಿಯೊಳಗೆ ವಾಪಸಾಗಬೇಕಿರುತ್ತದೆ. ಜೊತೆಗೆ, ಯಾವುದೇ ಅತಿಥಿ ಅಭ್ಯಾಗತರನ್ನು ತಾವಿಳಿದುಕೊಂಡ ಹೋಟೆಲ್‌ಗೆ ಕರೆದುತರುವಂತಿಲ್ಲ. ಅಂದಹಾಗೆ, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಗುಣತಿಲಕ, ದ.ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ, ಅವರ ಟೆಸ್ಟ್ ಸಂಭಾವನೆಯನ್ನೂ ತಡೆಹಿಡಿದಿರುವ ಶ್ರೀಲಂಕಾ ಕ್ರಿಕೆಟ್, ತನಿಖಾ ವರದಿ ಬಂದ ಬಳಿಕ ನಿಷೇಧದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More