ಜನಾಂಗೀಯ ಭೇದದ ಗೀಳಿನಲ್ಲಿ ಕ್ರೀಡಾಧರ್ಮ ಮರೆತ ಜರ್ಮನಿಗೆ ಓಜಿಲ್ ಗುಡ್‌ಬೈ!

ಜನಾಂಗೀಯ ಭೇದವೆನ್ನುವುದು ಜರ್ಮನ್ನರ ರಕ್ತದಲ್ಲೇ ಬೆರೆತಿದೆಯೇನೋ. ಹಿಟ್ಲರ್ ಎಂಬ ಕ್ರೂರಿಗೆ ಜನ್ಮ ನೀಡಿದ ಜರ್ಮನಿ ಅದಕ್ಕೆ ತಕ್ಕ ಬೆಲೆ ತೆತ್ತಿದ್ದು ಈಗ ಇತಿಹಾಸ. ತಾನು ಗೆಲ್ಲುವಾಗ ಇರದ ಜನಾಂಗೀಯ ಭೇದ ಸೋತ ಒಡನೆ ಉದ್ಭವಿಸುತ್ತದೆ ಎಂಬ ಓಜಿಲ್ ಮಾತು ಜರ್ಮನ್ನರನ್ನು ತಿವಿಯುತ್ತಿಲ್ಲವೇ?

"ನಿಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾದರೆ ನೀವು ತೊಟ್ಟ ಚಪ್ಪಲಿಯನ್ನೂ ಅಲ್ಲಿ ಬಿಡದಿರಿ,’’ ಎಂಬ ಅಂಬೇಡ್ಕರ್ ಮಾತನ್ನು ಜರ್ಮನ್ ಫುಟ್ಬಾಲ್ ಪಟು ಹಾಗೂ ಮ್ಯಾಂಚೆಸ್ಟರ್‌ನ ಮಿಡ್‌ಫೀಲ್ಡರ್ ಕೂಡಾ ಆಗಿರುವ ಮೆಸುಟ್ ಓಜಿಲ್ ನಿಜವಾಗಿಸಿ ಜರ್ಮನ್ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ.

ಒಂದು ತಂಡವನ್ನು ಸ್ನೇಹ-ಬೆಸುಗೆ ಹಾಗೂ ಪ್ರತಿಭೆಯ ಸಂಗಮದಲ್ಲಿ ಕಟ್ಟಬೇಕಾದ ಜರ್ಮನ್ ಫುಟ್ಬಾಲ್ ಒಕ್ಕೂಟ ಹಾಗೂ ಕೋಚ್ ಸ್ವತಃ, ಜನಾಂಗೀಯ ಭೇದದಂಥ ಕ್ರೂರ ಪದ್ಧತಿಯನ್ನು ಪೋಷಿಸುತ್ತಾರೆಂದರೆ ಅದೆಷ್ಟು ನೀಚತನಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಜರ್ಮನ್ ಫುಟ್ಬಾಲ್ ಜಗತ್ತಿನ ಸರ್ವಶ್ರೇಷ್ಠ ಫುಟ್ಬಾಲ್ ತಂಡಗಳಲ್ಲೊಂದು. ಆದರೆ, ಆ ತಂಡ ಜನಾಂಗೀಯ ಭೇದದ ಸುಳಿಯೊಳಗೆ ಸಿಕ್ಕಿ ಉಸಿರುಗಟ್ಟಿದೆ ಎಂಬುದನ್ನು ಓಜಿಲ್ ಬಹಿರಂಗಗೊಳಿಸಿದ್ದಾರೆ.

ರಷ್ಯಾದಲ್ಲಿ ನಡೆದ ಇಪ್ಪತ್ತೊಂದನೇ ಫಿಫಾ ವಿಶ್ವಕಪ್ ಪಂದ್ಯಾವಳಿ ಮುಗಿದು ತಿಂಗಳೂ ಕಳೆದಿಲ್ಲ. ಅಷ್ಟರಲ್ಲಾಗಲೇ ಮೆಸುಟ್ ಓಜಿಲ್, ಜರ್ಮನ್ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಜನಾಂಗೀಯ ನಿಂದನೆ ಎಂಬ ಕರಿನೆರಳಿನ ಸುಳಿಗಾಳಿ ಸದಾ ಸುತ್ತುತ್ತೆಂಬುದೇ ಪ್ರಮುಖ ಕಾರಣ ಎಂಬುದು ಸ್ವತಃ ಅವರಿಂದಲೇ ತಿಳಿದುಬಂದಿದೆ.

ದುಃಖಕರ ಸಂಗತಿ

“ಭಾರ ಹೃದಯದಿಂದ ಜರ್ಮನ್ ಫುಟ್ಬಾಲ್ ತಂಡವನ್ನು ತೊರೆಯುತ್ತಿದ್ದೇನೆ. ಸಾಕಷ್ಟು ಯೋಚಿಸಿ ಈ ಕಠಿಣ ನಿರ್ಧಾರ ತಳೆದಿದ್ದೇನೆ. ಇತ್ತೀಚಿನ ಘಟನೆಗಳು ನನ್ನನ್ನು ತೀವ್ರವಾಗಿ ಬಾಧಿಸಿವೆ. ಜನಾಂಗೀಯ ನಿಂದನೆಯಂಥ ಕ್ರೂರ ಮುಖವನ್ನು ಒಳಗೊಂಡಿರುವ ಜರ್ಮನಿಯಲ್ಲಿ, ಅಗೌರವದಿಂದ ಕಾಣುವವರ ಮಧ್ಯೆ ನಾನಿನ್ನೂ, ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಜರ್ಮನಿಯನ್ನು ಪ್ರತಿನಿಧಿಸುವುದು ಅರ್ಥಹೀನ,’’ ಎಂದು ಮೆಸುಟ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಓಜಿಲ್ ಮೂಲತಃ ಟರ್ಕಿ ಮೂಲದವರು. ಸಹಜವಾಗಿಯೇ ಅವರತ್ತ ಜರ್ಮನಿಯಲ್ಲಿ ಜನಾಂಗೀಯ ನಿಂದನೆ ತೂಗುಗತ್ತಿ ಸದಾ ನೇತಾಡುತ್ತಲೇ ಇತ್ತು. ರಷ್ಯಾದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಜರ್ಮನ್ ತಂಡದ ಪರವಾಗಿನ ನಿಷ್ಠೆಯ ಬಗ್ಗೆ ಪ್ರಶ್ನೆಗಳೆದ್ದಾಗ, ಟರ್ಕಿ ಅಧ್ಯಕ್ಷ ರೆಸೆಪ್ ಟಯಿಪ್ ಎರ್ಡೋಗನ್ ಅವರೊಂದಿಗಿನ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರೊಂದಿಗೆ ತನ್ನನ್ನು ಸಮರ್ಥಿಸಿಕೊಂಡಿದ್ದರು.

ದುರದೃಷ್ಟಕರ ನಡೆ

ತಾನೋರ್ವ ಟರ್ಕಿ ಮೂಲದವನಾದರೂ, ಜರ್ಮನಿ ಪರವಾಗಿನ ತನ್ನ ನಿಷ್ಠೆ ಏನೆಂಬುದನ್ನು ಬಹಿರಂಗವಾಗಿ ತೋರ್ಪಡಿಸಿದ ನಂತರವೂ, ಜರ್ಮನ್ ಫುಟ್ಬಾಲ್ ಫೆಡರೇಷನ್‌ (ಡಿಎಫ್‌ಬಿ) ತನ್ನ ನೆರವಿಗೆ ಬಾರದೆ ಹೋದದ್ದನ್ನು ಮೆಸುಟ್ ‘ದುರದೃಷ್ಟಕರ’ ಎಂದು ಬಣ್ಣಿಸಿದ್ದಾರೆ. “ಕಳೆದೆರಡು ತಿಂಗಳಿನಿಂದ ನನ್ನ ವಿರುದ್ಧದ ವರ್ತನೆಯನ್ನು ಡಿಎಫ್‌ಬಿಯ ತರತಮವನ್ನು ಸಹಿಸಿ ಸಹಿಸಿ ಹತಾಶೆಗೊಂಡಿದ್ದೆ. ಮುಖ್ಯವಾಗಿ, ಡಿಎಫ್‌ಬಿಯ ಅಧ್ಯಕ್ಷ ರಿಚರ್ಡ್ ಗ್ರಿಂಡಲ್ ಅವರ ವರ್ತನೆಯಂತೂ ನನ್ನನ್ನು ನೋಯಿಸಿತ್ತು,’’ ಎಂದು ಓಜಿಲ್ ಹೇಳಿಕೊಂಡಿದ್ದಾರೆ.

ಇನ್ನು, ರಷ್ಯಾ ಆವೃತ್ತಿಯಲ್ಲಿ ನಾಕೌಟ್ ಹಂತದಿಂದಲೇ ಜರ್ಮನಿ ಹೊರಬಿದ್ದುದಕ್ಕೆ ಓಜಿಲ್ ಪ್ರಮುಖ ಕಾರಣ ಎಂಬ ದೂರಿಗೂ ಓಜಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ‘’ವಿಶ್ವಕಪ್ ಗೆದ್ದಾಗ ನಾನೂ ಓರ್ವ ಜರ್ಮನ್. ಆದರೆ, ವಿಶ್ವಕಪ್ ಗೆಲ್ಲದಾದಾಗ ತಾನು ಟರ್ಕಿಯವ,’’ ಎಂತಲೂ ಓಜಿಲ್ ಜರ್ಮನ್ನರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಐದನೇ ವಿಶ್ವಕಪ್ ಗೆಲ್ಲುವ ತುಡಿತದೊಂದಿಗೆ ರಷ್ಯಾಗೆ ಬಂದಿಳಿದಿದ್ದ ಜರ್ಮನ್‌ ತಂಡ ನಾಕೌಟ್ ಹಂತವನ್ನೂ ಏರಲಾಗದೆ ಭ್ರಮನಿರಸನಕ್ಕೆ ಒಳಗಾಗಿತ್ತು. ನಾಕೌಟ್ ಹಂತವನ್ನೂ ತಲುಪಲಾಗದೆ ಟೂರ್ನಿಯಿಂದ ಹೊರಬಿದ್ದ ನಂತರದಲ್ಲಿ ಜರ್ಮನಿ ರಾಜಕಾರಣಿಗಳು, ಜರ್ಮನ್ ಫುಟ್ಬಾಲ್ ಫೆಡರೇಷನ್ ಹಾಗೂ ಪದಾಧಿಕಾರಿಗಳು ತಮ್ಮ ಈ ಸೋಲಿಗೆ ಓಜಿಲ್ ಮಾತ್ರವೇ ಕಾರಣ ಎಂದು ಅವರ ಮೇಲೆ ಎರಗಿದ್ದರು.

ಇದನ್ನೂ ಓದಿ : ಫಿಫಾ ಹಾಲಿ ಚಾಂಪಿಯನ್‌ ಜರ್ಮನಿಗೆ ದಕ್ಷಿಣ ಕೊರಿಯಾ ವಿಶ್ವಕಪ್ ಶಾಕ್!

ಮೂರು ಮಿಲಿಯನ್ ಟರ್ಕಿಯರು

ಟರ್ಕಿ ಮೂಲದ ಸರಿಸುಮಾರು ಮೂರು ಮಿಲಿಯನ್ ಜನತೆಗೆ ಜರ್ಮನಿ ಆವಾಸ ಸ್ಥಾನವಾಗಿದೆ. ಆದರೆ, ಲಂಡನ್‌ನಲ್ಲಿ ಟರ್ಕಿ ಅಧ್ಯಕ್ಷರ ಜತೆಗೆ ಸಹ ಆಟಗಾರ ಇಲ್ಕೆ ಗುಂಡೋಗನ್ ಅವರ ಜತೆಗಿದ್ದ ಫೋಟೊ ಓಜಿಲ್ ಅವರನ್ನು ಸಾಕಷ್ಟು ಟೀಕೆಗೆ ಗುರಿ ಮಾಡಿತ್ತು. ಫುಟ್ಬಾಲ್ ಅಭಿಮಾನಿಗಳಿಂದಲಂತೂ ಭಾರೀ ಅಸಹನೆ ಹಾಗೂ ಅಸಮಾಧಾನ ವ್ಯಕ್ತವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡುವಂತೆಯೂ ಅವರನ್ನು ಒತ್ತಾಯಿಸಲಾಗಿತ್ತು. ವಿಶ್ವಕಪ್‌ನಿಂದ ಹೊರಗಿಡಬೇಕೆಂಬ ಕೂಗೂ ಕೂಡಾ ಎದ್ದಿತ್ತು.

ತೀವ್ರತರ ಟೀಕೆಗಳು ಎದುರಾದಾಗ ಓಜಿಲ್, “ಟರ್ಕಿ ಅಧ್ಯಕ್ಷರ ಜತೆಗಿದ್ದ ಮಾತ್ರಕ್ಕೆ ಜರ್ಮನಿ ಮೇಲಿನ ನನ್ನ ನಿಷ್ಠೆ ಹುಸಿಯಾದುದೇನಲ್ಲ. ಮತ್ತು ಈ ಭೇಟಿ ರಾಜಕೀಯ ಇಲ್ಲವೇ ಚುನಾವಣೆಗೆ ಸಂಬಂಧಿಸಿದ್ದೂ ಆಗಿರಲಿಲ್ಲ. ಉನ್ನತ ಕಚೇರಿ ಹಾಗೂ ನನ್ನ ಮನೆಯವರ ದೇಶಕ್ಕೆ ಗೌರವ ಸಲ್ಲಿಸುವುದಷ್ಟೇ ಆಗಿತ್ತು. ಮೇಲಾಗಿ, ನಾನೋರ್ವ ಫುಟ್ಬಾಲ್ ಆಟಗಾರನೇ ಹೊರತು ರಾಜಕಾರಣಿಯಲ್ಲ. ಮತ್ತು ನಮ್ಮ ಈ ಭೇಟಿ ಯಾವುದೇ ಯೋಜನೆಗಳ ಬಗೆಗಿನ ಒಪ್ಪಂದವಾಗಲೀ ಇಲ್ಲವೇ ಜಾಹೀರಾತಿಗೆ ಸಂಬಂಧಿಸಿದ್ದಾಗಲೀ ಆಗಿರಲಿಲ್ಲ,’’ ಎಂದು ದಿಟ್ಟ ಉತ್ತರ ನೀಡಿದ್ದರು.

‘ನನಗಿರುವುದು ಎರಡು ಹೃದಯ!’

ಮೂಲ ಟರ್ಕಿಯಾದರೂ, ಆಶ್ರಯ ನೀಡಿ ಬೆಳೆಸಿದ್ದು ಜರ್ಮನಿಯಾದ್ದರಿಂದ ಓಜಿಲ್ ತನ್ನ ಮೂಲವನ್ನು ಕೆಣಕಿದವರಿಗೆಲ್ಲಾ ಹೇಳುತ್ತಿದ್ದುದು ತನಗೆ ಇರುವುದು ಒಂದು ಹೃದಯವಲ್ಲ, ಎರಡು ಹೃದಯಗಳು ಎಂದು. “ಹಲವಾರು ಜನತೆಯಂತೆ ನನ್ನ ಮೂಲ ನೆಲೆ ಟರ್ಕಿ. ಆದರೆ, ನಾನು ಬೆಳೆದದ್ದೆಲ್ಲಾ ಜರ್ಮನಿಯಲ್ಲೇ. ನನ್ನ ಪೂರ್ವಜರು ಟರ್ಕಿ ದೇಶದವರು. ಹೀಗಾಗಿ, ನನಗೆ ಎರಡು ಹೃದಯಗಳಿದ್ದು, ಒಂದು ಜರ್ಮನಿ ಹಾಗೂ ಮತ್ತೊಂದು ಟರ್ಕಿಯದ್ದು,’’ ಎಂದು ಓಜಿಲ್ ಹೇಳಿಕೊಂಡಿದ್ದಾರೆ.

ಅಂದಹಾಗೆ, ಜರ್ಮನ್ ಕೋಚ್ ಜೊವಾಕಿಮ್ ಲೊಯೆವ್ ಕೂಡಾ, “ಓಜಿಲ್ ಹೊರತಾದ ಜರ್ಮನ್ ತಂಡ ಪರಿಪೂರ್ಣ,’’ ಎಂದಿದ್ದರು. ಜೊವಾಕಿಮ್ ಒಂದು ದೇಶದ ಅದೂ ಜಗತ್ತಿನ ಸರ್ವಶ್ರೇಷ್ಠ ತಂಡಗಳ ಪೈಕಿ ಒಂದಾದ ಜರ್ಮನ್ ತಂಡದ ಕೋಚ್ ಆಗಿ ಇಂಥದ್ದೊಂದು ಹೇಳಿಕೆ ನೀಡುವುದು ಎಂಥ ಅವಿವೇಕತನದ್ದು ಎಂದೂ ಯೋಚಿಸಿರಲಿಲ್ಲ.

ಕ್ರಿಕೆಟಿಗರನ್ನೂ ಬಿಟ್ಟಿಲ್ಲ!

ಜನಾಂಗೀಯ ನಿಂದನೆಯಿಂದ ತತ್ತರಿಸಿರುವ ಓಜಿಲ್ ನಮ್ಮ ಕ್ರಿಕೆಟಿಗರಂತೆ ಮಾನಸಿಕ ಕ್ಷೋಭೆಗೂ ಸಿಲುಕಿದವರು. ಮೊಹಮದ್ ಅಜರುದ್ದೀನ್, ಜಹೀರ್‌ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಭಾರತದವರೇ ಆದರೂ, ಅವರನ್ನು ಕೂಡಾ ಧಾರ್ಮಿಕ ಹಿನ್ನೆಲೆಯಲ್ಲಿ ಅವರ ಆಟದ ಬದ್ದತೆಯನ್ನು ಪ್ರಶ್ನಿಸಿದವರಿಗೇನೂ ಕಮ್ಮಿ ಇರಲಿಲ್ಲ. ಅಷ್ಟೇ ಏಕೆ, ದೇಶ ವಿಘಟನೆಗೂ ಮುನ್ನ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ಅತ್ಯಂತ ಪ್ರಬಲವಾಗಿರಲು ತಂಡದಲ್ಲಿ ಕೆಲವು ಪಾಕ್ ಆಟಗಾರರೂ ಇದ್ದುದನ್ನೂ ಮರೆಯುವಂತಿಲ್ಲ.

ಈಜುಗಾರ, ಕಬಡ್ಡಿ ಆಟಗಾರ ಮಾತ್ರವಲ್ಲದೆ, ಕ್ರಿಕೆಟಿಗನೂ ಆಗಿದ್ದ ಗುಲ್ ಮೊಹಮದ್ ಭಾರತ ಮತ್ತು ಪಾಕಿಸ್ತಾನವನ್ನು ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಅಂತೆಯೇ, ಅಬ್ದುಲ್ ಕಾರ್ದರ್ ಹಾಗೂ ಅಮೀರ್ ಇಲಾಹಿ ಕೂಡಾ ಇದೇ ಸಾಲಿಗೆ ಸೇರುವವರೇ. ಇವೆಲ್ಲದಕ್ಕಿಂತ ಮಿಗಿಲಾಗಿ, ಸ್ನೇಹ-ಸೌಹಾರ್ದ ಮತ್ತು ಪ್ರೀತಿಯ ಬೆಸುಗೆಯೇ ಕ್ರೀಡೆಯ ಮೂಲ ಆಶಯ. ಓರ್ವ ಆಟಗಾರನ ಹುಟ್ಟಾಗಲಿ, ಇಲ್ಲವೇ ಆತನ ಮೂಲವಾಗಲೀ ಇಂಥ ಅನುಪಮ ಆಶಯವನ್ನು ಧಕ್ಕೆಗೊಳಿಸುವುದು ಅಕ್ಷಮ್ಯ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More