ಏಷ್ಯಾ ಕ್ರೀಡಾಕೂಟಕ್ಕೆ ಕಡೆಗಣನೆ; ಎಎಫ್‌ಐ ವಿರುದ್ಧ ಸುಪ್ರೀಂ ಕದ ತಟ್ಟಿದ ಪ್ರಾಚಿ 

ಆಗಸ್ಟ್‌ನಲ್ಲಿ ಇಂಡೋನೇಷಿಯಾದಲ್ಲಿ ನಡೆಯಲಿರುವ ಏಷ್ಯಾ ಕ್ರೀಡಾಕೂಟದ ಆಯ್ಕೆವಿಷಯದಲ್ಲಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ಅನ್ಯಾಯವೆಸಗಿದೆ ಎಂದು ಅಥ್ಲೀಟ್‌ಗಳಾದ ಪ್ರಾಚಿ ಮತ್ತು ಛವಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ

ಮಧ್ಯಮ ಅಂತರದ ಪ್ರತಿಭಾನ್ವಿತ ಓಟಗಾರ್ತಿ ಪ್ರಾಚಿ ಚೌಧರಿ ಮತ್ತು ಛವಿ ಶರಾವತ್ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ್ದಾರೆ. ೪/೪೦೦ ಮೀಟರ್ ರಿಲೇ ಓಟದ ಸ್ಪರ್ಧೆಗೆ ತಮ್ಮನ್ನು ಕಡೆಗಣಿಸಲಾಗಿದೆ; ಒಟ್ಟಾರೆ ಆಯ್ಕೆ ಪ್ರಕ್ರಿಯೆಯಲ್ಲೇ ದೋಷವಿದೆ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ವಿರುದ್ಧ ನ್ಯಾಯಾಲಯಕ್ಕೆ ಈ ಇಬ್ಬರು ಅಥ್ಲೀಟ್‌ಗಳು ದೂರು ದಾಖಲಿಸಿದ್ದಾರೆ.

ಜುಲೈ ೨೦ರಂದು ನ್ಯಾಯಾಲಯ, ಅಥ್ಲೀಟ್‌ಗಳ ಮನವಿಗೆ ಓಗೊಟ್ಟಿದ್ದು, ಎಎಫ್‌ಐ ಹಾಗೂ ಕ್ರೀಡಾ ಸಚಿವಾಲಯಕ್ಕೆ ಜುಲೈ ೨೬ರೊಳಗೆ ಉತ್ತರ ನೀಡುವಂತೆ ನೋಟಿಸು ಜಾರಿಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್ ಎ ಬಾಬ್ಡೆ ಮತ್ತು ಎಲ್ ನಾಗೇಶ್ವರ ರಾವ್ ವಿಚಾರಣೆ ನಡೆಸಲಿದ್ದಾರೆ. ಅಂದಹಾಗೆ, ಇಬ್ಬರೂ ಅಥ್ಲೀಟ್‌ಗಳು ಉತ್ತರ ಪ್ರದೇಶದವರಾಗಿದ್ದು, ಪ್ರಾಚಿ ಮಾತ್ರ ಪಟಿಯಾಲದಲ್ಲಿನ ಪಂಜಾಬ್ ವಿವಿಯ ವಿದ್ಯಾರ್ಥಿನಿಯಾಗಿದ್ದಾರೆ.

ಇದನ್ನೂ ಓದಿ : ಜನಾಂಗೀಯ ಭೇದದ ಗೀಳಿನಲ್ಲಿ ಕ್ರೀಡಾಧರ್ಮ ಮರೆತ ಜರ್ಮನಿಗೆ ಓಜಿಲ್ ಗುಡ್‌ಬೈ!

‘’ಏಷ್ಯಾಡ್‌ಗಾಗಿನ ಆಯ್ಕೆ ಟ್ರಯಲ್ಸ್‌ನಲ್ಲಿ ಸ್ಪರ್ಧಾಳುಗಳ ಪೈಕಿ ಅಗ್ರಸ್ಥಾನ ಪಡೆದಿದ್ದ ಈ ಇಬ್ಬರೂ ಅಥ್ಲೀಟ್‌ಗಳನ್ನು ಏಷ್ಯಾಡ್ ತಂಡದಿಂದ ಕೈಬಿಡಲಾಗಿದೆ. ಈ ಕುರಿತು ನಾವು ಕೇಸು ದಾಖಲಿಸಿದ್ದು, ಸರ್ವೋಚ್ಚ ನ್ಯಾಯಾಲಯ ಕೂಡ ವಿಚಾರಣೆ ನಡೆಸಲು ಸಮ್ಮತಿಸಿದೆ,’’ ಎಂದು ಅಥ್ಲೀಟ್‌ ಪರ ವಕೀಲ ಡಿ ಕೆ ಗಾರ್ಗ್ ತಿಳಿಸಿದ್ದಾರೆ.

ಎಎಫ್ಐ ಗುವಾಹತಿಯಲ್ಲಿ ಆಯೋಜಿಸಿದ್ದ ೫೮ನೇ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಾಚಿ ಕಂಚಿನ ಪದಕ ಜಯಿಸಿದ್ದರು. ಇನ್ನು, ಇದೇ ಚಾಂಪಿಯನ್‌ಶಿಪ್‌ನಲ್ಲಿ ಛವಿ ನಾಲ್ಕನೇ ಸ್ಥಾನ ಗಳಿಸಿದ್ದರು. ಏಷ್ಯಾ ಕ್ರೀಡಾಕೂಟಕ್ಕಾಗಿ ಈ ಚಾಂಪಿಯನ್‌ಶಿಪ್‌ ಅನ್ನು ಆಯ್ಕೆ ಟ್ರಯಲ್ಸ್‌ ಎಂದು ಹೇಳಲಾಗಿತ್ತು. ಸ್ಪರ್ಧೆಯಲ್ಲಿ ಅಗ್ರ ನಾಲ್ವರು ಅಥ್ಲೀಟ್‌ಗಳಲ್ಲಿ ಗುರುತಿಸಿಕೊಂಡರೂ, ಏಷ್ಯಾಡ್‌ನಿಂದ ಪ್ರಾಚಿ ಮತ್ತು ಛವಿಯನ್ನು ಕಡೆಗಣಿಸಿರುವುದು ವಿವಾದ ಎಬ್ಬಿಸಿದೆ.

"ಛವಿ ಮತ್ತು ಪ್ರಾಚಿ ಬದಲಿಗೆ ಕನ್ನಡತಿ ವಿಜಯ ಕುಮಾರಿ ಸೇರಿದಂತೆ ವಿ ಕೆ ವಿಸ್ಮಯ ಮತ್ತು ಜಿಸ್ನಾ ಮ್ಯಾಥ್ಯೂ ಏಷ್ಯಾಡ್ ಅಥ್ಲೀಟ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಈ ಮೂವರೂ ಓಟಗಾರ್ತಿಯರು ಅಂತಿಮ ಸುತ್ತಿನಲ್ಲಿ ಭಾಗವಹಿಸಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ, ಹೀಟ್‌ನಲ್ಲಿ ಇವರು ಅರ್ಹತಾ ಸಮಯದ ಗುರಿ ಮುಟ್ಟಲು ವಿಫಲವಾಗಿದ್ದರು,’’ ಎಂತಲೂ ವಕೀಲ ಗಾರ್ಗ್ ಹೇಳಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More