ಆಲೌಟ್ ಆಗಿದ್ದು 18 ರನ್‌ಗೆ; ವಿಜಯದ ಗುರಿ ಮುಟ್ಟಿದ್ದು 12 ನಿಮಿಷದಲ್ಲಿ!

ಜಗತ್ತಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಬ್ರಿಟಿಷರ ನೆಲದಲ್ಲಿ ಮತ್ತೊಂದು ಕ್ರಿಕೆಟ್‌ ಸೋಜಿಗ ಜರುಗಿದೆ. ಬೆಕೆನ್‌ಹ್ಯಾಮ್ ಕ್ರಿಕೆಟ್ ಕ್ಲಬ್ ೧೧.೨ ಓವರ್‌ಗಳಲ್ಲಿ ೧೮ ರನ್‌ಗಳಿಗೆ ಹೋರಾಟ ಮುಗಿಸಿದರೆ, ಜಯದ ಗುರಿಯನ್ನು ಬೆಕ್ಸ್‌ಲೇ ಸಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ ಹನ್ನೆರಡು ನಿಮಿಷಗಳಲ್ಲಿ ಮುಟ್ಟಿದೆ. 

ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಆಟವೆಂಬುದು ಸರ್ವವಿಧಿತವಾದರೂ, ಅಲ್ಲೊಂದು ಇಲ್ಲೊಂದು ಪ್ರಕರಣದಲ್ಲಿ ಅದು ಬೌಲರ್‌ಗಳ ಆಟವೂ ಹೌದು ಎಂದು ನಿರೂಪಿತವಾಗಿದೆ. ಆ ಪಂಕ್ತಿಗೆ ಸೇರ್ಪಡೆಯಾಗಿದೆ ಶೆಪರ್ಡ್ ನೇಮ್ ಕೆಂಟ್ ಕ್ರಿಕೆಟ್ ಲೀಗ್. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್‌ನಿಂದ ಬೆಕೆನ್‌ಹ್ಯಾಮ್ ಕ್ರಿಕೆಟ್ ಕ್ಲಬ್ ಕುಖ್ಯಾತಿ ಗಳಿಸಿತು.

ಕೇವಲ ೪೯ ನಿಮಿಷಗಳಲ್ಲೇ ತನ್ನ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದ ಬೆಕೆನ್‌ಹ್ಯಾಮ್ ವಿರುದ್ಧ ಬೆಕ್ಸ್‌ಲೆ ಸಿಸಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ೧೨ ನಿಮಿಷಗಳಲ್ಲೇ ವಿಜಯದ ಗೆರೆ ಮುಟ್ಟಿತು. ಸ್ಕಾಟ್ಲೆಂಡ್ ಪರ ೫೭ ಏಕದಿನ ಪಂದ್ಯ ಆಡಿರುವ ಕಲಮ್ ಮೆಕ್‌ಲಿಯೊಡ್, ಕೇವಲ ಐದು ರನ್‌ಗಳಿಗೆ ೬ ವಿಕೆಟ್ ಎಗರಿಸಿ ಬೆಕೆನ್‌ಹ್ಯಾಮ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಸರಿಸುಮಾರು ೧೫೨ ವರ್ಷಗಳ ಇತಿಹಾಸವಿರುವ ಬೆಕೆನ್‌ಹ್ಯಾಮ್ ಕ್ರಿಕೆಟ್ ಕ್ಲಬ್ ಇದೇ ಮೊದಲ ಬಾರಿಗೆ ಅತಿ ನಿಕೃಷ್ಟ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಗುರಿಯಾಯಿತು. ಟಾಸ್ ಗೆದ್ದ ಬೆಕೆನ್‌ಹ್ಯಾಮ್ ನಾಯಕ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ೯ ರನ್ ಗಳಿಸುವಷ್ಟರಲ್ಲೇ ಮೊದಲ ನಾಲ್ಕು ವಿಕೆಟ್ ಕಳೆದುಕೊಂಡ ಬೆಕೆನ್‌ಹ್ಯಾಮ್, ೧೨ ರನ್‌ ಗಳಿಸುವಷ್ಟರಲ್ಲಿ ಇನ್ನೆರಡು ವಿಕೆಟ್ ಬಲಿಗೊಟ್ಟಿತು.

ಇದನ್ನೂ ಓದಿ : ಜನಾಂಗೀಯ ಭೇದದ ಗೀಳಿನಲ್ಲಿ ಕ್ರೀಡಾಧರ್ಮ ಮರೆತ ಜರ್ಮನಿಗೆ ಓಜಿಲ್ ಗುಡ್‌ಬೈ!

ಬೆಕೆನ್‌ಹ್ಯಾಮ್ ತಂಡದ ದಯನೀಯ ಬ್ಯಾಟಿಂಗ್ ಇಷ್ಟಕ್ಕೇ ಮುಗಿಯಲಿಲ್ಲ. ಇನ್ನು, ೧೨ನೇ ಓವರ್‌ನಲ್ಲಿ ಜೇಸನ್ ಬೆನ್, ಅಲೆಕ್ಸ್ ಶಾಂಕ್ಸ್ ಅವರನ್ನು ಪೆವಿಲಿಯನ್‌ಗೆ ಅಟ್ಟುತ್ತಲೇ ಬೆಕೆನ್‌ಹ್ಯಾಮ್ ಕ್ರಿಕೆಟ್ ಪುಟದಲ್ಲಿ ಬೇಡದ ದಾಖಲೆ ಬರೆಯಿತು. ತಂಡದ ಐವರು ಆಟಗಾರರು ರನ್ ಖಾತೆ ತೆರೆಯಲಿಲ್ಲವಾದರೆ, ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎಂದರೆ ಅದು ನಾಲ್ಕು ರನ್ ಅಷ್ಟೆ! ಅಲೆಕ್ಸಾಂಡರ್ ಸೆನ್, ವಿಲಿಯಮ್ ಮ್ಯಾಕ್‌ವಿಕಾರ್ ಮತ್ತು ಕಲಮ್ ಲೆನಾಕ್ಸ್ ತಲಾ ನಾಲ್ಕು ರನ್ ಗಳಿಸಿದರು!

ಇದಕ್ಕೆ ಉತ್ತರವಾಗಿ ಕ್ರಿಸ್ಟೋಫರ್ ಲ್ಯಾಸ್ (ಅಜೇಯ ೪), ಮತ್ತು ಏಡೆನ್ ಗಿಗ್ಸ್ (ಅಜೇಯ ೧೨) ಜೊತೆಗೆ ಹೆಚ್ಚುವರಿ ಆರು ರನ್‌ಗಳು ಬೆಕ್ಸ್‌ಲೆ ತಂಡದ ಗೆಲುವಿಗೆ ಸಾಕಾದವು. ಕೇವಲ ೩.೩ ಓವರ್‌ಗಳಲ್ಲೇ ಜಯಭೇರಿ ಬಾರಿಸಿದ ಬೆಕ್ಸ್‌ಲೇ, ೧೨ ನಿಮಿಷಗಳಲ್ಲೇ ರನ್ ಚೇಸಿಂಗ್‌ ಅನ್ನು ಯಶಸ್ವಿಯಾಗಿ ಮುಟ್ಟಿತು. ಅಂದಹಾಗೆ ಕಲಮ್ ಮೆಕ್‌ಲಿಯೊಡ್ ಜೊತೆಗೆ ಜೇಸನ್ ಬೆನ್ (೧೨ಕ್ಕೆ ೪) ಬೆಕೆನ್‌ಹ್ಯಾಮ್‌ಗೆ ಮುಳುವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More