೨೦೨೧ರವರೆಗೆ ಬಿಎಫ್‌ಸಿ ಜೊತೆಗಿನ ಸಖ್ಯ ಮುಂದುವರಿಸಿದ ಸುನಿಲ್ ಛೆಟ್ರಿ

ಬೆಂಗಳೂರು ಫುಟ್ಬಾಲ್ ಕ್ಲಬ್‌ (ಬಿಎಫ್‌ಸಿ) ಸಾರಥಿಯೂ ಆಗಿರುವ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ೨೦೨೧ರವರೆಗೆ ಬಿಎಫ್‌ಸಿ ಪರ ಆಡಲು ಸಮ್ಮತಿಸಿ ಒಪ್ಪಂದ ಮುಂದುವರಿಸಿದ್ದಾರೆ. ಪ್ರತಿಷ್ಠಿತ ಐ-ಲೀಗ್‌ಗೆ ಕಾಲಿಟ್ಟ ಚೊಚ್ಚಲ ಆವೃತ್ತಿಯಲ್ಲೇ ಬಿಎಫ್‌ಸಿಗೆ ಛೆಟ್ರಿ ಪ್ರಶಸ್ತಿ ತಂದುಕೊಟ್ಟಿದ್ದರು

ಬೆಂಗಳೂರು ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ನಡುವಣದ ಬೆಸುಗೆ ಮುಂದುವರಿದಿದೆ. ಬಿಎಫ್‌ಸಿ ಕ್ಲಬ್ ಅನ್ನು ಪೋಷಿಸುತ್ತಿರುವ ಜೆಎಸ್‌ಡಬ್ಲ್ಯೂ, ಛೆಟ್ರಿ ಜೊತೆಗಿನ ಒಪ್ಪಂದವನ್ನು ನವೀಕರಿಸಿದೆ. ಮಂಗಳವಾರ (ಜು.೨೪) ಒಂದು ವರ್ಷದವರೆಗಿನ ಒಪ್ಪಂದಕ್ಕೆ ಸಹಿ ಹಾಕಲಾಯಿತಾದರೂ, ಎಐಎಫ್‌ಎಫ್ ವರ್ಷದ ಫುಟ್ಬಾಲ್ ಆಟಗಾರ ಛೆಟ್ರಿ ೨೦೨೦-೨೦೨೧ರವರೆಗೂ ಬಿಎಫ್‌ಸಿ ಜೊತೆಗಿರಲಿದ್ದಾರೆ ಎಂದು ಜೆಎಸ್‌ಡಬ್ಲ್ಯೂ ತಿಳಿಸಿದೆ.

33 ವರ್ಷದ ಛೆಟ್ರಿ ಬ್ಲೂಸ್ ಜೊತೆಗೆ ಈ ಹಿಂದೆಯೂ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಬಿಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ಗೆ (ಐಎಸ್‌ಎಲ್) ಪದಾರ್ಪಣೆಗೈದಿತ್ತು. ಬಿಎಫ್‌ಸಿ ಜೊತೆಗೆ ಸುದೀರ್ಘ ಸಮಯದ ಸಖ್ಯ ಹೊಂದಿರುವ ಛೆಟ್ರಿ, “ಮತ್ತೊಂದು ಒಪ್ಪಂದದೊಂದಿಗೆ ಬಿಎಫ್‌ಸಿ ಜೊತೆ ಮುಂದುವರಿಯಲು ಹರ್ಷವಾಗುತ್ತಿದೆ,” ಎಂದಿದ್ದಾರೆ.

“ಬಿಎಫ್‌ಸಿ ಕ್ಲಬ್ ಮತ್ತು ಅದರ ಅಭಿಮಾನಿಗಳು ನನ್ನ ವೃತ್ತಿಬದುಕಿನಲ್ಲಿ ಎಂದೂ ಮರೆಯಲಾಗದ ಕ್ಷಣಗಳನ್ನು ನೀಡಿದ್ದಾರೆ. ಕ್ಲಬ್ ಜೊತೆಗಿನ ನನ್ನ ಮತ್ತೊಂದು ಅವಧಿಯ ಒಪ್ಪಂದವು ಕ್ಲಬ್‌ಗೆ ನನ್ನ ಕಾಣ್ಕೆಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆ ನೀಡುವ ಭರವಸೆ ಇದೆ,’’ ಎಂದು ಬಿಎಫ್‌ಸಿ ಜೊತೆಗಿನ ಒಪ್ಪಂದ ನವೀಕರಣದ ವೇಳೆ ಛೆಟ್ರಿ ಬಿಎಫ್‌ಸಿ ಮತ್ತು ಅದರ ಅಭಿಮಾನಿಗಳಿಗೆ ವಚನ ನೀಡಿದ್ದಾರೆ.

ಇದನ್ನೂ ಓದಿ : ನೂರನೇ ಪಂದ್ಯದಲ್ಲಿ ಛೆಟ್ರಿ ಡಬಲ್ ಗೋಲು; ಇಂಡಿಯಾಗೆ ಶರಣಾದ ಕೀನ್ಯಾ

ಛೆಟ್ರಿ ಗೋಲಿನ ಸಾಧನೆ

ಕಳೆದ ಐದು ಆವೃತ್ತಿಗಳಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಪರ ಆಡಿದ ೧೪೪ ಪಂದ್ಯಗಳಲ್ಲಿ ಛೆಟ್ರಿ ಬರೋಬ್ಬರಿ ೭೧ ಗೋಲುಗಳನ್ನು ಬಾರಿಸಿ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಬಿಎಫ್‌ಸಿ ಪರ ಗರಿಷ್ಠ ಗೋಲು ಬಾರಿಸಿರುವುದೂ ಛೆಟ್ರಿಯೇ. “ನಮ್ಮೊಟ್ಟಿಗೆ ಛೆಟ್ರಿ ಆಡುತ್ತಿರುವುದೇ ವಿಶೇಷ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ತನ್ನ ಅತ್ಯಮೋಘ ಆಟದೊಂದಿಗೆ ಛೆಟ್ರಿ ಹಲವಾರು ಬಾರಿ ನಿರೂಪಿಸಿದ್ದಾರೆ. ಛೆಟ್ರಿಯಂಥ ಆಟಗಾರ ತಂಡದಲ್ಲಿರುವುದು ಉದ್ರೇಕ ಕೆರಳಿಸಿದರೆ, ಅವರ ನಾಯಕತ್ವ ಮತ್ತು ಕ್ಷಮತೆಯ ಆಟ ಇನ್ನಷ್ಟು ಉದ್ರೇಕಕಾರಿಯಾಗಿದೆ. ಫುಟ್ಬಾಲ್ ಮೇಲಿನ ಅವರ ಬದ್ಧತೆ ಹಾಗೂ ಪ್ರೀತಿ ವಿವರಿಸಲಸದಳ. ಛೆಟ್ರಿ ಮತ್ತು ಬಿಎಫ್‌ಸಿ ಸಂಬಂಧ ಇನ್ನಷ್ಟು ಕಾಲ ಮುಂದುವರಿಯುತ್ತದೆ ಎಂಬ ಭರವಸೆ ನಮಗಿದೆ,’’ ಎಂದು ಬೆಂಗಳೂರು ಎಫ್‌ಸಿಯ ಸಿಇಒ ಪಾರ್ಥ್ ಜಿಂದಾಲ್ ತಿಳಿಸಿದ್ದಾರೆ.

ಅಂದಹಾಗೆ, ಪ್ರಸಕ್ತ ಬಿಎಫ್‌ಸಿ ತಂಡ ಬಳ್ಳಾರಿಯಲ್ಲಿ ಪೂರ್ವ ಋತುವಿನ ತರಬೇತಿಯಲ್ಲಿ ನಿರತವಾಗಿದೆ. ಸದ್ಯದಲ್ಲೇ ಸ್ಪೇನ್‌ಗೆ ತೆರಳಲಿರುವ ಬಿಎಫ್‌ಸಿ, ಅಲ್ಲಿಯೂ ಫುಟ್ಬಾಲ್ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಬಿಎಫ್‌ಸಿಯ ಈ ಋತುವಿನ ಮೊದಲ ಸ್ಪರ್ಧಾತ್ಮಕ ಹಣಾಹಣಿಗೆ ಹೆಚ್ಚೆಂದರೆ ಇನ್ನೊಂದು ತಿಂಗಳಷ್ಟೇ ಇದೆ. ಆಗಸ್ಟ್ ೨೨ ಮತ್ತು ೨೯ರಂದು ನಡೆಯಲಿರುವ ಎಎಫ್‌ಸಿ ಅಂತರ ವಲಯ ಸೆಮಿಫೈನಲ್‌ನಲ್ಲಿ ತುರ್ಕ್‌ಮೇನಿಸ್ತಾನದ ಆಲ್ಟಿನ್-ಆಸಿರ್ ಎಫ್‌ಕೆ ತಂಡವನ್ನು ಎದುರಿಸಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More