ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಗೆ ಸ್ವಿಸ್ ಮಾಸ್ಟರ್ ಫೆಡರರ್ ಅಲಭ್ಯ

ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಮುಂದಿನ ತಿಂಗಳು ನಡೆಯಲಿರುವ ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ವರ್ಷದ ಕಡೇ ಗ್ರಾಂಡ್‌ಸ್ಲಾಮ್ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಫೆಡರರ್, ಕೆಲವು ಟೂರ್ನಿಗಳಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ

ಪ್ರತಿಷ್ಠಿತ ವಿಂಬಲ್ಡನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಐದು ಸೆಟ್‌ಗಳ ರೋಚಕ ಸೋಲನುಭವಿಸಿದ ರೋಜರ್ ಫೆಡರರ್ ಟೊರಾಂಟೊ ಟೂರ್ನಿಗೆ ಅಲಭ್ಯವಾಗಿದ್ದಾರೆ. “ಈ ಋತುವಿನ ರೋಜರ್ ಕಪ್‌ನಲ್ಲಿ ಆಡಲಾಗುತ್ತಿಲ್ಲ ಎಂದು ಬೇಸರವಾಗುತ್ತಿದೆ,’’ ಎಂದು ೩೬ರ ಹರೆಯದ ಫೆಡರರ್ ತಿಳಿಸಿದ್ದಾರೆ.

“ಕಳೆದ ವರ್ಷ ಮಾಂಟ್ರಿಯಲ್‌ನಲ್ಲಿ ನಾನು ಅದ್ಭುತ ಸಮಯ ಕಳೆದಿದ್ದೆ. ಕೆನಡಾ ಅಭಿಮಾನಿಗಳ ಸಮ್ಮುಖದಲ್ಲಿ ಆಡುವುದನ್ನು ನಾನು ಬಹುವಾಗಿ ಆಸ್ವಾದಿಸಿದ್ದೇನೆ. ಆದರೆ, ಎಟಿಪಿ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯವಾಗಿ ದೈಹಿಕವಾಗಿ ಕ್ಷಮತೆ ಕಾಯ್ದುಕೊಳ್ಳಲು ಈ ಬಾರಿಯ ಟೊರಾಂಟೊ ಟೂರ್ನಿಯಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಬಂದೆ,’’ ಎಂದು ಫೆಡರರ್ ಹೇಳಿದ್ದಾರೆ.

ಆಗಸ್ಟ್ ೪ರಿಂದ ೧೨ರವರೆಗೆ ಟೊರಾಂಟೋದ ಯಾರ್ಕ್ ವಿವಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಶ್ವದ ೧೯ರಿಂದ ೨೦ರವರೆಗೆ ವಿಶ್ವದರ್ಜೆಯ ಆಟಗಾರರಿದ್ದಾರೆ. ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಅಲ್ಲದೆ, ವಿಶ್ವದ ನಂ.೧ ಆಟಗಾರ ರಾಫೆಲ್ ನಡಾಲ್ ಕೂಡ ಈ ಸ್ಪರ್ಧಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಫೆಡರರ್ ಅಲಭ್ಯತೆಯಲ್ಲಿ ಫ್ರಾನ್ಸ್‌ನ ಜೆರೇಮಿ ಚಾರ್ಡಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ವಿಂಬಲ್ಡನ್ | ಸ್ವಿಸ್ ಮಾಸ್ಟರ್ ಫೆಡರರ್ ಮಣಿಸಿದ್ದ ಆಂಡರ್ಸನ್‌ ಫೈನಲ್‌ಗೆ

“ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಈ ಪಂದ್ಯಾವಳಿಯಲ್ಲಿ ಆಡದಿರುವುದು ದುರದೃಷ್ಟಕರ. ವಿಶ್ವದ ಪ್ರಮುಖ ಆಟಗಾರರ ಪೈಕಿ ಅವರೂ ಆಡಿದ್ದರೆ, ಅಭಿಮಾನಿಗಳು ಇನ್ನಷ್ಟು ಖುಷಿಪಡುತ್ತಿದ್ದರು,’’ ಎಂದು ರೋಜರ್ಸ್ ಕಪ್ ಪಂದ್ಯಾವಳಿಯ ಸಂಘಟಕ ಕಾರ್ಲ್ ಹೇಲ್ ತಿಳಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More