ಫಿಫಾ ಟಾಪ್ ಟೆನ್ ಅಂತಿಮ ಪಟ್ಟಿಯಲ್ಲಿ ಬ್ರೆಜಿಲ್ ಆಟಗಾರ ನೇಮಾರ್‌ಗಿಲ್ಲ ಜಾಗ!

ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಅತ್ಯುತ್ತಮ ಹತ್ತು ಮಂದಿ ಆಟಗಾರರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ೨೧ನೇ ವಿಶ್ವಕಪ್‌ಗೂ ಮುಂಚೆ ಫೇವರಿಟ್‌ ಎನಿಸಿದ್ದ ಕ್ರಿಶ್ಚಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿ ಮತ್ತು ನೇಮಾರ್ ಪೈಕಿ ಬ್ರೆಜಿಲ್ ಆಟಗಾರನ ಹೆಸರನ್ನು ಕೈಬಿಡಲಾಗಿದೆ!

ರಷ್ಯಾ ಆವೃತ್ತಿಯಲ್ಲಿ ಗರಿಷ್ಠ ಗೋಲು ಬಾರಿಸಿದ ಇಂಗ್ಲೆಂಡ್‌ ತಂಡದ ಹ್ಯಾರಿ ಕೇನ್ ಅಲ್ಲದೆ, ಟೂರ್ನಿ ಪೂರ್ವ ಸದ್ದು ಮಾಡಿದ್ದ ಈಜಿಪ್ಟ್ ಆಟಗಾರ ಮೊಹಮದ್ ಸಲಾ ಸೇರಿದ ೧೦ ಮಂದಿ ಆಟಗಾರರನ್ನು ೨೦೧೮ರ ಫಿಫಾ ಪುರುಷರ ಅತ್ಯುತ್ತಮ ಪ್ರಶಸ್ತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಮಂಗಳವಾರ (ಜು.೨೪) ಪ್ರಕಟಿಸಲಾಗಿರುವ ಈ ನಾಮನಿರ್ದೇಶಿತ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಮತ್ತು ಲಿವರ್‌ಪೂಲ್ ಆಟಗಾರ ಸಲಾ ಜೊತೆಗೆ ಲಯೋನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಕೂಡ ಸ್ಥಾನ ಗಳಿಸಿದ್ದಾರೆ.

ಇನ್ನು, ವಿಶ್ವಕಪ್ ವಿಜೇತ ತಂಡದ ಆಂಟನಿ ಗ್ರೀಜ್‌ಮನ್, ಕಲಿಯನ್ ಎಂಬಾಪೆ ಅಲ್ಲದೆ, ರಫಾಯೆಲ್ ವರಾನಿ ಹಾಗೂ ಟೂರ್ನಿಯಲ್ಲಿ ಗೋಲ್ಡನ್ ಬಾಲ್ ಪಡೆದ ಮೆಕ್ಸಿಕೋ ನಾಯಕ ಲೂಕಾ ಮಾಡ್ರಿಕ್ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಇನ್ನು, ಚೆಲ್ಸಿಯಾ ಆಟಗಾರ ಈಡನ್ ಹಜಾರ್ಡ್ ಮತ್ತು ಮ್ಯಾಂಚೆಸ್ಟರ್ ಸಿಟಿಯ ಕೆವಿನ್ ಡಿ ಬ್ರ್ಯೂಯ್ನ್ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ : ಫಿಫಾ ವಿಶ್ವಕಪ್ | ಸಾಂಬಾ ಕನಸಿಗೆ ಎಳ್ಳುನೀರು ಬಿಟ್ಟ ಬೆಲ್ಜಿಯಂ ಬೊಂಬಾಟ್ ಆಟ

ಆದರೆ, ಟೂರ್ನಿಯಾದ್ಯಂತ ಸುದ್ದಿಯಾಗಿದ್ದ ಬಾರ್ಸಿಲೋನಾದ ಮಾಜಿ ಫಾರ್ವರ್ಡ್ ಆಟಗಾರ ನೇಮಾರ್ ಫಿಫಾ ಟಾಪ್ ಟೆನ್ ಆಟಗಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮೇನ್ ಪರ ಮೊದಲ ಅಭಿಯಾನದಲ್ಲೇ ೨೮ ಗೋಲುಗಳನ್ನು ದಾಖಲಿಸಿದ್ದ ನೇಮಾರ್ ಹೆಸರು ಕೈಬಿಟ್ಟಿರುವುದು ವಿಶ್ವ ಫುಟ್ಬಾಲ್ ಪ್ರೇಮಿಗಳನ್ನು ಚಕಿತಗೊಳಿಸಿದೆ.

೨೬ರ ಹರೆಯದ ನೇಮಾರ್, ಈ ಬಾರಿ ಆರನೇ ವಿಶ್ವಕಪ್ ಕನಸಿನಲ್ಲಿದ್ದ ಸಾಂಬಾ ನಾಡಿಗೆ ಭ್ರಮನಿರಸನ ಉಂಟುಮಾಡಿದ್ದರು. ಕ್ವಾರ್ಟರ್‌ಫೈನಲ್‌ವರೆಗೆ ತಂಡವನ್ನು ಮುನ್ನಡೆಸಿದ ನೇಮಾರ್, ಎಂಟರ ಘಟ್ಟದ ಪಂದ್ಯದಲ್ಲಿ ಮಾತ್ರ ಬೆಲ್ಜಿಯಂ ಎದುರಿನ ಸೋಲಿನೊಂದಿಗೆ ಕಂಗೆಟ್ಟಿದ್ದರು.

ಫಿಫಾ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿಯನ್ನು ೨೦೧೬ರಿಂದ ಕೊಡಲಾಗುತ್ತಿದೆ. ಈ ಬಾರಿ ಈ ಪ್ರಶಸ್ತಿಯ ಮಾನದಂಡ ಜುಲೈ ೩, ೨೦೧೭ರಿಂದ ಜುಲೈ ೧೫, ೨೦೧೮ರವರೆಗೆ ಆಟಗಾರರು ನೀಡಿದ ಪ್ರದರ್ಶನವನ್ನು ಆಧರಿಸಿದೆ. ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಸತತ ಎರಡು ಬಾರಿ ಅಗ್ರಸ್ಥಾನ ಗಳಿಸಿದ್ದರು. ಈ ಪ್ರಶಸ್ತಿಗೆ ಆಟಗಾರರು, ತರಬೇತುಗಾರರು, ಅಭಿಮಾನಿಗಳು ಮತ್ತು ಮಾಧ್ಯಮದವರು ನೀಡುವ ಮತವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More