ಹರಿಣಗಳ ವಿರುದ್ಧ ಸ್ಪಿನ್ ಸ್ವೀಪ್‌ ಸಾಧಿಸಿ ಹೊಸ ದಾಖಲೆ ಬರೆದ ಶ್ರೀಲಂಕಾ

ಸೋಮವಾರವಷ್ಟೇ (ಜು.೨೩) ಮುಕ್ತಾಯ ಕಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯನ್ನು ೨-೦ ಅಂತರದಿಂದ ಆತಿಥೇಯ ಶ್ರೀಲಂಕಾ ಗೆದ್ದದ್ದು ಸ್ಪಿನ್ ಅಸ್ತ್ರದ ಮೂಲಕ. ಟೆಸ್ಟ್ ಪ್ರಕಾರದಲ್ಲಿ ಇಂಥ ಅಪೂರ್ವ ಸಾಧನೆ ಮಾಡಿದ ಮೊಟ್ಟಮೊದಲ ರಾಷ್ಟ್ರವೆಂಬ ಗರಿಮೆಗೆ ಲಂಕಾ ಭಾಜನವಾಗಿದೆ

ಮುತ್ತಯ್ಯ ಮುರಳೀಧರನ್ ಎಂಬ ಸ್ಪಿನ್ ಮಾಯಾವಿಯನ್ನು ಕ್ರಿಕೆಟ್ ಜಗತ್ತಿಗೆ ನೀಡಿದ ಶ್ರೀಲಂಕಾ, ಅವರ ಪ್ರಭಾವಿ ಪ್ರದರ್ಶನದಲ್ಲಿ ಅದೆಷ್ಟೋ ಸರಣಿಯನ್ನು ಜಯಿಸಿದೆ. ಆದರೆ, ಅವರ ಆಟದ ದಿನದಲ್ಲೂ ಶ್ರೀಲಂಕಾ ಇಂಥದ್ದೊಂದು ಅನುಪಮ ಸಾಧನೆ ಮೆರೆದಿರಲಿಲ್ಲ. ಅಕಿಲ ಧನಂಜಯ, ರಂಗನಾ ಹೆರಾತ್ ಹಾಗೂ ದಿಲ್ರುವಾನ್ ಪೆರೇರಾ ತ್ರಿವಳಿ ಸ್ಪಿನ್ ಮೋಡಿಯಲ್ಲಿ ಲಂಕಾ ಇದೀಗ ಹೊಚ್ಚ ಹೊಸ ದಾಖಲೆ ಬರೆದಿದೆ.

ಸೋಮವಾರ ಕೊಲಂಬೋದಲ್ಲಿ ಮುಕ್ತಾಯ ಕಂಡ ಎರಡನೇ ಹಾಗೂ ಕೊನೇ ಪಂದ್ಯವನ್ನು ಶ್ರೀಲಂಕಾ ೧೯೯ ರನ್‌ಗಳಿಂದ ಜಯಿಸಿತ್ತು. ರಂಗನಾ ಹೆರಾತ್ ತೋಡಿದ ಸ್ಪಿನ್ ಖೆಡ್ಡಾದೊಳಗೆ ಹರಿಣಗಳು ಸಿಲುಕಿಕೊಂಡು ಸರಣಿಯಲ್ಲಿ ಮತ್ತೊಂದು ದಯನೀಯ ಸೋಲು ಕಂಡವಲ್ಲದೆ, ದ್ವೀಪರಾಷ್ಟ್ರ ಶ್ರೀಲಂಕಾ ಎದುರು ೧೨ ವರ್ಷಗಳ ಬಳಿಕ ಟೆಸ್ಟ್ ಸರಣಿ ಸ್ವೀಪ್ ಮುಖಭಂಗ ಅನುಭವಿಸಬೇಕಾಯಿತು.

ಇದಕ್ಕೂ ಮುನ್ನ ನಡೆದ ಮೊದಲ ಗಾಲೆ ಟೆಸ್ಟ್ ಅನ್ನು ಶ್ರೀಲಂಕಾ ಕೇವಲ ಮೂರೇ ದಿನದಲ್ಲಿ ಗೆದ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ೭೩ ರನ್‌ಗಳಿಗೆ ಹರಿಣಗಳನ್ನು ಕಟ್ಟಿಹಾಕಿದ್ದ ಈ ತ್ರಿವಳಿ ಸ್ಪಿನ್ನರ್‌ಗಳು, ಒಟ್ಟಾರೆ ಈ ಎರಡೂ ಟೆಸ್ಟ್‌ನಲ್ಲಿ ಕೂಡ ಮೇಲುಗೈ ಸಾಧಿಸಿದರು. ವೇಗಿಗಳು ಕೇವಲ ಒಂದು ವಿಕೆಟ್ ಪಡೆಯದೆ ಹೋದದ್ದು ಕೂಡ ಗಮನೀಯವೇ.

ಇದನ್ನೂ ಓದಿ : ಕಾಂಗರೂ ವಿರುದ್ಧ ೪೮೧ ರನ್ ಗಳಿಸಿ ವಿಶ್ವದಾಖಲೆ ಬರೆದ ಇಂಗ್ಲೆಂಡ್

ವರ್ಣಭೇದ ನೀತಿಯಿಂದಾಗಿ ಐಸಿಸಿಯಿಂದ ನಿಷೇಧಕ್ಕೆ ಒಳಗಾಗಿ ಆ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ದಕ್ಷಿಣ ಆಫ್ರಿಕಾ, ಟೆಸ್ಟ್ ಇನ್ನಿಂಗ್ಸ್‌ ಒಂದರಲ್ಲಿ ೭೩ ರನ್‌ಗಳಿಗೆ ಸರ್ವಪತನ ಕಂಡದ್ದು ಇದೇ ಮೊದಲು. ಈ ಪಂದ್ಯದಲ್ಲಿ ಹೆರಾತ್ ೭೭ ರನ್‌ಗಳಿಗೆ ೫ ವಿಕೆಟ್ ಪಡೆದರೆ, ೭೮ ರನ್‌ ನೀಡಿದ ದಿಲ್ರುವಾನ್ ಪೆರೇರಾ ೧೦ ವಿಕೆಟ್ ಗಳಿಸಿದರು. ಇನ್ನು, ಕೊಲಂಬೋ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ ಸ್ಪಿನ್ ತ್ರಿವಳಿಗಳು ೩೪.೫ ಓವರ್‌ಗಳಲ್ಲಿ ೧೨೪ ರನ್‌ಗಳಿಗೆ ಹರಿಣಗಳನ್ನು ಕಟ್ಟಿಹಾಕಿದ್ದರು.

ಮೊದಲ ಇನ್ನಿಂಗ್ಸ್‌ನಲ್ಲಿ ರಂಗನಾ ಹೆರಾತ್ ೩೧ಕ್ಕೆ ೧ ವಿಕೆಟ್ ಪಡೆದರೆ, ದಿಲ್ರುವಾನ್ ಪೆರೇರಾ (೪೦ಕ್ಕೆ ೪) ಮತ್ತು ಅಕಿಲ ಧನಂಜಯ (೫೨ಕ್ಕೆ ೫) ಇನ್ನುಳಿದ ಒಂಬತ್ತು ವಿಕೆಟ್‌ಗಳನ್ನು ಹೆಕ್ಕಿದ್ದರು. ಅಂತೆಯೇ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ೪೯೦ ರನ್ ಗುರಿ ಬೆನ್ನಟ್ಟಿದ್ದ ದ.ಆಫ್ರಿಕಾ ೨೯೦ ರನ್‌ಗಳಿಗೆ ಆಲೌಟ್ ಆಗಿತ್ತು. ಹೆರಾತ್ ೯೮ಕ್ಕೆ ೬, ದಿಲ್ರುವಾನ್ ೯೦ಕ್ಕೆ ೨ ಮತ್ತು ಧನಂಜಯ ೬೭ ರನ್‌ಗಳಿಗೆ ೨ ವಿಕೆಟ್ ಗಳಿಸಿದ್ದರು.

ಮಹಾರಾಜ ಮಿಂಚು

ಲಂಕಾ-ಆಫ್ರಿಕನ್ ನಡುವಣದ ಈ ಎರಡು ಟೆಸ್ಟ್‌ ಸರಣಿಯ ಮತ್ತೊಂದು ವಿಶೇಷ ಕೇಶವ್ ಮಹಾರಾಜ್. ಪ್ರವಾಸಿ ತಂಡದ ಈ ಸ್ಪಿನ್ ಬೌಲರ್ ಕೊಲಂಬೋ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮನೋಜ್ಞ ಪ್ರದರ್ಶನ ನೀಡಿದ್ದರಲ್ಲದೆ, ೯ ವಿಕೆಟ್‌ಗಳನ್ನು ಗಳಿಸಿದ್ದರು. ಇನ್ನೊಂದು ವಿಕೆಟ್‌ನಿಂದ ಇನ್ನಿಂಗ್ಸ್ ಒಂದರಲ್ಲಿ ೧೦ ವಿಕೆಟ್‌ ಗಳಿಸಿದ ಅಪರೂಪದ ದಾಖಲೆ ಬರೆಯಲಿದ್ದರು. ೪೧.೧ ಓವರ್‌ಗಳಲ್ಲಿ ೧೨೯ ರನ್ ನೀಡಿದ್ದ ಕೇಶವ್, ೯ ವಿಕೆಟ್‌ಗಳೊಂದಿಗೆ ವಿಜೃಂಭಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More