ಶ್ರೀಲಂಕಾ ವಿರುದ್ಧ ಯುವ ಟೆಸ್ಟ್‌ನಲ್ಲಿ ಎರಡನೇ ಗರಿಷ್ಠ ರನ್ ದಾಖಲೆ ಬರೆದ ಪವನ್ ಶಾ 

ಶ್ರೀಲಂಕಾ ಪ್ರವಾಸದಲ್ಲಿರುವ ಹತ್ತೊಂಬತ್ತು ವರ್ಷದೊಳಗಿನವರ ಭಾರತ ತಂಡ ತನ್ನ ಆಕರ್ಷಕ ಆಟವನ್ನು ಮುಂದುವರೆಸಿದೆ. ಬುಧವಾರ (ಜುಲೈ ೨೫) ದ್ವಿಶತಕದ ದಾಖಲೆ ಬರೆದದ್ದಲ್ಲದೆ, ೩೩೨ ಎಸೆತಗಳಲ್ಲಿ ೨೮೨ ರನ್ ಗಳಿಸಿದ ಪವನ್, ೧೯ ವರ್ಷದೊಳಗಿನವರ ವಿಭಾಗದಲ್ಲಿ ಚರಿತ್ರೆಯ ಪುಟ ಸೇರಿದರು

ಮಹಾರಾಷ್ಟ್ರದ ಯುವ ಬ್ಯಾಟ್ಸ್‌ಮನ್ ಪವನ್ ಶಾ ಹತ್ತೊಂಬತ್ತು ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಎರಡನೇ ಸರ್ವಾಧಿಕ ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಹಂಬಾಂಟೋಟಾದಲ್ಲಿ ನಡೆಯುತ್ತಿರುವ ಹತ್ತೊಂಬತ್ತು ವರ್ಷದೊಳಗಿನ ಶ್ರೀಲಂಕಾ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಯುವ ಟೆಸ್ಟ್ ಪಂದ್ಯದ ಎರಡನೇ ದಿನದಂದು ಪವನ್ ದಾಖಲಿಸಿದ ದ್ವಿಶತಕದ ನೆರವಿನಿಂದ ಯುವ ಭಾರತ ೮ ವಿಕೆಟ್ ನಷ್ಟಕ್ಕೆ ೬೧೩ ರನ್ ಕಲೆಹಾಕಿದೆ.

ಪುಣೆ ಮೂಲದ ಹದಿನೆಂಟರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಪವನ್ ಶಾ ಔಟ್ ಆಗುತ್ತಲೇ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೇವಲ ೧೮ ರನ್‌ಗಳ ಅಂತರದಿಂದ ತ್ರಿಶತಕ ದಾಖಲೆಯಿಂದ ವಂಚಿತವಾದ ಪವನ್, ೩೩೨ ಎಸೆತಗಳಲ್ಲಿ ೩೩ ಬೌಂಡರಿ ಮತ್ತು ೧ ಸಿಕ್ಸರ್ ಸಿಡಿಸಿದರು. ಏಳು ತಾಸು ಕ್ರೀಸ್‌ನಲ್ಲಿದ್ದ ಪವನ್ ಬ್ಯಾಟಿಂಗ್‌ಗೆ ಲಂಕಾ ಬೌಲರ್‌ಗಳು ಪತರಗುಟ್ಟಿದರು.

ಅಂದಹಾಗೆ, ಪವನ್ ಕೊಂಚ ಎಚ್ಚರ ವಹಿಸಿದ್ದರೆ ಆಸ್ಟ್ರೇಲಿಯಾದ ಕ್ಲಿಂಟನ್ ಪೀಕ್ ಅವರ ದಾಖಲೆಯನ್ನು ಮುರಿಯಬಹುದಿತ್ತು. ೧೯೯೫ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಕ್ಲಿಂಟನ್ ಅಜೇಯ ೩೦೪ ರನ್ ಗಳಿಸಿದ್ದರು. ಆದಾಗ್ಯೂ, ಇನ್ನಿಂಗ್ಸ್‌ನ ೧೦೮ನೇ ಓವರ್‌ನಲ್ಲಿ ಎಡಗೈ ವೇಗಿ ವಿಚಿತ್ರ ಪೆರೆರಾ ಎಸೆದ ಆರು ಎಸೆತಗಳನ್ನೂ ಬೌಂಡರಿಗಟ್ಟಿದ ಪವನ್ ಬ್ಯಾಟಿಂಗ್ ಚೇತೋಹಾರಿಯಾಗಿತ್ತು. ಇದೇ ಓವರ್‌ನ ಮೊದಲ ಎಸೆತದಲ್ಲೇ ಪವನ್ ದ್ವಿಶತಕದ ದಾಖಲೆ ಬರೆದದ್ದು ವಿಶೇಷ.

ಇದನ್ನೂ ಓದಿ : ಯುವ ಟೆಸ್ಟ್ | ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್! 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್ ಒಂದರಲ್ಲಿ ಸತತ ಆರು ಬೌಂಡರಿ ಗಳಿಸಿದ ಮೊದಲ ಪ್ರಸಂಗ ೧೯೮೨ರಲ್ಲಿ ಜರುಗಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಬ್ ವಿಲಿಸ್ ಬೌಲಿಂಗ್‌ನಲ್ಲಿ ಸಂದೀಪ್ ಪಾಟೀಲ್ ಈ ಸಾಧನೆ ಮೆರೆದಿದ್ದರು. ಈ ಓವರ್‌ನ ಮತ್ತೊಂದು ವಿಶೇಷವೆಂದರೆ, ವಿಲ್ಲಿಸ್ ಒಂದು ನೋಬಾಲ್ ಸೇರಿದ ಏಳು ಎಸೆತಗಳನ್ನು ಎಸೆದಿದ್ದರು.

ಪವನ್, ಎರಡನೇ ವಿಕೆಟ್‌ಗೆ ಅಥರ್ವ ಟೈಡ್ (೧೭೭) ಜತೆಗೆ ೨೬೩ ರನ್ ಕಲೆಹಾಕಿದ್ದಲ್ಲದೆ, ನಿಖಿಲ್ ವಢೇರಾ (೬೪) ಜತೆಗೆ ೧೬೭ ರನ್ ಜತೆಯಾಟವಾಡಿದರು. ಅಂದಹಾಗೆ, ಅಥರ್ವ ಮೊದಲ ಯುವ ಟೆಸ್ಟ್‌ನಲ್ಲಿಯೂ ಶತಕ ಬಾರಿಸಿದ್ದರು. ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಶ್ರೀಲಂಕಾ ೪ ವಿಕೆಟ್ ನಷ್ಟಕ್ಕೆ ೧೪೦ ರನ್ ಗಳಿಸಿದೆ. ಎಡಗೈ ವೇಗಿ ಮೋಹಿತ್ ಜಂಗ್ರಾ ೪೩ ರನ್‌ಗಳಿಗೆ ೩ ವಿಕೆಟ್ ಎಗರಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ-೧೯ ಮೊದಲ ಇನ್ನಿಂಗ್ಸ್: ೬೧೩/೮ (ಡಿಕ್ಲೇರ್) (ಪವನ್ ಶಾ ೨೮೨, ಅಥರ್ವ ಟೈಡ್ ೧೭೭, ನಿಖಿಲ್ ವಢೇರಾ ೬೪); ಶ್ರೀಲಂಕಾ ಮೊದಲ ಇನ್ನಿಂಗ್ಸ್: ೪೯ ಓವರ್‌ಗಳಲ್ಲಿ ೧೪೦/೪ (ಮೋಹಿತ್ ಜಂಗ್ರಾ ೪೩ಕ್ಕೆ ೩)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More