ಯುಎಸ್ ಓಪನ್‌ಗೆ ಸೂಕ್ತ ತಯಾರಿ ನಡೆಸಲು ಅಣಿಯಾದ ಸೆರೆನಾ ವಿಲಿಯಮ್ಸ್

ವಿಶ್ವದ ಮಾಜಿ ನಂ ೧ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮೆರಿಕನ್ ಓಪನ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಕೃಷ್ಣಸುಂದರಿ ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಗೆಲ್ಲುವ ಗುರಿ ಹೊತ್ತಿದ್ದಾರೆ

೨೪ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಕೇವಲ ಒಂದೇ ಒಂದು ಪಂದ್ಯದಲ್ಲಿ ಕೈಚೆಲ್ಲಿದ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಗೆಲ್ಲಲು ಕಾರ್ಯ ಯೋಜನೆ ಹಾಕಿಕೊಂಡಿದ್ದಾರೆ. ಈ ಪಂದ್ಯಾವಳಿಗೂ ಮುನ್ನ ಎರಡು ಪ್ರಮುಖ ಟೂರ್ನಿಗಳಲ್ಲಿ ಆಡಲು ಸೆರೆನಾ ನಿರ್ಧರಿಸಿದ್ದಾರೆ.

ಮುಂದಿನ ತಿಂಗಳು ಮಾಂಟ್ರಿಯಲ್‌ನಲ್ಲಿ ನಡೆಯಲಿರುವ ರೋಜರ್ ಕಪ್ ಮತ್ತು ಮುಂದಿನ ವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಶುರುವಾಗಲಿರುವ ಮುಬಡಾಲ ಸಿಲಿಕಾನ್ ವ್ಯಾಲಿ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಆಡುವುದಾಗಿ ಖಚಿತಪಡಿಸಿದ್ದಾರೆ. ಸ್ಯಾನ್ ಜೋಸ್‌ನಲ್ಲಿನ ಪಂದ್ಯಾವಳಿಯು ಜುಲೈ ೩೦ರಿಂದ ಆಗಸ್ಟ್ ೫ರವರೆಗೆ ಜರುಗಲಿದೆ.

ಇನ್ನು, ರೋಜರ್ ಕಪ್ ಪಂದ್ಯಾವಳಿಯು ಆಗಸ್ಟ್ ೩ರಿಂದ ಆರಂಭವಾಗಲಿದ್ದು, ಈ ಪಂದ್ಯಾವಳಿಯಲ್ಲಿ ಸೆರೆನಾ ವೈಲ್ಡ್ ಕಾರ್ಡ್‌ನಡಿ ಸ್ಪರ್ಧೆಗೆ ಇಳಿಯಲಿದ್ದಾರೆ. ವಿಂಬಲ್ಡನ್ ಪಂದ್ಯಾವಳಿಯಲ್ಲಿ ೧೮೧ನೇ ಶ್ರೇಯಾಂಕ ಪಡೆದಿದ್ದ ಸೆರೆನಾ, ಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ಒಮ್ಮೆಲೇ ೨೮ನೇ ಶ್ರೇಯಾಂಕಕ್ಕೆ ಜಿಗಿದಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ವಿಂಬಲ್ಡನ್ ಸೇರಿದಂತೆ ೩೬ರ ಹರೆಯದ ಸೆರೆನಾ, ನಾಲ್ಕು ಟೂರ್ನಿಗಳಲ್ಲಿ ಆಡಿದ್ದಾರೆ.

ಇದನ್ನೂ ಓದಿ : ಸೆರೆನಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುದ್ದಿಟ್ಟ ಏಂಜಲಿಕ್ ಕೆರ್ಬರ್

ಅಂದಹಾಗೆ, ರೋಜರ್ ಕಪ್ ಪಂದ್ಯಾವಳಿಯು ವರ್ಷದ ಕಟ್ಟಕಡೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್‌ಗೆ ಪೂರ್ವ ತಾಲೀಮಾಗಿದೆ. ಟೊರಾಂಟೋದಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಸೆರೆನಾ, ಕಡೆಯ ಬಾರಿಗೆ ಇಲ್ಲಿ ಆಡಿದ್ದು ೨೦೧೪ರಲ್ಲಿ. ಸರಿಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ರೋಜರ್ಸ್ ಕಪ್ ಟೂರ್ನಿಯಲ್ಲಿ ಸೆರೆನಾ ಆಡುತ್ತಿದ್ದಾರೆ.

ವಿಂಬಲ್ಡನ್ ಫೈನಲ್‌ನಲ್ಲಿ ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ವಿರುದ್ಧ ಸೋಲನುಭವಿಸಿದ ಸೆರೆನಾ, ರನ್ನರ್‌ಅಪ್ ಸ್ಥಾನಕ್ಕೆ ತೃಪ್ತರಾಗಿದ್ದರು. ಆದರೆ, ಟೂರ್ನಿಯಲ್ಲಿ ಫೈನಲ್ ತಲುಪುವುದರೊಂದಿಗೆ ಗ್ರಾಂಡ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ಮಿಕ್ಕ ಆಟಗಾರ್ತಿಯರಂತೆ ಸರಿಸಾಟಿ ಪ್ರದರ್ಶನ ನೀಡಬಲ್ಲೆ ಎಂಬುದನ್ನು ಸೆರೆನಾ ನಿರೂಪಿಸಿದ್ದರು. ಒಂದೊಮ್ಮೆ ಸೆರೆನಾ, ಯುಎಸ್ ಓಪನ್ ಜಯಿಸಿದ್ದೇ ಆದಲ್ಲಿ, ಈ ಋತುವಿನಲ್ಲೇ ಮಹಿಳಾ ಗ್ರಾಂಡ್‌ಸ್ಲಾಮ್ ವಿಜೇತರಲ್ಲೇ ಅತಿಹೆಚ್ಚು ಪ್ರಶಸ್ತಿ ಜಯಿಸಿದ ಮಾರ್ಗರೆಟ್ ಕೋರ್ಟ್ (೨೪) ಸಾಧನೆಯನ್ನು ಸರಿಗಟ್ಟಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More