ಐರ್ಲೆಂಡ್ ಹಣಿದು ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ರಾಣಿ ಬಳಗ

ಪ್ರತಿಷ್ಠಿತ ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ೧-೧ ಗೋಲಿನ ಡ್ರಾ ಸಾಧಿಸಿದ ಭಾರತ ತಂಡ ಗುರುವಾರ (ಜುಲೈ ೨೬) ಎರಡನೇ ಪಂದ್ಯಕ್ಕೆ ಅಣಿಯಾಗಿದೆ. ಐರ್ಲೆಂಡ್ ವಿರುದ್ಧದ ಈ ಪಂದ್ಯವನ್ನು ಗೆದ್ದು ಪೂರ್ಣ ಪಾಯಿಂಟ್ಸ್ ಗಳಿಸುವ ಗುರಿ ಹೊತ್ತಿದೆ 

ಮೊಟ್ಟಮೊದಲ ವಿಶ್ವಕಪ್ ಎತ್ತಿಹಿಡಿಯುವ ತುಡಿತದಲ್ಲಿರುವ ಭಾರತ ವನಿತಾ ತಂಡ, ಲಂಡನ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆಯಲು ಸಜ್ಜಾಗಿದೆ. ಬಿ ಗುಂಪಿನಲ್ಲಿರುವ ರಾಣಿ ರಾಂಪಾಲ್ ಸಾರಥ್ಯದ ಭಾರತ ವನಿತಾ ಹಾಕಿ ತಂಡ, ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಬೃಹತ್ ಗೆಲುವಿನ ಗುರಿ ಹೊತ್ತಿದೆ.

ಲಂಡನ್‌ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ವನಿತಾ ತಂಡ, ಇಂಗ್ಲೆಂಡ್ ಎದುರು ೧-೧ ಗೋಲಿನ ಡ್ರಾ ಸಾಧಿಸಿತ್ತು. ನೇಹಾ ಗೋಯೆಲ್ ಬಾರಿಸಿದ ಗೋಲಿನಲ್ಲಿ ಮುನ್ನಡೆ ಸಾಧಿಸಿದ ಹೊರತಾಗಿಯೂ, ತದನಂತರದಲ್ಲಿ ಕೊಂಚ ಮೈಮರೆತಿತ್ತು.

ಪಂದ್ಯದ ಕಡೇ ಕ್ವಾರ್ಟರ್‌ನಲ್ಲಿ ಅಂದರೆ, ೫೪ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಲಿಲಿ ಓವ್ಸ್ಲೆ ದಾಖಲಿಸಿದ ಏಕೈಕ ಗೋಲು ಭಾರತೀಯರ ಕೈಯಿಂದ ಆತಿಥೇಯರ ಸೋಲನ್ನು ತಪ್ಪಿಸಿತ್ತು. ಏತನ್ಮಧ್ಯೆ, ವಿಶ್ವದ ಹದಿನಾರನೇ ಶ್ರೇಯಾಂಕಿತ ಐರ್ಲೆಂಡ್ ಅನ್ನು ರಾಣಿ ಪಡೆ ಸುಲಭವಾಗಿ ಎಣಿಸುವಂತಿಲ್ಲ. ಮೊದಲ ಪಂದ್ಯದಲ್ಲೇ ಆದು ವಿಶ್ವದ ಏಳನೇ ಶ್ರೇಯಾಂಕಿತ ಅಮೆರಿಕವನ್ನು ೩-೧ ಗೋಲುಗಳಿಂದ ಹಣಿದಿದೆ.

ಇದನ್ನೂ ಓದಿ : ವನಿತಾ ವಿಶ್ವಕಪ್ ಹಾಕಿ | ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ ರಾಣಿ ಬಳಗ

ಬಿ ಗುಂಪಿನಲ್ಲಿ ೩ ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಐರ್ಲೆಂಡ್ ಸತತ ಎರಡನೇ ಗೆಲುವಿನ ಲೆಕ್ಕಾಚಾರದಲ್ಲಿದೆ. ಆದರೆ, ಭಾರತದಿಂದ ಪ್ರಬಲ ಪೈಪೋಟಿ ಎದುರಿಸುವ ಸಾಧ್ಯತೆಯೂ ಇರುವುದರಿಂದ ಐರ್ಲೆಂಡ್ ವನಿತೆಯರು ಸಕಲ ರೀತಿಯಲ್ಲಿಯೂ ಅಣಿಯಾಗಿದ್ದಾರೆ. ಒಂದೊಮ್ಮೆ ಈ ಪಂದ್ಯದಲ್ಲಿ ಭಾರತ ವನಿತೆಯರು ಏನಾದರೂ ಗೆಲುವು ಸಾಧಿಸಿದರೆ, ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ.

“ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾವು ಗೆಲುವು ಸಾಧಿಸಲು ವಿಫಲವಾದರೂ, ಪಂದ್ಯ ಅತ್ಯಂತ ಸಮತೋಲಿತವಾಗಿತ್ತು. ಕಡೇ ಕ್ವಾರ್ಟರ್‌ನಲ್ಲಿ ನಾವು ಲಿಲಿ ಗೋಲು ಗಳಿಸಲು ಅವಕಾಶ ಬಿಟ್ಟುಕೊಟ್ಟೆವು ಎಂಬುದನ್ನು ಹೊರತುಪಡಿಸಿದರೆ, ನಮ್ಮ ಆಟ ತೃಪ್ತಿದಾಯಕವಾಗಿತ್ತು. ವಿಶ್ವಕಪ್‌ನಂಥ ಮಹತ್ವಪೂರ್ಣ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತ್ಮವಿಶ್ವಾಸದ ಹೋರಾಟ ಮುಂದಿನ ಪಂದ್ಯಗಳಿಗೆ ಸ್ಫೂರ್ತಿಯಾಗಿದೆ,’’ ಎಂದು ರಾಣಿ ರಾಂಪಾಲ್ ಅಭಿಪ್ರಾಯಿಸಿದ್ದಾರೆ.

“ಇಡೀ ತಂಡ ಹಾಗೂ ಬೆಂಬಲಿತ ಸಿಬ್ಬಂದಿ ಮೊದಲ ಪಂದ್ಯದಲ್ಲಿನ ಪ್ರದರ್ಶನದ ಕುರಿತು ಪರಾಮರ್ಶೆ ನಡೆಸಿದೆ. ಕೊನೇ ಹಂತದಲ್ಲಿ ಗೋಲು ಬಿಟ್ಟುಕೊಟ್ಟದ್ದರ ಕುರಿತೂ ಚರ್ಚೆ ನಡೆದಿದೆ. ಇಂಗ್ಲೆಂಡ್ ವಿರುದ್ಧ ನಾವು ನೀಡಿದ ಪ್ರದರ್ಶನಕ್ಕಿಂತಲೂ ಶ್ರೇಷ್ಠ ಪ್ರದರ್ಶನ ನೀಡಲು ನಾವು ಶಕ್ತರಿದ್ದೇವೆ ಎಂಬುದು ಮನವರಿಕೆಯಾಗಿದೆ. ಒಟ್ಟಾರೆ ಪಂದ್ಯದಿಂದ ಪಂದ್ಯಕ್ಕೆ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸವಿದೆ,’’ ಎಂತಲೂ ರಾಣಿ ಹೇಳಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More