ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನೊಂದಿಗೆ ಐತಿಹಾಸಿಕ ದಾಖಲೆಗೆ ಸಜ್ಜಾದ ಇಂಗ್ಲೆಂಡ್

ಜಗತ್ತಿಗೆ ಕ್ರಿಕೆಟ್ ಕಲಿಸಿದ ಕ್ರಿಕೆಟ್ ಜನಕ ನಾಡು ಇಂಗ್ಲೆಂಡ್, ಮತ್ತೊಂದು ಮಹತ್ವಪೂರ್ಣ ದಾಖಲೆ ಬರೆಯಲು ಸಜ್ಜಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರದಿಂದ (ಆ.೧) ಆರಂಭವಾಗಲಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಮೂಲಕ ಇಂಗ್ಲೆಂಡ್‌, ಒಂದು ಸಾವಿರ ಟೆಸ್ಟ್ ಆಡಿದ ತಂಡವಾಗಲಿದೆ

ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಘಳಿಗೆ ಸನ್ನಿಹಿತವಾಗಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬ್ಯಾಸ್ಟನ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣದ ಟೆಸ್ಟ್ ಪಂದ್ಯವು ಆಂಗ್ಲರ ಪಾಲಿಗೆ ಸಹಸ್ರ ಟೆಸ್ಟ್ ಪಂದ್ಯವಾಗಿದ್ದು, ಈ ಸಾಧನೆ ಮೆರೆಯಲಿರುವ ಜಗತ್ತಿನ ಮೊದಲ ತಂಡವೆನಿಸಿಕೊಂಡಿದೆ.

ಪ್ರಸಕ್ತ ೯೯೯ ಟೆಸ್ಟ್ ಪಂದ್ಯಗಳನ್ನಾಡಿರುವ ಇಂಗ್ಲೆಂಡ್, ಒಂದು ಸಹಸ್ರ ಪಂದ್ಯದ ಸಾಧನೆಗೆ ಬರೋಬ್ಬರಿ ೧೪೧ ವರ್ಷಗಳನ್ನು ತೆಗೆದುಕೊಂಡಿದೆ. ಪ್ರಸಕ್ತ ಇಂಗ್ಲೆಂಡ್ ತಂಡವನ್ನು ಜೋ ರೂಟ್ ಮುನ್ನಡೆಸುತ್ತಿದ್ದು, ಒಂದು ಸಹಸ್ರ ಟೆಸ್ಟ್‌ನ ಸಾರಥ್ಯ ಹೊತ್ತುಕೊಳ್ಳುವ ಭಾಗ್ಯ ಲಭಿಸಿದೆ.

ಅಂದಹಾಗೆ, ೧೮೭೭ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಉದ್ಘಾಟನಾ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಮೊದಲು ಸೆಣಸಿದ ಇಂಗ್ಲೆಂಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದ ಇತಿಹಾಸ ಹೊಂದಿದೆ. ಹಲವಾರು ಮಹತ್ವಪೂರ್ಣ ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್ ಪಾಲಿಗೆ ಅತಿ ಮಹತ್ವದ್ದು ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಪಂದ್ಯ.

ಇಂಗ್ಲೆಂಡ್ ಬಳಿಕ ಆಸೀಸ್

ಪ್ರತಿಷ್ಠಿತ ಆ್ಯಶಸ್ ಜತೆಗೆ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (ಬಲ) ಮತ್ತು ಜೋ ರೂಟ್

ಇಂಗ್ಲೆಂಡ್ ನಂತರದಲ್ಲಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಸಾಲಿನಲ್ಲಿರುವುದು ಆಸ್ಟ್ರೇಲಿಯಾ (೮೧೨). ನಂತರದ ಸ್ಥಾನ ವೆಸ್ಟ್‌ಇಂಡೀಸ್ (೫೩೫) ಮತ್ತು ಭಾರತದ್ದು (೫೨೨). ಈ ನಾಲ್ಕು ರಾಷ್ಟ್ರಗಳು ಕ್ರಿಕೆಟ್‌ ಜಗತ್ತಿಗೆ ಅದರಲ್ಲೂ ಟೆಸ್ಟ್ ಪ್ರಕಾರದಲ್ಲಿ ಅವಿಚ್ಛಿನ್ನ ದಾಖಲೆಗಳನ್ನು ಬರೆದಿವೆ. ಇನ್ನು, ಇದುವರೆಗಿನ ೯೯೯ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ೩೫೭ರಲ್ಲಿ ಗೆಲುವು ಸಾಧಿಸಿದರೆ, ೨೯೭ ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಸ್ವಾರಸ್ಯಕರ ಸಂಗತಿ ಎಂದರೆ ಇಂಗ್ಲೆಂಡ್‌ಗಿಂತಲೂ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡವಾಗಿ ಕಾಂಗರೂ ದಾಖಲೆ ಬರೆದಿದೆ. ಆಸ್ಟ್ರೇಲಿಯಾ ಇದುವರೆಗೆ ೩೮೩ ಟೆಸ್ಟ್ ಪಂದ್ಯಗಳನ್ನಾಡಿದ್ದರೆ, ೨೧೯ ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ನಂತರದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ಕೂಡಾ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿವೆ. ಆ್ಯಶಸ್

ಕುಕ್ ದಾಖಲೆ

ಇಂಗ್ಲೆಂಡ್ ಪರ ಗರಿಷ್ಠ ರನ್ ಗಳಿಸಿರುವ ಮಾಜಿ ನಾಯಕ ಅಲೆಸ್ಟೈರ್ ಕುಕ್
ಇದನ್ನೂ ಓದಿ : ಮಹತ್ವದ ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯಕ್ಕೆ ಶುರುವಾಗಿದೆ ಆಯ್ಕೆ ಕಸರತ್ತು

ಇಂಗ್ಲೆಂಡ್‌ನ ಚಾರಿತ್ರಿಕ ಗೆಲುವಿನಲ್ಲಿ ಹಾಗೂ ಒಂದು ಸಹಸ್ರ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿರುವ ಆಂಗ್ಲರ ಟೆಸ್ಟ್ ವೈಭವದಲ್ಲಿ ಮಾಜಿ ನಾಯಕ ಅಲೆಸ್ಟೈರ್ ಕುಕ್ ಗಮನಾರ್ಹ ಕೊಡುಗೆ ನೀಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕುಕ್, ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ೧೦ ಸಹಸ್ರ ರನ್ ಗಡಿ ದಾಟಿದ ಮೊದಲ ಆಟಗಾರ ಎನಿಸಿದ್ದಾರೆ. ಪ್ರಸಕ್ತ ೧೨,೧೪೫ ರನ್ ಕಲೆಹಾಕಿರುವ ಕುಕ್, ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಗ್ರಹಾಂ ಗೂಚ್ ಅವರಿಗಿಂತ ೩೨೪೫ ರನ್ ಮುನ್ನಡೆ ಸಾಧಿಸಿದ್ದಾರೆ.

ಇನ್ನು, ಇಂಗ್ಲೆಂಡ್ ಪರ ಅತಿಹೆಚ್ಚು ಟೆಸ್ಟ್ ರನ್ ಗಳಿಸಿದವರ ಪೈಕಿ ಈಗಲೂ ಆಂಗ್ಲ ತಂಡದಲ್ಲಿ ಆಡುತ್ತಿರುವುದು ಕುಕ್ ಮಾತ್ರವೇ. ಅಲೆಕ್ ಸ್ಟೀವರ್ಟ್, ಡೇವಿಡ್ ಗೋವರ್, ಕೆವಿನ್ ಪೀಟರ್ಸನ್, ಜೆಫ್ರಿ ಬಾಯ್ಕಾಟ್ ಮುಂತಾದವರು ೮ ಸಹಸ್ರ ರನ್ ಗಳಿಸಿ ಗಮನ ಸೆಳೆದಿದ್ದಾರೆ.

ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ರನ್ ಗಳಿಸಿದವರು

 • ಅಲೆಸ್ಟೈರ್ ಕುಕ್ | ರನ್: ೧೨,೧೪೫; ಪಂದ್ಯ: ೧೫೬
 • ಗ್ರಹಾಮ್ ಗೂಚ್ | ರನ್: ೮೯೦೦ | ಪಂದ್ಯ: ೧೧೮
 • ಅಲೆಕ್ ಸ್ಟೀವರ್ಟ್ | ರನ್: ೮೪೬೩ | ಪಂದ್ಯ: ೧೩೩
 • ಡೇವಿಡ್ ಗೋವರ್ | ರನ್: ೮೨೩೧ | ಪಂದ್ಯ: ೧೧೭
 • ಕೆವಿನ್ ಪೀಟರ್ಸನ್ | ರನ್: ೮೧೮೧ | ಪಂದ್ಯ: ೧೦೪
 • ಜೆಫ್ರಿ ಬಾಯ್ಕಾಟ್ | ರನ್: ೮೧೧೪ | ಪಂದ್ಯ: ೧೦೮
 • ಮೈಕ್ ಅಥರ್ಟನ್ | ರನ್: ೭೭೨೮ | ಪಂದ್ಯ: ೧೧೫
 • ಇಯಾನ್ ಬೆಲ್ | ರನ್: ೭೭೨೭ | ಪಂದ್ಯ: ೧೧೮
 • ಕಾಲಿನ್ ಕೌಡ್ರೆ | ರನ್: ೭೬೨೪ | ಪಂದ್ಯ: ೧೧೪
 • ವಾಲಿ ಹಮ್ಮಂಡ್ | ೭೨೪೯ | ಪಂದ್ಯ: ೮೫

ಆ್ಯಂಡರ್ಸನ್ ನಂ. ೧

ಇಂಗ್ಲೆಂಡ್‌ನ ವೇಗದ ಜುಗಲ್‌ಬಂದಿ ಜೇಮ್ಸ್ ಆ್ಯಂಡರ್ಸನ್ (ಬಲ) ಜತೆಗೆ ಸ್ಟುವರ್ಟ್ ಬ್ರಾಡ್

ಜಗತ್ತಿನ ಪ್ರಬಲ ಸ್ವಿಂಗ್ ಮಾಂತ್ರಿಕರಲ್ಲಿ ಒಬ್ಬರಾದ ಜೇಮ್ಸ್ ಆ್ಯಂಡರ್ಸನ್ ೧೩೮ ಪಂದ್ಯಗಳಲ್ಲಿ ೫೪೦ ವಿಕೆಟ್ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆ ಈ ವೇಗಿಯ ಹೆಸರಿನಲ್ಲಿದೆ. ಇನ್ನು, ಅವರೊಂದಿಗೆ ಹೊಸ ಚೆಂಡನ್ನು ಹಂಚಿಕೊಳ್ಳುವ ಸ್ಟುವರ್ಟ್ ಬ್ರಾಡ್ ೪೧೭ ವಿಕೆಟ್ ಗಳಿಸಿ ಇಂಗ್ಲೆಂಡ್ ಪರ ಸಾರ್ವಕಾಲಿಕ ಗರಿಷ್ಠ ವಿಕೆಟ್‌ಧಾರಿಗಳಲ್ಲಿ ಎರಡನೆಯವರೆನಿಸಿದ್ದಾರೆ.

ಇನ್ನು, ಇಯಾನ್ ಬಾಥಮ್, ಫ್ರೆಡ್ ಟ್ರೂಮನ್ ಸಾರ್ವಕಾಲಿಕ ಗರಿಷ್ಠ ಇಂಗ್ಲೆಂಡ್ ವಿಕೆಟ್‌ಧಾರಿಗಳ ಪಟ್ಟಿಯಲ್ಲಿರುವ ಅಗ್ರ ಐವರು ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಡರೆಕ್ ಅಂಡರ್‌ವುಡ್ ಹಾಗೂ ಎಡಗೈ ಸ್ಪಿನ್ನರ್ ಗ್ರೇಮ್ ಸ್ವಾನ್ ಕೂಡಾ ಇಂಗ್ಲೆಂಡ್ ಕಂಡ ಪ್ರತಿಭಾನ್ವಿತ ಬೌಲರ್‌ಗಳು.

ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳು

 • ಜೇಮ್ಸ್ ಆ್ಯಂಡರ್ಸನ್ | ವಿಕೆಟ್: ೫೪೦ | ಪಂದ್ಯ: ೧೩೮
 • ಸ್ಟುವರ್ಟ್ ಬ್ರಾಡ್ | ವಿಕೆಟ್: ೪೧೭ | ಪಂದ್ಯ: ೧೧೮
 • ಇಯಾನ್ ಬಾಥಮ್ | ವಿಕೆಟ್: ೩೮೩ | ಪಂದ್ಯ: ೧೦೨
 • ಬಾಬ್ ವಿಲ್ಲಿಸ್ | ವಿಕೆಟ್: ೩೨೫ | ಪಂದ್ಯ: ೯೦
 • ಫ್ರೆಡ್ ಟ್ರೂಮನ್ | ವಿಕೆಟ್: ೩೦೭ | ಪಂದ್ಯ: ೬೭
 • ಡೆರೆಕ್ ಅಂಡರ್ ವುಡ್ | ವಿಕೆಟ್: ೨೯೭ | ಪಂದ್ಯ: ೮೬
 • ಗ್ರೇಮ್ ಸ್ವಾನ್ | ವಿಕೆಟ್: ೨೫೫ | ಪಂದ್ಯ: ೬೦
 • ಬ್ರಿಯಾನ್ ಸ್ಟಾಥಮ್ | ವಿಕೆಟ್: ೨೫೨ | ಪಂದ್ಯ: ೭೦
 • ಮ್ಯಾಥ್ಯೂ ಹೊಗಾರ್ಡ್ | ವಿಕೆಟ್: ೨೪೮ | ಪಂದ್ಯ: ೬೭
 • ಅಲೆಕ್ ಬೆಡ್ಸರ್ | ವಿಕೆಟ್: ೨೩೬ | ಪಂದ್ಯ: ೫೧
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More