ಅಮೆರಿಕ ವಿರುದ್ಧವೂ ಪ್ರಮಾದ ಎಸಗಿದ ಇಂಡಿಯಾಗೆ ಪ್ಲೇಆಫ್‌ನಲ್ಲಿ ಇಟಲಿ ಪರೀಕ್ಷೆ

ಪ್ರತಿಷ್ಠಿತ ವಿಶ್ವಕಪ್ ವನಿತಾ ಹಾಕಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಲು ವಿಫಲವಾಗಿರುವ ರಾಣಿ ರಾಂಪಾಲ್ ಸಾರಥ್ಯದ ಭಾರತ ತಂಡ ಪ್ಲೇಆಫ್ ತಲುಪಿದೆ. ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಲು ಮಂಗಳವಾರ (ಜು.೩೧) ಇಟಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ

ಮಹತ್ವಪೂರ್ಣ ಪಂದ್ಯದಲ್ಲಿ ಅಮೆರಿಕ ವಿರುದ್ಧ ೧-೧ ಗೋಲಿನ ಡ್ರಾ ಸಾಧಿಸಿದ ಭಾರತ ವನಿತಾ ಹಾಕಿ ತಂಡ ಪ್ರತಿಷ್ಠಿತ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ನಾಕೌಟ್ ಹಂತ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ, ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಅದು ಒಂದರಲ್ಲೂ ಗೆಲುವು ಸಾಧಿಸದೆ ನಾಕೌಟ್ ಪ್ರವೇಶಿಸಿರುವುದು ಅದರ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಿದೆ.

ರಾಣಿ ರಾಂಪಾಲ್ ಪಂದ್ಯದ ೩೧ನೇ ನಿಮಿಷದಲ್ಲಿ ಬಾರಿಸಿದ ಪೆನಾಲ್ಟಿ ಗೋಲು ಟೂರ್ನಿಯಲ್ಲಿ ಭಾರತದ ಹೋರಾಟವನ್ನು ಇನ್ನೂ ಜೀವಂತವಾಗಿಟ್ಟಿದೆ. ಇದೀಗ ಇಟಲಿ ಎದುರು ನಡೆಯಲಿರುವ ಪ್ಲೇಆಫ್ ಪಂದ್ಯವು ರಾಣಿ ಪಡೆಗೆ ಮತ್ತೊಂದು ಅಗ್ನಿಪರೀಕ್ಷೆ ಆಗಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ಮುಂದಿನ ಹಾದಿ ಸುಗಮವಾಗಲಿದೆ. ಇಲ್ಲದೆ ಹೋದರೆ, ರಾಣಿ ಬಳಗ ಮತ್ತೊಮ್ಮೆ ವಿಶ್ವಕಪ್ ಹಾಕಿಯಲ್ಲಿ ಪದಕವಂಚಿತವಾಗಿ ನಿರಾಸೆ ಅನುಭವಿಸಲಿದೆ.

ಇನ್ನು, ಬಿ ಗುಂಪಿನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ೧-೧ ಗೋಲಿನ ಡ್ರಾ ಸಾಧಿಸಿದ್ದ ಭಾರತ ತಂಡ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ೦-೧ ಗೋಲಿನಲ್ಲಿ ಸೋಲನುಭವಿಸಿತ್ತು. ಹೀಗಾಗಿ, ನಾಕೌಟ್ ತಲುಪಲು ಅಮೆರಿಕ ವಿರುದ್ಧದ ಪಂದ್ಯವನ್ನು ಗೆಲ್ಲಲಾಗದೆ ಹೋದರೂ, ಕನಿಷ್ಠ ಡ್ರಾ ಸಾಧಿಸುವುದಂತೂ ಕಡ್ಡಾಯವಾಗಿತ್ತು. ಒಟ್ಟಾರೆ, ಅಮೆರಿಕ ಒಡ್ಡಿದ ಪರೀಕ್ಷೆಯಲ್ಲಿ ರಾಣಿ ಬಳಗ ಸದ್ಯ ತೇರ್ಗಡೆಯಾಗಿದೆ.

ಇದನ್ನೂ ಓದಿ : ವನಿತಾ ವಿಶ್ವಕಪ್ ಹಾಕಿ | ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾದ ರಾಣಿ ಬಳಗ

ಎಚ್ಚೆತ್ತುಕೊಳ್ಳದ ರಾಣಿ ಪಡೆ

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಎಸಗಿದ್ದ ಅದೇ ತಪ್ಪುಗಳನ್ನು ರಾಣಿ ಪಡೆ ಅಮೆರಿಕ ವಿರುದ್ಧದ ಪಂದ್ಯದಲ್ಲಿಯೂ ಎಸಗಿತು. ಪಂದ್ಯದ ಮೊದಲಾರ್ಧಕ್ಕೆ ಮುನ್ನವೇ ತನಗೆ ಸಿಕ್ಕ ನಾಲ್ಕು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಭಾರತ ಕೈಚೆಲ್ಲಿತು. ೩೧ನೇ ನಿಮಿಷದಲ್ಲಿ ರಾಣಿ ಬಾರಿಸಿದ ಐದನೇ ಪೆನಾಲ್ಟಿ ಗೋಲು ಭಾರತದ ಕೈಹಿಡಿಯಿತು.

ಇದಕ್ಕೂ ಮುನ್ನ ಅಮೆರಿಕ ಪರ ಮ್ಯಾರ್ಗಕ್ಸ್ ಪಾಲಿನೊ ೧೧ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲಿನೊಂದಿಗೆ ತಂಡಕ್ಕೆ ೧-೦ ಮುನ್ನಡೆ ದೊರಕಿಸಿಕೊಟ್ಟಿದ್ದರು. ಆದರೆ, ರಾಣಿಯ ಪೆನಾಲ್ಟಿ ಗೋಲು ಅಮೆರಿಕ ವಿರುದ್ಧ ಸಮಬಲ ಸಾಧಿಸಲು ನೆರವಾಯಿತು. ಎರಡನೇ ಕ್ವಾರ್ಟರ್‌ನಲ್ಲಿ ರಾಣಿ ಬಾರಿಸಿದ ಮೊದಲ ಪೆನಾಲ್ಟಿ ಗೋಲನ್ನು ಅಮೆರಿಕ ಗೋಲ್‌ಕೀಪರ್ ಬ್ರಿಗ್ಸ್ ತಡೆದು ತಂಡವನ್ನು ರಕ್ಷಿಸಿದರು.

“ಎರಡೂ ತಂಡಗಳು ಸಮಬಲ ಪೈಪೋಟಿ ನಡೆಸಿದವು. ಆದರೆ, ಕಡೆಯ ಕ್ವಾರ್ಟರ್‌ನಲ್ಲಿ ನಮ್ಮ ಡಿಫೆನ್ಸ್ ಪಾಳೆಯ ಅತ್ಯದ್ಭುತವಾಗಿ ಕಾದಾಡಿತು. ಅಮೆರಿಕ ಈ ಹಂತದಲ್ಲಿ ಗೆಲುವು ಸಾಧಿಸಲು ಕೆಲವೊಂದು ಅವಕಾಶಗಳನ್ನು ಸೃಷ್ಟಿಸಿಕೊಂಡಿತಾದರೂ, ನಮ್ಮ ಡಿಫೆನ್ಸ್ ಅತ್ಯಂತ ಬಲಿಷ್ಠವಾಗಿದ್ದರಿಂದ ಅಮೆರಿಕ ಹವಣಿಕೆಯನ್ನು ಹೊಸಕಿಹಾಕಲು ನೆರವಾಯಿತು. ಆದಾಗ್ಯೂ, ನಾವು ಪಂದ್ಯವನ್ನು ೩-೨ರಿಂದ ಗೆಲ್ಲಬಹುದಿತ್ತು. ಸದ್ಯ, ನಮ್ಮ ಗಮನ ಮುಂದಿನ ಇಟಲಿ ವಿರುದ್ಧದ ಪಂದ್ಯದತ್ತ ನಾಟಿದೆ,’’ ಎಂದು ಟೂರ್ನಿಯಲ್ಲಿನ ಮತ್ತೊಂದು ಡ್ರಾವನ್ನು ರಾಣಿ ಪಂದ್ಯದ ಬಳಿಕ ಸಮರ್ಥಿಸಿಕೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More