ವಿಶ್ವ ಬ್ಯಾಡ್ಮಿಂಟನ್ | ಅಬ್ಬರದ ಆರಂಭ ಪಡೆದ ಪ್ರಯಣ್ ದ್ವಿತೀಯ ಸುತ್ತಿಗೆ

ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಎಚ್ ಎಸ್ ಪ್ರಣಯ್ ಅಬ್ಬರದ ಆರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಕೇವಲ ಇಪ್ಪತ್ತೆಂಟು ನಿಮಿಷಗಳಲ್ಲೇ ಗೆಲುವು ಪಡೆದ ಪ್ರಣಯ್, ದ್ವಿತೀಯ ಸುತ್ತಿಗೆ ದಾಪುಗಾಲಿಟ್ಟು ನಿರೀಕ್ಷೆ ಹೆಚ್ಚಿಸಿದರು

ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕೂಟದಲ್ಲಿ ಮನೋಜ್ಞ ಪ್ರದರ್ಶನ ನೀಡಿದ್ದ ಎಚ್ ಎಸ್ ಪ್ರಣಯ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ. ಚೀನಾದ ನ್ಯಾನ್‌ಜಿಂಗ್‌ನಲ್ಲಿ ಸೋಮವಾರ (ಜು.೩೦) ಶುರುವಾದ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಅಭಿನವ್ ಮನೋಟಾ ಎದುರು ೨೧-೧೨, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

೧೧ನೇ ಶ್ರೇಯಾಂಕಿತ ಆಟಗಾರ ಪ್ರಣಯ್ ಅಬ್ಬರದ ಆಟದಲ್ಲಿ ಅಭಿನವ್ ಮನೋಟಾ ಮರು ಮಾತೆತ್ತದೆ ಸುಲಭವಾಗಿಯೇ ಗೆಲುವು ಸಾಧಿಸಿದರು. ೨೬ರ ಹರೆಯದ ಪ್ರಣಯ್, ಮುಂದಿನ ಸುತ್ತಿನಲ್ಲಿ ಬ್ರೆಜಿಲ್‌ನ ವೈಗೊರ್ ಕೊಯ್ಲೊ ಎದುರು ಸೆಣಸಲಿದ್ದಾರೆ. ಮತ್ತೊಂದು ಮೊದಲ ಸುತ್ತಿನ ಹಣಾಹಣಿಯಲ್ಲಿ ಕೊಯ್ಲೊ ೨೨-೨೦, ೧೯-೨೧, ೧೧-೪ ಪಾಯಿಂಟ್ಸ್‌ಗಳ ಮುನ್ನಡೆಯಲ್ಲಿದ್ದಾಗ, ಹಾಂಕಾಂಗ್ ಆಟಗಾರ ವಾಂಗ್ ವಿಂಗ್ ಕಿ ವಿನ್ಸೆಂಟ್ ನಿವೃತ್ತಿ ಪಡೆದರು.

ಇದನ್ನೂ ಓದಿ : ಉಬೆರ್ ಕಪ್ ಬ್ಯಾಡ್ಮಿಂಟನ್ | ಆಸ್ಟ್ರೇಲಿಯಾ ಮಣಿಸಿದ ಸೈನಾ ನೆಹ್ವಾಲ್ ಪಡೆ

ಡಬಲ್ಸ್‌ನಲ್ಲಿ ಮಿಶ್ರಫಲ

ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ ಕೂಡ ಟೂರ್ನಿಯಲ್ಲಿ ಶುಭಾರಂಭ ಪಡೆಯಿತು. ಮೊದಲ ಸುತ್ತಿನ ಪಂದ್ಯದಲ್ಲಿ ಡೇನಿಯಲ್ ನಿಕೊಲೊವ್ ಮತ್ತು ಇವಾನ್ ರುಸೆವ್ ಜೋಡಿಯನ್ನು ೨೧-೧೩, ೨೧-೧೮ರ ಎರಡು ನೇರ ಗೇಮ್‌ಗಳಲ್ಲಿ ಮನು ಹಾಗೂ ಸುಮಿತ್ ಜೋಡಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿತು.

ಆದರೆ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಭಾರತ ಎಡವಿತು. ಸನ್ಯೋಗಿತಾ ಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್ ನೇರ ಗೇಮ್‌ಗಳ ಆಟದಲ್ಲಿ ಸೋಲನುಭವಿಸಿದರು. ಟರ್ಕಿಯ ಬೆಂಗಿಸು ಎರ್ಸೆಟಿನ್ ಹಾಗೂ ನ್ಯಾಜ್ಲಿಕಾನ್ ಇನ್ಸಿ ವಿರುದ್ಧದ ಕಾದಾಟದಲ್ಲಿ ೨೦-೨೨, ೧೪-೨೧ರ ಎರಡು ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿ ನಿರಾಸೆ ಅನುಭವಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More