ಇಂಗ್ಲೆಂಡ್‌ನಲ್ಲಿ ನಾನೇನೂ ಸಾಧಿಸಿ ತೋರಿಸಬೇಕಿಲ್ಲ ಎಂದ ವಿರಾಟ್ ಕೊಹ್ಲಿ

ಇಂಡೋ-ಆಂಗ್ಲೋ ಐದು ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯಕ್ಕೆ ಕೆಲವೇ ತಾಸುಗಳಿವೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯವನ್ನೇ ಬೊಟ್ಟು ಮಾಡುತ್ತಿರುವವರಿಗೆ ಸೂಕ್ತ ಉತ್ತರ ನೀಡಿರುವ ಕೊಹ್ಲಿ, ಇಂಗ್ಲೆಂಡ್ ನೆಲದಲ್ಲಿ ತಾನೇನನ್ನೂ ಸಾಧಿಸಿ ತೋರಿಸಬೇಕಿಲ್ಲ ಎಂದಿದ್ದಾರೆ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಕಳೆದ ಬಾರಿ ಅನುಭವಿಸಿದ ಬ್ಯಾಟಿಂಗ್‌ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಈ ಟೀಕೆ ಟಿಪ್ಪಣಿಗಳಿಗೆಲ್ಲಾ ತಲೆಕೆಡಿಸಿಕೊಳ್ಳದ ಕೊಹ್ಲಿ, ಇಂಗ್ಲೆಂಡ್ ನೆಲದಲ್ಲಿ ತಾನೇನನ್ನೂ ಸಾಧಿಸಿ ತೋರಿಸಬೇಕಿಲ್ಲ ಎಂದಿದ್ದಾರೆ. ಆದರೆ, ಆಕಾಶ್ ಚೋಪ್ರಾರಂಥ ಮಾಜಿ ಆಟಗಾರರು ಈ ಟೀಕೆಗಳಿಗೆಲ್ಲಾ ಸೂಕ್ತ ಉತ್ತರ ನೀಡಲು ಕೊಹ್ಲಿಗೆ ಇದೊಳ್ಳೆ ಅವಕಾಶವಾಗಿದೆ ಎಂದು ಕೊಹ್ಲಿಯನ್ನು ಹುರಿದುಂಬಿಸಿದ್ದಾರೆ.

ಯಾವುದೇ ಪ್ರತಿಭಾನ್ವಿತ ಆಟಗಾರ ಒಂದಲ್ಲಾ ಒಂದು ಬಗೆಯಲ್ಲಿ ಕೊರತೆಯಿಂದಲೇ ಕೂಡಿರುತ್ತಾನೆ. ಪರಿಪೂರ್ಣ ಆಟಗಾರ ಎಂದೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತದ ಆಟಗಾರರಿಗೆ ವಿದೇಶಿ ಸರಣಿ ಎಂಬುದು ಕಬ್ಬಿಣದ ಕಡಲೆ ಎಂಬುದು ಈಗಾಗಲೇ ಋಜುವಾತಾಗಿರುವ ಸಂಗತಿ. ಕೊಹ್ಲಿ ಕೂಡಾ ಇದಕ್ಕೆ ಹೊರತಲ್ಲ.

ಕಳೆದ ಬಾರಿಯ ೨೦೧೪ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ, ಈ ಬಾರಿಯ ಐದು ಟೆಸ್ಟ್ ಪಂದ್ಯ ಸರಣಿಗೆ ಚಾಲನೆ ಸಿಗುತ್ತಿರುವ ಬೆನ್ನಲ್ಲೇ ಕೊಹ್ಲಿಯ ಬಗ್ಗೆ ಎಲ್ಲರ ಗಮನ ಹರಿದಿದೆ. ಮತ್ತು ಈ ಸರಣಿಯಲ್ಲಿ ಅವರು ಎಷ್ಟರಮಟ್ಟಿಗೆ ಯಶ ಕಾಣುತ್ತಾರೆ ಎಂಬುದನ್ನು ಕೂಡಾ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. “ರನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ,’’ ಎನ್ನುವ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ವೇಗಿ ಜೇಮ್ಸ್ ಆ್ಯಂಡರ್ಸನ್ ಇತ್ತೀಚೆಗಷ್ಟೇ ಭಾರತೀಯ ಕಪ್ತಾನನ ಕಾಲೆಳೆದಿದ್ದರು.

ಇದನ್ನೂ ಓದಿ : ಕ್ರಿಕೆಟಿಗ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ₹ ೮೨.೫ ಲಕ್ಷ ಸಂಭಾವನೆ

ಅಂದಹಾಗೆ, ೨೦೧೪ರ ಇಂಗ್ಲೆಂಡ್ ಪ್ರವಾಸದಲ್ಲಿನ ಐದು ಟೆಸ್ಟ್ ಸರಣಿಯನ್ನು ಭಾರತ ತಂಡ ೧-೩ರಿಂದ ಸರಣಿ ಸೋತಿತ್ತು. ವಿರಾಟ್ ಕೊಹ್ಲಿಯ ಸರಾಸರಿ ಬ್ಯಾಟಿಂಗ್ ಕೇವಲ ೧೩:೪೦ ಅಷ್ಟೆ. ಇಲ್ಲೀವರೆಗೆ ವಿರಾಟ್ ೬೬ ಟೆಸ್ಟ್ ಪಂದ್ಯಗಳನ್ನಾಡಿದ್ದು ಬ್ಯಾಟಿಂಗ್ ಸರಾಸರಿ ೫೩.೪೦. ಆದರೆ, ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಇನ್ನೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಾಗಿಲ್ಲ. ಹೀಗಾಗಿ ಸಹಜವಾಗಿಯೇ ಈ ಸರಣಿಯಲ್ಲಿ ಅವರತ್ತಲೇ ಎಲ್ಲರ ಚಿತ್ತ ಹರಿದಿದೆ.

ಮೇಲಾಗಿ, ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ, ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗಿದ್ದಾರೆ. ಮುಖ್ಯವಾಗಿ, ಕಳೆದ ಬಾರಿಯ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿನಿಲ್ಲುವ ಸಂಕಲ್ಪ ತೊಟ್ಟಿದ್ದು, ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್‌ರಂಥವರ ವೇಗದ ದಾಳಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಕೂಡಾ ಕುತೂಹ ಕೆರಳಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More